ಕಳೆದ ವಾರ ವಿಕಾಸ್ ದುಬೆ ಎಂಬ ಕುಖ್ಯಾತ ಕ್ರಿಮಿನಲ್ ಮತ್ತು ಅವನ ಸಹಚರರು ಡಿವೈಎಸ್ಪಿ ಮಟ್ಟದ ಅಧಿಕಾರಿ ಸೇರಿದಂತೆ 8 ಪೊಲೀಸರನ್ನು ನೇರಾನೇರ ಗುಂಡಿಟ್ಟು ಹತ್ಯೆಗೈದಿದ್ದಾನೆ. Same to Sameಇಂತಹುದ್ದೇ ಘಟನೆ 1982ರಲ್ಲಿಯೂ ನಡೆದಿತ್ತು. ಅಂದು ಹತ್ಯೆಗೀಡಾಗಿದ ಪೊಲೀಸ್ ಅಧಿಕಾರಿಯ ಇಬ್ಬರು ಹೆಣ್ಣು ಮಕ್ಕಳು ಇಂದು ಏನಾಗಿದ್ದಾರೆ ಗೊತ್ತಾ? ಈ ಸ್ಟೋರಿ ಓದಿ..
ಸಾಕ್ಷಾತ್ ಗಂಗೆ ಹರಿಯುವ, ಕಾಶಿ ಸ್ಥಳವಾದ ಉತ್ತರಪ್ರದೇಶ ಎಷ್ಟು ಪವಿತ್ರವೋ ಅಷ್ಟೇ ಅಪರಾಧಗಳ ಬೀಡು ಎಂಬುದು ಕಹಿಸತ್ಯ. ಇಂತಹ ಉತ್ತರಪ್ರದೇಶದಲ್ಲಿ ಮನುಕುಲವೆಂದಿಗೂ ಕ್ಷಮಿಸಲಾರದಂತಹ ಘೋರ ಅನ್ಯಾಯವೊಂದು 1982 ಮಾರ್ಚ್ 12ರ ರಾತ್ರಿ ಗೋಂಡಾ ಜಿಲ್ಲೆಯ ಖತರಾಬಜಾರ್‍ನಲ್ಲಿ ಘಟಿಸುತ್ತದೆ. ಇಡೀ ಗಂಗಾ ನೀರಿನಿಂದ ತೊಳೆದರೂ ಆ ಅಪರಾಧಿಗಳ ಕುಕೃತ್ಯ ಮಸುಕಾಗುವುದಿಲ್ಲ. ಕಾಶೀನಾಥನೇ ತನ್ನ ನೆಲೆವೀಡಿನಲ್ಲಿ ನಡೆದ ಪಾತಕವನ್ನು ಕಂಡು ಮಮ್ಮಲಮರುಗಿರಲೂ ಬಹುದು. ಸಂತ್ರಸ್ತರಂತೂ ಜೀವನದುದ್ದಕ್ಕೂ ತತ್ತರಿಸಿದ್ದಾರೆ. ಅಷ್ಟು ಘೋರ ಪರಿಣಾಮ ಬೀರಿತ್ತು ಆ ಪೈಶಾಚಿಕ ಘಟನೆ. ಏನದು ನೋಡೋಣ ಬನ್ನಿ.
36 ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದ ಅಮಾನವೀಯ ಘಟನೆಯ ಘೋರ ಪರಿಣಾಮವನ್ನು ಒಬ್ಬ ದಿಟ್ಟ ಮಹಿಳೆ, ಅವಡುಗಚ್ಚಿಕೊಂಡು ಸಹಿಸಿದರು. ಮತ್ತು ಅಷ್ಟೇ ದಿಟವಾಗಿ ಸೆಣೆಸಿ, ಅಂದಿನ ಅನ್ಯಾಯ/ ಅಪರಾಧಕ್ಕೆ ನ್ಯಾಯವೊದಗಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಅವರು ಪಟ್ಟ ಪಡಿಪಾಟಲು ನೂರಾರು ಹೆಣ್ಣುಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟೇ ಅಲ್ಲ, ಪ್ರಕರಣದಲಿ ಖುದ್ದು ತಾನೇ ಬಲಿಪಶುವಾಗಿದ್ದರೂ ತನ್ನಿಬ್ಬರು ಹೆಣ್ಣುಮಕ್ಕಳನ್ನು ಸಿಂಹಿಣಿಗಳಂತೆ ಬೆಳಸಿ, ಜೀವನದ ಸಾರ್ಥಕತೆ ಕಂಡುಕೊಂಡರು.
