Valentine’s Day 2021 | ಪ್ರೇಮಿಗಳ ದಿನ 2021; ನಗೆ ಉಕ್ಕಿಸುವ ಪ್ರೀತಿಯ ಪರಿಪಾಟಲು ನಿಮಗೂ ಆಗಿರಬಹುದು..

Valentine‘s Day: ಏನಾದರಾಗಲಿ ಸಮೀಪಿಸುತ್ತಿರುವ ಪ್ರೇಮಿಗಳ ದಿನದಂದು ನನ್ನ ಪ್ರೀತಿಯನು ನಿನ್ನಲ್ಲಿ ಹೇಳಿಕೊಳ್ಳಲು ಕಾತರಿಸುತ್ತಿರುವೆ...ಒಪ್ಪಿ ಬಿಡು ಇನಿಯ ನಿನಗಾಗಿ ಮಿಡಿಯುತ್ತಿರುವ ಈ ಹೃದಯಕೆ ಕಿವಿಯಾಗಿ, ಸಂಗಾತಿಯಾಗಿ,ಗೆಳೆಯನಾಗಿ, ಪ್ರೇಮಿಯಾಗಿ ಜೊತೆಯಾಗಿಬಿಡು.

  • TV9 Web Team
  • Published On - 16:28 PM, 14 Feb 2021
Valentine's Day 2021 | ಪ್ರೇಮಿಗಳ ದಿನ 2021; ನಗೆ ಉಕ್ಕಿಸುವ ಪ್ರೀತಿಯ ಪರಿಪಾಟಲು ನಿಮಗೂ ಆಗಿರಬಹುದು..
ಏನಾದರಾಗಲಿ ಸಮೀಪಿಸುತ್ತಿರುವ ಪ್ರೇಮಿಗಳ ದಿನದಂದು ನನ್ನ ಪ್ರೀತಿಯನು ನಿನ್ನಲ್ಲಿ ಹೇಳಿಕೊಳ್ಳಲು ಕಾತರಿಸುತ್ತಿರುವೆ...

ಕಾಲೇಜಿನ ಕೊನೆಯ ದಿನಗಳವು.. ಸಮಯ ಸರಿದಂತೆಲ್ಲ ಮನಸ್ಸಿನಲ್ಲಿ ಏನೋ ಒಂಥರಾ ತಳಮಳ. ನಿನ್ನೆದುರಿಗೆ ನನ್ನ ಪ್ರೀತಿಯನ್ನು ನಿವೇದಿಸಿಕೊಳ್ಳಲು ಒಂದು ಅವಕಾಶಕ್ಕಾಗಿ ಕಾದು ಕಾದು ವರುಷಗಳೇ ಕಳೆದುಹೋಗಿದ್ದವು. ನೀ ಎದುರಿಗೆ ಬಂದಾಗಲೆಲ್ಲ ಮಾತುಗಳು ಹೊರಬರದೆ ಕಪ್ಪೆಚಿಪ್ಪಿನೊಳಗೆ ಮುತ್ತೊಂದು ಅವಿತುಕೊಂಡಂತೆ ಬಚ್ಚಿಟ್ಟುಕೊಳ್ಳುತ್ತಿದ್ದವು. (Valentine‘s Day)

ನೀನು ಎಂದು ಮನಸಿನ ಕದವ ತಟ್ಟಿದೆಯೋ, ಅಂದಿನಿಂದ ನಿದ್ರೆ ದೂರವಾಗಿತ್ತು. ನಿನ್ನದೇ ಗುಂಗಿನಲ್ಲಿ ಮನಸು, ಹೃದಯಗಳೆರಡು ಗಿರಗಿಟ್ಲೆ ಹೊಡೆಯುತ್ತಿದ್ದವು. ಅದೊಂಥರ ಮಧುರ ಅನುಭವ ಬಿಡು..ತಂಗಾಳಿಯೊಂದಿಗೆ ಕೆಂಡ ಸಂಪಿಗೆಯ ಕಂಪು ಬೆರೆತಂತೆ. ಆಗಾಗ ನೀ ನನ್ನೆಡೆಗೆ ಬೀರುವ ನೋಟವನೆಲ್ಲ ಮನಸ್ಸಲ್ಲಿಯೇ ಸೆರೆ ಹಿಡಿದು ಹೃದಯದ ಕಪಾಟಿನಲ್ಲಿ ಜೋಪಾನ ಮಾಡಿರುವೆ. ನನ್ನೊಂದಿಗೆ ಆಡುತ್ತಿದ್ದ ಮಾತುಗಳ ಮೌನದಲ್ಲಿ ಆಲಿಸಿ ಭಾವಗಳಲ್ಲಿ ನಿನ್ನನ್ನು ಚಿತ್ರಿಸಿರುವೆ.

