ಮನುಷ್ಯ ಅಂದ ಮೇಲೆ ಹಲವು ರೀತಿಯ ಭಾವನಾತ್ಮಕ ವಿಚಾರಗಳಿರುತ್ತವೆ. ಅದರಲ್ಲಿ ಕಣ್ಣು ಅದುರುವುದು ಕೂಡಾ ಒಂದು. ಕಣ್ಣು ಅದುರಿದರೆ ಏನಾದ್ರೂ ಅನಾಹುತ, ತೊಂದರೆ ಆಗುತ್ತೆ ಎಂದು ಭಾವಿಸಲಾಗುತ್ತೆ.
ಇದಕ್ಕೆ ಪುರಾಣಗಳಲ್ಲಿ ಒಂದು ಉದಾಹರಣೆ ಸಿಗುತ್ತೆ. ಅದೇನಂದ್ರೆ ಸೀತಾನ್ವೇಷಣೆಗಾಗಿ ಆಂಜನೇಯನು ಅಶೋಕವನಕ್ಕೆ ಹೋಗ್ತಾನೆ. ಆ ಸಮಯದಲ್ಲಿ ಸೀತಾದೇವಿಯ ದರ್ಶನ ಮಾಡುವ ಕೆಲ ಕ್ಷಣಗಳ ಹಿಂದೆ ಸೀತಾದೇವಿಗೆ ಶುಭಸೂಚಕವಾಗಿ ಎಡಗಣ್ಣು ಅದುರಿತ್ತಂತೆ. ಆ ನಂತರ ಸಕಲ ಸೌಭಾಗ್ಯದಿಂದ ಸೀತಾದೇವಿಗೆ ಎಲ್ಲವೂ ಶುಭವೇ ಆಯ್ತು ಎನ್ನುತ್ತವೆ ಪುರಾಣಗಳು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗಂಡಸರಿಗೆ ಬಲಗಣ್ಣು ಹಾಗೂ ಹೆಂಗಸರಿಗೆ ಎಡಗಣ್ಣು ಅದುರಿದರೆ ಶುಭವೆಂದು ಹೇಳಲಾಗುತ್ತೆ. ಸ್ತ್ರೀಯರಿಗೆ ಎಡಗಣ್ಣು ಅದುರಿದರೂ, ನಡುಗಿದರೂ ಶುಭವಾಗುತ್ತೆ.
ಹಾಗೆಯೇ ಗಂಡಸರಿಗೆ ಎಡಗಣ್ಣು ಹಾಗೂ ಹೆಂಗಸರಿಗೆ ಬಲಗಣ್ಣು ಅದುರಿದರೆ ಅಶುಭವೆಂದು ಹೇಳಲಾಗುತ್ತೆ.
ಹೀಗೆ ಕಣ್ಣುಗಳು ಅದುರುವ ವಿಚಾರವನ್ನು ಕೇವಲ ನಮ್ಮ ದೇಶದಲ್ಲಿ ಮಾತ್ರ ನಂಬೋದಿಲ್ಲ. ವಿದೇಶಗಳಲ್ಲಿ ಕೂಡ ಈ ಬಗ್ಗೆ ಬೇರೆ ಬೇರೆ ನಂಬಿಕೆಗಳಿವೆ.ಚೀನಿಯರು ಸಹ ಇದನ್ನು ನಂಬ್ತಾರೆ. ಹಾಗೆಯೇ ಅವರ ಕಣ್ಣಿನ ಶಾಸ್ತ್ರದಂತೆ ಎಡಗಣ್ಣು ಅದುರಿದರೆ ದೊಡ್ಡ ವ್ಯಕ್ತಿಗಳು ಮನೆಗೆ ಬರ್ತಾರೆಂಬ ನಂಬಿಕೆ ಇದೆ. ಬಲಗಣ್ಣು ಅದುರಿದರೆ ಔತಣಕ್ಕೆ ಆಹ್ವಾನ ದೊರೆಯುತ್ತೆ ಎಂಬ ನಂಬಿಕೆ ಅವರದ್ದು. ಹೆಣ್ಣು ಮಕ್ಕಳಿಗೆ ಎಡಗಣ್ಣು ಅದುರಿದರೆ ಅಶುಭ, ಬಲಗಣ್ಣು ಅದುರಿದರೆ ಶುಭ. ಹಾಗೆಯೇ ಎಡಗಣ್ಣಿನ ಕೆಳಭಾಗ ಅದುರಿದರೆ ಅಳುವ ಸನ್ನಿವೇಶ ಎದುರಾಗುತ್ತೆ ಎಂಬ ನಂಬಿಕೆ ಚೀನಿಯರದ್ದು.
ಆದ್ರೆ ವೈದ್ಯಕೀಯ ಶಾಸ್ತ್ರದಲ್ಲಿ ಅದುರುವ ಕಣ್ಣಿನ ಸಮಸ್ಯೆಗೆ ಮಾಂಸಖಂಡಗಳ ಅನಿಯಂತ್ರಿತ ಸಂಕುಚನವೇ ಕಾರಣ ಎನ್ನಲಾಗುತ್ತೆ. ಇದಕ್ಕೆ ಮೈಯೊಕಿಮೀಯಾ ಎನ್ನಲಾಗುತ್ತೆ. ಪೌಷ್ಟಿಕಾಂಶವಿರುವ ಆಹಾರದ ಕೊರತೆ, ನಿದ್ರಾಹೀನತೆ, ಕಲುಷಿತ ವಾತಾವರಣ ಹಾಗೂ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಇದ್ದಲ್ಲಿ ಹೀಗೆ ಕಣ್ಣುಗಳು ಅದುರುತ್ತವೆ ಎನ್ನಲಾಗುತ್ತೆ. ಆದ್ದರಿಂದ ಕಣ್ಣು ಒಂದು ದಿನಕ್ಕಿಂತ ಹೆಚ್ಚು ದಿನಗಳು ಅದುರುತ್ತಿದ್ದರೆ ತಪ್ಪದೇ ಕಣ್ಣಿನ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸೋದು ಒಳ್ಳೇದು.
Published On - 2:28 pm, Thu, 26 September 19