ಆದರೆ ಅದನ್ನು ಕಣ್ಣಾರೆ ಕಂಡು ಆನಂದಿಸಲು ಅವರಿಗೆ ಸಾಧ್ಯವೇ ಆಗುವುದಿಲ್ಲ. ಏಕೆಂದರೆ ಕ್ರೂರ ವಿಧಿ, ಜೀವನದಲ್ಲಿ ಮತ್ತೊಮ್ಮೆ ಆಟವಾಡುತ್ತದೆ. ಕ್ಯಾನ್ಸರ್ ಎಂಬ ಮಹಾಮಾರಿಗೆ ಆ ಹೆಣ್ಣುಮಗಳು ಕಣ್ಮುಚ್ಚುತ್ತಾರೆ. ಆದರೂ ಆಕೆ ಕಣ್ಮುಚ್ಚಿದ ಕೆಲ ವರ್ಷಗಳಲ್ಲೇ ಆಕೆಯ ಪತಿಯನ್ನು ಹತ್ಯೆ ಮಾಡಿದ್ದ ಪಾಪಿಗಳಿಗೆ ಸಿಬಿಐ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿತು. ಜತೆಗೆ, ಆಕೆಯ ಇಬ್ಬರೂ ಹೆಣ್ಣುಮಕ್ಕಳು ಐಎಎಸ್ ನಲ್ಲಿ ಭರ್ಜರಿ ರ್ಯಾಂಕ್ ಪಡೆದು, ತಾಯಿಗೆ ತಕ್ಕ ಮಕ್ಕಳು ಅನಿಸಿಕೊಂಡರು.
ಆತ ಡಿವೈಎಸ್ಪಿ, ಆಕೆ ಟ್ರೆಷರಿ ಅಧಿಕಾರಿ
ಇವರ ದಾಂಪತ್ಯಕ್ಕೆ ಕಿಚ್ಚು ಹಚ್ಚಿದ್ದು ಯಾರು?
ಹೀಗಿದ್ದ ಇವರಿಬ್ಬರೂ 1980ರಲ್ಲಿ ವಿವಾಹವಾಗುತ್ತ್ತಾರೆ. ಮನಸು ಪಕ್ವಗೊಳ್ಳುತ್ತಾ, ಇಬ್ಬರೂ ತಮ್ಮ ಭವಿಷ್ಯದ ಬಗ್ಗೆ ಕನಸು ಕಾಣಲಾರಂಭಿಸುತ್ತಾರೆ. ಆಗ ಇಬ್ಬರೂ ರಾಜ್ಯ ಸರಕಾರಿ ಸೇವೆಗಷ್ಟೇ ಸೀಮಿತಗೊಳ್ಳದೆ, ಐಎಎಸ್ ಮೂಲಕ ಇಡೀ ದೇಶದಲ್ಲಿ ಸರಕಾರಿ ಸೇವೆ ಮಾಡಲು ಹಾತೊರೆಯುತ್ತಾರೆ. ಆ ಪ್ರಯತ್ನದಲ್ಲಿ ಡಿವೈ. ಎಸ್ಪಿಯಾಗಿದ್ದ ಕೃಷ್ಣ ಪ್ರತಾಪ್ ಸಿಂಗ್, ಐಎಎಸ್ ಪಾಸ್ ಮಾಡಿ, ಇನ್ನೇನು ಅಂತಿಮವಾಗಿ, ಇಂಟರ್‍ವ್ಯೂಗೆ ಹಾಜರಾಗಬೇಕಿತ್ತು. ಆದರೆ ವಿಧಿಯ ಸಂಚು ಬೇರೆಯೇ ಇತ್ತು.
