ಸ್ವಾಮಿ ವಿವೇಕಾನಂದರ ಹೆಸರು ಜಗತ್ತಿನಾದ್ಯಂತ ಇಂದು ಯಥೇಚ್ಛವಾಗಿ ಬಳಕೆಯಲ್ಲಿದೆ. ಕಾರಣ ಸ್ವಾಮಿ ವಿವೇಕಾನಂದ ಎನ್ನುವ ಹೆಸರೇ ಒಂದು ರೋಮಾಂಚನ, ಪ್ರೇರಣೆ, ಹುಮ್ಮಸ್ಸು, ಧೀರತನ. ಅವರು ಯುವ ಜನಾಂಗಕ್ಕೆ ಬೋಧಿಸಿದ ವಿವೇಕ ಮಾರ್ಗ ಅತ್ಯಂತ ಮೌಲ್ಯಯುತವಾದದ್ದು. ವಿವೇಕಾನಂದರ ಹೆಸರು ಹೆಚ್ಚಾಗಿ ಬಳಸುವವರು ಅವರ ಧರ್ಮ ಬೋಧನೆ ಹಾಗೂ ದೇಶಪ್ರೇಮ ನಿಜ ಜೀವನದಲ್ಲಿ ಮೊದಲು ಮೈಗೂಡಿಸಿಕೊಳ್ಳಬೇಕಾಗಿದೆ. ಇನ್ನು ವಿವೇಕಾನಂದರ ವೈಚಾರಿಕತೆ ಮತ್ತು ಆಧ್ಯಾತ್ಮ ಅರಿವು ಎಂದೆಂದಿಗೂ ಅರ್ಥಪೂರ್ಣವಾಗಿದೆ. ಅವರ ಸಾಮಾಜಿಕ ನಿಲುವು, ವಿವೇಕ ಚಿಂತನೆ ಪೂರ್ಣವಾಗಿ ಅರ್ಥೈಸಿಕೊಂಡು ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು.
ಧರ್ಮ ಸಹಿಷ್ಣುತೆ, ಸಮಾನತೆ ಮತ್ತು ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಅವರ ಭವ್ಯವಾದ ಭಾವಸೇತುವನ್ನು ಎಲ್ಲಾ ದಿಕ್ಕುಗಳಲ್ಲಿ ಬೀಸಿ, ವಿಶ್ವಪ್ರಜ್ಞೆಗೆ ದಾರಿ ಮಾಡಿತ್ತು. ವರ್ತಮಾನದ ಎಲ್ಲಾ ತಲ್ಲಣಗಳಿಗೆ ವಿವೇಕಾನಂದರ ಹೊಸ ದೃಷ್ಟಿಕೋನದ ಪ್ರಖರವಾದ ಪ್ರತಿಪಾದನೆಯಲ್ಲಿ ಉತ್ತರ ಕಂಡುಕೊಳ್ಳಬಹುದು. ಜಾತಿ, ಧರ್ಮ, ಕುಲ, ಮತದ್ವೇಷ ಮತ್ತು ಆಚಾರಗಳು ತನ್ನಲ್ಲಿ ಬೇರುಬಿಟ್ಟಿರುವ ಮೂಢಭಾವನೆಗಳ ಹೆಸರಿನಲ್ಲಿ ಛಿದ್ರ ಛಿದ್ರವಾಗಿ ತನ್ನ ನೈತಿಕತೆ ಕಳಚಿಕೊಂಡು ಒದ್ದಾಡುತ್ತಿತ್ತು. ಇಂಥ ವಿಷಮ ಪರಿಸ್ಥಿತಿಯಲ್ಲಿ ಜಗವೆಲ್ಲ ಸರ್ವಧರ್ಮ ಸಮನ್ವಯ ದೃಷ್ಟಿಯನ್ನು ಅನುಷ್ಠಾನಗೊಳಿಸಿದ್ದು ವಿವೇಕಾನಂದರ ಮಹತ್ಸಾಧನೆಗಳಲ್ಲಿ ಒಂದಾಗಿದೆ.
