ಭಾರತದಲ್ಲಿ ವಿವಿಧ ಸಂಪ್ರದಾಯ, ಆಚರಣೆಯುಳ್ಳ ವಿವಿಧ ಜನಾಂಗವಿದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಆಹಾರ, ಸಂಪ್ರದಾಯ ಉಡುಗೆ ತೊಡುಗೆ ಜೊತೆ ಧಾರ್ಮಿಕ ಆಚರಣೆಗಳು ಬದಲಾಗಿರುತ್ತವೆ. ಯುಗದಿ ಹಬ್ಬ ಎದುರಿಗಿದೆ. ಈ ಬಾರಿಯ ಯುಗಾದಿ ವಿಶೇಷವನ್ನು ವಿವಿಧ ತೆರೆನಾದ ಅಡುಗೆ ಮಾಡುವ ಮೂಲಕ ಆಚರಿಸೋಣ.
ವಸಂತಕಾಲದ ಆಗಮನ ಯುಗಾದಿ. ಹೊಸ ವರ್ಷದ ಜೊತೆಗೆ ಸಿಹಿ ತಿನಿಸುಗಳನ್ನು ಸಿದ್ಧ ಮಾಡಿ ಮನೆಯವರೆಲ್ಲಾ ಒಟ್ಟಿಗೆ ಕೂತು ಖುಷಿಯಿಂದ ಆಚರಿಸುವ ಸಂಪ್ರದಾಯವಿದೆ. ಅದರಲ್ಲಿ ವಿಶೇಷವಾಗಿ ಯುಗಾದಿ ಪಚಡಿ ಎಂಬ ವಿಶೇಷ ತಿನಿಸನ್ನು ಮಾಡುತ್ತಾರೆ. ಬೇವು- ಬೆಲ್ಲ ಬೆರೆಸಿ ಪಚಡಿ ಮಾಡಿ ಪ್ರಸಾದದ ರೂಪದಲ್ಲಿ ಸೇವಿಸುವುದುಂಟು. ಜೊತೆಗೆ ಊಟದಲ್ಲಿ ರುಚಿಕಟ್ಟಾದ ವಿವಿಧ ಖಾದ್ಯಗಳನ್ನು ಮಾಡಿ ಊಟದ ಜೊತೆ ಸವಿಯುತ್ತಾರೆ. ಮನೆಯೆಲ್ಲ ಹಬ್ಬದ ಸಡಗರ ಸಂಭ್ರಮ, ಮನೆತುಂಬ ಹೂವಿನ ಮಾಲೆ, ತರಿಳಿನ ತೋರಣದಲ್ಲಿ ರಂಗೇರಿರುತ್ತದೆ. ದೇವರ ಪೂಜೆಗೆ ನೈವೇದ್ಯದ ಸಿದ್ಧತೆ ಮಾಡಿ, ಪೂಜೆಯ ನಂತರ ಬೇವು-ಬೆಲ್ಲ ಸೇರಿದ ಪಚಡಿಯನ್ನು ಪ್ರಸಾದವಾಗಿ ಸೇವಿಸುವುದು ಭಾರತೀಯ ಸಂಪ್ರದಾಯ.
ಊಟದ ಜೊತೆ ಇರಲಿ ಬೇವಿನ ಚಟ್ನಿ
ಬೇವಿನ ಚಟ್ನಿ ಮಾಡುವುದು ತುಂಬಾ ಸುಲಭ. ಕಡಿಮೆ ಸಮಯದಲ್ಲಿ ಒಳ್ಳೆಯ ರೆಸಿಪಿ ತಯಾರಿಸಬಹುದು. ಯುಗಾದಿಯಂದು ಸಾಮಾನ್ಯವಾಗಿ ಬೇವಿನ ಚಟ್ನಿಯನ್ನು ಮಾಡುತ್ತಾರೆ.
ತಯಾರಿಸುವ ವಿಧಾನ?
ಈಗ ತಾನೆ ಚಿಗುರೊಡೆದ ಒಂದು ಹಿಡಿ ಬೇವಿನ ಹೂವನ್ನು ತೆಗೆದುಕೊಳ್ಳಿ. ತವಾ ಮೇಲೆ ಹೂವನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ತದ ನಂತರ ತವಾಮೇಲೆ ಅರ್ಧ ಚಮಚ ಉದ್ದಿನ ಬೇಳೆ ಮತ್ತು ಒಂದು ಚಮಚ ಹಸುವಿನ ತುಪ್ಪ ಸೇರಿಸಿ, ಉದ್ದಿನ ಬೇಳೆ ಬಂಗಾರದ ಬಣ್ಣಕ್ಕೆ ತಿರುಗುವವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ.
ಪಕ್ಕದಲ್ಲಿ ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ 8-10 ಕೆಂಪು ಮೆಣಸು, ಚೂರೇಚೂರು ತುಪ್ಪ, 2 ಚಿಟಿಕೆ ಇಂಗು ಸೇರಿಸಿ ಹುರಿಯಿರಿ. ಸಿದ್ಧ ಪಡಿಸಿಟ್ಟುಕೊಂಡ ಬೇವಿನ ಹೂವು, ಉದ್ದಿನಬೇಳೆ ಮತ್ತು ಒಗ್ಗರಣೆಯನ್ನು ಸೇರಿಸಿ, ಅದಕ್ಕೆ ಕಾಲು ಕಪ್ ಬೆಲ್ಲ, ಲಿಂಬು ಗಾತ್ರದ ಹುಳಿ ಸೇರಿಸಿ ಮಿಕ್ಸಿ ಮಾಡಿ. ಇಲ್ಲಿಗೆ ಬೇವಿನ ಚಟ್ನಿ ಸಿದ್ಧವಾಗುತ್ತದೆ. ಇದಕ್ಕೆ ಚೂರೇ ಚೂರು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿದರೆ ಬೇವಿನ ಚಟ್ನಿ ಸಿದ್ಧಗೊಳ್ಳುತ್ತದೆ.