ಅದು ಪುರಾಣ ಪ್ರಸಿದ್ಧ ಕೋಸಲಾ ಸಾಮ್ರಾಜ್ಯದ ನೆಲೆವೀಡು. ಈಗಿನ ಉತ್ತರಪ್ರದೇಶದ ಗೋಂಡಾ ಜಿಲ್ಲೆಯ ಮಾಧವಪುರ ಗ್ರಾಮ. 1982ರ ಮಾರ್ಚ್ ಕಾಲ. ಕೆಪಿ ಸಿಂಗ್ ಎಂಬ 25 ವರ್ಷದ ಪುರುಷ ಸಿಂಹವೊಂದು ಉತ್ತರಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ಡಿವೈ.ಎಸ್ಪಿಯಾಗಿರುತ್ತಾರೆ. ಮದುವೆಯಾಗಿ 2 ವರ್ಷವಷ್ಟೇ ಕಳೆದಿರುತ್ತದೆ. ದಂಪತಿಗೆ 5 ತಿಂಗಳ ಮುದ್ದಾದ ಹೆಣ್ಣುಮಗುವೊಂದು ಜನಿಸಿರುತ್ತದೆ. ಮತ್ತು ಕೆಪಿ ಸಿಂಗ್ ಅವರು ತಮ್ಮ ಕರಾಳ ಭವಿಷ್ಯದ ಮುನ್ಸೂಚನೆ ಕಂಡವರಂತೆ ಅವಸರದಲ್ಲಿ ಮತ್ತೂ ಒಂದು ಮಗುವಿಗೆ ಅಪ್ಪನಾಗುವ ಸಂಭ್ರಮದಲ್ಲಿರುತ್ತಾರೆ.
ಗೋಂಡಾ ಎನ್‍ಕೌಂಟರ್ ಎಂಬ ಕಟ್ಟುಕತೆ
ಎಸ್ಸೈ ಭಂಡತನ ಡಿವೈಎಸ್ಪಿ ಜೀವಕ್ಕೇ ಕುತ್ತು
ಭಂಡ ಎಸ್ಸೈ ಸರೋಜ್ ಮುಂದೊಂದು ದಿನ ತಮ್ಮ ವ್ಯಾಪ್ತಿಗೆ ಬರುವ ಮಾಧವಪುರ ಎಂಬ ಹಳ್ಳಿಯಲ್ಲಿ ಗುಂಪು ಘರ್ಷಣೆ ನಡೆಯುತ್ತಿದೆ ಎಂದು 19 ಮಂದಿ ಪೊಲೀಸರೊಂದಿಗೆ ನಡುರಾತ್ರಿ ಆ ಹಳ್ಳಿಗೆ ದಾಳಿಯಿಡುತ್ತಾನೆ. ಇದೇ ವೇಳೆ, ಡಿವೈ.ಎಸ್ಪಿ ಸಿಂಗ್, ಪೊಲೀಸ್ ತಂಡದ ನೇತೃತ್ವ ವಹಿಸಿಕೊಳ್ಳುವಂತೆ ನೋಡಿಕೊಳ್ಳುತ್ತಾನೆ. ಮುಂದೆ ಎಲ್ಲವೂ ತನ್ನ ಯೋಜನೆಯ ಹಾಗೆ ನಡೆಯುವಂತೆಯೂ ಆತ ಜಾಗ್ರತೆ ವಹಿಸುತ್ತಾನೆ.
