ಉತ್ತರಪ್ರದೇಶದಲ್ಲಿರುವ ಪ್ರಪಂಚದ ಪ್ರಾಚೀನ ಪಟ್ಟಣ ಕಾಶಿ. ಕಾಶಿ ಅಥವಾ ಬನಾರಸ್ ಎಂದು ಕರೆಯಲ್ಪಡುವ ಈ ಪಟ್ಟಣವನ್ನು ಸಾಕ್ಷಾತ್ ಪರಮೇಶ್ವರನೇ ಸೃಷ್ಟಿ ಮಾಡಿದ ಎಂದು ನಂಬಲಾಗಿದೆ. ಹೀಗಾಗೇ ವೇದಗಳಲ್ಲೂ ಕಾಶಿ ಬಗ್ಗೆ ಉಲ್ಲೇಖವನ್ನು ಕಾಣಬಹುದು. ಋಗ್ವೇದದಲ್ಲಿ ಕಾಶಿ ಶಿವನಿಗೆ ಅತ್ಯಂತ ಪ್ರಿಯವಾದ ಸ್ಥಳ ಅಂತಾ ಉಲ್ಲೇಖಿಸಲಾಗಿದೆ. ಇಂತಹ ಮಹಿಮಾನ್ವಿತ ಸ್ಥಳದಲ್ಲಿ ದ್ವಾದಶ ಜ್ಯೋತಿರ್ಲಿಂಗ ರೂಪದಲ್ಲಿ ಭಂ ಭಂ ಭೋಲೇನಾಥ ನೆಲೆಗೊಂಡಿದ್ದಾನೆ.
ಪ್ರಪಂಚದ ಅತಿ ಪ್ರಾಚೀನ ನಗರ ಇದಾಗಿದ್ದು, ಭಾರತ ದೇಶದಲ್ಲಿನ ದೊಡ್ಡ ಮತ್ತು ಅತಿ ಪವಿತ್ರವಾದ ನದಿಯಾದ ಗಂಗಾ ನದಿ ವಾರಣಾಸಿ ಪಟ್ಟಣದಲ್ಲಿ ಪ್ರವಹಿಸುತ್ತೆ. ಈ ಕಾರಣದಿಂದ ಈ ಪಟ್ಟಣವು ಪ್ರಸಿದ್ಧಿ ಪಡೆದಿದೆ. ಆದರೆ, ಹಿಂದೂ ಧರ್ಮದಲ್ಲಿ 7 ಪವಿತ್ರ ನಗರಗಳಲ್ಲಿ ಈ ಕಾಶಿ ಪಟ್ಟಣ ಎಲ್ಲದಕ್ಕಿಂತ ದೊಡ್ಡದ್ದು ಎನ್ನಲಾಗುತ್ತೆ. ಗಂಗಾ ತಟದಲ್ಲಿರುವ ಕಾಶಿ ಆಧ್ಯಾತ್ಮ ಜೀವಿಗಳಿಗೆ ಪ್ರಿಯವಾದ ತಾಣ. ಕಾಶಿ ಪಟ್ಟಣದಲ್ಲಿ ಹೆಜ್ಜೆ ಇಟ್ಟ ಕೂಡಲೇ ಅಲ್ಲಿನ ಕಣ ಕಣದಲ್ಲೂ ಶಿವನಿರುವ ಅನುಭವವಾಗುತ್ತೆ. ಇಲ್ಲಿನ ಗಂಗೆಯಲ್ಲಿ ಮಿಂದರೆ ಸರ್ವ ಪಾಪಗಳು ನಿವಾರಣೆಯಾಗುತ್ತೆ ಎಂಬ ನಂಬಿಕೆ ಇದೆ. ಇಲ್ಲಿ ನಡೆಯುವ ಗಂಗಾರತಿ ಪ್ರಪಂಚದಲ್ಲೇ ಹೆಸರುವಾಸಿ. ಇದನ್ನು ಕಣ್ಣಾರೆ ನೋಡಿಯೇ ಆ ಅನುಭವವನ್ನು ಅನುಭವಿಸಬೇಕು.
ಇಷ್ಟು ಪ್ರಖ್ಯಾತಿ ಹೊಂದಿರುವ ಕಾಶಿಯಲ್ಲಿ ಪ್ರಸಿದ್ಧಿ ಹೊಂದಿರುವ ಅನೇಕ ಮಂದಿ ಆಧ್ಯಾತ್ಮಿಕ ಗುರುಗಳು, ಸಾಧು-ಸಂತರು ತಮ್ಮ ಜೀವನದ ಅಂತಿಮ ಸಮಯವನ್ನು ಕಳೆಯಲು ಇಷ್ಟ ಪಡ್ತಾರೆ. ಕೇವಲ ಸಾಧು-ಸಂತರಲ್ಲದೇ ಅನೇಕ ಮಂದಿ ತಮ್ಮ ಕೊನೆಯ ದಿನಗಳನ್ನು ಇಲ್ಲಿ ಕಳೆಯುತ್ತಾರೆ. ಕಾಶಿಯಲ್ಲಿ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ವಿಶ್ವನಾಥ ದೇವಾಲಯಕ್ಕೆ ವಿಶೇಷ ಮಹತ್ವ ಇದೆ. ಇಂತಹ ಪುಣ್ಯಸ್ಥಳದಲ್ಲಿ ಮರಣ ಹೊಂದಿದರೆ ಸ್ವರ್ಗಕ್ಕೆ ಹೋಗುತ್ತಾರೆ ಎಂಬುದು ಕಾಶಿ ವಿಶ್ವನಾಥನ ಭಕ್ತರ ನಂಬಿಕೆ. ಹೀಗಾಗೇ ಈ ಮೋಕ್ಷ ಕ್ಷೇತ್ರಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
Published On - 9:51 pm, Mon, 14 October 19