Kuvempu Death Anniversary : ‘ಆಗ ಸ್ವಾಮಿ ವಿವೇಕಾನಂದರ ಬೆಂಕಿ ಹೊತ್ತಿಕೊಂಡು ನನ್ನಾತ್ಮ ಉರಿಯುತ್ತಿತ್ತು!’

Kuppalli Venkatappa Puttappa : ‘ನಾನೆಲ್ಲಿಯಾದರೂ ಈ ಕ್ರೈಸ್ತ ಅಥವಾ ಒಕ್ಕಲಿಗ ಕೋಮುವಾರು ವಿದ್ಯಾರ್ಥಿನಿಲಯಗಳಿಗೆ ಸೇರಿದ್ದರೆ ನನ್ನ ಮನಸ್ಸಿನ ವೈಶಾಲ್ಯ ಸಾಧನೆಗೆ ಭಂಗ ಬರುತ್ತಿತ್ತು. ನನ್ನ ಚಲನವಲನಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇರುತ್ತಿರಲಿಲ್ಲ. ನಿಲಯದ ನಿಯಮಾವಳಿಗೆ ಒಳಗಾಗಬೇಕಾಗಿ ನಾನು ಪಬ್ಲಿಕ್ ಲೈಬ್ರರಿಯಲ್ಲಿ ರಾತ್ರಿ ಒಂಬತ್ತು ಗಂಟೆವರೆಗಿದ್ದು ನನಗೆ ಬೇಕುಬೇಕಾದ ಗ್ರಂಥಗಳನ್ನು ಓದಿಕೊಳ್ಳಲಾಗುತ್ತಿರಲಿಲ್ಲ...‘

Kuvempu Death Anniversary : ‘ಆಗ ಸ್ವಾಮಿ ವಿವೇಕಾನಂದರ ಬೆಂಕಿ ಹೊತ್ತಿಕೊಂಡು ನನ್ನಾತ್ಮ ಉರಿಯುತ್ತಿತ್ತು!’
ಹಿರಿಯ ಲೇಖಕರಾದ ಕೋ. ಚೆನ್ನಬಸಪ್ಪ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 11, 2021 | 6:41 PM

Kuvempu Death Anniversary : ಕುವೆಂಪು, ದೇಜಗೌ ಅವರಿಗೆ ದಿ. 15.12.83ರಂದು ನೀಡಿದ ಒಂದು ಸಂದರ್ಶನದಲ್ಲಿ : ‘‘ಸಹ್ಯಾದ್ರಿಯ ಗಿರಿವನ ಶ್ರೇಣಿ, ಮನೆಯ ಐಗಳ ಪಾಠಶಾಲೆ, ಮಂಜಪ್ಪ ಗೌಡರಂಥ ಬಂಧುಗಳ ಸಂಪರ್ಕ, ವೆಸ್ಲಿಯನ್ ಮಿಷನ್ ಹೈಸ್ಕೂಲಿನ ಪ್ರವೇಶ, ಅಂತೆಯೆ ನಗರ ಗ್ರಂಥಾಲಯ  ಇವು ಒಂದೊಂದೂ ನನ್ನ ಚೇತನ ವಿಕಾಸಕ್ಕೆ ನೆರವಾದ ಅದ್ಭುತ ಘಟನೆಗಳು. ಪಾಶ್ಚಾತ್ಯ ಹಾಗೂ ವಿವೇಕಾನಂದ ಸಾಹಿತ್ಯಕ್ಕೆ ಗವಾಕ್ಷ ತೆರೆದದ್ದು ಆ ಗ್ರಂಥಾಲಯ’’ ಎಂಬುದಾಗಿ ಹೇಳಿದ್ದಾರೆ. ಇದುವರೆಗೆ ಕುವೆಂಪು ಅವರ ಮನೆಯ ಶಾಲೆಯ ಐಗಳು ಮತ್ತು ಮಂಜಪ್ಪ ಗೌಡರಂಥ ಬಂಧುಗಳ ಸಂಪರ್ಕದಿಂದ ಅವರ ಚೇತನದ ವಿಕಾಸಕ್ಕೆ ಹೇಗೆ, ಎಷ್ಟರಮಟ್ಟಿಗೆ ನೆರವಾಯಿತು ಎಂಬುದನ್ನು ಗಮನಿಸಿದ್ದೇವೆ. ಇನ್ನು ಅವರು ಮಲೆನಾಡಿನ ಸಹ್ಯಾದ್ರಿ (ಗಿರಿವನ ಕಾಡು)ಯನ್ನು ದಾಟಿ ನವನಾಗರಿಕತೆಯ ವಿದ್ಯಾಕೇಂದ್ರವಾಗಿದ್ದ ಮೈಸೂರಿಗೆ ಬಂದು ವೆಸ್ಲಿಯನ್ ಹೈಸ್ಕೂಲಿನಲ್ಲಿ, ನಗರದ ಗ್ರಂಥಭಂಡಾರದಲ್ಲಿ ಅವರ ಚೇತನದ ವಿಕಾಸಕ್ಕೆ ಅವರ ವೈಚಾರಿಕ ಮತ್ತು ವೈಜ್ಞಾನಿಕ ದೃಷ್ಟಿ ಬೆಳವಣಿಗೆಗೆ ಹೇಗೆ ಎಷ್ಟು ನೆರವಾಯಿತು ಎಂಬುದನ್ನು ಪರಿಶೀಲಿಸೋಣ. ಕೋ. ಚೆನ್ನಬಸಪ್ಪ, ಹಿರಿಯ ಲೇಖಕರು

*

‘ವೈಚಾರಿಕತೆಯ ಚೈತ್ಯಾಕ್ಷಿ ತೆರೆಯಿತು’

ಮನುಕುಲದ ಕಥೆಯನ್ನು ಓದಿದವರು, ಕೇಳಿದವರು, ಲೋಕದ ಇತಿಹಾಸವನ್ನು ಸ್ಥೂಲವಾಗಿ ಆದರೂ ಅಧುಯಾಸ ಮಾಡಿದವರು, ಮತಾಂಧತೆ, ಮತಭ್ರಾಂತಿ, ಮತದ್ವೇಷ ಮತ್ತು ಜಾತೀಯತೆಯ ಮೂಲಕಾರಣ ಅವಿಚಾರ, ಅವೈಜ್ಞಾನಿಕತೆ ಎಂಬುದನ್ನು ಗ್ರಹಿಸುತ್ತಾರೆ. ಅಂದರೆ ವೈಚಾರಿಕತೆಯ ವೈಜ್ಞಾನಿಕತೆಯ ಪರಮಶತ್ರು ಮತಭ್ರಾಂತಿ ಎಂಬುದು ಇತಿಹಾಸ ಸಾರುವ ಸತ್ಯ. ಅದಕ್ಕೆ ಒಂದೇ ಒಂದು ಉದಾಹರಣೆಯನ್ನು ಗಮನಿಸುವುದು ನಾವೀಗ ಮಾಡುತ್ತಿರುವ ಅಧ್ಯಯನಕ್ಕೆ ಸಹಾಯಕವಾಗುತ್ತದೆ. ಹನ್ನೊಂದು ಹನ್ನೆರಡನೆಯ ಶತಮಾನದಲ್ಲಿ ಕ್ರಿಶ್ಚಿಯನ್ನರಿಗೂ ಮಹಮ್ಮದೀಯರಿಗೂ ನಡೆದ ನೂರುವರ್ಷಗಳ ಯುದ್ಧಕ್ಕೂ ಮೂಲಕಾರಣ ಎರಡು ಮತಗಳವರ ಮತಭ್ರಾಂತಿ, ಮತಾಂಧತೆ. ಕ್ರೈಸ್ತ ಹುಟ್ಟಿದೂರು ಜೆರೂಸೆಲೇಮ್. ತುರ್ಕಿ ದೇಶದ ಸ್ವಾಧೀನದಲ್ಲಿತ್ತು. ಅದು ಕ್ರಿಶ್ಚಿಯನ್‌ರಿಗೆ ಪವಿತ್ರಭೂಮಿ (Holy Land). ಅದನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವುದು ತಮ್ಮ ಪವಿತ್ರ ಕಾರ್ಯ. ಅಲ್ಲಿಗೆ ಹೋಗಿ ಸತ್ತರೆ ಸ್ವರ್ಗಪ್ರಾಪ್ತಿಯಾಗುತ್ತದೆ. ಪಾಪ ಪರಿಮಾರ್ಜನೆ ಆಗುತ್ತದೆ. ಆದ್ದರಿಂದ ಕ್ರಿಶ್ಚಿಯನ್ನರು ಅಲ್ಲಿಗೆ ಹೋಗಿ ಸಾಯಲೆಂದೇ (ನಮ್ಮಲ್ಲಿ ಕಾಶಿಯಲ್ಲಿ ಸತ್ತರೆ ಸ್ವರ್ಗಪ್ರಾಪ್ತಿ ಎಂಬ ನಂಬುಗೆಯಂತೆ) ಪಾಪ ಪರಿಮಾರ್ಜನೆ ಮಾಡಿಕೊಳ್ಳಲೆಂದೇ ಕ್ರಿಶ್ಚಿಯನ್ ಮತಾವಲಂಬಿಗಳ ದಂಡು ಹಿಂಡುಹಿಂಡಾಗಿ ಈ ಪವಿತ್ರ ಯುದ್ಧಕ್ಕೆ ನುಗ್ಗಿದರು. ಅವರಿಗೆ ಸ್ವರ್ಗಪ್ರಾಪ್ತಿ ಪಾಪ ಪರಿಮಾರ್ಜನೆಯ ಭರವಸೆ ಕೊಟ್ಟವರು ಪೋಪ್! ಜೆರೂಸಲೇಮ್ ಸ್ವಾಧೀನಪಡಿಸಿಕೊಳ್ಳಲು, ಸಾಧ್ಯವಾಗದಿದ್ದರೆ ಆ ಪ್ರಯತ್ನದಲ್ಲಿ ಸತ್ತು ಪುಣ್ಯ ಕಟ್ಟಿಕೊಳ್ಳಲಿಕ್ಕಾಗಿಯೇ ನೂರು ವರ್ಷಗಳ ಕಾಲ ಯುದ್ಧ ಮಾಡಿದರು! ಈಗಲೂ ಇಸ್ರೇಲ್- ಪ್ಯಾಲೆಸ್ಟೇನ್‌ಗಳ ನಡುವೆ, ಮಧ್ಯಪ್ರಾಚ್ಯ ಮತ್ತು ಅಮೆರಿಕಾ ಇಂಗ್ಲೆಂಡುಗಳ ಮಧ್ಯೆ ನಡೆಯುತ್ತಿರುವ ಮಾರಣಹೋಮ ಆ ಪುರಾತನ ಮತದ್ವೇಷ, ಮತಭ್ರಾಂತಿಯ ಇನ್ನೊಂದು ಆವೃತ್ತಿ.

