ಯುಗಾದಿಯು ಭಾರತದ ಹಲವು ರಾಜ್ಯಗಳಲ್ಲಿ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಆಚರಿಸುವ ಸಂಭ್ರಮದ ಹಬ್ಬವಾಗಿದೆ. ಯುಗಾದಿ ಎಂದರೆ ಅದು ಹಿಂದೂ ಸಂಪ್ರದಾಯದಂತೆ ಹೊಸ ವರ್ಷ. ಕೇರಳ ಮತ್ತು ತಮಿಳುನಾಡು ರಾಜ್ಯದಲ್ಲಿ ಈ ಹಬ್ಬವನ್ನು ವಿಷು ಎಂದು ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಇದನ್ನು ಗುಡಿ ಪಾಡ್ವ ಎಂದು ಕರೆಯುತ್ತಾರೆ. ಯುಗಾದಿಯು ಹೊಸ ವರ್ಷದ ಆರಂಭವಾಗುವ ಜೊತೆಗೆ ಹೊಸ ಯೋಚನೆಗಳನ್ನು, ಹೊಸ ವರ್ಷದ ಸುಭೀಕ್ಷೆಯನ್ನು ಬೇಡುವ, ಒಳಿತನ್ನು ಹಾರೈಸಿ ಸಂಭ್ರಮಿಸುವ ಪರ್ವಕಾಲವಾಗಿದೆ.
ಯುಗಾದಿ ಹಬ್ಬವನ್ನು ಈ ವರ್ಷ ಏಪ್ರಿಲ್ 13ರಂದು ಆಚರಿಸಲಾಗುತ್ತದೆ. ಹೊಸ ಬಟ್ಟೆ, ಸಿಹಿತಿಂಡಿಗಳು, ಕುಟುಂಬದ ಜೊತೆಗೆ ಒಡನಾಟ.. ಇತ್ಯಾದಿ ವಿಚಾರಗಳನ್ನು ಹೊರತುಪಡಿಸಿ ಹಬ್ಬದ ಆಚರಣೆ ಹೇಗೆ ಎಂದು ಹಲವು ಮಂದಿಗೆ ಗೊಂದಲವಿರಬಹುದು. ಇದಕ್ಕೆ ಸಂಬಂಧಿಸಿ ಯುಗಾದಿ ಆಚರಿಸುವ ವಿಧಾನಗಳ ಬಗ್ಗೆ ಬಸವರಾಜ ಗುರೂಜಿ ಮಾಹಿತಿ ನೀಡಿದ್ದಾರೆ.
ಯುಗಾದಿ ಹಬ್ಬದ ಆಚರಣೆ ಹೇಗೆ?
ಚೈತ್ರಮಾಸಕ್ಕೆ ವಿಷ್ಣು ರೂಪಿ ಪರಮಾತ್ಮ ನಿಯಾಮಕ. ಚೈತ್ರ ಶುಕ್ಲ ಪ್ರತಿಪತ್ತಿನಂದು ಯುಗಾದಿ ಹಬ್ಬದ ದಿನ ನೂತನ ವರ್ಷಾರಂಭ ಆಗುತ್ತದೆ. ಈ ದಿನ ಅರುಣೋದಯದ ಕಾಲದಲ್ಲಿಯೇ ಎದ್ದು ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ -ದೇವರ ಮನೆಗೆ ಹೋಗಿ ದೇವರ ಮುಂದೆ ಇಟ್ಟಿರುವ ಪಂಚಾಂಗ , ತರಕಾರಿಗಳು -ಧಾನ್ಯಗಳು ,ಫಲ-ತಾಂಬೂಲಗಳು ಎಣ್ಣೆ ನೆಲ್ಲಿಕಾಯಿ ಮುಂತಾದ ವಸ್ತುಗಳನ್ನು, ಹೊಸ ವಸ್ತ್ರಗಳನ್ನು ಇರಿಸಿ ಮಂಗಳಾರತಿಯನ್ನು ಮಾಡಬೇಕು. ಗಜೇಂದ್ರ ಮೋಕ್ಷ ಪಾರಯಣ ಮಾಡಬೇಕು.