1982 ಮಾರ್ಚ್ 12ರ ರಾತ್ರಿ ಗೋಂಡಾ ಜಿಲ್ಲೆಯ ಖತ್ರಾ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾಧವಪುರ ಗ್ರಾಮದಲ್ಲಿ ಗುಂಪು ಘರ್ಷಣೆ ನಡೆಯುತ್ತದೆ. ಅದನ್ನೇ ನೆಪವಾಗಿಟ್ಟುಕೊಂಡು 19 ಮಂದಿ ಪೊಲೀಸ್ ತಂಡ ಡಿವೈ.ಎಸ್ಪಿ ಸಿಂಗ್ ನೇತೃತ್ವದಲ್ಲಿ ಗ್ರಾಮಕ್ಕೆ ನುಗ್ಗುತ್ತದೆ. ಆದರೆ ಅಲ್ಲಿ ಅಂತಹ ಗುಂಪು ಘರ್ಷಣೆಯೇನೂ ನಡೆಯದಿರುವುದು ಡಿವೈ.ಎಸ್ಪಿ ಸಿಂಗ್‍ಗೆ ತಡವಾಗಿ ಅರಿವಿಗೆ ಬರುತ್ತದೆ. ಇನ್ನೇನು ಅವರು ವಾಪಸಾಗಬೇಕು ಅನ್ನುವಷ್ಟರಲ್ಲಿ, ಎಸ್ಸೈ ಸರೋಜ್ ನೇರವಾಗಿ ಡಿವೈ.ಎಸ್ಪಿ ಸಿಂಗ್ ಎದೆಗೂಡಿಗೆ ಗುಂಡಿಟ್ಟು ಛಿದ್ರಗೊಳಿಸುತ್ತಾನೆ. ಎಸ್ಸೈ ಸರೋಜನ ಕೃತ್ರಿಮತೆ ಅರಿಯದ 25 ವರ್ಷದ ಖಡಕ್ ಅಧಿಕಾರಿ ಡಿವೈ.ಎಸ್ಪಿ ಸಿಂಗ್ ಸ್ಥಳದಲ್ಲಿಯೇ ಪ್ರಾಣ ಬಿಡುತ್ತಾರೆ.
ಅದೇ ಸಮಯದಲ್ಲಿ .. ಪೊಲೀಸ್ ತಂಡದಲ್ಲಿದ್ದ ಇತರೆ ಅಧಿಕಾರಿಗಳು ಮತ್ತು ಪೇದೆಗಳು ಪೂರ್ವಯೋಜನೆಯಂತೆ ಸಮೀಪದಲ್ಲಿದ್ದ ಗ್ರಾಮಸ್ಥರನ್ನೂ ಗುಂಡಿಟ್ಟು ಸಾಯಿಸುತ್ತಾರೆ. ಘಟನೆಯಲ್ಲಿ ಒಟ್ಟು 12 ಮಂದಿ ಪ್ರಾಣ ನೀಗುತ್ತಾರೆ. ಆದರೆ ಇದೆಲ್ಲವೂ .. ಡಕಾಯಿತರ ತಂಡವೊಂದು ಪೊಲೀಸರ ಮೇಲೆ ದಾಳಿ ನಡೆಸಲು ಬಂದಾಗ ಘಟಿಸಿತೆಂದು ಕತೆ ಕಟ್ಟುತ್ತಾರೆ. ಅಲ್ಲಿಗೆ 1982 ಗೋಂಡಾ ಎನ್‍ಕೌಂಟರ್ ಕತೆ ಮುಗಿಯುತ್ತದೆ. ತನ್ನ ವಿರುದ್ಧ ತನಿಖೆಗೆ ಮುಂದಾಗಿದ್ದ ಮೇಲಧಿಕಾರಿಯನ್ನು ಇಹಲೋಕಕ್ಕೆ ಕಳುಹಿಸುವಲ್ಲಿ ಯಶಸ್ವಿಯಾದೆನೆಂದು ಎಸ್ಸೈ ಸರೋಜ್ ಗಹಗಹಿಸುತ್ತಾನೆ.