ಆ ಯದ್ಧದಲ್ಲಿ ಬೌಲಿಯನ್ ಗಾಡ್‌ಫ್ರೇ ಎಂಬ ದೊರೆ ಮಾಡಿದ ಯುದ್ಧದಲ್ಲಿ ರಕ್ತದ ಹೊಳೆಯೇ ಹರಿಯಿತಂತೆ ! ಓರ್ವ ಫ್ರೆಂಚ್ ಪ್ರತ್ಯಕ್ಷದರ್ಶಿಯ ಪ್ರಕಾರ ‘ಜೆರೂಸಲೇಮ್‌ನ ಒಂದು ಮಸೀದಿಯ ಮುಂದಿನ ಪೋರ್ಟಿಕೋದಲ್ಲಿ ಮೊಳಕಾಲು ಮಟ್ಟ , ಕುದುರೆಗಳ ತುಟಿಗೆ ತಾಗುವಷ್ಟು ರಕ್ತ ಹರಿಯಿತು’ ! ವಿವೇಕಾನಂದರು ಹೇಳುವಂತೆ ಧರ್ಮದ ಹೆಸರಿನಲ್ಲಿ ರಕ್ತಪಾತವಾಗಿ ಜಗತ್ತು ರಕ್ತದಲ್ಲಿ ತೋಯ್ದುಹೋದಷ್ಟು ಇನ್ನಾವ ಕಾರಣದಿಂದಲೂ ಆಗಿಲ್ಲ. ಆ ಮಾತಿಗೆ ಇಂದೂ ನಾವು ಪ್ರತ್ಯಕ್ಷ ಸಾಕ್ಷಿಗಳಾಗಿದ್ದೇವೆ. ಒಟ್ಟು ಈ ಇತಿಹಾಸದ ಮಥಿತಾರ್ಥ ಮತಭ್ರಾಂತಿಯಿಂದ ದೂರವಿರಿ, ಅದರಿಂದ ಪಾರಾಗಿ! ಹೇಗೆ ? ವೈಚಾರಿಕತೆಯಿಂದ, ವೈಜ್ಞಾನಿಕ ದೃಷ್ಟಿಯ ಮೂಲಕ ಕುವೆಂಪು ವಿಚಾರವಂತರಾಗಿ ಬೆಳೆಯಲು, ಮತಾಂಧತೆ, ಮತಭ್ರಾಂತಿ, ಜಾತೀಯತೆಯಿಂದ ದೂರ ಉಳಿದದ್ದು ಮುಖ್ಯ ಕಾರಣ ಎಂಬುದನ್ನು ಗಮನಿಸಬೇಕು. ಆಗ ಅವರು ಆ ಚಿಕ್ಕವಯಸ್ಸಿನಲ್ಲಿ ಬುದ್ಧಿಪೂರ್ವಕವಾಗಿ, ದೃಢ ನಿಶ್ಚಯದಿಂದ ಜಾತೀಯತೆಯಿಂದ ದೂರವುಳಿದರೆಂದೂ ಆ ಕೆಸರಿನ ಕುಣಿಯಲ್ಲಿ ಬೀಳಲಿಲ್ಲವೆಂದೂ ಹೇಳುವ ಮಾತಲ್ಲ. ಅವರೇ ಹೇಳುವಂತೆ : ‘‘ಇಲ್ಲಿ ವಿಧಿಯ ಕೈಯೆ ನನ್ನನ್ನು ಹಿಡಿದು ನಿಯಂತ್ರಿಸುತ್ತಿತ್ತಲ್ಲವೆ ? ಸಿಂಹಾವಲೋಕನ ಮಾಡುತ್ತಿರುವ ಮನಸ್ಸಿಗೆ ಹಾಗೆಂದು ತೋರುತ್ತದೆ.’’ ವಿಧಿಯ ಕೈ ಹೇಗೆ ಅವರನ್ನು ಆ ಮತಭ್ರಾಂತಿಯ, ಜಾತೀಯತೆಯ ಮಲಕೂಪದಿಂದ ಪಾರುಮಾಡಿತು?

ಪ್ರೌಢಶಾಲಾ ಶಿಕ್ಷಣಕ್ಕೆಂದು ಮೈಸೂರಿಗೆ ಬಂದರು. ಹಾರ್ಡ್ವಿಕ್ ಕಾಲೇಜಿಗೆ (ಆಗ ಹೈಸ್ಕೂಲ್‌ಗಳನ್ನು ಕಾಲೇಜೆಂದು ಕರೆಯುತ್ತಿದ್ದರು) ಸೇರಬೇಕೆಂದೂ, ಅದು ನಡೆಸುತ್ತಿದ್ದ ಹಾಸ್ಟೆಲಿನಲ್ಲಿ ಪುಕ್ಕಟೆ ಊಟ ವಸತಿ ಏರ್ಪಾಟಿನ ಸೌಲಭ್ಯ ಪಡೆಯಬೇಕೆಂದೂ ಬಂದಿದ್ದರು. ಹಾಗಾದರೆ ಹಾರ್ಡ್ವಿಕ್ ಹಾಸ್ಟೆಲಿಗೆ ಏಕೆ ಸೇರಲಿಲ್ಲ ? ಅದರ ಕಾರಣವನ್ನು ಕುವೆಂಪು ಹೀಗೆ ವಿವರಿಸಿದ್ದಾರೆ :

‘‘…ನಾನು ಮೈಸೂರಿಗೆ ಬಂದ ವರ್ಷದಿಂದ ಕ್ರೈಸ್ತರಾಗುವ ವಿದ್ಯಾರ್ಥಿಗಳಿಗೆ ಮಾತ್ರ ಬಿಟ್ಟಿ ಊಟ, ಬಿಟ್ಟಿ ಬಟ್ಟೆ, ಬಿಟ್ಟಿ ಓದು ಲಭಿಸುವುದಾಗಿಯೂ, ಉಳಿದವರು ತಗಲುವ ವೆಚ್ಚ ಕೊಡಬೇಕೆಂದೂ ನಿರ್ಣಯಿಸಿದರಂತೆ. ಈ ಆಜ್ಞೆ ನನ್ನಂತಹ ಹೊಸದಾಗಿ ಬಂದು ಸೇರುವವರಿಗೆ ಪೂರ್ತಿಯಾಗಿಯೂ, ಆಗಲೆ ಸೇರಿ ಹಾಸ್ಟೆಲಿನಲ್ಲಿ ಓದುತ್ತಿರುವವರಿಗೆ ಆಂಶಿಕವಾಗಿಯೂ ಅನ್ವಯವಾಗಿತ್ತು. ಅಂದರೆ ಮೊದಲೆ ಸೇರಿದ್ದ ರಾಮಪ್ಪದ್ವಯರಿಗೆ ಬಿಟ್ಟಿ ಊಟ ಸಿಕ್ಕುತ್ತಿತ್ತು, ಅವರು ಸೇರಿದ್ದರೆ. ಆದರೆ ಅದುವರೆಗೆ ಬಿಟ್ಟಿ ಬಟ್ಟೆ ಕೊಡುತ್ತಿದ್ದುದನ್ನು ಕೊಡುವುದಿಲ್ಲ ಎಂದುದಕ್ಕೆ ಸಿಟ್ಟುಗೊಂಡು… ಕ್ರೈಸ್ತ ಸಂಸ್ಥೆಯ ವಿದ್ಯಾರ್ಥಿನಿಲಯಕ್ಕೆ ಬೆಂದಿರುಗಿ ನನ್ನ ಮಿತ್ರರು ಒಕ್ಕಲಿಗರ ವಿದ್ಯಾರ್ಥಿ ನಿಲಯಕ್ಕೆ ಸೇರುವ ಪ್ರಯತ್ನ ಮಾಡಿದರು. ಆಗ ಒಕ್ಕಲಿಗರ ವಿದ್ಯಾರ್ಥಿ ನಿಲಯ ಕಾಳಮ್ಮನ ಗುಡಿ ಬೀದಿಯಲ್ಲಿತ್ತು. ಅಲ್ಲಿ ನಾನೂ ಸೇರಿ ಮೂವರೂ ಹೋದೆವು. ಮರುದಿನ ಮ್ಯಾನೇಜರು ಮರುದಿನ ಬರುವಂತೆ ಹೇಳಿದರು… ಮರುದಿನ… ನಾವು ಹೋದಾಗ ಮ್ಯಾನೇಜರು ಸೇರಿಸಲಿಕ್ಕೆ ಆಗುವುದಿಲ್ಲ ಎಂದು ಹೇಳಿಬಿಟ್ಟರು. ಏಕೆಂದರೆ ಅಲ್ಲಿ ಒಕ್ಕಲಿಗರಿಗಲ್ಲದೆ ಬೇರೆ ಮತದವರಿಗೆ ಪ್ರವೇಶವಿಲ್ಲ. ‘‘ನೀವು ಹಾರ್ಡ್ವಿಕ್ ಹಾಸ್ಟೆಲಿನಲ್ಲಿ ಇದ್ದವರೆಂದು ನಮ್ಮ ಹುಡುಗರಿಗೆ ಗೊತ್ತಾಗಿದೆ. ನೀವೆಲ್ಲ ಕಾನ್ವರ್ಟ್‌ ಕ್ರಿಶ್ಚಿಯನ್ನರಾದ್ದರಿಂದ  ನಿಮಗೆ ಇಲ್ಲಿ ಜಾಗವಿಲ್ಲ. ಹಾಗೇನಾದರೂ ನಾನು ಜಾಗ ಕೊಟ್ಟರೆ ಒಕ್ಕಲಿಗ ಹುಡುಗರು ತಮ್ಮ ಜಾತಿ ಕೆಡುವುದೆಂದು ಗಲಾಟೆ ಮಾಡುತ್ತಾರೆ. ಅವರೆಲ್ಲ ಹಾಸ್ಟಲ್ಲನ್ನೇ ಬಿಟ್ಟು ಹೋಗಿಬಿಡುತ್ತೇವೆಂದು ಹೆದರಿಸಿದ್ದಾರೆ’’ ಎಂದು ತಿರಸ್ಕರಿಸಿದರು.

Kuvempu Death Anniversary

ನವಕರ್ನಾಟಕ ಪ್ರಕಾಶನದ ಪುಸ್ತಕ

‘‘ಕಡೆಗೆ ನನ್ನ ಮಿತ್ರರು ನನಗಾದರೂ ಅಲ್ಲಿ ಜಾಗ ದೊರಕಿಸಿಕೊಡುವ ಉದ್ದೇಶದಿಂದ… ಇವರು ಕುಪ್ಪಳಿ ಮನೆಯವರು…. ಈಗತಾನೆ ಮೈಸೂರಿಗೆ ಬಂದಿದ್ದಾರೆ. ಇವರಿಗಾದರೂ ಸೀಟು ಕೊಡಿ’’ ಎಂದು ಅಂಗಲಾಚಿದರು.

‘‘ಆದರೆ ಅಲ್ಲಿದ್ದ ಒಕ್ಕಲಿಗ ಹುಡುಗರು : ‘‘ಈ ಮಲೆನಾಡಿನ ಒಕ್ಕಲಿಗರೆಲ್ಲ ಕ್ರಿಶ್ಚಿಯನ್ ಆಗಿದ್ದಾರೆ. ಇವರು ಸುಳ್ಳು ಹೇಳುತ್ತಿದ್ದಾರೆ. ಇವರೆಲ್ಲ ಕ್ರಿಶ್ಚಿಯನ್ನರೆ. ಖಂಡಿತ ಜಾಗ ಕೊಡಬಾರದು’’ ಎಂದು ನಮ್ಮನ್ನು ಹೊರಗೆ ಹಾಕಿದರು.’’

