ಲಂಕಾಧಿಪತಿ ರಾವಣನ ಸಂಹಾರಕ್ಕಾಗಿ ಅವತರಿಸಿದ ಮರ್ಯಾದಾ ಪುರುಷೋತ್ತಮ ಶ್ರೀರಾಮ

| Updated By: KUSHAL V

Updated on: Aug 30, 2020 | 4:14 PM

ದಶಕಂಠ ರಾವಣನನ್ನು ವಧೆ ಮಾಡಲು ಮಹಾವಿಷ್ಣು ಭೂಮಿಯ ಮೇಲೆ ತಾಳಿದ ಏಳನೇ ಅವತಾರವೇ ಶ್ರೀರಾಮಾನ ಅವತಾರ. ತ್ರೇತಾಯುಗದಲ್ಲಿ ಸೂರ್ಯವಂಶಸ್ಥನಾದ ಕೋಸಲದ ಮಹಾರಾಜ ದಶರಥನಿಗೆ ಕೌಸಲ್ಯಾ, ಕೈಕೇಯಿ ಹಾಗೂ ಸುಮಿತ್ರಾ ಅನ್ನೋ 3  ಪತ್ನಿಯರಿರುತ್ತಾರೆ. ಅನೇಕ ವರ್ಷಗಳ ಕಾಲ ದಶರಥನಿಗೆ ಮಕ್ಕಳಾಗಿರಲಿಲ್ಲ. ಮಕ್ಕಳಿಲ್ಲದ ಕಾರಣ ಗುರುಗಳ ಮಾರ್ಗದರ್ಶನದಂತೆ ದಶರಥ ಮಹಾರಾಜ ಪುತ್ರಕಾಮೇಷ್ಟಿಯಾಗ ಮಾಡಿಸುತ್ತಾನೆ. ಪುತ್ರಕಾಮೇಷ್ಟಿಯಾಗದ ಕೊನೆಯಲ್ಲಿ ಹೋಮಕುಂಡದಿಂದ ಅಗ್ನಿದೇವ ಪ್ರತ್ಯಕ್ಷನಾಗಿ, ಒಂದು ಬಟ್ಟಲು ಪಾಯಸವನ್ನು ದಶರಥನಿಗೆ ನೀಡುತ್ತಾನೆ. ಆ ಪಾಯಸವನ್ನು ದಶರಥ ಮಹಾರಾಜ ತನ್ನ ಮೂವರು ಪತ್ನಿಯರಿಗೆ ನೀಡಿ […]

ಲಂಕಾಧಿಪತಿ ರಾವಣನ ಸಂಹಾರಕ್ಕಾಗಿ ಅವತರಿಸಿದ ಮರ್ಯಾದಾ ಪುರುಷೋತ್ತಮ ಶ್ರೀರಾಮ
Follow us on

ದಶಕಂಠ ರಾವಣನನ್ನು ವಧೆ ಮಾಡಲು ಮಹಾವಿಷ್ಣು ಭೂಮಿಯ ಮೇಲೆ ತಾಳಿದ ಏಳನೇ ಅವತಾರವೇ ಶ್ರೀರಾಮಾನ ಅವತಾರ.

ತ್ರೇತಾಯುಗದಲ್ಲಿ ಸೂರ್ಯವಂಶಸ್ಥನಾದ ಕೋಸಲದ ಮಹಾರಾಜ ದಶರಥನಿಗೆ ಕೌಸಲ್ಯಾ, ಕೈಕೇಯಿ ಹಾಗೂ ಸುಮಿತ್ರಾ ಅನ್ನೋ 3  ಪತ್ನಿಯರಿರುತ್ತಾರೆ. ಅನೇಕ ವರ್ಷಗಳ ಕಾಲ ದಶರಥನಿಗೆ ಮಕ್ಕಳಾಗಿರಲಿಲ್ಲ. ಮಕ್ಕಳಿಲ್ಲದ ಕಾರಣ ಗುರುಗಳ ಮಾರ್ಗದರ್ಶನದಂತೆ ದಶರಥ ಮಹಾರಾಜ ಪುತ್ರಕಾಮೇಷ್ಟಿಯಾಗ ಮಾಡಿಸುತ್ತಾನೆ.