ಹಬ್ಬಕ್ಕಿರಲಿ ಬಿಸಿ ಬೇಳೆಬಾತ್
ದಕ್ಷಿಣ ಭಾರತದ ಸಾಂಪ್ರದಾಯಿಕ ವಿಧಾನದಲ್ಲಿ ಯುಗಾದಿ ಹಬ್ಬದಂದು ಬಿಸಿಬೇಳೆ ಬಾತ್ ಮಾಡುತ್ತಾರೆ. ಊಟದ ವಿಶೇಷದಂದು ರಸವತ್ತಾದ ಬೇಳೆಬಾತ್ ಮಾಡಿ ಸವಿಯುತ್ತಾರೆ. ಈ ಬಾರಿಯ ಯುಗಾದಿ ಹಬ್ಬಕ್ಕೆ ನೀವೂ ನಿಮ್ಮ ಮನೆಯಲ್ಲಿ ಬಿಸಿಬೇಳೆ ಬಾತ್ ಮಾಡಿ ಸವಿಯಿರಿ. ಈ ಬಾರಿಯ ಯುಗದಿ ಹಬ್ಬದ ಊಟ ಭರ್ಜರಿಯಾಗಿರಲಿ.
ಬಿಸಿಬೇಳೆ ಬಾತ್ ಮಾಡುವ ವಿಧಾನ
ಬಿಸಿಬೇಳೆ ಬಾತ್ ಹೆಚ್ಚು ಪೌಷ್ಠಿಕಾಂಶವನ್ನು ಹೊಂದಿರುತ್ತದೆ. ಜತೆಗೆ ಸವಿಯಲು ರುಚಿಕರವಾಗಿರುತ್ತದೆ. ಹಲವು ಬಗೆಯ ತರಕಾರಿಗಳ ಜೊತೆ ತೊಗರಿ ಬೇಳೆಯಲ್ಲಿ ಮಾಡುವ ರೆಸಿಪಿ ಬಿಸಿಬೇಳೆ ಬಾತ್.
ಒಗ್ಗರಣೆ ಪಾತ್ರೆಯಲ್ಲಿ ಒಂದು ಚಮಚ ಕೊಬ್ಬರಿ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ. ಎಣ್ಣೆ ಕಾದ ಬಳಿಕ ಅದಕ್ಕೆ ಒಂದು ಚಿಟಿಕೆ ಸಾಸಿವೆ, ಒಣಮೆಣಸಿನಕಾಯಿ 3-4, ಕರಿಬೇವಿನ ಎಲೆ 3-4, ಗರಂ ಮಸಾಲಾ 2-3 ಚಿಟಿಕೆ ಸೇರಿಸಿ, ಅದಕ್ಕೆ 5-6 ಗೋಡಂಬಿ ಸೇರಿಸಿ ಚೆನ್ನಾಗಿ ಹುರಿಯಿರಿ.
ಮತ್ತೊಂದು ಕಡೆ ಸಣ್ಣದಾಗಿ ಹೆಚ್ಚಿಕೊಂಡ ಟೊಮ್ಯಾಟೋ, ಅರಿಶಿಣ ಒಂದು ಚಿಟಿಕೆ, ಇಂಗು ಮತ್ತು ಹೆಚ್ಚಿಕೊಂಡ ವಿವಿಧ ತರಕಾರಿಗಳನ್ನು ಸೇರಿಸಿ, ಅದಕ್ಕೆ ಒಣತೆಂಗಿನ ತುರಿ, ಜೊತೆ ಬಿಸಿಬೇಳೆ ಬಾತ್ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಮೂರನೇ ಹಂತದಲ್ಲಿ, ಅಕ್ಕಿಯನ್ನು ತೊಳೆದು ಕುಕ್ಕರ್ ಪಾತ್ರೆಗೆ ಹಾಕಿ, ಅದಕ್ಕೆ ಸಿದ್ಧ ಮಾಡಿಕೊಂಡ ಒಗ್ಗರಣೆ ಮತ್ತು ತರಕಾರಿಗಳ ವಿಶ್ರಣವನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಚೂರೇ ಚೂರು ಬೆಲ್ಲ ಜೊತೆಗೆ ನಿಮಗಿಷ್ಟವಾದರೆ. ನೆನೆಸಿವ ಹಸಿರು ಬಣಾಣಿ ಜೊತೆ ನೀರು ಸೇರಿಸಿ ಕುಕ್ಕರಿನಲ್ಲಿ ಮೂರು ವಿಜಿಲ್ ಹೊಡೆಸಿದರೆ ಬಿಸಿ ಬಿಸಿಯಾದ ಬಿಸಿಬೇಳೆ ಬಾತ್ ಹಬ್ಬದ ವಿಶೇಷಕ್ಕೆ ಸಿದ್ಧವಾಗಿರುತ್ತದೆ. ಬಿಸಿ ಬೇಳೆಬಾತ್ ಜೊತೆ ಖಾರಾ ಬೂಂದಿ ಇದ್ದರೆ ಸವಿಯಲು ಇನ್ನೂ ರುಚಿಕರವಾಗಿರುತ್ತದೆ.
ಇದನ್ನೂ ಓದಿ: Ugadi 2021: ಯುಗಾದಿ ಹಬ್ಬದ ಮಹತ್ವ, ಇತಿಹಾಸ, ಶುಭ ಮುಹೂರ್ತ ಮತ್ತು ಆಚರಿಸುವ ವಿಧಾನ ಇಲ್ಲಿದೆ
Published On - 11:54 am, Mon, 12 April 21