ಈ ಘಟನೆಯನ್ನು ನೆನಪು ಮಾಡಿಕೊಂಡು ಕುವೆಂಪು ಮುಂದುವರಿಯುತ್ತಾರೆ : ‘‘ಹಾರ್ಡ್ವಿಕ್ ಹಾಸ್ಟೆಲನ್ನೂ ತಿರಸ್ಕರಿಸಿ (ಕ್ರಿಶ್ಚಿಯನ್ನರಲ್ಲ ಎಂಬ ಕಾರಣದಿಂದ) ಒಕ್ಕಲಿಗರ ಹಾಸ್ಟೆಲಿನಿಂದಲೂ ತಿರಸ್ಕೃತರಾಗಿ (ಕ್ರಿಶ್ಚಿಯನ್ನರು ಎಂಬ ಕಾರಣಕ್ಕೆ) ತ್ರಿಶಂಕು ಸ್ವರ್ಗಾನ್ವೇಷಿಗಳಾಗಿ ಹೊರಬಿದ್ದೆವು’’ ಎಂದು ನಿಟ್ಟುಸಿರುಬಿಡುತ್ತಾರೆ  ಅನ್ಯತಾಭಾವದಿಂದ. ಯಾಕೆ ? ಅದನ್ನು ಅವರ ಬಾಯಿಂದಲೆ ಕೇಳೋಣ :

‘‘ನಾನೆಲ್ಲಿಯಾದರೂ ಈ ಕ್ರೈಸ್ತ ಅಥವಾ ಒಕ್ಕಲಿಗ ಕೋಮುವಾರು ವಿದ್ಯಾರ್ಥಿನಿಲಯಗಳಿಗೆ ಸೇರಿದ್ದರೆ ನನ್ನ ಮನಸ್ಸಿನ ವೈಶಾಲ್ಯ ಸಾಧನೆಗೆ ಭಂಗ ಬರುತ್ತಿತ್ತು. ನನ್ನ ಚಲನವಲನಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇರುತ್ತಿರಲಿಲ್ಲ. ನಿಲಯದ ನಿಯಮಾವಳಿಗೆ ಒಳಗಾಗಬೇಕಾಗಿ ನಾನು ಪಬ್ಲಿಕ್ ಲೈಬ್ರರಿಯಲ್ಲಿ ರಾತ್ರಿ ಒಂಬತ್ತು ಗಂಟೆವರೆಗಿದ್ದು ನನಗೆ ಬೇಕು ಬೇಕಾದ ಗ್ರಂಥಗಳನ್ನು ಓದಿಕೊಳ್ಳಲಾಗುತ್ತಿರಲಿಲ್ಲ… ಜೊತೆಗೆ, ಸಂಗಮಹಿಮೆಯಿಂದ ಒಂದೇ ಜಾತಿಯ ಹುಡುಗರೊಂದಿಗೆ ಸೇರಿ ಸಣ್ಣ ಮನಸ್ಸೂ ಸಂಕುಚಿತ ಭಾವಗಳೂ ನನ್ನಲ್ಲಿ ಮನೆ ಮಾಡುತ್ತಿದ್ದವು. ಅಲ್ಲದೆ ಕಾಡುಹರಟೆ, ಪೋಲಿ ಮಾತು, ಪರನಿಂದೆ, ಪರಚರ್ಚೆ ಇವುಗಳಿಗೆಲ್ಲ ಅನಿವಾರ್ಯವಾಗಿ ಸಿಲುಕಿ ಅಧ್ಯಯನಕ್ಕೂ ವಿನಿಯೋಗವಾಗದೆ ಕಾಲಹರಣವಾಗುತ್ತಿತ್ತು. ತರಗತಿಯಲ್ಲಿ ತೇರ್ಗಡೆ ಹೊಂದದೆ ವಿದ್ಯಾರ್ಥಿ ವೇತನವನ್ನು ಕಳೆದುಕೊಂಡು ಮನೆಗೆ ಹಿಂತಿರುಗಬೇಕಾಗುತ್ತಿತ್ತು!’’

ಆಗ ಅವರನ್ನು ಒಕ್ಕಲಿಗರ ಹಾಸ್ಟೆಲಿಗೆ ಸೇರಿಸದಿದ್ದುದು ತತ್‌ಕಾಲದಲ್ಲಿ ಅಪ್ರಿಯವೂ ಹಾನಿಕಾರಕವೂ (ಹಣ ವೆಚ್ಚದ ದೃಷ್ಟಿಯಿಂದ) ಎಂದು ಕಂಡುಬಂದರೂ ಅದೇ ಅವರ ಅಭ್ಯುದಯಕ್ಕೂ ವಿಶ್ವವಿಶಾಲ, ವಿಶ್ವಮಾನವ ದೃಷ್ಟಿದಾನಕ್ಕೂ ವರವಾಗಿ ಪರಿಣಮಿಸಿತು. ಅಂದು ಆ ಒಕ್ಕಲಿಗ ಹುಡುಗರು, ಇವರು ಒಕ್ಕಲಿಗರಲ್ಲ ಎಂಬ ಮಾತು ಎಷ್ಟು ಸತ್ಯಸ್ಯ ಸತ್ಯವಾಯಿತು! ಎಂಥ ಕಾಲಜ್ಞಾನ ನುಡಿ Prophetic! ದೇವರು, ಅವರನ್ನು ಕಾಪಾಡಿ ಪಾರುಮಾಡಿ ಇಡೀ ಕನ್ನಡನಾಡಿಗೆ  ಒಂದು ಅರ್ಥದಲ್ಲಿ ಇಡೀ ಭರತಖಂಡಕ್ಕೆ ಜಾತೀಯತೆಯ ಸೂತಕ ಸೋಂಕದ ಋಷಿ ಕವಿಯನ್ನು ಕರುಣಿಸಿದ. ಭಲೇಸನೆಸಗುವ ವಿಧಿಗೆ ಬಹುಪಥಗಳುಂಟು!’

ಅವರು ಒಕ್ಕಲಿಗರಲ್ಲ ಎಂದ ಆ ಹುಡುಗರು ಆಡಿದ ಸತ್ಯ ವಾಕ್ಯವನ್ನು ಕುವೆಂಪು ಸಂಪೂರ್ಣವಾಗಿ ಒಪ್ಪಿಕೊಂಡಿರುವುದನ್ನು ದೇಜಗೌ ಸ್ಪಷ್ಟವಾಗಿ ದಾಖಲಿಸಿದ್ದಾರೆ. ಕುವೆಂಪು 15.12.83ರ ಸಂದರ್ಶನದಲ್ಲಿ ಹೇಳುತ್ತಾರೆ : ‘‘ನನಗೆ ಯಾವ ಮತ ಗೋಜೂ ಇಲ್ಲ. ನನ್ನದು ಮನುಜ ಮತ, ವಿಶ್ವಪಥ. ನಾನು ಹಿಂದುವಲ್ಲ. ವಿಶ್ವಮಾನವ. ಮತವನ್ನು ತೊರೆದು ಅಧ್ಯಾತ್ಮಪಥವನ್ನು ಸ್ವೀಕರಿಸಿದ ಪ್ರತಿಯೊಬ್ಬ ವ್ಯಕ್ತಿಯೂ ವಿಶ್ವಮಾನವನಾಗುತ್ತಾನೆ.’’

ಹೀಗೆ ಕುವೆಂಪು ಎಲ್ಲ ಜಾತಿಯನ್ನೂ ಬಿಟ್ಟವರು. ಯಾವ ಜಾತಿಗೂ ಸೇರದವರು. ಬಸವಣ್ಣ ‘ಆನು ಹಾರುವನೆಂದರೆ ಕೂಡಲ ಸಂಗಮ ನಗುವನಯ್ಯಾ’ ಎಂದಂತೆ ಕುವೆಂಪು : ‘ಆನು ಹಿಂದುವೆಂದರೆ, ಒಕ್ಕಲಿಗನೆಂದರೆ ಗುರು ಮಹರಾಜರು ನಗುವರಯ್ಯಾ’ ಎಂದು ಉದ್ಗಾರ ತೆಗೆಯಬಹುದು. ಆದರೆ 1922ರಲ್ಲಿ ಚನ್ನಪಟ್ಟಣದ ಒಕ್ಕಲಿಗರ ಸಂಘದ ವಿದ್ಯಾರ್ಥಿಗಳ ಸಂಘ, ಕೆ. ವಿ. ಪುಟ್ಟಪ್ಪನವರಿಗೆ ಇಂಗ್ಲಿಷ್ ಪ್ರಬಂಧ ರಚನೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕೊಟ್ಟು ಹೆಮ್ಮೆಪಟ್ಟುಕೊಂಡಿತು. ಈ ಪ್ರಸಂಗವನ್ನು ಕುರಿತು ಕುವೆಂಪು : ‘‘ನನ್ನನ್ನು , ಹಿಂದೆ ತಿಳಿಸಿದಂತೆ, ಯಾವ ಒಕ್ಕಲಿಗರ ಹಾಸ್ಟೆಲಿಗೂ ಸೇರಿಸಿರಲಿಲ್ಲ. ಆದರೂ ನನಗೆ ಬಹುಮಾನ ಬಂದಿರುವುದು ನಾನು ಒಕ್ಕಲಿಗರ ವಿದ್ಯಾರ್ಥಿ ಸಂಘದ ಸದಸ್ಯ ಎಂದು. ಬಹುಶಃ ನನ್ನ ಮಿತ್ರರು… ಸತ್ಯಕ್ಕೂ ಪ್ರಾಮಾಣಿಕತೆಗೂ ಅಷ್ಟೇನೂ ಬೆಲೆ ಕೊಡಲಿಚ್ಛಿಸಲಿಲ್ಲ.’’ ಬುದ್ಧಿವಂತರಾದಾಗ ಒಕ್ಕಲಿಗರೆಂದು ಅಂಗೀಕರಿಸಿದರು : ತಮ್ಮವನನ್ನಾಗಿ ಮಾಡಿಕೊಂಡರು. ಇದು ಲೋಕದಾಟ ! ಆಗ ಅವರನ್ನು ಒಕ್ಕಲಿಗರಲ್ಲ ಎಂದವರು ಈಗ ಅವರನ್ನು ಒಕ್ಕಲಿಗ ಮಹಾಕವಿ ಎಂದು ಆರಾಸುವ ವಿಪರ್ಯಾಸ ಅಲ್ಲಲ್ಲಿ ಗುಟ್ಟಾಗಿಯಾದರೂ ನಡೆಯುತ್ತಿದೆ ! ‘‘ನನಗೆ ಯಾವ ಮತದ ಗೋಜೂ ಇಲ್ಲ’ ಎಂದು ನೀವು ಹೇಳಬಹುದು. ಆದರೆ ನಾವು ನಿಮ್ಮನ್ನು ಒಕ್ಕಲಿಗರ ಜಾತಿಯಿಂದ ಬಿಡೆವು’’ ಎಂಬ ಧೋರಣೆ! ‘ಜಾತಿಯನ್ನು ನಾನು ಬಿಟ್ಟರೂ, ಜಾತಿ ನನ್ನನ್ನು ಬಿಡದು’ ಎಂದು ಅವರನ್ನು ಬೆಂಬಿಡದೆ ‘ಜಾತಿ’ ಶನಿಯಂತೆ ಕಾಡುತ್ತಿದೆ! ಬಸವಣ್ಣನನ್ನು ಈಗ ಕಾಡುತ್ತಿರುವಂತೆ, ಮುಂದೆ ಎಂದಾದರೂ ಕುವೆಂಪು ಮನೆ ಆದಿಚುಂಚನಗಿರಿ ಶಾಖಾಮಠವೂ ಆದೀತೊ ಏನೊ!

