ಜೀರ್ಣಕ್ರಿಯೆ ಸರಿಯಾಗಿ ನಡೆಸಿ ತೂಕ ಇಳಿಸುತ್ತಂತೆ ಹಸಿ ಮೆಣಸಿನಕಾಯಿ

ಜೀರ್ಣಕ್ರಿಯೆ ಸರಿಯಾಗಿ ನಡೆಸಿ ತೂಕ ಇಳಿಸುತ್ತಂತೆ ಹಸಿ ಮೆಣಸಿನಕಾಯಿ

ಕರ್ನಾಟಕದಲ್ಲಿ ಒಂದೊಂದು ಕಡೆ ಒಂದೊಂದು ರೀತಿಯ ಆಹಾರಶೈಲಿ ಪಾಲಿಸುತ್ತಾರೆ. ಅದರಲ್ಲೂ ಉತ್ತರ ಕರ್ನಾಟಕದವರು ತಮ್ಮ ಅಡುಗೆಯಲ್ಲಿ ಹಸಿ ಮೆಣಸಿನಕಾಯಿ ಹೆಚ್ಚಾಗಿಯೇ ಬಳಸುತ್ತಾರೆ. ಆದರೆ ಹಸಿ ಮೆಣಸಿನಕಾಯಿಯಲ್ಲಿರುವ ಅದ್ಭುತ ಗುಣದ ಬಗ್ಗೆ ತಿಳಿದರೆ ಖಾರ ತಿನ್ನದವರು ಕೂಡ ಹಸಿ ಮೆಣಸಿನಕಾಯಿ ಬಳಸಲು ಪ್ರಾರಂಭಿಸುತ್ತಾರೆ.

ಹೌದು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿರುವ ಲೈಫ್‌ಸ್ಟೈಲ್‌ ಸಮಸ್ಯೆಯೆಂದರೆ ಮೈ ತೂಕ ಹೆಚ್ಚಾಗುವುದು. ದಪ್ಪಗಿರುವವರಿಗೆ ಮೈ ತೂಕ ಕಡಿಮೆ ಮಾಡುವುದು ಹೇಗೆ ಎನ್ನುವುದೇ ದೊಡ್ಡ ಸಮಸ್ಯೆಯಾಗಿದೆ. ಮೈ ತೂಕ ಕಡಿಮೆ ಮಾಡಲು ಬಯಸುವವರಿಗೆ ಹಸಿ ಮೆಣಸಿನಕಾಯಿ ಹಾಕಿ ಮಾಡಿರುವ ಅಡುಗೆ ಪ್ರಯೋಜನಕಾರಿಯಾಗಿದೆ.

ತೂಕ ಇಳಿಸುವುದಕ್ಕೆ ಹೆಚ್ಚುಸಹಕಾರಿ: ಹಸಿ ಮೆಣಸಿನಕಾಯಿ ಚಯಾಪಚಯ ಕ್ರಿಯೆ ವೇಗವಾಗಿ ನಡೆಯುವಂತೆ ಮಾಡುತ್ತದೆ. ಖಾರದ ಆಹಾರವನ್ನು ತಿನ್ನುವುದರಿಂದ ನಿಮ್ಮ ಚಯಾಪಚಯ ಕ್ರಿಯೆ ಉತ್ತಮವಾಗಿ ನಡೆಯುವುದು. ತೂಕ ಇಳಿಕೆಗೆ ಪ್ರಮುಖವಾಗಿ ಚಯಾಪಚಯ ಕ್ರಿಯೆ ಚೆನ್ನಾಗಿ ನಡೆಯಬೇಕು. ಆಗ ಜೀರ್ಣಕ್ರಿಯೆ ಸರಿಯಾಗಿ ನಡೆಯುವುದು, ಇದರಿಂದ ತೂಕ ಇಳಿಕೆಗೆ ಸಹಕಾರಿ.

ಹಸಿ ಮೆಣಸಿನಕಾಯಿಯಲ್ಲಿ ಕ್ಯಾಪ್ಸಿಯಾಸಿನ್ ಅಂಶವಿದ್ದು ಇದು ಹೊಟ್ಟೆಬೊಜ್ಜು ಕರಗಿಸುವಲ್ಲಿ ಸಹಕಾರಿ ಎಂದು 2008ರಲ್ಲಿ ಅಮೆರಿಕ್ ಜರ್ನಲ್ ಆಫ್‌ ಕ್ಲಿನಿಕಲ್ ನ್ಯೂಟ್ರಿಷಿಯನ್‌ ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ಮಧುಮೇಹಿಗಳು ತಮ್ಮ ಮೈ ತೂಕ ಕಡಿಮೆ ಮಾಡಲು ಹಾಗೂ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು ಆಹಾರದಲ್ಲಿ ಹಸಿ ಮೆಣಸಿನಕಾಯಿ ಬಳಸುವುದು ಒಳ್ಳೆಯದು. ಇದು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಿಸುವುದರ ಜೊತೆಗೆ ತೂಕ ಕಡಿಮೆಯಾಗಲು ಸಹಾಯ ಮಾಡುವುದು.

