ಬೇವು ಬೆಲ್ಲದ ಹಬ್ಬ ಯುಗಾದಿ ಹಬ್ಬಕ್ಕೆ ಒಂದೇ ದಿನ ಬಾಕಿ ಇದೆ. ನಾಳೆ ಹಿಂದೂಗಳು ಹೊಸ ಬಟ್ಟೆ ತೊಟ್ಟು ಸಂಭ್ರಮ ಸಡಗರದಿಂದ ಹೊಸ ವರ್ಷದ ಆಗಮನ ಮಾಡ್ತಾರೆ. ಈ ಯುಗಾದಿ ಹಬ್ಬಕ್ಕೆ ವಿಶೇಷ ಅಂದ್ರೆ ಬೇವು ಬೆಲ್ಲ ಹಂಚುವುದು. ಸಿಹಿ ಕಹಿಗಳ ಬೆಸುಗೆ. ನಮ್ಮ ಹಿಂದೂ ಧರ್ಮದಲ್ಲಿ ಆಚರಿಸುವ ಪ್ರತಿ ಆಚರಣೆಗೂ ಅದರದ್ದೇ ಆದ ಹಿನ್ನೆಲೆ ಇದೆ. ಯುಗಾದಿ ಹಬ್ಬ ಹೊಸ ವಸಂತದ ಆಗಮನದ ಸಂಕೇತ ಹಾಗೂ ಅತಿ ಪವಿತ್ರ ದಿನ ಅಂತಾ ಪರಿಗಣಿಸಲಾಗುತ್ತೆ.
ಕರ್ನಾಟಕದಲ್ಲಿ ಯುಗಾದಿ ಅಂತಾ ಆಚರಿಸಿದ್ರೆ ಮಹಾರಾಷ್ಟ್ರದಲ್ಲಿ ಯುಗಾದಿಯನ್ನು ಗುಡಿ ಪಾವ್ಡಾ ಅನ್ನೋ ಹೆಸರಿನಿಂದ ಆಚರಿಸಲಾಗುತ್ತೆ. ಇನ್ನು ಪಂಜಾಬ್ನಲ್ಲಿ ವೈಶಾಖ, ಅಸ್ಸಾಂನಲ್ಲಿ ಬೀರು, ಕೇರಳದಲ್ಲಿ ಕೊಲ್ಲ ವರ್ಷ ಅಂತಾ ಆಚರಿಸೋ ಸಂಪ್ರದಾಯವಿದೆ. ಯುಗಾದಿ ಹಬ್ಬದಲ್ಲಿ ಬೇವು-ಬೆಲ್ಲ ಹಂಚೋದು ಬಹಳ ವಿಶೇಷ. ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲೂ ಸುಖ-ದುಃಖದ ಸಂಕೇತವಾಗಿ ಬೇವು-ಬೆಲ್ಲವನ್ನು ಹಂಚಲಾಗುತ್ತೆ. ನಮಗೆಲ್ಲಾ ತಿಳಿದಿರುವ ಹಾಗೆ ಬೇವು ರುಚಿಯಲ್ಲಿ ಕಹಿ ಹಾಗೂ ಬೆಲ್ಲ ಸಿಹಿಯನ್ನು ಹೊಂದಿರುತ್ತೆ. ಕಹಿ ಹಾಗೂ ಸಿಹಿ ರುಚಿಗಳನ್ನು ಹೊಂದಿರುವ ಬೇವು-ಬೆಲ್ಲ ಆರೋಗ್ಯ ಹಾಗೂ ಸೌಂದರ್ಯವನ್ನು ವೃದ್ಧಿಸುವ ಗುಣಗಳನ್ನು ಹೊಂದಿವೆ. ಅಷ್ಟಕ್ಕೂ, ಬೇವಿನಲ್ಲಿರುವ ಆರೋಗ್ಯಕಾರಿ ಗುಣಗಳೇನು? ಇಲ್ಲಿ ತಿಳಿಯಿರಿ.