ಇನ್ನು ಜಾತಿ ಮತ ನಿರ್ಬಂಧಗಳಿಲ್ಲದ ಕುವೆಂಪು ಚೇತನದ ಊರ್ಧ್ವಮುಖ ಪಯಣದ ಹೆಜ್ಜೆಗುರುತುಗಳನ್ನು ಹಿಂಬಾಲಿಸೋಣ :

ಅವರು ಹುಟ್ಟಿದ ಕುಟುಂಬ, ಬಂಧು ಬಳಗ, ಸುತ್ತಮುತ್ತಲ ಸಮಾಜದಲ್ಲಿ ಮುತ್ತಿಕೊಂಡಿದ್ದ ಅವಿಚಾರ, ಅವೈಜ್ಞಾನಿಕ ಕಗ್ಗತ್ತಲೆಯ ಮಧ್ಯದಲ್ಲಿ ಅವರಿಗೆ ವೈಚಾರಿಕತೆಯ ಬೆಳಕು ಎಲ್ಲಿಂದ ಮೂಡಿ ಬಂತು? ಅವರು ಎಂಥ ಮೌಢ್ಯದ ಮಧ್ಯೆಯೆ ಇದ್ದರೆಂಬುದಕ್ಕೂ ಅವರೆ ನೆನಪಿನ ದೋಣಿಯಲ್ಲಿ ದಾಖಲಿಸಿರುವ ಮೌಢ್ಯದ ರಾಜ ಎನಿಸಬಹುದಾದ ಒಂದು ಘಟನೆಯನ್ನು ಗಮನಿಸೋಣ. ಅದು ಅವರ ತಾಯಿಯ ಹನ್ನೊಂದನೆಯ ದಿನದ ತಿಥಿಗೆ ಸಂಬಂಸಿದ ಸಂಗತಿ. ಆ ಬಗ್ಗೆ ಕುವೆಂಪು ಬರೆಯುತ್ತಾರೆ :

‘‘ಹನ್ನೊಂದನೆಯ ದಿನದ ಕಟ್ಟಳೆಗೆ ಸಂಪ್ರದಾಯದಂತೆ ಒಬ್ಬ ದಾಸಯ್ಯನನ್ನು ಆಹ್ವಾನಿಸಿದ್ದರು. ಆತ ತೀರ್ಥ ಚಿಮುಕಿಸಿ ಏನನ್ನೊ ಶುದ್ಧ ಮಾಡುತ್ತಾನಂತೆ. ಆದರೆ ನಮಗೆ ಗೊತ್ತಿದ್ದದ್ದು ಆ ದಾಸಯ್ಯನಿಗೆ ಊಟಕ್ಕೆ ಕುಳಿತಾಗ ಒಂದು ಬುಟ್ಟಿ ಉದ್ದಿನ ಒಡೆಯನ್ನೂ ಜೇನುತುಪ್ಪವನ್ನೂ ಬಡಿಸಿ ತಣಿಉಣಿಸುತ್ತಿದ್ದ ನಗೆ ಸಂಗತಿ. ಆ ದಾಸಯ್ಯನೋ ಕಜ್ಜಿ ತುರಿ ಮೈ ತುಂಬಿ, ಕೊಳಕೋ ಕೊಳಕು ಬಟ್ಟೆ ಸೊಂಟಕ್ಕೆ ಸುತ್ತಿ , ಡೊಳ್ಳುಹೊಟ್ಟೆ ಬಿಟ್ಟುಕೊಂಡಿದ್ದ ಒಂದು ಮನುಷ್ಯಪ್ರಾಣಿ! ಅವನು ಪೂಜೆಗೀಜೆ ಮಾಡಿದ ಮೇಲೆ ದೊಡ್ಡವರು ಕೆಲವರು ಅವನಿಗೆ ಕಾಲುಮುಟ್ಟಿ ಅಡ್ಡಬಿದ್ದರು. ನನಗೂ ಹಾಗೆ ಮಾಡಲು ಹೇಳಿದರು! ನನ್ನ ಜುಗುಪ್ಸೆಗೆ ಅಳವಿರಲಿಲ್ಲ, ನಾನೂ ಥೂ ಎಂದು ತಿರಸ್ಕರಿಸಿಬಿಟ್ಟೆ . ಆ ದಾಸಯ್ಯ ಕಜ್ಜಿ ಹಿಡಿದ ‘ಕೈಕಾಲು ಸಣ್ಣ ಹೊಟ್ಟೆ ಡುಬ್ಬಣ್ಣ’ನಾಗಿದ್ದರೂ ತಿಥಿ ಊಟಕ್ಕೆ ಬಡಿಸಿದ ಒಂದು ಕುಕ್ಕೆ ಒಡೆಗಳನ್ನೂ ಜೇನುತುಪ್ಪವನ್ನೂ ಪೂರೈಸಿದ್ದಲ್ಲದೆ ಅಷ್ಟೇ ಪ್ರಮಾಣದ ಕಡುಬುಗಳನ್ನೂ ಮತ್ತು ಮಾಂಸದ ಹುಳಿಯನ್ನೂ ಹಾಸಿದ್ದ ದೊಡ್ಡ ಬಾಳೆಯೆಲೆ ತೊಳೆದಿಟ್ಟಂತಾಗುವಂತೆ ತಿಂದು ಪೂರೈಸಿದನು, ಮೃತರ ಆತ್ಮಕ್ಕೆ ಪರಿಪೂರ್ಣ ತೃಪ್ತಿಯಾಗುವಂತೆ!

‘‘ಅಂದಿನ ತಿಥಿಯೂಟದಲ್ಲಿ ನಡೆದ ಮತ್ತೊಂದು ‘ಅಕ್ರಮ’ ಎಂದರೆ, ತಿಥಿಗಾಗಿಯೆ ಕಡಿದಿದ್ದ ‘ಕಂಚಿಹೋತ’ದ ಮಾಂಸವನ್ನು ಭಕ್ಷಿಸಲು ನಾನು ನಿರಾಕರಿಸಿದ್ದು! ಶಾಸ್ತ್ರಕ್ಕಾದರೂ ಸ್ವಲ್ಪವನ್ನು ಪ್ರಸಾದದಂತೆ ತೆಗೆದುಕೊಳ್ಳಬೇಕೆಂದು ಹಿರಿಯ ಸಂಪ್ರದಾಯ ರಕ್ಷಕರು ಒತ್ತಾಯಪಡಿಸಿದರೂ ನಾನು ‘ವ್ರತಭ್ರ್ರಷ್ಟ’ನಾಗಲು ಒಪ್ಪಲಿಲ್ಲ.

‘‘ಮತ್ತೊಂದು ಇಲ್ಲಿ ಉಲ್ಲೇಖಿಸಬಹುದಾದ ಘಟನೆ ಎಂದರೆ ‘ಕೊಲೆಗಿಡುವುದು’ಕ್ಕೆ ಸಂಬಂಧಿಸಿದುದು. ಕೊಲೆಗಿಡುವುದೆಂದರೆ ಮನೆತನದ ಹಿಂದೆ ಸತ್ತವರ ಪಂಕ್ತಿಗೆ ಸದ್ಯವೇ ತೀರಿದವರ ಪ್ರೇತವನ್ನೂ ಕೂಡುವುದು ಮತ್ತು ಎಡೆಯಿಡುವುದು, ‘ಕೊಲೆಕೂಡುವುದು’ ಎಂದೂ ಅದಕ್ಕೆ ಹೇಳುತ್ತಾರೆಂದು ತೋರುತ್ತದೆ. ಅಂದರೆ ಅದೆಲ್ಲ ಪಿತೃಪೂಜೆಗೆ ಸಂಬಂಧಿಸಿದ್ದು.

‘‘ಆ ದಿನ ರಾತ್ರಿ ಮನೆಯ ನಮ್ಮ ಕೋಣೆಯ ಬಾಗಿಲ ಬಳಿ ಮಣೆಹಾಕಿ, ದೀಪದ ಕಂಭಗಳನ್ನಿಟ್ಟು ಎಲೆ ಹಾಕಿ, ಅದರಲ್ಲಿ ಮೃತರು ಬದುಕಿದ್ದ ಕಾಲದಲ್ಲಿ ಅವರು ವಿಶೇಷವಾಗಿ ಅಪೇಕ್ಷಿಸುತ್ತಿದ್ದ ಭಕ್ಷ್ಯಭೋಜ್ಯ ಪಾನೀಯಾದಿಗಳನ್ನಿಟ್ಟು , ಊದಿನಕಡ್ಡಿ ಹೊತ್ತಿಸಿದ್ದರು. ಅದಕ್ಕೆ ತಿಥಿಗೆ ಬಂದ ನಂಟರೆಲ್ಲ ‘‘ಧೂಪ ಹಾಕಿ’ ಅಡ್ಡ ಬೀಳುತ್ತಿದ್ದುದೂ ರೂಢಿ. ಮೊದಲು ‘‘ಧೂಪ ಹಾಕಿ’ ಅಡ್ಡ ಬೀಳುವ ಕರ್ತವ್ಯ ಹಿರಿಯ ಮಗನಾದ ನನ್ನದಾಗಿತ್ತು. ತರುವಾಯವೇ ಇತರರ ಸರದಿ. ಅದೆಲ್ಲ ಮುಗಿದ ಮೇಲೆ ಮುಂದಿನ ಭೋಜನಾದಿ ಕಾರ್ಯ.

‘‘ಉಪ್ಪರಿಗೆಯ ಮೇಲೆ ಲ್ಯಾಂಪಿನ ಬೆಳಕಿನಲ್ಲಿ ಸ್ನೇಹಿತರೊಡನೆ ಇದ್ದ ನನ್ನನ್ನು ಕರೆದರು ಧೂಪ ಹಾಕುವುದಕ್ಕೆ. ನಾನು ಹೆಂಡ ಮುಂತಾದುವನ್ನಿಟ್ಟ ಎಡೆಗೆ ಪೂಜೆ ಸಲ್ಲಿಸಲು ಸಾಧ್ಯವಿಲ್ಲ ಎಂದುಬಿಟ್ಟೆ . ಅಲ್ಲದೆ ನನ್ನ ತಾಯಿ ಪ್ರೇತವಾಗಿ ಇತರ ಪ್ರೇತಗಳೊಡನೆ ಅಲ್ಲಿಗೆ ಬರುತ್ತಾರೆ ಎಂಬುದಂತೂ ನನಗೆ ಅಸಹ್ಯವಾಗಿತ್ತು. ಉತ್ತಮ ಲೋಕಗಳಿಗೆ ಹೋಗಿರುವ ಅವರನ್ನು ಆಹ್ವಾನಿಸಿ ಭೂತಪ್ರೇತಗಳೊಡನೆ ಸೇರಿಸುವುದು ಅವರಿಗೆ ನಾವೆಸಗುವ ಅತ್ಯಂತ ಅವಮಾನಕರ ಅಪಚಾರವೆಂದು ನನ್ನ ಭಾವನೆಯಾಗಿತ್ತು. ಉತ್ತಮ ಲೋಕಗಳಲ್ಲಿ ಅವರ ಪಯಣ ಮಂಗಳಕರವಾಗಿ, ಅವರು ಜಗನ್ಮಾತೆಯ ಮಡಿಲನ್ನು ಸೇರಲಿ ಎಂದು ಹೃತ್ಪೂರ್ವಕವಾಗಿ ಪ್ರಾರ್ಥಿಸುವುದೊಂದೇ ನಾವು ಅವರಿಗೆ ಸಲ್ಲಿಸಬೇಕಾದ ಸೇವೆ ಎಂಬುದು ನನ್ನ ನಂಬುಗೆಯಾಗಿತ್ತು.