ಐಎಎಸ್ ಕನಸುಕಂಡಿದ್ದ ಗಂಡ ಮೋಸಕ್ಕೆ ಬಲಿ
ಬದಲೀ ತೆಗೆದುಕೊಂಡ ಪತ್ನಿ ವಿಭಾ
ಇಬ್ಬರು ಹೆಣ್ಣುಮಕ್ಕಳೂ ಆದ್ರು ಐಎಎಸ್
ಜೀವನದಲ್ಲಿ ಏನೇನೋ ಆಗಬೇಕೆಂದು ಕನಸುಕಂಡಿದ್ದ ಗಂಡ ಹೀಗೆ ಮೋಸಕ್ಕೆ ಬಲಿಯಾಗಿರುವುದು ವಿಭಾರನ್ನು ಕೆರಳಿಸುತ್ತದೆ. ಮಡಿಲಲ್ಲಿ ಒಂದು ಮಗು, ಗರ್ಭದಲ್ಲಿ ಮತ್ತೊಂದು ಮಗು ಇದ್ದರೂ .. ಧೃತಿಗೆಡದೆ ದೂರದ ದಿಲ್ಲಿಯತ್ತ ದೃಢ ಹೆಜ್ಜೆ ಹಾಕುತ್ತಾರೆ. ಅಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿ ನಡೆದಿದ್ದನ್ನೆಲ್ಲಾ ನ್ಯಾಯದೇವತೆಯೆದುರು ಹೇಳಿಕೊಳ್ಳುತ್ತಾರೆ. ಆಗ ಸುಪ್ರೀಂಕೋರ್ಟ್ ವಿಭಾ ಮಾತಿನಲ್ಲಿ ನಿಜಾಂಶವಿರಬಹುದೆಂದು ಅರಿತು, ಸಿಬಿಐ ತನಿಖೆಗೆ ತಥಾಸ್ತು ಅನ್ನುತ್ತದೆ.
31 ವರ್ಷ ಕಾಲ ನಡೆಯಿತು ಸಿಬಿಐ ತನಿಖೆ
ವಿರಳಾತಿವಿರಳ ಎಂದು ಜರಿದ ಸಿಬಿಐ ಕೋರ್ಟ್
ಡಿವೈ.ಎಸ್ಪಿ ಸಿಂಗ್ ಎನ್‍ಕೌಂಟರ್ ನಡೆದಾಗ ಅವರ ಪತ್ನಿ ವಿಭಾ ಸಿಂಗ್ ವಾರಣಾಸಿಯ ಟ್ರೆಷರಿ ಇಲಾಖೆಯಲ್ಲಿ ಸರಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುತ್ತಾರೆ. ಮನೆಯ ಯಜಮಾನನ ಅನುಪಸ್ಥಿತಿಯಲ್ಲಿ ಅದೇ ಅವರ ಜೀವನೋಪಾಯವಾಗುತ್ತದೆ. ಇಬ್ಬರು ಹೆಣ್ಣುಮಕ್ಕಳಿಗೆ ಸಿಂಗಲ್ ಪೇರೆಂಟ್ ಆಗಿ, ತನ್ನ ಗಂಡನನ್ನು ಸಾಯಿಸಿದ ಪಾತಕಿಗಳಿಗೆ ತಕ್ಕ ಶಿಕ್ಷೆಯಾಗುವಂತೆ, ಎಂದಿಗೂ ಧೃತಿಗೆಡದೆ ಜೀವನ ಮುನ್ನಡೆಸುತ್ತಾರೆ ವಿಧವೆ ವಿಭಾ ಸಿಂಗ್.