ಪುತ್ರಕಾಮೇಷ್ಟಿಯಾಗದ ಕೊನೆಯಲ್ಲಿ ಹೋಮಕುಂಡದಿಂದ ಅಗ್ನಿದೇವ ಪ್ರತ್ಯಕ್ಷನಾಗಿ, ಒಂದು ಬಟ್ಟಲು ಪಾಯಸವನ್ನು ದಶರಥನಿಗೆ ನೀಡುತ್ತಾನೆ. ಆ ಪಾಯಸವನ್ನು ದಶರಥ ಮಹಾರಾಜ ತನ್ನ ಮೂವರು ಪತ್ನಿಯರಿಗೆ ನೀಡಿ ಸೇವಿಸಲು ತಿಳಿಸುತ್ತಾನೆ. ಪಾಯಸ ಸವಿದ ನಂತರ ಕೌಸಲ್ಯೆಯು ರಾಮನಿಗೆ, ಸುಮಿತ್ರೆ ಲಕ್ಷ್ಮಣ ಹಾಗೂ ಶತ್ರುಘ್ನರಿಗೆ ಮತ್ತು ಕೈಕೇಯಿ ಭರತನಿಗೆ ಜನ್ಮ ನೀಡುತ್ತಾರೆ. ಹೀಗೆ ಕೌಸಲ್ಯೆ ಹಾಗೂ ದಶರಥನಿಗೆ ಸಾಕ್ಷಾತ್ ಮಹಾವಿಷ್ಣುವೇ ಮಗನಾಗಿ ಜನಿಸುತ್ತಾನೆ.

ಸೂರ್ಯವಂಶದಲ್ಲಿ ಜನಿಸಿದ ಶ್ರೀರಾಮಚಂದ್ರ ತಂದೆ ದಶರಥ ತನ್ನ ಪತ್ನಿ ಕೈಕೇಯಿಗೆ ನೀಡಿದ ವಚನವನ್ನು ಉಳಿಸಿಕೊಳ್ಳಲು ಸೀತಾ ಹಾಗೂ ಲಕ್ಷ್ಮಣ ಸಮೇತನಾಗಿ 14 ವರ್ಷಗಳ ಕಾಲ ವನವಾಸಕ್ಕೆ ತೆರಳುತ್ತಾನೆ. ವನವಾಸದ ಸಮಯದಲ್ಲಿ ರಾವಣನ ತಂಗಿ ಶೂರ್ಪನಖಿ ಇವರ ಆಶ್ರಮಕ್ಕೆ ಆಗಮಿಸುತ್ತಾಳೆ. ಏಕಪತ್ನಿವ್ರತಸ್ಥನಾದ ಶ್ರೀರಾಮಚಂದ್ರ ತನ್ನನ್ನು ಮದುವೆಯಾಗಬೇಕೆಂದು ಶೂರ್ಪನಖಿ ಪೀಡಿಸುತ್ತಾಳೆ. ಜೊತೆಗೆ, ಸೀತೆಯನ್ನು ಹೀಗಳೆದು ಮಾತನಾಡುತ್ತಾಳೆ.

ಇದಲ್ಲದೆ, ಶ್ರೀರಾಮನ ಪಕ್ಕದಲ್ಲೇ ಇದ್ದ ಲಕ್ಷ್ಮಣನಿಗೂ ಮದುವೆಯಾಗುವಂತೆ ಶೂರ್ಪನಖಿ ಪೀಡಿಸುತ್ತಾಳೆ. ಇದರಿಂದ ಕೋಪಗೊಂಡ ಲಕ್ಷ್ಮಣ ಶೂರ್ಪನಖಿಯ ಮೂಗನ್ನು ಕತ್ತರಿತ್ತಾನೆ. ತನ್ನ ತಂಗಿಯ ಮೂಗನ್ನೇ ಕತ್ತರಿಸಿದ ವಿಚಾರ ತಿಳಿದ ರಾವಣ ಬಹಳ ಕುಪಿತನಾಗುತ್ತಾನೆ. ನಂತರ ಸೀತೆಯ ರೂಪಲಾವಣ್ಯದ ಬಗ್ಗೆ ತಿಳಿದ ರಾವಣ ಶ್ರೀರಾಮ,ಲಕ್ಷ್ಮಣರ ವಿರುದ್ಧ ಪ್ರತೀಕಾರ ಹೂಡಲು ಆಕೆಯನ್ನ ಅಪಹರಿಸುತ್ತಾನೆ.