‘‘ಒಬ್ಬರಾದ ಮೇಲೆ ಒಬ್ಬರು ಹಿರಿಯರು ಬಂದು ನನ್ನನ್ನು ಕರೆಯತೊಡಗಿದರು. ನಾನು ಹೋಗಿ ಧೂಪ ಹಾಕಿದಲ್ಲದೆ ಏನೂ ಮುಂದುವರಿಯುವಂತಿಲ್ಲ ಎಂದರು. ನನ್ನ ಮಿತ್ರರು ಕೆಲವರು ಕಾರ್ಯ ಸುಗಮವಾಗಿ ನೆರವೇರುವ ಸಲುವಾಗಿ ನಾನು ಸ್ವಲ್ಪ ರಿಯಾಯಿತಿ ತೋರಿಸಿ, ಹೋಗಿ ಧೂಪ ಹಾಕಿ ಬಂದುಬಿಡಲು ಸೂಚಿಸಿದರು. ಆದರೆ ನಾನು ನನ್ನ ಆತ್ಮಸಾಕ್ಷಿಗೆ ವ್ಯತಿರಿಕ್ತವಾಗಿ ನಡೆಯಲು ನಿರಾಕರಿಸಿದೆ.

‘‘ಕಡೆಗೆ ಒಂದು ರಾಜಿ ಸೂಚಿಸಿದೆ, ಎಡೆಯಲ್ಲಿಟ್ಟ ಹೆಂಡ ಮಾಂಸಗಳನ್ನೆಲ್ಲ ತೆಗೆದು ಬಿಡುವಂತೆ. ಆಮೇಲೆ ನಾನು ಒಂದು ಭಗವದ್ಗೀತೆಯ ಪ್ರತಿಯನ್ನೂ, ಸ್ವಾಮಿ ವಿವೇಕಾನಂದರದ್ದೋ ಅಥವಾ ಶ್ರೀರಾಮಕೃಷ್ಣ ಪರಮಹಂಸರದ್ದೋ ಅಥವಾ ಅವರಿಬ್ಬರೂ ಸೇರಿಯೇ ಇದ್ದ ಪಟವನ್ನೊ ಆ ಮಣೆಯ ಮೇಲೆ ಸ್ಥಾಪಿಸಿ, ಹೂವು ಮುಡಿಸಿ, ಮಂತ್ರಗಳನ್ನೂ , ಶ್ಲೋಕಗಳನ್ನೂ ಮನದಲ್ಲಿಯೇ ಹೇಳಿಕೊಳ್ಳುತ್ತಾ ಮಾತೆಗೆ ಶಾಂತಿ ಕೋರಿ ಧೂಪ ಹಾಕಿದೆ!’’

ಮೇಲೆ ಹೇಳಿದ ಇಂಥ ಗೊಡ್ಡು ಮೂಢನಂಬಿಗೆಯ ದಂಷ್ಟ್ರದ ಕ್ರೂರ ಹಿಡಿತದಿಂದ ಪಾರಾಗಿ ಬರಲು ಕುವೆಂಪು ಅವರಿಗೆ ಹೇಗೆ ಸಾಧ್ಯವಾಯಿತು? ಅದು ಅವರು ಮೈಸೂರಿನಲ್ಲಿ ಹಾರ್ಡ್ವಿಕ್ ಶಾಲೆಯಲ್ಲಿ : ‘ಒಂದು ದಿನ ಯಾವುದೋ ತರಗತಿಯಲ್ಲಿ  ಬಹುಶಃ ಕನ್ನಡದ್ದೆ ಇರಬೇಕು  ನಾನು ಹಿಂದಿನ ಬೆಂಚಿನಲ್ಲಿ ಕುಳಿತು, ಪ್ರಿಚರ್ಡ್ ಎಂಬಾತ ಸಂಗ್ರಹಿಸಿದ ಸಾಹಿತ್ಯ ಅಧ್ಯಯನ (ಸ್ಟಡೀಸ್ ಇನ್ ಲಿಟರೇಚರ್) ಎಂಬ ಪುಸ್ತಕ ಓದುತ್ತಿದ್ದೆ. ಓದುತ್ತಿದ್ದ ಭಾಗದ ಶೀರ್ಷಿಕೆ “Footprints on the Sands !” (ಮರಳಿನ ಮೇಲೆ ಮನುಷ್ಯನ ಹೆಜ್ಜೆಗಳು). ಅದು ಡೇನಿಯೇಲ್ ಡಿಫೋ ಬರೆದ ‘ರಾಬಿನ್‌ಸನ್ ಕ್ರೂಸೊ’ ಗ್ರಂಥದಿಂದ ಆಯ್ದ ಭಾಗವಾಗಿತ್ತು ಎಂಬುದನ್ನು ಮುನ್ನುಡಿ ಮತ್ತು ಟಿಪ್ಪಣಿಗಳಿಂದ ಅರಿತೆ….

‘‘ಓದತೊಡಗಿದಾಗ ನನಗಾದ ಅನುಭವ ಅತೀಂದ್ರಿಯ ಸದೃಶವಾಗಿತ್ತು : …ನಾನಾ ಭಾವಗಳಿಂದ ತಾಡಿತವಾದ ರಾಬಿನ್‌ಸನ್ ಕ್ರೂಸೋವಿನ ಹೃದಯವೆ ನನ್ನೊಳಗೆ ಪ್ರತಿಸ್ಪಂದಿಸುತ್ತಿರುವಂತಾಯಿತು…

‘‘……ಮತ್ತೆ ಅದೇ ಗ್ರಂಥಕ್ಕೆ (ಸ್ಟಡೀಸ್ ಇನ್ ಲಿಟರೇಚರ್) ಸೇರಿದ ಆ ಕಥೆಯ ಮುಂದಿನ ಒಂದು ಸಣ್ಣ ಭಾಗವೂ “”His man Friday ಎಂಬ ಶೀರ್ಷಿಕೆಯಲ್ಲಿತ್ತು. ಅದನ್ನೂ ಉರಿವ ಕುತೂಹಲದಿಂದಲೆ ಓದಿ ಮುಗಿಸಿದೆ. ದೊಡ್ಡ ಹಲಸಿನ ಹಣ್ಣಿಗೆ ಚುಳುಕಿ ಹಾಕಿ, ಅದರ ಯಾವುದೋ ಒಂದು ತೊಳೆಯ ಚೂರನ್ನು ರುಚಿ ನೋಡಲು ಕೊಟ್ಟಂತಾಯಿತು ನನಗೆ. ಆ ಚೂರಿನ ರುಚಿ ನಾಲಗೆಗೆ ಹತ್ತಿ , ಹಣ್ಣನ್ನೆ ಹುಡುಕತೊಡಗಿದೆ.’’

‘‘ಆ ಪುಸ್ತಕ ಎಲ್ಲಿ ಸಿಗುತ್ತದೆ ?’’

‘‘ಮೈಸೂರಿನಲ್ಲಿ ನನಗಿಂತ ಮೊದಲೆ ಎರಡು ಮೂರು ವರ್ಷಗಳಿಂದ ಇದ್ದ ಆ ನನ್ನ ಮಿತ್ರರು ಪಬ್ಲಿಕ್ ಲೈಬ್ರರಿಯಲ್ಲಿ ದೊರೆಯಬಹುದು ಎಂದರು…. ಕೃಷ್ಣರಾಜೇಂದ್ರ ಆಸ್ಪತ್ರೆಯ ಎದುರಿಗಿದ್ದ ಒಂದು ದೊಡ್ಡ ಕೆಂಪು ಕಟ್ಟಡದ ಉಪ್ಪರಿಗೆಗೆ ನನ್ನನ್ನು ಕರೆದೊಯ್ದರು. ನಾನು ಬೆರಗು ಬಡಿದಂತಾಗಿ ನಿಂತೆ :

‘‘ಆ… ಉನ್ನತವಾದ ಬೀರುಗಳ ಕನ್ನಡಿ ಬಾಗಿಲುಗಳ ಹಿಂದೆ ಸಾಲ್ಗೊಂಡು ನಿಂತಿದ್ದ ಗ್ರಂಥ ರಾಶಿಗಳ ಮುಂದೆ! ಆ ಗ್ರಂಥಗಳೋ… ಶೋಭಾಯಮಾನವಾಗಿ ಮನಮೋಹಿಸುತ್ತಿವೆ. ಅವುಗಳ ಹೆಸರುಗಳೋ ಚಿನ್ನದ ಅಕ್ಷರಗಳಲ್ಲಿ ರಂಜಿಸುತ್ತಿವೆ. ಇಂಗ್ಲಿಷ್ ಅಕ್ಷರಗಳು ಕವಾಯಿತು ಮಾಡುವ ಸೈನಿಕರಂತೆ ಮಿಂಚುತ್ತಿವೆ! ನೋಡಿದಷ್ಟೂ ಕಣ್ಣು ತಣಿಯದು. ವಿಪುಲೈಶ್ವರ್ಯಮಯಿಯಾದ ಸಾಕ್ಷಾತ್ ತಾಯಿ ಸರಸ್ವತೀ ದೇವಿಯೆ, ಸೆರಗು ಓಸರಸಿ ಸ್ವರ್ಣ ಕಲಶ ಸದೃಶಗಳಾದ ತನ್ನ ದುಗ್ಧಪೀನ ಪಯೋಧಕಗಳನ್ನು ತನ್ನ ಮುಗ್ಧ ಕವಿ ಕಂದನ ಮುಂದೆ ಚಾಚಿ ನಿಂತಂತಿತ್ತು. ‘‘ಬಾ ಪೀಯೂಷ ಪಾನ ಗೈ !’’ ಎಂದು.

ಆ ಲೈಬ್ರರಿಯಲ್ಲಿ ಕುವೆಂಪು ಅವರಿಗೆ ಡೇನಿಯೇಲ್ ಡಿಪೋ ಬರೆದ ‘ರಾಬಿನ್‌ಸನ್ ಕ್ರೂಸೋ’ ಪುಸ್ತಕ ಸಿಕ್ಕಿತು. ಆ ಪುಸ್ತಕ ಓದಿ ಮುಗಿಸಿದ ಮೇಲೆ ಆ ಲೈಬ್ರರಿ, ಅದರಲ್ಲಿದ್ದ ಅಮೂಲ್ಯ ಗ್ರಂಥರಾಶಿ ಅವರ ಮನಸ್ಸನ್ನು ಸೂರೆಗೊಂಡವು. ಆ ಲೈಬ್ರರಿ ಅವರಿಗೆ ತಮ್ಮ ಶಾಲೆಗಿಂತಲೂ ಆಕರ್ಷಕ ಕ್ಷೇತ್ರವಾಗಿ ಪರಿಣಮಿಸಿತು. ಅವರಿಗಾದ ಅಗಾಧ ಪರಿಣಾಮವನ್ನು ಅವರ ಮಾತಿನಲ್ಲಿಯೆ ಕೇಳೋಣ :

‘‘ರಜಾ ದಿನಗಳಲ್ಲಂತೂ ಬೆಳಿಗ್ಗೆ ಸಾಯಂಕಾಲ ಎರಡೂ ಹೊತ್ತೂ ಧಾವಿಸಿ ಹೋಗಿ ಓದುತ್ತಿದ್ದೆ. ಒಮ್ಮೊಮ್ಮೆ ಬೆಳಿಗ್ಗೆ ಲೈಬ್ರರಿ ಬಾಗಿಲು ತೆಗೆಯುವ ಮುನ್ನವೇ ಹೋಗಿ ಬಾಗಿಲ ಬಳಿ ಕಾಯುತ್ತಾ ನಿಂತಿರುತ್ತಿದ್ದೆ. ಅಟೆಂಡರ್ ಮಹಾಶಯನು ಬಂದವನು ನಗುತ್ತಾ ಬಾಗಿಲು ತೆಗೆದು ಒಳಗೆ ಬಿಡುತ್ತಿದ್ದ. ಅವನ ನಗುವಿನಲ್ಲಿ ‘ಯಾಕೆ ಇವನಿಗೆ ಈ ಪಿತ್ತ ಕೆದರಿದೆ ? ಇಷ್ಟು ವರ್ಷದ ಸರ್ವಿಸ್ಸಿನಲ್ಲಿ ಯಾರನ್ನೂ ನೋಡಿಲ್ಲವಲ್ಲಾ ಹೀಗೆ ಓದುವ ಹುಚ್ಚು ಹಿಡಿದಿರುವವರನ್ನು? ಈ ಅಯ್ಯಂಗಾರಿಗೆ, ಪಾಪ, ತಲೆಯಲ್ಲಿ ಏನೋ ಐಬಾಗಿರಬೇಕು! ಎಂಬ ಕನಿಕರದ ಛಾಯೆ ಇರುತ್ತಿತ್ತು.