ವಿವೇಕಾನಂದರು ಧರ್ಮಗಳ ಬಗ್ಗೆ ಹೇಳುವ ತಮ್ಮ ಪ್ರೀತಿಯ ಮಾತುಗಳು ಹೀಗಿವೆ
“ಒಂದು ಧರ್ಮವು ಸತ್ಯವಾದರೆ ಎಲ್ಲ ಧರ್ಮಗಳು ಸತ್ಯವಾಗಿರಲೇಬೇಕು. ಹಿಂದೂಗಳಾದ ನಾವು ಕೇವಲ ಪರಧರ್ಮ ಸಹಿಷ್ಣುಗಳು ಮಾತ್ರವಲ್ಲ, ಇತರ ಧರ್ಮಗಳೊಡನೆ ನಾವು ಒಂದಾಗುತ್ತೇವೆ. ಮಸೀದಿಯಲ್ಲಿ ಮಹಮ್ಮದೀಯನೊಡನೆ ಪ್ರಾರ್ಥಿಸುತ್ತೇವೆ, ಪಾರ್ಸಿಗಳೊಡನೆ ಅಗ್ನಿಯನ್ನು ಪೂಜಿಸುತ್ತೇವೆ, ಕ್ರೈಸ್ತರೊಡನೆ ಶಿಲುಬೆಯ ಮುಂದೆ ತಲೆ ಬಾಗುತ್ತೇವೆ.”
ವಿವೇಕಾನಂದರು ಅಂದು ವಿದೇಶದಲ್ಲಿ ಎತ್ತಿಹಿಡಿದ ನಮ್ಮ ದೇಶ ಹಾಗೂ ಹಿಂದೂ ಧರ್ಮದ ಆದರ್ಶಗಳನ್ನು ಇಂದು ನಾವು ಮತ್ತೊಮ್ಮೆ ವಿಮರ್ಶಿಸಿಕೊಳ್ಳಬೇಕಾಗಿದೆ. ಅವರ ನಿಜವಾದ ದೇಶಪ್ರೇಮ ಮತ್ತು ಧರ್ಮದ ನಿಲುವು ಇಂದಿನ ದೇಶಭಕ್ತರು ಅನುಸರಿಸಿ ಇತರರಿಗೆ ಮಾದರಿಯಾಗಬೇಕಾಗಿದೆ. ವಿವೇಕಾನಂದರು ಚಿಕಾಗೊದಲ್ಲಿ 1893ರ ಸೆ.11ರಂದು ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಮಾಡಿದ ಭಾಷಣದಲ್ಲಿ, ಅಮೇರಿಕಾದ ‘ಸಹೋದರಿಯರೆ ಮತ್ತು ಸಹೋದರರೆ’ ಎಂದು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ, ಕೃತಜ್ಞತೆಗಳು ಸಲ್ಲಿಸುತ್ತಾರೆ.
ವಿವೇಕಾನಂದರು ಹಿಂದೂಧರ್ಮದ ಅನುಯಾಯಿಯಾಗಿ ಪರ ಧರ್ಮಗಳ ಬಗ್ಗೆಯೂ ಅವರು ಗೌರವಾನ್ವಿತ ನುಡಿಗಳನ್ನು ಹೇಳುತ್ತಾರೆ
‘ಪರಧರ್ಮ ಸಹಿಷ್ಣುತೆಯಲ್ಲಿ ನಮಗೆ ನಂಬಿಕೆಯುಂಟು; ಅಷ್ಟೇ ಅಲ್ಲ, ಎಲ್ಲ ಧರ್ಮಗಳೂ ಸತ್ಯ ಎಂಬುದನ್ನು ನಾವು ಒಪ್ಪುತ್ತೇವೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ, ಎಲ್ಲ ಧರ್ಮಗಳಲ್ಲಿ ಯಾರು ಯಾರು ಹಿಂಸೆಗೆ ಒಳಗಾಗಿದಾರೋ ಅವರಿಗೆಲ್ಲ ಆಶ್ರಯವನ್ನು ನೀಡಿದ ದೇಶಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು.'(ವಿವೇಕಾನಂದರ ಕೃತಿ ಶ್ರೇಣಿ ಸಂ.1.ಪುಟ: 5) ಎನ್ನುವ ಅವರ ನುಡಿಗಳು ಜಗತ್ತಿನ ಇತರೆ ಧರ್ಮಗಳ ಜೊತೆಗೆ ತನ್ನ ನೆಲದ ಘನತೆ ಮತ್ತು ಪ್ರೇಮವನ್ನು ಎತ್ತಿ ತೋರುತ್ತವೆ.
