ತುಳಸಿ ಹಬ್ಬ ಆಚರಣೆಯ ಪ್ರಾಮುಖ್ಯತೆ ಏನು? ಶ್ರೀಮನ್ನಾರಾಯಣನ ಪಾತ್ರವೇನು?

ತುಳಸಿ ಹಬ್ಬ ಆಚರಣೆಯ ಪ್ರಾಮುಖ್ಯತೆ ಏನು? ಶ್ರೀಮನ್ನಾರಾಯಣನ ಪಾತ್ರವೇನು?

ಇಂದು ಉತ್ಥಾನ ದ್ವಾದಶಿ. ಅಂದ್ರೆ ತುಳಸಿ ಹಬ್ಬ. ಕಾರ್ತಿಕ ಮಾಸದಲ್ಲಿ ಉತ್ಥಾನ ದ್ವಾದಶಿ ಅತ್ಯಂತ ಪವಿತ್ರವಾದ ದಿನ. ಉತ್ಥಾನ ಅಂದ್ರೆ ಏಳು ಎಂದರ್ಥ. ಪುರಾಣಗಳ ಪ್ರಕಾರ, ಶ್ರೀಮನ್ನಾರಾಯಣ ಆಷಾಢ ಶುದ್ಧ ಶಯನ ಏಕಾದಶಿಯಂದು ಮಲಗಿ, ಕಾರ್ತಿಕ ಶುದ್ಧ ದ್ವಾದಶಿಯಂದು ಏಳ್ತಾನೆ. ವಿಷ್ಣು ತನ್ನ ಯೋಗನಿದ್ರೆಯಿಂದ ಎಚ್ಚರವಾಗುವ ದಿನವೇ ಉತ್ಥಾನ ದ್ವಾದಶಿ.

ವೈಕುಂಠದೊಡೆಯ ಶ್ರೀಮನ್ನಾರಾಯಣ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತರಿಗೆ ಈ ದಿನ ದರ್ಶನ ಕೊಡ್ತಾನೆ ಅನ್ನೋ ಪ್ರತೀತಿ ಇದೆ. ಹಾಲ್ಗಡಲಲ್ಲಿ ಮಲಗಿರೋ ಭಗವಂತನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸಲಾಗುತ್ತೆ. ಇದನ್ನ ಕ್ಷೀರಾಬ್ಧಿ ವ್ರತವೆಂದು ಕರೆಯಲಾಗುತ್ತೆ. ಈ ದಿನವನ್ನು ತುಳಸಿ ಹಬ್ಬವೆಂದು ಹೆಂಗೆಳೆಯರು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸ್ತಾರೆ. 

ತುಳಸಿ ಹಬ್ಬ ಹೆಣ್ಣುಮಕ್ಕಳಿಗೆ ಅತ್ಯಂತ ಸಂಭ್ರಮದ ಹಬ್ಬ. ಪ್ರತಿನಿತ್ಯ ತುಳಸಿಯನ್ನು ಪೂಜಿಸಿದ್ರೂ, ತುಳಸಿ ಹಬ್ಬದ ದಿನ ತುಳಸಿಯನ್ನು ವಿಶೇಷವಾಗಿ ಪೂಜಿಸಲಾಗುತ್ತೆ. ಹೆಂಗೆಳೆಯರು ಈ ದಿನ ತಾವು ಅಲಂಕರಿಸಿಕೊಂಡು ತುಳಸಿಯನ್ನು ವಿಶೇಷವಾಗಿ ಸಿಂಗರಿಸ್ತಾರೆ. ತುಳಸಿ ಅತ್ಯಂತ ಪವಿತ್ರಳು. ಈಕೆಯಲ್ಲಿ ಲಕ್ಷ್ಮೀಯ ವಿಶೇಷ ಸಾನಿಧ್ಯವಿದೆ. ಅದಕ್ಕಾಗಿ ತುಳಸಿ ಇರುವ ಸ್ಥಳ ಪುಣ್ಯಕ್ಷೇತ್ರಕ್ಕೆ ಸಮಾನ ಅಂತಾ ಹೇಳಲಾಗುತ್ತೆ. ಇಂತಹ ತುಳಸಿಯನ್ನು ಸಾವಿರಾರು ವರ್ಷಗಳಿಂದ ಪೂಜಿಸುವ ಸಂಪ್ರದಾಯ ನಮ್ಮಲ್ಲಿದೆ. 