‘‘ನಾನು ಸ್ಕೂಲು ಬಿಟ್ಟ ಕೂಡಲೆ ಇತರರಿಗಿಂತ ಮುಂಚೆ ಓಡಿ ಓಡಿ ಹೋಗಿ ಪುಸ್ತಕ ತೆಗೆದುಕೊಳ್ಳುತ್ತಿದ್ದರೂ ಒಂದೆರಡು ಸಾರಿ ನನಗಿಂತಲೂ ಮೊದಲೇ ಯಾರೋ ಪುಸ್ತಕ ತೆಗೆದುಕೊಂಡಿದ್ದೂ ಉಂಟು. ಆಗ ನನ್ನ ಗೋಳು ಹೇಳತೀರದು. ಆಗ ಅವನ ಮೇಲೆ ನನ್ನ ಮತ್ಸರ ಕೆರಳುತ್ತಿತ್ತು. ಅವನ ಕೈಯಿಂದ ಪುಸ್ತಕ ಕಸಿದುಕೊಂಡುಬಿಡುವಂತೆ ಮನಸ್ಸಾಗುತ್ತಿತ್ತು. ತನ್ನ ಪತಿವ್ರತೆಯಾದ ಪ್ರಿಯೆಯನ್ನು ಇನ್ನೊಬ್ಬನು ಎತ್ತಿಕೊಂಡು ಹೋಗಿ ಇಟ್ಟುಕೊಂಡಿದ್ದನ್ನು ಕಂಡರೆ ಆಗುವಂತಹ ರೋಷ ಉಕ್ಕುತ್ತಿತ್ತು.

‘‘ನಾನು ಗ್ರಂಥಾಲಯದ ಮಹೋನ್ನತ ಬೀರುಗಳಲ್ಲಿ ಅಂತರ ಅಂತರವಾಗಿ ಸಾಲುಗೊಂಡಿರುತ್ತಿದ್ದ ಇತರ ಪುಸ್ತಕಗಳನ್ನು ಸಾವಕಾಶಾವಲೋಕನ ಮಾಡುತ್ತಿದ್ದೆ. ಗ್ರಂಥಲೋಕದ ವಿಸ್ತಾರ ವೈವಿಧ್ಯಗಳಿಗೆ ಬೆರಗಾಗುತ್ತಿದ್ದೆ. ಹೀಗೆ ನೋಡುತ್ತಿದ್ದಾಗಲೆ ನನಗೆ ನನ್ನ ಜೀವನದ ದಿಕ್ಕನ್ನೆ ತಿರುಗಿಸಿ, ನನ್ನ ಬದುಕನ್ನೆಲ್ಲ ಮರ್ತ್ಯದಿಂದ ಅಮರ್ತ್ಯಕ್ಕೆತ್ತಿ ಬೀಸಿದ ‘ಗವತ್ ಕೃಪಾ ಹಸ್ತರೂಪದ ಶ್ರೀರಾಮಕೃಷ್ಣ  ವಿವೇಕಾನಂದ ವಿಷಯಕವಾದ ಕೃತಿಶ್ರೇಣಿಯ ದರ್ಶನವಾದದ್ದು!’’

ಇಲ್ಲಿ, ಈ ಲೈಬ್ರರಿಯಲ್ಲಿ, ಅವರ ಕಣ್ಣಿಗೆ ಬಿದ್ದ ಶ್ರೀರಾಮಕೃಷ್ಣ, ವಿವೇಕಾನಂದರ ಕೃತಿಶ್ರೇಣಿಯ ಪುಟಗಳಲ್ಲಿ ಸಿಕ್ಕುತ್ತದೆ ಕುವೆಂಪು ಅವರ ವೈಚಾರಿಕತೆ, ವೈಜ್ಞಾನಿಕತೆ ಮತ್ತು ಜೀವನದೃಷ್ಟಿಯ ಬಂಗಾರದ ಬೀಗದ ಕೈ! ಆ ಬೀಗದ ಕೈಯಿಂದ ಬಾಗಿಲು ತೆರೆದು ಗ್ರಂಥ ಮಂದಿರ ಹೊಕ್ಕರೆ ಕಾಣಿಸುತ್ತದೆ ಕುವೆಂಪು ಅವರ ನಿರಂಕುಶಮತಿಯ ಮಂಗಳ ನಂದಾ ದೀಪ ! ಆದ್ದರಿಂದಲೆ ಕುವೆಂಪು ಹೇಳಿದ್ದು….. ‘‘ನಗರ ಗ್ರಂಥಾಲಯ…. ನನ್ನ ಚೇತನ ವಿಕಾಸಕ್ಕೆ ನೆರವಾದ ಅದ್ಭುತ ಘಟನೆ’’ ಎಂದು.

ಅವರ ವೈಚಾರಿಕತೆಯನ್ನು ಉದ್ದೀಪನಗೊಳಿಸುವ ವಿವೇಕಾನಂದರ ಭಾಷಣಗಳು, ಸಂಭಾಷಣೆಗಳು, ಪತ್ರಗಳು, ಬರವಣಿಗೆಗಳು ಇತ್ಯಾದಿ ಅಪಾರವಾಗಿವೆ. ಹೈಸ್ಕೂಲಿನಲ್ಲಿ ಓದುತ್ತಿದ್ದ ಅವರ ವಯಸ್ಸಿಗೆ ಅನುಗುಣವಾದ ಅರ್ಥವಾಗುವ ವಿವೇಕಾನಂದರ  ಭಾಷಣಗಳನ್ನು , ಸಂಭಾಷಣೆಗಳನ್ನು , ಪತ್ರಗಳನ್ನು ಓದಿರಲೇಬೇಕು. ಓದುಗರಲ್ಲಿ ವೈಚಾರಿಕತೆಯನ್ನು ಜಾಗ್ರತಗೊಳಿಸುವ ಅನೇಕ ಭಾಗಗಳಿವೆ. ಅಷ್ಟೇಕೆ ವಿವೇಕಾನಂದರ ಜೀವನವೆ ಒಂದು ಸಜೀವ ವೈಚಾರಿಕ ಮಹಾಗಾಥೆ! ಅವರ ಹೆಸರೇ ವಿವೇಕದ ಸಾಕ್ಷಾತ್ ಪ್ರತಿಮೆ. ಅವರ ಜೀವನ ಚರಿತ್ರೆಯನ್ನು ಓದಿದ ಎಂಥ ಶಿಲಾಮಯ ಚೇತನವೂ ವೈಚಾರಿಕತೆಯನ್ನು ಉಸಿರಾಡಲೇಬೇಕು ! ಅಂದಮೇಲೆ ಕುವೆಂಪು ಅವರಂಥ ಸೂಕ್ಷ್ಮ ಸಂವಹನಶೀಲ ಚೇತನ ಅವರ ಜೀವನದಿಂದ ಜಾಗ್ರತವಾಗದಿದ್ದೀತೆ ? ಅಂದಮೇಲೆ ಕುವೆಂಪು ಅವರು ‘ನೆನಪಿನ ದೋಣಿಯಲಿ’ ಹೇಳುವಂತೆ :

‘‘ನನಗೆ ಚಿಕ್ಕಂದಿನಿಂದಲೂ ಸಹಜವಾಗಿದ್ದ ಆಧ್ಯಾತ್ಮಿಕ ಆಸಕ್ತಿಗೆ ಮತ್ತು ವಿಚಾರಾತ್ಮಕವಾದ ಜಿಜ್ಞಾಸೆಗೆ ಮೊತ್ತ ಮೊದಲು ಆಹಾರ ಒದಗಿದುದು ಆಂಗ್ಲೇಯ ಭಾಷೆಯ ಮುಖಾಂತರವೆ. …ಪ್ರಚಲಿತ ವೈದಿಕ ಹಿಂದೂಧರ್ಮದ ಅನೇಕ ಶ್ರದ್ಧೆ ಆಚಾರ ವಿಚಾರಗಳಲ್ಲಿ ನನಗೆ ನಂಬುಗೆ ಇರಲಿಲ್ಲ ಮಾತ್ರವಲ್ಲ, ಅತ್ಯಂತ ತಿರಸ್ಕಾರವೂ ಇತ್ತು. ಮೇಲುಕೀಳು ಭಾವನೆಗಳು, ಜಾತಿಪದ್ಧತಿ, ಬ್ರಾಹ್ಮಣನೆ ಬ್ರಹ್ಮದ ಬಾಯಿಂದ ಬಂದಿರುವ ಶ್ರೇಷ್ಠ ವಸ್ತು, ಶೂದ್ರನು ಸಂಸ್ಕೃತ ಓದಬಾರದು ಮತ್ತು ಅದನ್ನು ಯಾರಾದರೂ ಉಚ್ಚರಿಸುವುದನ್ನು ಅವನು ಆಲಿಸಿದರೆ ಅವನ ಕಿವಿಗೆ ಸೀಸ ಕಾಯಿಸಿ ಹೊಯ್ಯಬೇಕು ಎಂಬಂತಹ ಮನುವಿನಂತಹರ ಶಾಸಾಜ್ಞೆ ಇತ್ಯಾದಿ ಒಂದಲ್ಲ ಎರಡಲ್ಲ ಸಾವಿರಾರು ಪ್ರಚಲಿತ ಹಿಂದೂ ಧರ್ಮದ ಅನುದಾರವೂ ಅವಿವೇಕವೂ ಆದ ನೀಚಭಾವನೆಗಳಲ್ಲಿ ನನಗೆ ಬದ್ಧದ್ವೇಷವಿತ್ತು. ಅಂತಹ ದುರ್ಭಾವನೆಗಳಿಗೆಲ್ಲ ಕುಠಾರ ಸ್ವರೂಪವಾಗಿದ್ದ ಸ್ವಾಮಿ ವಿವೇಕಾನಂದರಂತಹವರ ವಾಣಿ ನನಗೆ ದೊರೆತದ್ದು ಇಂಗ್ಲಿಷ್ ಭಾಷೆಯ ಮೂಲಕವೆ. ನನ್ನ ಜೀವಕ್ಕೆ ಅಭಯ ಘೋಷಣೆ ಮಾಡಿ, ತಾನು ಶಿವತತ್ತ್ವದಿಂದ ಅಭಿನ್ನ ಎಂಬುದನ್ನೂ ಸಾರಿ, ಆತ್ಮದ ಔನ್ನತ್ಯ ನೈರ್ಮಲ್ಯ ಗೌರವಗಳನ್ನು ಮನಮುಟ್ಟುವಂತೆಯೂ ಎದೆವೊಗುವಂತೆಯೂ ಹಾಡಿದ ಪ್ರಾಚೀನ ಮಹರ್ಷಿಗಳ ವೇದಾಂತವಾಣಿ ನನ್ನ ಪ್ರಜ್ಞೆಗೆ ಪ್ರವೇಶಿಸಲು ಸಾಧ್ಯವಾದುದು ಇಂಗ್ಲಿಷ್ ಭಾಷಾ ಕೃಪೆಯಿಂದಲೆ !’’