ಈ ಮಧ್ಯೆ, ಮೊದಲ ಮಗಳು ಕಿಂಜಲ್ ದಿಲ್ಲಿ ವಿಶ್ವವಿದ್ಯಾಲಯದಲ್ಲಿ.. 60 ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಡ್ಡು ಹೊಡೆದು ಚಿನ್ನದ ಪದಕದೊಂದಿಗೆ ಪದವಿ ಪೂರೈಸಿರುತ್ತಾರೆ. ಅಷ್ಟಕ್ಕೂ ಕಿಂಜಲ್ ಆಯ್ಕೆ ಮಾಡಿಕೊಂಡಿದ್ದ ವಿಷಯಗಳು ಫಿಲಾಸಫಿ ಮತ್ತು ಕಾನೂನು. ಏಕೆಂದರೆ ಅಪ್ಪನ ಹಂತಕರನ್ನು ಗಲ್ಲುಗಂಬಕ್ಕೆ ಏರಿಸುವುದು ಹೇಗೆ ಎಂಬುದನ್ನು ವ್ಯಾಸಂಗ ಮಾಡುವಾಗಲೇ ಅರಿದು ಜೀರ್ಣಿಸಿಕೊಳ್ಳುವುದರ ಜತೆಗೆ, ತನ್ನ ಬದುಕನ್ನು ಫಿಲಾಸಫಿಕಲ್ಲಾಗಿಯೂ ತೆಗೆದುಕೊಳ್ಳಲು ಬಯಸಿದ್ದರು ಕಿಂಜಲ್.
ತನ್ನನ್ನು ಹೀಗೆ ಪರಿಪರಿಯಾಗಿ ಅಗ್ನಿಪರೀಕ್ಷೆಗೆ ದೂಡುತ್ತಿರುವ ವಿಧಿಯನ್ನು ಆ ಯುವ ಮನಸು ಅದಿನ್ನೆಷ್ಟು ಶಪಿಸಿತೋ!? ಆದರೂ ಧೃತಿಗೆಡದೆ .. “ ಅಮ್ಮ ನೀನಿನ್ನು ಚಿಂತಿಸಬೇಡ. ನಿನ್ನ ಕರ್ತವ್ಯ ನೀನು ಮಾಡಿದ್ದೀಯಾ. ಮುಂದಿನ ಜವಾಬ್ದಾರಿಯನ್ನು ನಾವು ಪೂರೈಸುತ್ತೇವೆ. ಅಪ್ಪನನ್ನು ಕೊಂದ ಹೇಡಿಗಳಿಗೆ ಗಲ್ಲುಶಿಕ್ಷೆಯಾಗುವಂತೆ ನಾವು ನೋಡಿಕೊಳ್ಳುತ್ತೇವೆ. ನೀನು ಶಾಂತವಾಗಿರು.” ಎಂದು ಅಮ್ಮನ ಫೋಟೋ ಎದುರು ನಿಂತು, ಪ್ರತಿಜ್ಞಾಪೂರ್ವಕವಾಗಿ ಮನದಲ್ಲೇ ಹೇಳುತ್ತಾಳೆ.
ಎಂಥವರಿಗೇ ಆಗಲಿ ಐಎಎಸ್ ಎಂಬುದು ಕಬ್ಬಿಣದ ಕಡಲೆ. ಆದರೆ ಕಿಂಜಲ್-ಪ್ರಾಂಜಲ್ ಸಹೋದರಿಯರ ಧ್ಯೇಯೋದ್ದೇಶಗಳು ಸುಸ್ಪಷ್ಟವಾಗಿದ್ದರಿಂದ, ಅದನ್ನು ಪಾಸು ಮಾಡುವುದು ಕಷ್ಟವೇನೂ ಆಗುವುದಿಲ್ಲ. ಫಸ್ಟ್ ಅಟೆಂಪ್ಟಿನಲ್ಲಿಯೇ, 2007ರಲ್ಲಿ ದೊಡ್ಡ ಮಗಳು ಕಿಂಜಲ್ 25ನೇ ರ್ಯಾಂಕ್ ಪಡೆದು ಐಎಎಸ್ ಪಾಸು ಮಾಡಿದರೆ, ಅವರ ತಂಗಿ ಪ್ರಾಂಜಲ್ 252ನೇ ರ್ಯಾಂಕ್ ಪಡೆದು ಐಆರ್ಎಸ್ಗೆ ಆಯ್ಕೆಯಾಗುತ್ತಾರೆ. ಅಪ್ಪ-ಅಮ್ಮನ ಆಸೆಯಂತೆ ಇಬ್ಬರೂ ಐಎಎಸ್ ಏನೋ ಪಾಸು ಮಾಡಿದರು.