ಏನಾದರಾಗಲಿ ಸಮೀಪಿಸುತ್ತಿರುವ ಪ್ರೇಮಿಗಳ ದಿನದಂದು ನನ್ನ ಪ್ರೀತಿಯನು ನಿನ್ನಲ್ಲಿ ಹೇಳಿಕೊಳ್ಳಲು ಕಾತರಿಸುತ್ತಿರುವೆ…
ಒಪ್ಪಿ ಬಿಡು ಇನಿಯ ನಿನಗಾಗಿ ಮಿಡಿಯುತ್ತಿರುವ ಈ ಹೃದಯಕೆ ಕಿವಿಯಾಗಿ, ಸಂಗಾತಿಯಾಗಿ, ಗೆಳೆಯನಾಗಿ, ಪ್ರೇಮಿಯಾಗಿ ಜೊತೆಯಾಗಿಬಿಡು.

ಇಂತಿ ನಿನ್ನ ಒಲವಿಗಾಗಿ ಕಾಯುವ

ಶಿಲ್ಪ ಮೋಹನ್
ಬೆಂಗಳೂರು

ಇದನ್ನೂ ಓದಿ: Valentine’s Day 2021| ಪ್ರೇಮಿಗಳ ದಿನ 2021; ಹದಿ ಹೃದಯ ಕುದಿ ಹರೆಯ ! ಇದು ಪ್ರೇಮದ ಮನೋವೈಜ್ಞಾನಿಕ ವಿಶ್ಲೇಷಣೆ 

****

ವಿಧಿಯ ಕೈವಾಡ; ಇನ್ನೊಂದು ಪ್ರೇಮಕಥೆ

ಅವಳಂತೂ ಬಾಯಿ ಬಡ್ಕಿ ಆದ್ರೂನು ಚಲೋ ಲಡ್ಕಿ! ಹಿಂಗಂದುಕೊಂಡೆ ಅವಳ ಹಿಂದೆ ಬಿದ್ದೆ. ಕಾರಣ ಇಷ್ಟೇ, ಅವಳ ಸೌಂದರ್ಯ, ಅವಳ ಐಶ್ವರ್ಯ.. ಎಲ್ಲಕೂ ಮಿಗಿಲಾಗಿ ನನ್ನ ಮುಗ್ಧ ಮನಸಿನ ಔದಾರ್ಯ. ಅವಳಿಂದೆ ಸುತ್ತಿದ್ದೆ ಸುತ್ತಿದ್ದು! ಅವಳಿಗಾಗಿ ಕಿಸಿದದ್ದೇ ಕಿಸಿದಿದ್ದು! ಅದೆಂಗೋ ಒಂದೊಳ್ಳೆ ಮನಸು ಮಾಡಿ ಅಂತೂ ನನ್ನ ಪ್ರೀತಿಗೆ ಹಸಿರು ನಿಶಾನೆ ತೋರಿದಳು.

ಇನ್ನೇನು ಬಯಸಿದವಳು ಬಲಗಾಲಿಟ್ಟು ಎದೆಗೋದ್ದು ಬಂದಮೇಲೆ ಉದ್ಧಾರ ಆಗಬೇಕಾದವರೆಲ್ಲ ಉದ್ಯಾನವನಕ್ಕೆ ಹೋಗಿ ಉದ್ದುದ್ದ ಭಾಷಣ ಬಿಗಿದಿದ್ದೆ ಬಿಗಿದಿದ್ದು,ಕೈ ಹಿಡಿದು ಸುತ್ತಾಡಿದ್ದೆ ಸುತ್ತಾಡಿದ್ದು. ಇನ್ನೂ ಅದ್ಯಾವ ಪಾಪ ಮಾಡಿದ್ದವೋ ಏನೋ ಆ ನಮ್ಮೆರಡು ಫೋನುಗಳು ಮತ್ತು ಅವುಗಳ ಕಷ್ಟವನ್ನು ದೇವರೇ ಕೇಳಬೇಕು. ಹೀಗೆ ಹಾಗೆ ಪ್ರೀತಿ ರೋಗ ತಲೆಗೆ ಹತ್ತಿ ಒಂಥರ ವಿಚಿತ್ರ ಜೀವಿಗಳಾಗಿ ಪವಿತ್ರ ಸಮಯವನ್ನೆಲ್ಲ ಹಾಳು ಮಾಡಿಕೊಂಡೆವು. ಅನಿಸಿದರೂ, ಅದೇ ಸಮಂಜಸವೆನಿಸುತಿತ್ತು. ಹೊಸ ಹುಮ್ಮಸಿನಲ್ಲಿದ್ದ ಹಸಿ ಜೀವಗಳಿಗೆ ಮುಂದಾಗುವ ವ್ಯತ್ಯಾಸದ ಕುರಿತು ಒಂಚೂರು ಯೋಚನೆ ಇರಲಿಲ್ಲ.