ವಿವೇಕಾನಂದರ ಕೃತಿಶ್ರೇಣಿ ಅವರಿಗೆ ಲಭ್ಯವಾದದ್ದು ಇಂಗ್ಲಿಷಿನಲ್ಲಿಯೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮೇಲಿನ ಅವರ ಮಾತುಗಳನ್ನು ಮನದಟ್ಟು ಮಾಡಿಕೊಳ್ಳಬೇಕು. ವಿವೇಕಾನಂದರು ಮಹಾಸಮಾ ಹೊಂದಿದ್ದು 1902ರಲ್ಲಿ. ಅವರ ಸಮಗ್ರ ಕೃತಿಶ್ರೇಣಿ (Complete works)ಯ ಪ್ರಥಮ ಮುದ್ರಣ ಪ್ರಕಟವಾದದ್ದು 1907. ದ್ವಿತೀಯ ಆವೃತ್ತಿ 1911. ತೃತೀಯ ಆವೃತ್ತಿ 1915ರಲ್ಲಿ. ಕುವೆಂಪು ಅವರಿಗೆ ನಗರ ಲೈಬ್ರರಿಯಲ್ಲಿ ಸಿಕ್ಕದ್ದು ಇವುಗಳಲ್ಲಿ ಯಾವುದಾದರೂ ಒಂದಿರಬೇಕು. ವಿವೇಕಾನಂದರ ಕೃತಿಗಳನ್ನು ಅವರು ತಮಗೆ ಸಹಜವಾದ ಉತ್ಸುಕತೆ, ಆಸಕ್ತಿ, ಜಿಜ್ಞಾಸೆ, ಜ್ಞಾನದಾಹದಿಂದಲೆ ಅಕ್ಷರಶಃ ಆಪೋಶನ ಮಾಡಿದರೆಂದು ಭಾವಿಸುವುದರಲ್ಲಿ ಕಿಂಚಿತ್ತೂ ತಪ್ಪಿಲ್ಲ. ಆ ಅಪಾರ ಬರಹದಲ್ಲಿ ಅವರಿಗೆ ಯಾವುದು ಅತ್ಯಂತ ಪ್ರಿಯವಾಗಿರಬಹುದು ? ಯಾವ ವಿಷಯಗಳನ್ನು, ವಿಚಾರವನ್ನು ಅವರು ಆಗಲೆ ಚಿಕ್ಕಂದಿನಿಂದ ಅಲ್ಲಿಯವರೆಗೆ ಪ್ರತ್ಯಕ್ಷ ಕಂಡು ಅನುಭವಿಸಿದ್ದರೊ ಆ ವಿಷಯದ ಬಗ್ಗೆ ಸ್ವಾಮೀಜಿ ಬರೆದದ್ದು ಅವರ ಮನದ ಮೇಲೆ ಪ್ರಚಂಡ ಪ್ರಬಲ ಪರಿಣಾಮ ಮಾಡಿರಬೇಕು. ಅವರು ಮಲೆನಾಡಿನಲ್ಲಿ ಕಂಡುಂಡ ಕಟು ಸತ್ಯಾನುಭವ ಏನು ? ಮತಮೂಲ ಮೌಢ್ಯ. ಆ ಮೌಢ್ಯದ ಶನಿಸಂತಾನವಾದ ಪೌರೋಹಿತ್ಯಶಾಹಿಯ ಯಮಪಾಶ ! ತತ್‌ಪರಿಣಾಮವಾಗಿ ಶೂದ್ರರ ಶೋಷಣೆ. ಪುರೋಹಿತರ ಬಗ್ಗೆ ವಿವೇಕಾನಂದರು ತಮ್ಮ ಪತ್ರಗಳಲ್ಲಿ, ಭಾಷಣಗಳಲ್ಲಿ, ಸಂಭಾಷಣೆಗಳಲ್ಲಿ ಸಾಕಷ್ಟು ತೀಕ್ಷ್ಣವಾಗಿ, ನಿರ್ದಾಕ್ಷಿಣ್ಯವಾಗಿಯೆ ಹೇಳಿರುವ ಈ ಕೆಳಗಿನ ಮಾತುಗಳು ತಮ್ಮ ಸ್ವಾನುಭವಕ್ಕೆ ಅಭಿವ್ಯಕ್ತಿ ಪಡೆದಂತೆ ಮೆಚ್ಚಿಗೆಯಾಗಿರಬೇಕು, ಅವರ ವೈಚಾರಿಕತೆಗೆ ರೆಕ್ಕೆ ಮೂಡಿರಬೇಕು !

‘‘ಪೌರೋಹಿತ್ಯಶಾಹಿ ಭಾರತಕ್ಕೆ ಒಂದು ಶಾಪ. ಮಾನವ ತನ್ನ ಸೋದರ ಮಾನವನನ್ನು ಅಧೋಗತಿಗೆ ತಳ್ಳಿ, ತಾನು ಆ ಅಧೋಗತಿಯಿಂದ ತಪ್ಪಿಸಿಕೊಳ್ಳಬಲ್ಲನೆ? ತನ್ನನ್ನು ನೋಯಿಸಿಕೊಳ್ಳದೆ ಇತರರನ್ನು ನೋಯಿಸಲು ಸಾಧ್ಯವೆ ? ಬ್ರಾಹ್ಮಣರು ಮತ್ತು ಕ್ಷತ್ರಿಯರು ಜನಸಾಮಾನ್ಯರ ಮೇಲೆ ಎಸಗಿದ ದೌರ್ಜನ್ಯ ತಮ್ಮ ತಲೆಯ ಮೇಲೆಯೇ ಚಕ್ರಬಡ್ಡಿ ಸಹಿತ ಸುತ್ತಿಕೊಂಡಿದೆ.’’

‘‘… ನಮ್ಮ ಧರ್ಮ, ಧರ್ಮ ಎಂಬ ಹೆಸರಿಗೆ ಅರ್ಹವಾಗಿದೆಯೆ ? ‘ಮುಟ್ಟದಿರು, ನನ್ನನ್ನು ಮುಟ್ಟದಿರು’, ‘ನನ್ನನ್ನು ಮುಟ್ಟದಿರು’ ಎಂಬುದು ನಮ್ಮ ಧರ್ಮ ಮಾತ್ರ. ಶ್ರೇಷ್ಠ ಸ್ವರ್ಗಗಳು ! ಬಲಗೈಯಿಂದ ಊಟ ಮಾಡಬೇಕೆ, ಎಡಗೈಯಿಂದ ಮಾಡಬೇಕೆ ? ಬಲ ಕೈಯಿಂದ ನೀರು ತೆಗೆದುಕೊಳ್ಳಬೇಕೆ, ಎಡ ಕೈಯಿಂದ ತೆಗೆದುಕೊಳ್ಳಬೇಕೆ ? ಎಂಬ ವಿಚಾರವನ್ನು ಕುರಿತು ದೇಶದ ದೊಡ್ಡ ದೊಡ್ಡ ಮುಂದಾಳುಗಳು ಕಳೆದ ಎರಡು ಸಾವಿರ ವರ್ಷಗಳಿಂದ ಚರ್ಚಿಸುತ್ತ ಕುಳಿತಿದ್ದರೆ ಅಂಥ ದೇಶ ಹಾಳಾಗಿ ಹೋಗದಿದ್ದರೆ ಇನ್ನಾವ ದೇಶ ಹೋದೀತು ? …. ಯಾವ ದೇಶದಲ್ಲಿ ಮೊಹುವಾ ಮರದ ಹೂವುಗಳನ್ನು ತಿಂದು ಅನೇಕ ಲಕ್ಷೋಪಲಕ್ಷ ಜನ ಬದುಕಿದ್ದಾರೆಯೋ ಹಾಗೂ ಯಾವ ದೇಶದಲ್ಲಿ ಒಂದೆರಡು ಲಕ್ಷ ಸಾಧುಗಳು ಕೆಲವು ಲಕ್ಷ ಬ್ರಾಹ್ಮಣರು, ಆ ಜನರಿಗೆ ಒಂದಿಷ್ಟೂ ಪರಿಹಾರವನ್ನು ನೀಡದೆ ಅವರ ರಕ್ತ ಹೀರುತ್ತಿರುವ ಆ ದೇಶ ದೇಶವೊ ಅಥವಾ ನರಕವೊ ? ಅದೊಂದು ಧರ್ಮವೊ ಇಲ್ಲವೆ ಪಿಶಾಚಿಯ ನೃತ್ಯವೊ ?…’’

‘‘ಪೌರೋಹಿತ್ಯಶಾಹಿ ತನ್ನ ಸ್ವಭಾವದಲ್ಲಿಯೆ ಕ್ರೂರ ಮತ್ತು ಹೃದಯಹೀನ. ಆದ್ದರಿಂದ ಎಲ್ಲಿ ಪೌರೋಹಿತ್ಯಶಾಹಿ ತಲೆ ಎತ್ತುವುದೋ ಅಲ್ಲಿ ಧರ್ಮ ಅಂಧಃಪತನವಾಗುತ್ತದೆ. ವಿಶೇಷ ಸೌಲಭ್ಯಗಳ ಭಾವನೆಯನ್ನು ತ್ಯಜಿಸಿದರೆ ಮಾತ್ರ ಧರ್ಮ ಬರುತ್ತದೆ ಎಂದು ವೇದಾಂತ ಸಾರುತ್ತದೆ. ಆ ಭಾವನೆ ಉಂಟಾಗುವ ಮುನ್ನ ಧರ್ಮ ಬರುವುದೇ ಇಲ್ಲ.’’

ಹಾಗೆಯೆ ಪುರೋಹಿತಶಾಹಿಯ ಮುಖ್ಯ ಮುಂದಾಳುವೂ ಅವಿರ್ಭ್ಯಾಜ್ಯ ಅಂಗವೂ ಕಾರ್ಯ ಕರ್ತೃವೂ ಆದ ಪೂಜಾರಿಗಳ ಬಗ್ಗೆ ಸ್ವಾಮೀಜಿ ಹೇಳಿರುವ ಮಾತುಗಳು :

‘‘ಪೂಜಾರಿಗಳು ದೇವರಿದ್ದಾನೆ ಎಂದು ನಂಬುತ್ತಾರೆ. ಆದರೆ ಈ ದೇವರನ್ನು ತಮ್ಮ ಮೂಲಕವೆ ತಿಳಿಯಬೇಕು ಮತ್ತು ತಮ್ಮ ಮೂಲಕವೆ ಆ ದೇವರ ಸಾನ್ನಿಧ್ಯ ಸೇರಬೇಕಂತೆ. ಪವಿತ್ರಾತ್ಮರಲ್ಲಿ ಅತ್ಯಂತ ಪವಿತ್ರಾತ್ಮರನ್ನು ಪೂಜಾರಿಗಳ ಅಪ್ಪಣೆಯಿಂದಲೆ ಕಾಣಬೇಕಂತೆ! ನೀವು ಅವರಿಗೆ ದಕ್ಷಿಣೆ ಕೊಡಬೇಕು. ಅವರ ಪೂಜೆ ಮಾಡಬೇಕು. ಸರ್ವಸ್ವವನ್ನೂ ಅವರ ಕೈಯಲ್ಲಿಡಬೇಕು. ಜಗತ್ತಿನ ಇತಿಹಾಸದ ಉದ್ದಕ್ಕೂ ಈ ಪ್ರವೃತ್ತಿ ಮತ್ತೆ ಮತ್ತೆ ತಲೆ ಎತ್ತಿದೆ. ಅಕಾರಕ್ಕಾಗಿ ಈ ಭಯಂಕರ ತೃಷ್ಣೆ, ಈ ವ್ಯಾಘ್ರ ತೃಷ್ಣೆ ಮಾನವನ ಸ್ವಭಾವವೆ ಆಗಿದೆ. ಪೂಜಾರಿ ನಿಮ್ಮ ಮೇಲೆ ಸವಾರಿ ಮಾಡುತ್ತಾನೆ. ನಿಮಗಾಗಿ ಸಾವಿರ ನೇಮಗಳನ್ನು ಹೇರುತ್ತಾರೆ. ಪೂಜಾರಿಗಳು, ಸರಳ ಸತ್ಯಗಳನ್ನು ಸುತ್ತಿ ಬಳಸಿ ನಿರ್ವಚನ ಮಾಡುತ್ತಾರೆ. ತಮ್ಮ ಉತ್ತಮಿಕೆಯನ್ನು ಸಮರ್ಥಿಸಿಕೊಳ್ಳಲು ಕತೆ ಕಟ್ಟುತ್ತಾರೆ….’’