ಕಿಂಜಲ್ ಅಂದರೆ ನದಿಯ ದಡ ಎಂದರ್ಥ. ಹೌದು ನದಿ-ದಡ ಎಂದು ಆಟವಾಡಿಕೊಂಡು ಆನಂದಮಯವಾಗಿರಬೇಕಾದ ವಯಸ್ಸದು. ಆದರೆ ಕಿಂಜಲ್‍ಗೆ ಆಟವೆಂಬುದು ಮರೀಚಿಕೆಯಾಯಿತು. ಸುನಾಮಿಗಳ ಹೊಡೆತಕ್ಕೆ ಸಿಲುಕಿ ಜೀವನವೆಂಬ ಸಾಗರದಲ್ಲಿ ತಾಯಿಯೊಂದಿಗೆ ಈಜಬೇಕಿತ್ತು. ಸಾಗರದ ಮತ್ತೊಂದು ದಡ ತಲುಪಿ ಸೈ ಎನಿಸಿಕೊಳ್ಳುವ ಜರೂರತ್ತು ಬಹಳಷ್ಟಿತ್ತು. ಆದರೆ ನದಿಯ ಮತ್ತೊಂದು ದಡ ಬಹು ದೂರವಿತ್ತು. ಹಾಗಾಗಿ ನದಿ ದಡ ಅರ್ಥದ ಕಿಂಜಲ್ ಎಂಬ ಮಗು ನದಿ-ದಡ ಆಡುವ ಬಯಕೆಯನ್ನು ಮೊಗ್ಗಿನಲ್ಲೇ ಚಿವುಟಿ ಹಾಕಿದ್ದಳು. ಮುಂದೆ ಬೆಂಕಿಯಲ್ಲಿ ಅರಳಿದ ಹೂವಾಗಿ ರೂಪಾಂತರಗೊಳ್ಳುತ್ತಾಳೆ. ಏಕೆಂದರೆ ಕಿಂಜಲ್ ಅಂದರೆ ಕಮಲದ ಹೂ ಎಂದೂ ಅರ್ಥವಿದೆ.
ಕಿಂಜಲ್-ಪ್ರಾಂಜಲ್ ಏನಿದು ವಿಚಿತ್ರ ಹೆಸರು!?
ಪುರುಷಾರ್ಥದ ಕಿಂಜಲ್ ಹೆಸರಿನ ಮಹಿಮೆ ಗೊತ್ತಾ!?
ಇನ್ನು ಪ್ರಾಂಜಲ್- ಚಿಕ್ಕ ಮಗು. ಪ್ರಾಂಜಲ ಮನಸ್ಸಿನವಳು. ಸ್ವಚ್ಛಂದದವಳೆಂದು ಅರ್ಥ. ಪ್ರಾಂಜಲ ಮನಸ್ಸಿಂದ, ಸ್ವಚ್ಛಂದವಾಗಿ ವಿಹರಿಸುತ್ತಾ, ಅಮ್ಮ ಮತ್ತು ಅಕ್ಕನ ನೆರಳಿನಲ್ಲಿ ಬೆಳೆಯುತ್ತಾಳೆ. ಅಪ್ಪನ ಹಂತಕರಿಗೆ ನ್ಯಾಯಾಲಯ ಗಲ್ಲುಶಿಕ್ಷೆ ಪ್ರಕಟಿಸಿದಾಗ ಚಿಕ್ಕವಳಾದ ಪ್ರಾಂಜಲ್ ಹೇಳಿದ ಮಾತನ್ನು ಕೇಳಿದರೆ, ನೀವು ನಿಜಕ್ಕೂ ದಂಗುಬಡಿಯುವಿರಿ.