ತುಳಸಿ ಪೂಜಾ ವಿಧಾನ ಹೇಗೆ? * ಪೂಜೆಗೆ ಮುನ್ನ ಎಲ್ಲಾ ಮಂಗಳ ದ್ರವ್ಯಗಳನ್ನು ಜೋಡಿಸಿಟ್ಟುಕೊಳ್ಳಿ * ಮೊದಲು ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ತುಳಸಿ ಪೂಜೆ ಮಾಡಿ * ಕುಟುಂಬ ಸದಸ್ಯರೆಲ್ಲಾ ಸೇರಿ ತುಳಸಿ ಪೂಜೆ ಮಾಡಿ * ಗೋಧೂಳಿ ಸಮಯದಲ್ಲಿ ತುಳಸಿ-ದಾಮೋದರರ ವಿವಾಹ ಮಾಡಿ * ತುಳಸಿ ಮತ್ತು ಕೃಷ್ಣನ ಆವಾಹನೆ ಮಾಡಿ * ತುಳಸಿಗೆ ಅಭಿಮುಖವಾಗಿ ಕೃಷ್ಣನ ವಿಗ್ರಹವನ್ನಿಡಿ * ತುಳಸಿ ಮಂಟಪದಲ್ಲಿ ಬೆಟ್ಟದ ನೆಲ್ಲಿಕಾಯಿ ಗಿಡವನ್ನಿಡಿ * ಮನೆಯವರೆಲ್ಲಾ ಸೇರಿ ಸಂಕಲ್ಪ ಮಾಡಿ ಪ್ರಾರ್ಥನೆ ಸಲ್ಲಿಸಿ * ತುಳಸಿಗೆ ಷೋಡಶೋಪಚಾರ ವಿಧಿಯ ಮೂಲಕ ಪೂಜೆ ಮಾಡಿ * ತುಳಸಿಗೆ ಮಾಂಗಲ್ಯಧಾರಣೆ ಮಾಡಿಸಿ * ಲಕ್ಷ್ಮೀಯನ್ನು ಮನದಲ್ಲಿ ಧ್ಯಾನಿಸಿ ತುಳಸಿ ಪೂಜೆ ಮಾಡಿ * ಬಾಳೆದಿಂಡಿನ ಮೇಲೆ ತುಪ್ಪದ ದೀಪ ಹಚ್ಚಿಡಿ * ತುಳಸಿಗೆ ಅವಲಕ್ಕಿ, ಬೆಲ್ಲದ ನೈವೇದ್ಯ ಅರ್ಪಿಸಿ * ಮುತ್ತೈದೆಯರೆಲ್ಲಾ ಸೇರಿ ತುಳಸಿಗೆ ಆರತಿ ಮಾಡಿ * ಮುತ್ತೈದೆಯರಿಗೆ ಅರಿಶಿನ-ಕುಂಕುಮ, ತಾಂಬೂಲ ಕೊಡಿ 

ತುಳಸಿ ಸರ್ವಮಾನ್ಯಳು, ಲೋಕವಂದಿತಳು. ತುಳಸಿಗೆ ಆಧ್ಯಾತ್ಮಿಕವಾಗಿ ಎಷ್ಟು ಮಹತ್ವದ ಸ್ಥಾನವಿದ್ಯೋ ವೈಜ್ಞಾನಿಕವಾಗಿ ಕೂಡ ಅಷ್ಟೇ ವಿಶೇಷ ಸ್ಥಾನವಿದೆ. ತುಳಸಿ ಸೇವನೆಯಿಂದ ರೋಗಗಳು ದೂರವಾಗುತ್ತವೆ ಎನ್ನಲಾಗುತ್ತೆ. ಇನ್ನು ತುಳಸಿ ಇರುವೆಡೆ ರೋಗಗಳು ಸುಳಿಯೋದೇ ಇಲ್ಲ ಎಂಬ ನಂಬಿಕೆ ಶಾಸ್ತ್ರಗಳಲ್ಲಿದೆ. ಆಯುರ್ವೇದ ಶಾಸ್ತ್ರದಲ್ಲಂತೂ ತುಳಸಿಯ ಪ್ರಾಮುಖ್ಯತೆ ಅತ್ಯಂತ ಮಹತ್ವದ್ದಾಗಿದೆ. ತುಳಸಿ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಅದ್ಭುತಗಳನ್ನು ಮಾಡಿದೆ. ನಮ್ಮ ಆರೋಗ್ಯಕ್ಕೆ ತುಳಸಿ ವರದಾನ ಅಂತಲೇ ಹೇಳಬಹುದು. ಯಾಕಂದ್ರೆ ತುಳಸಿ ಬಹು ವಿಧದ ಕಾಯಿಲೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತೆ. 