‘‘ಭಾರತದಲ್ಲಿ ಪೂಜಾರಿಗಳಿಗೆ  ಬ್ರಾಹ್ಮಣರಿಗೆ  ಅಗಾಧ ಬುದ್ಧಿಶಕ್ತಿಯಿತ್ತು, ಚಿತ್‌ಶಕ್ತಿಯಿತ್ತು. ಭಾರತದಲ್ಲಿ ಆಧ್ಯಾತ್ಮಿಕ ಬೆಳವಣಿಗೆಯನ್ನು ಅವರೇ ಪ್ರಾರಂಭಿಸಿದರು. ಅವರು ಆಶ್ಚರ್ಯಕರವಾದ ಸಿದ್ಧಿ ಪಡೆದರು. ಆದರೆ ಪ್ರಾರಂಭದಲ್ಲಿ ನಿರ್ಮುಕ್ತ ಆತ್ಮಾಭಿವೃದ್ಧಿಯನ್ನು ಪ್ರಚೋದಿಸಿದ ಆ ಪ್ರವೃತ್ತಿ ಕ್ರಮೇಣ ಮಾಯವಾಗುವ ಕಾಲ ಬಂತು. ತಮಗೇ ಅಕ ಅಕಾರ ಮತ್ತು ಸೌಲಭ್ಯಗಳಿವೆ ಎಂದು ಕಬಳಿಸಿಕೊಂಡರು. ಬ್ರಾಹ್ಮಣ ಯಾರನ್ನಾದರೂ ಕೊಂದರೆ ಅವನನ್ನು ಶಿಕ್ಷಿಸುತ್ತಿರಲಿಲ್ಲ. ಬ್ರಾಹ್ಮಣ ಹುಟ್ಟಿನಿಂದಲೆ ಈ ವಿಶ್ವದೊಡೆಯನಾಗಿಬಿಟ್ಟ ! ಅತ್ಯಂತ ಹೀನ ದುರಾತ್ಮನಾದ ಬ್ರಾಹ್ಮಣನನ್ನು ಪೂಜಿಸಬೇಕಂತೆ !’’

Kuvempu Death Anniversary

ನವಕರ್ನಾಟಕ ಪ್ರಕಾಶನದ ಪುಸ್ತಕ

ಶ್ರೀ ಸ್ವಾಮಿ ವಿವೇಕಾನಂದರ ಕೃತಿಶ್ರೇಣಿಯ ಅಭ್ಯಾಸದ ಪರಿಣಾಮ ಕುವೆಂಪು ಅವರ ಮನದ ಮೇಲೆ ಎಷ್ಟು ಗಾಢವಾಯಿತೆಂದರೆ : ‘‘ಆಗ ಸ್ವಾಮಿ ವಿವೇಕಾನಂದರ ಬೆಂಕಿ ಹೊತ್ತಿಕೊಂಡು ನನ್ನಾತ್ಮ ಉರಿಯುತ್ತಿತ್ತು! ಜ್ವಾಲಾಮುಖಿಯಾಗಿತ್ತು? ಅವರನ್ನು ಕುರಿತು ಮಾತನಾಡುವುದೆಂದರೆ, ಅವರನ್ನು ಹೊಗಳುವುದೆಂದರೆ ನನ್ನ ಜೀವ ಆನಂದಮಯವಾಗುತ್ತಿತ್ತು.’ ಈಗ ನಮಗೆ ಸ್ಪಷ್ಟವಾಗುತ್ತದೆ ಕುವೆಂಪು ಅವರ ವೈಚಾರಿಕತೆಯ ಅಂತಃಚಕ್ಷುಗಳಿಗೆ ಬೆಳಕು ಎಲ್ಲಿಂದ ಬಂತು ಎಂಬುದು. ಅವರ ವೈಚಾರಿಕತೆಯ ಪಕ್ಷಿ ಎಲ್ಲಿಯೊ ವಿಪಿನಾಂತರದ ರುಕ್ಷ ವೃಕ್ಷದ ಕೊಂಬೆಯ ಗೂಡಿನಲ್ಲಿ ಹುಟ್ಟಿ , ಗರಿಬಿಚ್ಚಿ ಆಕಾಶದಲ್ಲಿ ತನ್ನ ವಿಶಾಲ ಪಕ್ಷ್ಮಗಳನ್ನು ಹರಡಿ, ವೈನತೇಯನ ವಿಹಂಗಮ ವಿಹಾರದಲ್ಲಿ ತೊಡಗಿರುವ ದಿವ್ಯ ದೃಶ್ಯ ಗೋಚರವಾಗುತ್ತದೆ. ಆ ಎತ್ತರದಲ್ಲಿ ಹಾರುವ ಆ ಕವಿಚೇತನಕ್ಕೆ ಸಮಸ್ತ ಸೃಷ್ಟಿಯೂ ಏಕಮೇವಾ ದ್ವಿತೀಯವಾಗಿ ಕಾಣುತ್ತದೆ. ವಿಶ್ವಮಾನವ ದೃಷ್ಟಿ ಅವರಲ್ಲಿ ಹೀಗೆ ಮೊಳೆಯಿತು, ಬೆಳೆಯಿತು, ಬೆಳಕಾಯಿತು. ಅವರು ನೀಡಿದ ಬೆಳಕು ಅವರ ಕಾವ್ಯದಲ್ಲಿ ಅಕ್ಷರರೂಪಿಯಾಗಿ ಮೂಡಿತು.

ಕವಿಯ ಕಾವ್ಯಶಕ್ತಿಗೆ ವ್ಯತ್ಪತ್ತಿ ಹೀಗೆ ಮೇಲೆ ಹೇಳಿದ ಬಾಹ್ಯ ಪರಿಸರಗಳಿಂದ ಅವುಗಳ ಮೂಲಕ ದೊರೆಯುವ ಲೋಕಾನುಭವದಿಂದ ದೊರೆಯಿತು. ಆದರೆ ಇಷ್ಟರಿಂದಲೆ ಕಾವ್ಯಸೃಷ್ಟಿ ಶಕ್ತಿ ಪ್ರಾಪ್ತವಾಗುತ್ತದೆ ಎಂಬುದು ಪೂರ್ಣ ಸತ್ಯವಲ್ಲ. ಅದೇ ಮಲೆನಾಡಿನಲ್ಲಿ ಹುಟ್ಟಿ , ಅದೇ ಸಮಾಜದ ಪರಿಸರದಲ್ಲಿ ಬೆಳೆದು, ಅವರು ಓದಿದ ಶಾಲೆಯಲ್ಲಿಯೆ ಓದಿ, ಅವರು ಓದಿದ ಗ್ರಂಥಗಳನ್ನೇ ಓದಿ, ಅವರಿಗೆ ಪಾಠ ಹೇಳಿದ ಮಹಾವಿದ್ಯಾಲಯದ ಅಧ್ಯಾಪಕರು ಪ್ರಾಧ್ಯಾಪಕರೇ ಪಾಠ ಹೇಳಿಕೊಟ್ಟ ಇತರರು ಯಾಕೆ ಕುವೆಂಪು ಅವರ ದಾರಿ ತುಳಿಯಲಿಲ್ಲ? ಏರಿದ ಎತ್ತರಕ್ಕೆ ಯಾಕೆ ಏರಲಿಲ್ಲ? ಇದಕ್ಕೆ ಕಾರಣ ಕುವೆಂಪು ಅವರಿಗಿದ್ದ ‘ಪ್ರತಿಭೆ’ ಅವರ ಸಂಗಾತಿಗಳಿಗೆ, ಸಹಪಾಠಿಗಳಿಗೆ ಇರಲಿಲ್ಲ. ಆ ಪ್ರತಿಭೆ ಇಲ್ಲದಿದ್ದರೆ ಇತರೆ ಏನಿದ್ದರೂ ಕಾವ್ಯಸೃಷ್ಟಿ ಸಾಧ್ಯವಿಲ್ಲ ಎಂಬುದು ಲಾಕ್ಷಣಿಕರ ಅಭಿಪ್ರಾಯ. ಪ್ರತಿಭೆ ಎಂದರೇನು ? ‘‘ಹೊಸ ಹೊಸ ಭಾವಗಳನ್ನು ಸಂತತವಾಗಿ ಕಾಣುವ, ಕಟ್ಟುವ ಪ್ರಜ್ಞೆಯೆ ಪ್ರತಿಭೆ. ಈ ಪ್ರತಿಭೆಯ ಉಸಿರಿನಿಂದ ಜೀವ ತುಂಬಿ ವರ್ಣಿಸಬಲ್ಲ ನಿಪುಣನೇ ಕವಿ. ಕವಿಕರ್ಮವೆ ಕಾವ್ಯ… ಪ್ರತಿಭೆಯಿಲ್ಲದವನಿಗೆ ಪದಾರ್ಥ ಸಮೂಹವು ಎದುರಿಗಿದ್ದರೂ ಇಲ್ಲದಂತೆಯೆ. ಪ್ರತಿಶಾಲಿಯಾದವನಿಗೆ ಕಣ್ಣಮುಂದೆ ಕಾಣಿಸದಿದ್ದರೂ ಅವೆಲ್ಲ ಪ್ರತ್ಯಕ್ಷವಾಗಿದ್ದಂತೆಯೇ.’’ ಹಾಗಾದರೆ ಆ ಪ್ರತಿಭೆ ಹೇಗೆ ಹುಟ್ಟುತ್ತದೆ ? ಹೇಗೆ ವೃದ್ಧಿಯಾಗುತ್ತದೆ ? ಅದನ್ನು ಯಾರೂ ಹೇಳಲಾರರು. ಆದ್ದರಿಂದ ಅದು ದೈವದತ್ತ ; ಹುಟ್ಟಿನಿಂದ ಬಂದ ಗುಣ ಎಂದು ಹೇಳುತ್ತಾರೆ. ಪೂರ್ವಜನ್ಮ ಸಂಸ್ಕಾರ ಇತ್ಯಾದಿ ವಿವರಿಸಲಾಗದ ಕಾರಣ ಕೊಡುತ್ತಾರೆ. ಆ ವಿಚಾರವಾಗಿ ನಾವು ಈ ಸಂದರ್ಭದಲ್ಲಿ ಹೆಚ್ಚು ಪ್ರಯಾಸಪಡಬೇಕಾಗಿಲ್ಲ.

(ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : ನವಕರ್ನಾಟಕ ಪಬ್ಲಿಕೇಷನ್ಸ್)

ಇದನ್ನೂ ಓದಿ : Kuvempu Death Anniversay : ಕುವೆಂಪು ಅವರ ಮಕ್ಕಳ ಕಥೆ ‘ನರಿಗಳಿಗೇಕೆ ಕೋಡಿಲ್ಲ?’; ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ನೋಟ

Published On - 6:38 pm, Thu, 11 November 21

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್