ಯುಗಾದಿಯಂದು ಪ್ರತಿಯೊಬ್ಬರು ಅಭ್ಯಂಜನ ಮಾಡಲೇಬೇಕು. ಜೊತೆಗೆ ಪೂಜಕನು(ಭಕ್ತನು) ಸ್ನಾನ ಮಾಡಿ ಭಗವಂತನಿಗೆ ಎಣ್ಣೆ ಸೀಗೆಪುಡಿ, ಬಿಸಿನೀರಿನಿಂದ ಅಭ್ಯಂಜನನವನ್ನು ಮಾಡಿಸಬೇಕು. ಭಗವಂತನಿಗೆ ಮಾಡಿ ಉಳಿದ ಎಣ್ಣೆ-ಸೀಗೆಪುಡಿಗೆ ಬೇರೆ ಎಣ್ಣೆ, ಸೀಗೆಪುಡಿಯನ್ನು ಬೆರೆಸಿ ಪ್ರತಿಯೊಬ್ಬರು ಹಚ್ಚಿಕೊಂಡು ಸ್ನಾನ ಮಾಡಬೇಕು.
ಸಪ್ತಚಿರಂಜೀವಿ ಸ್ಮರಣೆ
ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಅಶ್ವತ್ಥಾಮಾದಿ ಸಪ್ತ ಚಿರಂಜೀವಿಗಳನ್ನು, ಮಾರ್ಕಂಡೇಯನನ್ನು ಈ ಕೆಳಗೆ ಕೊಟ್ಟಿರುವ ಮಂತ್ರವನ್ನು ಹೇಳಿ ಸ್ಮರಿಸಬೇಕು.
ಅಶ್ವತ್ಥಾಮ ಬಲಿರ್ವ್ಯಾಸಃ ಹನೂಮಾಂಶ್ಚ ವಿಭೀಷಣಃ ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ
ಅಭ್ಯಂಜನವನ್ನು ಮಾಡಿದ ನಂತರ ಭಗವಂತನ ವಿಶೇಷ ಪೂಜೆಯನ್ನು ಮಾಡಿ, ನಂತರ ಹೊಸಬಟ್ಟೆಯನ್ನು ಧರಿಸಿ, ನಿಂಬಕ ದಳ ಭಕ್ಷಣವನ್ನು (ಬೇವು -ಬೆಲ್ಲ) ಮಾಡಬೇಕು.
ಬೇವು ಬೆಲ್ಲ ಭಕ್ಷಣೆ ಮಾಡುವಾಗ ಹೇಳಬೇಕಾದ ಮಂತ್ರ
ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್
ನೂರು ವರ್ಷಆಯುಸ್ಸು, ವಜ್ರದಂತೆ ಧೃಢವಾದ ಶರೀರ, ಸರ್ವಸಂಪತ್ತು ಸರ್ವರಿಷ್ಟನಾಶ ಇವುಗಳಿಗಾಗಿ ಯುಗಾದಿಯಂದು ಬೇವು ಬೆಲ್ಲಗಳ ಭಕ್ಷಣೆ ಮಾಡಬೇಕು ನಂತರ ಪಂಚಾಂಗ ಶ್ರವಣಮಾಡಬೇಕು.
ಬಸವರಾಜ ಗುರೂಜಿ
ವೈದಿಕ ಜ್ಯೋತಿಷಿ, ಸಂಪರ್ಕ ಸಂಖ್ಯೆ: 9972848937
ಇದನ್ನೂ ಓದಿ: Ugadi 2021: ಯುಗಾದಿ ಹಬ್ಬದ ಮೆರಗು ಹೆಚ್ಚಿಸುವ ಸಾಂಪ್ರದಾಯಿಕ ಅಡುಗೆಗಳು
ಇದನ್ನೂ ಓದಿ: Ugadi 2021: ಯುಗಾದಿ ಹಬ್ಬದ ಮಹತ್ವ, ಇತಿಹಾಸ, ಶುಭ ಮುಹೂರ್ತ ಮತ್ತು ಆಚರಿಸುವ ವಿಧಾನ ಇಲ್ಲಿದೆ
(Ugadi Festival 2021 How to celebrate Yugadi Mantra for Yugadi celebration)
Published On - 5:04 pm, Mon, 12 April 21