‘ಗುಲಾಬಿಯನ್ನು, ಬೇರೆ ಯಾವ ಹೆಸರಿನಿಂದ ಕರೆದರೂ, ಅದು ಅಷ್ಟೇ ಕಂಪನ್ನು ಬೀರುತ್ತದೆ.’ ಹೆಸರುಗಳು ವಿವರಣೆಗಳಲ್ಲ. ಭಾರತದಲ್ಲಿ ಬಹುದೇವತಾವಾದ ಇಲ್ಲ. ದೇವರು ಸರ್ವವ್ಯಾಪಿ ಹೊರತು ಅನೇಕ ದೇವತೆಗಳ ಉಪಾಸನೆಯಲ್ಲ. ಎನ್ನುವ ಮಾತುಗಳು ಹೇಳುತ್ತಾರೆ. ಮೂಢರ ಮತಧರ್ಮವನ್ನು ನಿರಾಕರಿಸಿ ಏಕದೇವೋಪಾಸನೆ ಕುರಿತು ಪ್ರತಿಪಾದಿಸುತ್ತಾರೆ.
ವಿವೇಕಾನಂದರ 1893, ಸೆಪ್ಟೆಂಬರ್ 20ರಂದು ಅವರು ಹೇಳಿದ ಮಾತುಗಳು ಹೀಗಿವೆ
“ಕ್ರೈಸ್ತರಲ್ಲದವರ ಆತ್ಮವನ್ನು ಉದ್ಧರಿಸುವುದಕ್ಕೆ ಪಾದ್ರಿಗಳನ್ನು ಕಳಿಸಲು ನೀವು ಇಷ್ಟು ಕಾತರರಾಗಿದ್ದೀರಲ್ಲ, ಉಪವಾಸದಿಂದ ನಶಿಸುತ್ತಿರುವ ಆ ಜನರ ದೇಹಗಳನ್ನು ಉಳಿಸಲು ನೀವೇಕೆ ಪ್ರಯತ್ನಿಸಬಾರದು?” ಎಂದು ಸಭಿಕರಿಗೆ ಪ್ರಶ್ನಿಸುತ್ತಾರೆ.