ಇರುವ ಸತ್ಯವನ್ನು ಪ್ರಮಾಣ ಮಾಡಿದಾಗ ಅಪ್ಪಿದಳು
ಒಂದೊಮ್ಮೆ ಅವಳ ಗೆಳತಿ ಹಾಗೋ ಹೀಗೋ ಕಣ್ಣಿಗೆ ಬಿದ್ದು ಏನೇನೋ ಮಾತಾಡುವಾಗ ಮಾತಿಗೆ ಮಾತು ಬಂದು ನನ್ನವಳನ್ನ ಪ್ರೀತಿಸುವ ವಿಷಯ ಹೇಳಿಬಿಟ್ಟೆ. ಅವಳೋ ಕಕ್ಕಾಬಿಕ್ಕಿಯಾಗಿ ನಗಲಾರಂಭಿಸಿದಳು. ಕಾರಣ ಕೇಳಿದರೆ ಅದು ಹಿಂಗೇ, ಇದು ಹಿಂಗೇ ಇವರು ಇದಾಗಬೇಕು ಅವರು ಆದಾಗಬೇಕು ಅವರವರು ಹಿಂಗಾಗಬೇಕು ಹಂಗಂಗೆ ಇವರವರಾಗಬೇಕು ಅಂತ ಏನೇನೋ ಬಿಡಿಬಿಡಿಸಿ ಹೇಳುತ್ತಾ, ಕೊನೆಗೆ ನಾ ಪ್ರೀತಿಸುವ ಹುಡುಗಿ ನನಗೆ ವರಸೆಯಲ್ಲಿ ಸ್ವಂತ ಅಲ್ಲದಿದ್ದರೂ ಬಾಡಿಗೆ ಸಹೋದರಿ ಆಗುತ್ತಾಳೆಂದು ಹೇಳಿ ಮತ್ತೆ ಮತ್ತೆ ನೆನೆಸಿಕೊಂಡು ನಗತೊಡಗಿದಳು. ಸುಳ್ಳು ಪಳ್ಳು ಅಂತ ವಾದ ಮಾಡಿದರೂ ಆಣೆ ಪ್ರಮಾಣ ಮಾಡಿ ಇಲ್ಲದ್ದನ್ನು ತಲೆಗೆ ತುಂಬಿ ನಿನ್ನಿಷ್ಟ ಎಂದು ಹೇಳಿ ಜಾಗ ಕಿತ್ತಳು. ಅಂದಿಗೆ ಎಲ್ಲಾ ರೀತಿ ಯೋಚಿಸಿ, ಯೋಚಿಸುವರ ಹತ್ತಿರ ವಿಚಾರಿಸಿದಾಗ ಆಕೆ ಹೇಳಿದ್ದು ನೂರಕ್ಕೆ ನೂರಲ್ಲದಿದ್ದರೂ ಕಾಲು ಕೆಜಿ ಸತ್ಯ ಅಂತೂ ಆಗಿತ್ತು!

ಆವತ್ತೇ ಕೊನೆ ಇದನ್ನೆಲ್ಲಾ ನನ್ನವಳಿಗೆ, ಅಲ್ಲಲ್ಲ ನನ್ನ ಸಹೋದರಿಗೆ ಬಿಡಿಸಿ ಹೇಳಿದಾಗ ಒಪ್ಪದೇ ಇದ್ದರೂ, ಇರುವ ಸತ್ಯವನ್ನು ಪ್ರಮಾಣ ಮಾಡಿದಾಗ ಅಪ್ಪಿದಳು. ಆ ಕ್ಷಣಕ್ಕೆನೋ ಒಂಥರಾ ಅಪಾರ ದುಃಖ. ಆದರೂ ವಿಧಿಯ ಕೈವಾಡ ಎಂದು ಸುಮ್ಮನಾದೆವು. ಈಗ ಆ ಪ್ರೀತಿಯ ಪರಿಪಾಟಿಲು ನೆನೆಸಿಕೊಂಡರೆ ನಗೆಪಾಟಲು ಅನಿಸುತ್ತಿದೆ

ಯೋಗಿ ಎಂ ‘ವಿಜಿ’

ಇದನ್ನೂ ಓದಿ: Valentine’s Day ಉಡುಗೊರೆ ತೆಗೆದುಕೊಳ್ಳುವ ಭರದಲ್ಲಿ ಈ ತಪ್ಪನ್ನು ಮಾಡದಿರಿ..!