ಬೇವಿನಲ್ಲಿರುವ ಆರೋಗ್ಯಕಾರಿ ಗುಣಗಳು
1)ಮೊಡವೆಗಳು, ಕಪ್ಪುಕಲೆ, ಬ್ಲಾಕ್‌ಹೆಡ್, ಸೂಕ್ಷ್ಮ ಗೆರೆಗಳು, ತಲೆಹೊಟ್ಟು, ತಲೆಗೂದಲು ಉದುರುವಿಕೆ ತಡೆಗೆ ಸಹಕಾರಿಯಾಗುತ್ತೆ
2)ಚಿಕ್ಕ ಮಕ್ಕಳಿಗೆ ಕಾಡುವ ಸಿಡುಬು ಹಾಗೂ ಸ್ಮಾಲ್ ಪಾಕ್ಸ್ ಸಮಸ್ಯೆಗೆ ಕಹಿಬೇವನ್ನು ನೀರಲ್ಲಿ ಕುದಿಸಿ ಅದರಿಂದ ಸ್ನಾನ ಮಾಡಿಸಲಾಗುತ್ತೆ
3)ಇದು ಌಂಟಿ ಬ್ಯಾಕ್ಟೀರಿಯಾ ಗುಣವನ್ನು ಹೊಂದಿರುವುದರಿಂದ ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತೆ
4)ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತೆ
5)ಕರುಳಿನಲ್ಲಿ ಪರಾವಲಂಬಿ ಜೀವಿಗಳನ್ನು ನಿಯಂತ್ರಿಸುತ್ತೆ
6)ಜೀರ್ಣಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತೆ
7)ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುತ್ತೆ
8)ವಾಯು ಪ್ರಕೋಪತೆ ಹಾಗೂ ಅತಿ ಆಮ್ಲೀಯತೆಯ ಸಮಸ್ಯೆಯನ್ನು ಶಮನಗೊಳಿಸುತ್ತೆ
ಬೆಲ್ಲದಲ್ಲಿರುವ ಆರೋಗ್ಯಕಾರಿ ಗುಣಗಳು
1)ಬೆಲ್ಲ ಜೀರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರಿಸುವುದಿಲ್ಲ
2)ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತೆ
3)ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತೆ
4)ಮಲಬದ್ಧತೆ ಸಮಸ್ಯೆಯನ್ನು ಶಮನಗೊಳಿಸುತ್ತೆ
5)ಬೆಲ್ಲದಲ್ಲಿ ನೈಸರ್ಗಿಕ ಪೋಷಕಾಂಶಗಳು ಮತ್ತು ಖನಿಜಗಳು ಹೆಚ್ಚಾಗಿರುತ್ತೆ
6)ಬೆಲ್ಲದಲ್ಲಿ ನೈಸರ್ಗಿಕ ಲವಣಗಳು ಉಳಿದುಕೊಂಡಿರುತ್ತೆ
7)ಶ್ವಾಸಕೋಶ, ಶ್ವಾಸನಾಳ, ಅನ್ನನಾಳ, ಹೊಟ್ಟೆ ಮತ್ತು ಕರುಳುಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತೆ
ಹೀಗೆ ಬೇವು-ಬೆಲ್ಲದಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇಂತಹ ಗುಣಗಳನ್ನು ಹೊಂದಿರುವ ಬೇವು-ಬೆಲ್ಲವನ್ನು ಯುಗಾದಿ ಹಬ್ಬದ ಸಮಯದಲ್ಲಿ ಹಂಚೋ ಸಂಪ್ರದಾಯ ಅನಾದಿಕಾಲದಿಂದಲೂ ಇದೆ. ಹೀಗೆ ಬೇವು-ಬೆಲ್ಲವನ್ನು ಹಂಚುವುದರ ಹಿಂದಿರೋ ತಾತ್ಪರ್ಯವೇ ಆರೋಗ್ಯ ವೃದ್ಧಿಸಲಿ ಅನ್ನೋದು. ನಮ್ಮ ಪೂರ್ವಿಕರು ಏನೇ ಮಾಡಿದ್ರೂ ಅದರ ಹಿಂದೆ ಒಂದೊಳ್ಳೆ ಸದುದ್ದೇಶವಂತೂ ಇದ್ದೇ ಇರುತ್ತೆ. ಇದನ್ನು ಹಾಗೇ ಹೇಳಿದ್ರೆ ಯಾರೂ ಕೇಳಲ್ಲ ಅಂತಾ ಆಚರಣೆಯ ನೆಪದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Ugadi 2021: ಯುಗಾದಿ ಹಬ್ಬದ ಮೆರಗು ಹೆಚ್ಚಿಸುವ ಸಾಂಪ್ರದಾಯಿಕ ಅಡುಗೆಗಳು