ಹಾಗೇ ಮುಂದುವರಿಸಿ ಹೇಳುತ್ತಾರೆ: “ಭಾರತದಲ್ಲಿ ಭಯಂಕರವಾದ ಕ್ಷಾಮ ಬಂದು ಸಹಸ್ರಾರು ಜನರು ಉಪವಾಸದಿಂದ ಸತ್ತರು. ಆದರೂ ನೀವು ಕ್ರೈಸ್ತರು ಏನೂ ಮಾಡಲಿಲ್ಲ. ಭಾರತಾದ್ಯಂತ ನೀವು ಚರ್ಚುಗಳನ್ನು ಕಟ್ಟುತ್ತಿದ್ದೀರಿ. ಉರಿಯುತ್ತಿರುವ ಭಾರತದ ಲಕ್ಷಾಂತರ ಜನ ಒಣಗಿದ ಗಂಟಲುಗಳಿಂದ ಬೇಡುತ್ತಿರುವುದು ಒಂದು ತುತ್ತು ಕೂಳನ್ನು. ಉಪವಾಸದಿಂದ ಸಾಯುತ್ತಿರುವವರಿಗೆ ಮತಧರ್ಮವನ್ನು ನೀಡುವುದು ಅವರಿಗೆ ಮಾಡುವ ಅಪಮಾನ. ಅವರಿಗೆ ತತ್ತ್ವಶಾಸ್ತ್ರವನ್ನು ಬೋಧಿಸುವುದೂ ಒಂದು ಅಪಮಾನ. ಭಾರತದಲ್ಲಿ ಹಣ ಪಡೆದು ಧರ್ಮವನ್ನು ಬೋಧಿಸಿದರೆ ಅಂಥವರನ್ನು ಜಾತಿಭ್ರಷ್ಟರನ್ನಾಗಿ ಮಾಡುತ್ತಾರೆ.”.(ವಿವೇಕಾನಂದರ ಕೃತಿ ಶ್ರೇಣಿ ಸಂ.1.ಪುಟ: 22)
ಈ ಮೇಲಿನ ನುಡಿಗಳಲ್ಲಿ ಮಾನವೀಯ ಮೌಲ್ಯ ವ್ಯಕ್ತವಾಗುತ್ತದೆ.
ಯಾವುದೇ ಮತಧರ್ಮದ ಬೋಧನೆಗಿಂತ ಜನರ ಹಸಿವು ನೀಗಿಸುವುದು ತೀರಾ ಮುಖ್ಯ, ಜನರಿಗೆ ಧರ್ಮದ ಅಗತ್ಯವಿದೆ, ಅನಿವಾರ್ಯ ಅಲ್ಲ; ಆದರೆ ಜನರಿಗೆ ಅನ್ನ ಮತ್ತು ಜೀವನ ಮಾತ್ರ ತುಂಬಾ ಅನಿವಾರ್ಯತೆ ಉಂಟು, ಹೀಗಾಗಿ ಧರ್ಮಗಿಂತ ಅನ್ನವೇ ಶ್ರೇಷ್ಠ, ಅದಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬುದು ವಿವೇಕಾನಂದರ ಚಿಂತನೆ. ವಿವೇಕಾನಂದರು ತನ್ನ ದೇಶದ ದಾರಿದ್ರ್ಯ, ಬಡತನ, ಹಸಿವು ನೀಗಿಸಿ ಶಾಂತಿ ಸೌಹಾರ್ದತೆ ಮತ್ತು ನೆಮ್ಮದಿಯ ಸಮಾಜ ನಿರ್ಮಾಣ ಮಾಡುವ ಮಹೋನ್ನತ ಕನಸು ಕಂಡಿದರು.
“ನನ್ನ ದೇಶದಲ್ಲಿ ದಾರಿದ್ರ್ಯದಿಂದ ನರಳುತ್ತಿರುವವರಿಗೆ ಸಹಾಯ ಪಡೆಯಲು ಇಲ್ಲಿಗೆ ಬಂದೆ’ ಎಂದು ಹೇಳಿದ್ದಾರೆ. ವಿವೇಕಾನಂದರಿಗೆ ಕ್ರೈಸ್ತರ, ಮಹಮ್ಮದೀಯರ, ಬೌದ್ಧರ ಬಗ್ಗೆ ದ್ವೇಷ ಇರಲಿಲ್ಲ. ಅವರು ಯಾವುದೇ ಧರ್ಮವನ್ನು ವಿರೋಧಿಸಲಿಲ್ಲ. ಅವರಿಗೆ ಎಲ್ಲಾ ಧರ್ಮಗಳ ಮೇಲೆ ಪ್ರೇಮವಿತ್ತು. ವಿವೇಕಾನಂದರು ಅಧ್ಯಾತ್ಮಕ್ಕೆ ಎಷ್ಟು ಆದ್ಯತೆ ನೀಡಿದರೋ ಅದಕ್ಕಿಂತ ದುಪ್ಪಟ್ಟು ಜನರ ನೆಮ್ಮದಿ ಬದುಕಿನ ಬಗ್ಗೆ ಯೋಚಿಸಿದರು. ಈ ಜನರಿಗೆ ಮೊದಲು ಬೇಕಾಗಿರುವುದು ಅನ್ನವೇ ಹೊರತು ಧರ್ಮ ಅಲ್ಲ. ಧರ್ಮ ಮತ್ತು ಅನ್ನದ ಬಗ್ಗೆ ತುಂಬಾ ಅದ್ಭುತವಾಗಿ ಪ್ರತಿಪಾದಿಸುತ್ತಾರೆ.