ರಾವಣನನ್ನು ವಿಷ್ಣು ತನ್ನ ನಿಜ ಸ್ವರೂಪದಲ್ಲಿ ಸಂಹಾರ ಮಾಡದಿರಲು ಕಾರಣವೇನು?
ರಾವಣ ಸೀತೆಯನ್ನು ಅಪಹರಿಸಿದ ನಂತರ ಶ್ರೀರಾಮ ಮತ್ತು ಲಕ್ಷ್ಮಣರು ಲಂಕೆಗೆ ತೆರಳಿ ಆತನೊಂದಿಗೆ ಯುದ್ಧ ಮಾಡುತ್ತಾರೆ. ಯುದ್ಧದ ಅಂತ್ಯದಲ್ಲಿ ರಾವಣ ಶ್ರೀರಾಮಚಂದ್ರನಿಂದ ಹತನಾಗುತ್ತಾನೆ. ಹೀಗೆ ಲಂಕಾಧಿಪತಿ ರಾವಣನನ್ನು ಸಂಹಾರ ಮಾಡಲೆಂದೇ ಮಹಾವಿಷ್ಣು ಶ್ರೀರಾಮಚಂದ್ರನಾಗಿ ಏಳನೇ ಅವತಾರವೆತ್ತಿ ತನ್ನ ಕಾರ್ಯವನ್ನು ಪೂರ್ಣಗೊಳಿಸುತ್ತಾನೆ. ಸಾಕ್ಷಾತ್ ಮಹಾವಿಷ್ಣು, ತನ್ನ ನಿಜ ಸ್ವರೂಪದಲ್ಲೇ ರಾಕ್ಷಸ ರಾವಣನನ್ನು ಸಂಹಾರ ಮಾಡಬಹುದಿತ್ತಲ್ಲ ಅಂತಾ ಅನ್ನಿಸಬಹುದು. ಆದ್ರೆ ರಾವಣನನ್ನು ವಿಷ್ಣು ತನ್ನ ನಿಜ ಸ್ವರೂಪದಲ್ಲಿ ಸಂಹಾರ ಮಾಡದಿರಲು ಒಂದು ಕಾರಣವಿರುತ್ತೆ. ಅದುವೇ, ಬ್ರಹ್ಮನಿಂದ ರಾವಣ ಪಡೆದಿದ್ದ ಒಂದು ವಿಶೇಷ ವರ.

ಹೌದು, ಪುರಾಣಗಳ ಪ್ರಕಾರ, ಲಂಕಾಧೀಶ ರಾವಣ ಸತತವಾಗಿ ಹತ್ತು ವರ್ಷಗಳ ಕಾಲ ಘೋರವಾದ ತಪಸ್ಸಿಗೆ ಮುಂದಾಗುತ್ತಾನೆ. ರಾವಣನ ತಪಸ್ಸಿಗೆ ಮೆಚ್ಚಿ ಬ್ರಹ್ಮದೇವ ಪ್ರತ್ಯಕ್ಷನಾಗಿ ತನ್ನ ಬಳಿ ವರ ಕೇಳುವಂತೆ ಆತನನ್ನು ಆಗ್ರಹಿಸುತ್ತಾನೆ. ರಾವಣ ಬ್ರಹ್ಮದೇವನ ಬಳಿ ತನಗೆ ದೇವತೆಗಳು, ಗಂಧರ್ವರು, ಯಕ್ಷರು, ಭೂತ-ಪಿಶಾಚಿಗಳು ಹಾಗೂ ರಾಕ್ಷಸರಿಂದ ಮೃತ್ಯು ಬಾರದಂತಹ ವರವನ್ನು ಕೇಳುತ್ತಾನೆ. ರಾವಣನ ತಪಸ್ಸಿಗೆ ಮೆಚ್ಚಿದ್ದ ಬ್ರಹ್ಮದೇವ ತಥಾಸ್ತು ಅಂತಾ ಹೇಳಿ ರಾವಣನಿಗೆ ವರ ನೀಡುತ್ತಾನೆ.

ಹೀಗೆ, ಬ್ರಹ್ಮನಿಂದ ವರ ಪಡೆದ ರಾವಣ ನಂತರ ಅತ್ಯಂತ ದುಷ್ಟನಾಗುತ್ತಾನೆ. ದೇವತೆಗಳು, ಋಷಿ-ಮುನಿಗಳು, ಮಾನವರೆಲ್ಲರಿಗೆ ಕಷ್ಟ ಕೊಡುತ್ತಾ ತನ್ನ ಅಟ್ಟಹಾಸ ಮೆರೆಯುತ್ತಾನೆ. ರಾವಣನ ಅಟ್ಟಹಾಸಗಳು ಹೆಚ್ಚಾಗುತ್ತಿದ್ದಂತೆ, ಆತನನ್ನು ಸಂಹಾರ ಮಾಡಲು ಸಾಕ್ಷಾತ್ ಮಹಾವಿಷ್ಣುವೇ ಭೂಮಿಯ ಮೇಲೆ ಶ್ರೀರಾಮನಾಗಿ ಅವತಾರ ಎತ್ತುತ್ತಾನೆ. ರಾವಣನನ್ನು ಸಂಹಾರ ಮಾಡುತ್ತಾನೆ.