ಆರೋಗ್ಯಪ್ರದಾಯಿನಿ ತುಳಸಿ * ತುಳಸಿ ಇರುವ ಕಡೆ ಸೊಳ್ಳೆ ಮತ್ತು ಇತರೆ ಕೀಟಗಳ ಕಾಟ ಇರಲ್ಲ * ನೆಗಡಿ, ಕೆಮ್ಮು, ಶೀತಕ್ಕೆ ತುಳಸಿ ದಿವ್ಯೌಷಧ * ಚರ್ಮರೋಗಕ್ಕೆ ತುಳಸಿ ರಾಮಬಾಣ * ತುಳಸಿ ರಸ ಸೇವನೆಯಿಂದ ನಿದ್ರಾಹೀನತೆ ದೂರ * ಜೇನುತುಪ್ಪದ ಜೊತೆ ತುಳಸಿ ರಸ ಸೇವಿಸಿದ್ರೆ ಕಿಡ್ನಿ ಕಲ್ಲು ಕರಗುತ್ತೆ * ನಿತ್ಯ ತುಳಸಿ ಸೇವನೆಯಿಂದ ಕೊಲೆಸ್ಟ್ರಾಲ್ ಕರಗುತ್ತೆ * ಖಾಲಿ ಹೊಟ್ಟೆಯಲ್ಲಿ ತುಳಸಿ ರಸ ಸೇವಿಸಿದ್ರೆ ತ್ವಚೆ ಕಾಂತಿಯುತವಾಗುತ್ತೆ * ತುಳಸಿ ಸೇವನೆಯಿಂದ ಜ್ಞಾಪಕಶಕ್ತಿ ವೃದ್ಧಿ * ತುಳಸಿ ರಸದಲ್ಲಿ ಗಂಧವನ್ನು ತೇಯ್ದು ನೆತ್ತಿಗೆ ಹಚ್ಚಿದ್ರೆ ತಲೆನೋವು ಉಪಶಮನ * ತುಳಸಿ ಎಲೆಯನ್ನು ಜಗಿದರೆ ಹಲ್ಲುನೋವು ದೂರವಾಗುತ್ತೆ * ನಿತ್ಯ ತುಳಸಿ ಎಲೆ ಸೇವಿಸೋದ್ರಿಂದ ಬಾಯಿ ದುರ್ವಾಸನೆ ಬರಲ್ಲ * ತುಳಸಿ ರಸಕ್ಕೆ ನಿಂಬೆ ರಸ ಸೇರಿಸಿ ಲೇಪಿಸಿದ್ರೆ ಚರ್ಮರೋಗ ಗುಣವಾಗುತ್ತೆ * ತುಳಸಿ ರಸ ಹಚ್ಚಿದ್ರೆ ತಲೆಹೊಟ್ಟು ನಿವಾರಣೆ

ಹೀಗೆ ತುಳಸಿ ಹುಟ್ಟಿನಿಂದ ಸಾಯೋ ತನಕ ನಮಗೆ ಸಂಗಾತಿಯಾಗಿದ್ದಾಳೆ. ವೈದ್ಯಕೀಯ, ವೈಜ್ಞಾನಿಕ, ಆಧ್ಯಾತ್ಮ ಕ್ಷೇತ್ರದಲ್ಲಿ ಇವಳಿಗೆ ವಿಶೇಷ ಸ್ಥಾನ. ಯಾರು ತುಳಸಿಯನ್ನು ಪೂಜಿಸ್ತಾರೋ ಅವರು ಆಧ್ಯಾತ್ಮ ಸಾಧನೆಯನ್ನೂ ಮಾಡಬಹುದು ಜೊತೆಗೆ ಉತ್ತಮ ಆರೋಗ್ಯವನ್ನು ಗಳಿಸಬಹುದು.

Published On - 2:16 pm, Sat, 9 November 19

Click on your DTH Provider to Add TV9 Kannada