ವಿವೇಕಾನಂದರು ಚಿಕಾಗೊದಲ್ಲಿ ನೀಡಿದ ಕೊನೆಯ ಭಾಷಣದಲ್ಲಿ ಹೀಗೆ ಪ್ರತಿಪಾದಿಸುತ್ತಾರೆ
ಧಾರ್ಮಿಕ ಐಕ್ಯತೆಯ ಸಮಾನ ಭೂಮಿಕೆಯನ್ನು ವ್ಯಕ್ತಪಡಿಸಿದ್ದಾರೆ. “ಸೋದರನೆ, ನಿನ್ನ ಬಯಕೆ ನೆರವೇರುವುದು ಅಸಾಧ್ಯ. ಕ್ರೈಸ್ತರು ಹಿಂದುಗಳಾಗಲಿ ಎಂಬುದು ನನ್ನ ಬಯಕೆಯೆ? ಖಂಡಿತ ಅಲ್ಲ. ಹಿಂದುಗಳು, ಬೌದ್ಧರು ಕ್ರೈಸ್ತರಾಗಲಿ ಎಂಬುದು ನನ್ನ ಬಯಕೆಯೆ? ಖಂಡಿತ ಅಲ್ಲ.” ಅಂದರೆ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಧರ್ಮ ಆಯ್ಕೆ ಇದೆ, ಯಾರೊಬ್ಬರೂ ತಮ್ಮದೇ ಧರ್ಮಕ್ಕೆ ಎಲ್ಲರೂ ಬರಲೆಂದು ಬಯಸುವುದು ಖಂಡಿತ ತಪ್ಪು ಎಂಬುದು ಸ್ಪಷ್ಟವಾಗಿ ತಿಳಿಸಿದ್ದಾರೆ. “ಜಗತ್ತಿನಲ್ಲಿ ಎಂದಾದರೂ ಒಂದು ವಿಶ್ವಧರ್ಮವೆನ್ನುವುದು ಅಸ್ತಿತ್ವಕ್ಕೆ ಬರುವುದಾದರೆ ಅದು ಕಾಲದೇಶಗಳ ಎಲ್ಲೆಯನ್ನು ಮೀರಿರಬೇಕು” ಎನ್ನುವ ವಿಶಾಲ ಚಿಂತನೆಯ ನುಡಿಗಳು ಹೇಳಿದ್ದಾರೆ.
“ಬ್ರಾಹ್ಮಣಧರ್ಮ, ಬೌದ್ಧ ಧರ್ಮ, ಕ್ರೈಸ್ತ ಧರ್ಮ, ಮಹಮ್ಮದೀಯ ಧರ್ಮ ಎಂದು ಮಾತ್ರವಾಗಿರದೆ ಈ ಎಲ್ಲದರ ಮೊತ್ತವಾಗಿರಬೇಕು. ಹಾಗೇ ಆಗಿದ್ದೂ ಬೆಳವಣಿಗೆಗೆ ಅದರಲ್ಲಿ ಅನಂತ ಅವಕಾಶವಿರಬೇಕು. ಆ ಧರ್ಮ ತನ್ನ ವೈಶಾಲ್ಯದಿಂದ ತನ್ನ ಅನಂತ ಬಾಹುಗಳನ್ನು ಚಾಚಿ ಯಾವ ಭೇದವೂ ಇಲ್ಲದೆ ಎಲ್ಲರನ್ನೂ ಅಲಿಂಗಿಸಿಕೊಳ್ಳುವಂತೆ ಇರಬೇಕು” ಧರ್ಮದ ಬಗ್ಗೆ ಹೃದಯ ವೈಶಾಲ್ಯತೆಯ ನುಡಿಗಳು ಎಂದು ಹೇಳುತ್ತಾರೆ.