ತ್ವಚೆಯ ಕಾಂತಿಯನ್ನು ವೃದ್ಧಿಸುತ್ತದೆ: ಹಸಿ ಮೆಣಸಿನಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ವಿಟಮಿನ್ ಎ, ಕಬ್ಬಿಣದಂಶ, ಸತು, ಪೊಟಾಷ್ಯಿಯಂ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ಸ್ ಅಂಶವಿದೆ. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ತ್ವಚೆ ಅರೋಗ್ಯ ಹೆಚ್ಚಿಸಿ, ತ್ವಚೆ ಕಾಂತಿಯುತವಾಗಿ ಕಾಣುವಂತೆ ಮಾಡುವುದು. ಇನ್ನು ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚು ಶೀತ ತಡೆಗಟ್ಟುವಲ್ಲಿ ಸಹಕಾರಿ.

ಅಜೀರ್ಣ ಸಮಸ್ಯೆ ಇರುವವರು ತಮ್ಮ ಆಹಾರದಲ್ಲಿ ಹಸಿ ಮೆಣಸಿನಕಾಯಿ ಸೇರಿಸಿದರೆ ಜೀರ್ಣಕ್ರಿಯೆ ಚೆನ್ನಾಗಿ ನಡೆಯುವುದು. ಮಲಬದ್ಧತೆ ಸಮಸ್ಯೆ ಇರುವವರು ಹಸಿ ಮೆಣಸಿನಕಾಯಿ ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಇದನ್ನು ನಮ್ಮ ಆಹಾರ ಕ್ರಮದಲ್ಲಿ ಬಳಸುವುದು ಒಳ್ಳೆಯದು.

ಹಸಿ ಮೆಣಸಿನಕಾಯಿ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುವುದು, ರಕ್ತ ಹೆಪ್ಪು ಗಟ್ಟುವುದನ್ನು ತಡೆಗಟ್ಟುತ್ತದೆ. ಸಂಧಿವಾತ, ಉರಿಯೂತ ಸಮಸ್ಯೆ ಇರುವವರು ಹಸಿ ಮೆಣಸಿನಕಾಯಿ ತಿಂದರೆ ಇದರಲ್ಲಿರುವ ಕ್ಯಾಪ್ಸಿಯಾಸಿನ್ ಅಂಶ ಸಂಧಿವಾತ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಹಸಿ ಮೆಣಸಿನಕಾಯಿಯಲ್ಲಿ ಸಿಲಿಕಾನ್ಸ್ ಅಂಶವಿದ್ದು ಇದು ತಲೆಬುಡದಲ್ಲಿ ರಕ್ತ ಸಂಚಾರ ಚೆನ್ನಾಗಿ ನಡೆಯುವಂತೆ ಮಾಡುವುದರಿಂದ ಕೂದಲಿನ ಬುಡ ಬಲವಾಗುವುದು.

ಉಸಿರಾಟದ ತೊಂದರೆ ನಿವಾರಿಸಲು ಉಪಕಾರಿ: ಹಸಿ ಮೆಣಸಿನಕಾಯಿಯಲ್ಲಿರುವ ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಉಸಿರಾಟದ ತೊಂದರೆ ನಿವಾರಿಸುವಲ್ಲಿ ಹಸಿ ಮೆಣಸಿನಕಾಯಿ ಸಹಕಾರಿಯಾಗಿದೆ. ಅಸ್ತಮಾ, ಕೆಮ್ಮು, ಶೀತ ಈ ಸಮಸ್ಯೆ ಕಡಿಮೆ ಮಾಡುವಲ್ಲಿ ಹಸಿಮೆಣಸಿನಕಾಯಿ ಹಾಕಿದ ಆಹಾರ ಪರಿಣಾಮಕಾರಿಯಾಗಿದೆ. ಆದ್ದರಿಂದ ಇನ್ನು ಮುಂದೆ ಅಡುಗೆಯಲ್ಲಿ ಖಾರದ ಪುಡಿ ಬದಲಿಗೆ ಹಸಿ ಮೆಣಸಿನಕಾಯಿ ಬಳಕೆ ಹೆಚ್ಚು ಮಾಡಿ.

ಖಾರದ ಪುಡಿಗೆ ಹೋಲಿಸಿದರೆ ಹಸಿ ಮೆಣಸಿನಕಾಯಿ ಹೆಚ್ಚು ಆರೋಗ್ಯಕರವಾಗಿದೆ. ಹಸಿ ಮೆಣಸಿನಕಾಯಿಯಲ್ಲಿ ಕಾರದ ಪುಡಿಗಿಂತ ಬೀಟಾ ಕೆರೋಟಿನ್, ಆ್ಯಂಟಿ ಅಕ್ಸಿಡೆಂಟ್ ಅಂಶ ಹೆಚ್ಚಿದೆ. ಇನ್ನು ಖಾರದ ಪುಡಿಯಲ್ಲಿ ಕೃತಕ ಬಣ್ಣ ಬಳಸಿರುವ ಸಾಧ್ಯತೆ ಇದೆ. ಹಸಿ ಮೆಣಸಿನಕಾಯಿಯಲ್ಲಿ ಯಾವುದೇ ಕೃತಕ ಬಣ್ಣ ಇರುವುದಿಲ್ಲ. ಹಸಿ ಮೆಣಸಿನಕಾಯಿ ಆರೋಗ್ಯಕ್ಕೆ ಒಳ್ಳೆಯದು ಎಂದು ತುಂಬಾ ತಿನ್ನಬೇಡಿ, ಮಿತಿಯಲ್ಲಿ ತಿನ್ನಿ, ಇಲ್ಲದಿದ್ದರೆ ಹೊಟ್ಟೆ ಉರಿ ಉಂಟಾಗುವುದು.

Published On - 2:19 pm, Fri, 8 November 19

Click on your DTH Provider to Add TV9 Kannada