ಭಾವನೆಗಳು, ಭಾವುಕತೆಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ ಜೀವನ ಸಾಗಿಸುತ್ತಾ ಬಂದಿರುವ ಹಿರಿಯಳಾದ ಕಿಂಜಲ್ ಹಂತಕರಿಗೆ ಗಲ್ಲು ಪ್ರಕಟವಾದಾಗ ದುಃಖ ಉಮ್ಮಳಿಸಿ ಬಂದು, ಕಣ್ಣೀರ್ಗರೆಯುತ್ತಾಳೆ. ಇನ್ನು, ಚಿಕ್ಕವಳಾದ ಪ್ರಾಂಜಲ್ “ ಗಲ್ಲುಶಿಕ್ಷೆ ಪ್ರಕಟವಾಗಿರುವುದು ಸರಿಯಷ್ಟೇ. ಆದರೆ, ನಿಜವಾಗಿಯೂ ಅವರು ಗಲ್ಲುಗಂಬ ಏರಿ, ಉಸಿರು ಚೆಲ್ಲಿದಾಗಷ್ಟೆ ನನ್ನ ಜೀವನದ ಗಮ್ಯ ತಲುಪಿದಂತಾಗುತ್ತದೆ ” ಅಂದುಬಿಟ್ಟಳು.
ಓಹ್ ! ಪ್ರಾಂಜಲ ಮನಸಿನ ಪ್ರಾಂಜಲಳಲ್ಲಿ ಅದಿನ್ನೆಂಥಾ ಪ್ರತೀಕಾರ, ಹತಾಶೆ, ಹಪಾಹಪಿ, ಘನೀರ್ಭವಿಸಿರಬೇಕು ಅಲ್ಲವಾ..? ಅಪ್ಪನನ್ನೇ ನೋಡದ ಆ ಮಗುವಿನ ಮನಸ್ಸು ಇನ್ನೆಷ್ಟು ನೊಂದಿರಬೇಕು / ವ್ಯಗ್ರಗೊಂಡಿರಬೇಕು ಅಲ್ಲವಾ..?
ಇನ್ನು, ಐಪಿಎಸ್ ಎಂಬ ಅಗಾಧಶಕ್ತಿಯನ್ನು ತನ್ನ ಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವ ಕಿಂಜಲ್ ಭಾವುಕತೆಗಳು ಮತ್ತು ವ್ಯಕ್ತಿಗತ ರಾಗದ್ವೇಷಗಳನ್ನು ಪಕ್ಕಕ್ಕಿಟ್ಟು, ಇಂದು ಎಷ್ಟು ವೃತ್ತಿಪರರಾಗಿದ್ದಾರೆ ಅಂದರೆ ಅಪ್ಪನ ಹಂತಕರಿಗೆ ಗಲ್ಲುಶಿಕ್ಷೆ ವಿಧಿಸಿದ ನ್ಯಾಯಾಲಯವಿರುವ ಪಕ್ಕದ್ದಲ್ಲ ಪಕ್ಕದ ಜಿಲ್ಲೆಯಲ್ಲಿ ತಾನು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ವಿರಾಜಮಾನರಾಗಿದ್ದಾರೆ. ಅದರೆ ಯಾವುದೇ ಹಮ್ಮು-ಬಿಮ್ಮು ತೋರ್ಪಡಿಸದೇ ತೀರ್ಪಿನ ಕುರಿತು ಹೀಗೆ ಹೇಳುತ್ತಾರೆ.
ಇಲ್ಲಿ ಇನ್ನೂ ಒಂದು ವಿಷಯ ನಿಮಗೆ ಹೇಳಬಹುದಾದರೆ ಕಿಂಜಲ್/ ಪ್ರಾಂಜಲ್ ಇಬ್ಬರೂ ಐಎಎಸ್ ಗಳನ್ನೇ ಮದುವೆಯಾಗಿ, ಈಗಲಾದರೂ ಸ್ವಲ್ಪಮಟ್ಟಿಗೆ ಸಂತುಷ್ಟದ ಜೀವನ ನಡೆಸುತ್ತಿದ್ದಾರೆ.
-ಸಾಧು ಶ್ರೀನಾಥ್
Published On - 10:28 am, Sun, 5 July 20