ವಿವೇಕಾನಂದರು ತಮ್ಮ ಉಪನ್ಯಾಸದಲ್ಲಿ ಅಂತಿಮವಾಗಿ ಹೀಗೆ ಹೇಳುತ್ತಾರೆ
“ಪ್ರತಿಯೊಂದು ಧರ್ಮವೂ ಅತ್ಯಂತ ಉದಾರಚರಿತರಾದ ಸ್ತ್ರೀಪುರುಷರನ್ನು ರೂಪಿಸಿದೆ. ಇಷ್ಟೆಲ್ಲ ಸಾಕ್ಷ್ಯಾಧಾರಗಳು ಇರುವಾಗ ಯಾರಾದರೂ ತನ್ನ ಧರ್ಮವೊಂದೇ ಉಳಿಯತಕ್ಕದ್ದು, ಇತರ ಧರ್ಮಗಳು ನಾಶಹೊಂದತಕ್ಕವು ಎಂಬ ಭ್ರಾಂತಿಯಲ್ಲಿದ್ದರೆ ಅವನ ವಿಷಯದಲ್ಲಿ ನನಗೆ ಅಪಾರವಾದ ಮರುಕವಿದೆ” ಎಂದು ವಿಷಾದ ವ್ಯಕ್ತಪಡಿಸಿ, ಸರ್ವಧರ್ಮ ಸಮನ್ವಯ, ಸಾಮರಸ್ಯ ಮತ್ತು ಶಾಂತಿಯ ಕುರಿತು ತಮ್ಮ ಪ್ರೇಮದ ನುಡಿಗಳು ಪ್ರತಿಪಾದಿಸುತ್ತಾರೆ.
ವಿವೇಕಾನಂದರ ಜಯಂತಿಯ (ಜನವರಿ 12 ) ಈ ಸಂದರ್ಭದಲ್ಲಿ ‘ಎಲ್ಲ ಧರ್ಮಗಳಿಗೂ ಗೌರವಿಸುವ ಜೊತೆಗೆ ಮಾನವೀಯ ನೆಲೆಯಲ್ಲಿ ಬದುಕು ಕಟ್ಟಿಕೊಳ್ಳುವ ಜೊತೆಗೆ ಜೀವನ ನಡೆಸಲು ಧರ್ಮ ಅಗತ್ಯವೇ? ಎಂಬುದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಬರಹ: ಬಾಲಾಜಿ ಕುಂಬಾರ
ಯುವ ಸಾಹಿತಿ, ಪತ್ರಕರ್ತರು ಬೀದರ. ಮೊ: 9739756216
ಇದನ್ನೂ ಓದಿ: ಯುವಕರನ್ನು ಬಡಿದೆಬ್ಬಿಸಿದ ವಿವೇಕಾನಂದರ ಜನ್ಮ ದಿನಕ್ಕೆ ರಂಗೋಲಿ ಅರ್ಪಣೆ
ಇದನ್ನೂ ಓದಿ: Kuvempu Death Anniversary : ‘ಆಗ ಸ್ವಾಮಿ ವಿವೇಕಾನಂದರ ಬೆಂಕಿ ಹೊತ್ತಿಕೊಂಡು ನನ್ನಾತ್ಮ ಉರಿಯುತ್ತಿತ್ತು!’