Valentine’s Day 2021 | ಪ್ರೇಮಿಗಳ ದಿನ 2021; ಲಾಕ್​ಡೌನ್ ನನ್ನ ಪ್ರೀತಿಯನ್ನು ಫ್ಲಾಪ್ ಮಾಡಿತು..

Valentines Day : ನಂತರ ಲಾಕ್​ಡೌನ್ ಘೋಷಣೆಯಾಯಿತು. ಅವನನ್ನು ಒಮ್ಮೆಯಾದರೂ ಮಾತನಾಡಿಸಿ, ಅವನ ದನಿ ಕೇಳಬೇಕೆಂಬ ಆಸೆ ಮಣ್ಣಲ್ಲಿ ಮಣ್ಣಾಯಿತು.

  • ವೇದಶ್ರಿ ಜಿ ಎಮ್.
  • Published On - 17:06 PM, 14 Feb 2021
Valentine's Day 2021 | ಪ್ರೇಮಿಗಳ ದಿನ 2021; ಲಾಕ್​ಡೌನ್ ನನ್ನ ಪ್ರೀತಿಯನ್ನು ಫ್ಲಾಪ್ ಮಾಡಿತು..
ಕಲ್ಪನೆಯಲ್ಲಿ ಕೂಡ ಎಣಿಸಿರಲಿಲ್ಲ ಅದೇ ಅವನ ಕೊನೆಯ ಭೇಟಿ ಎಂದು..

ಯಾರೋ ನೀನು ನನಗೆ…ಅಂದು ಕಾಲೇಜಿನಲ್ಲಿ ಯಾವುದೋ ಕಾರ್ಯಕ್ರಮ ನಡೆಯುತ್ತಿತ್ತು.ಯಾರಾದರೂ ಪ್ರಶ್ನೆ ಇದ್ರೆ ಕೇಳಿ ಅಂದ್ರು, ನನಗೆ ಸಂಬಂಧವೇ ಇಲ್ಲದಂತೆ ಸುಮ್ಮನೆ ಕುಳಿತಿದ್ದ ನನ್ನನ್ನು ಹಿಂದೆ ತಿರುಗುವಂತೆ ಮಾಡಿದ್ದು ಒಬ್ಬ ಹುಡುಗ. ಅವನೇನೂ ಪ್ರಶ್ನೆ ಕೇಳಿದ. ಅವನ ಮುಖವನ್ನು ನೋಡುವ ಖುಷಿಯಲ್ಲಿ ಅವನೇನು ಹೇಳಿದ ಎಂಬುದೇ ನೆನಪಿಲ್ಲ. ಅವನ ಹುಣಿಮ್ಮೆಯಂತ ಮುಖ ಹಣೆಯಲ್ಲಿನ ಗಂಧ ನನ್ನನ್ನು ಅವನೆಡೆಗೆ ಸೆಳೆಯಿತು. ಅಂದೇ ಮನದ WhatsApp ನಲ್ಲಿ,ಅವನದೇ DP ಹಾಕಿಬಿಟ್ಟೆ. (Valentines Day)

ಅವನಂತೂ ತಾಜ್​ಮಹಲ್​ನಂತೆ ಸುಂದರ. ನಾನು ಗೋಧಿ ಬಣ್ಣ ಸಾಧಾರಣ ಎತ್ತರದ ಹುಡುಗಿ, ಅವನು ನನ್ನನು ತಿರುಗಿಯೂ ನೋಡಲಾರ ಎಂದು ಗೊತ್ತಿತ್ತು. ಹಾಗಾಗಿ ನಾನೇನು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಒಂದು ದಿನ ಕಾಲೇಜ್​ಗೆ ತಡವಾಗಿ ಓಡಿ ಬರುತ್ತಿದ್ದೆ. ಬಂದವಳೇ ಯಾರದೋ ಹೊಟ್ಟೆಗೆ ಗುದ್ದಿಬಿಟ್ಟೆ. ಮುಖ ಎತ್ತಿ ನೋಡಿದರೆ ಅದೇ ಹುಡುಗ ಮೊಬೈಲ್ ಟವರ್​ನಂತೆ ನಿಂತಿದ್ದ. ಅದೇ ಮೊದಲು ಅವನನ್ನು ಅಷ್ಟು ಹತ್ತಿರದಿಂದ ನೋಡಿದ್ದು. ನಾನು ಕ್ಷಮೆ ಕೇಳಿ ಮತ್ತೆ ಓಡಿ ಗೋಡೆಗೆ ಗುದ್ದಿಕೊಂಡೆ. ತಿರುಗಿ ನೋಡಿದರೆ ಆತ ನನ್ನನ್ನೇ ನೋಡಿ ನಗುತ್ತಿದ್ದ. ನಾನು ತಲೆ ಸವರಿಕೊಂಡು ಓಡಿ ಹೋದೆ. ಆತ ನಮ್ಮ ಕಾಲೇಜಿನಲ್ಲಿ ಅಂತಿಮ PG ಓದುತ್ತಿದ್ದ ಎಂಬುದು ಬಿಟ್ಟರೆ ಅವನ ಬಗ್ಗೆ ನನಗೇನು ಹೆಚ್ಚು ತಿಳಿಯಲೇ ಇಲ್ಲ. ತಿಳಿಯಲು ಪ್ರಯತ್ನಿಸಿ ಆಗಲಿಲ್ಲ. ಅವನ ತರಗತಿ ಗ್ರಂಥಾಲಯಕ್ಕೆ ಹತ್ತಿರವಿತ್ತು, ಹಾಗಾಗಿ ಅನೇಕ ಬಾರಿ ಓದುವ ನೆಪದಲ್ಲಿ ಅಲ್ಲಿಯೇ ಸುತ್ತುತ್ತಿದೆ.

ಅವನ ಫೋಟೊ ತೆಗೆಯುವಾಗ ನೋಡಿಬಿಟ್ಟ
ಬಸ್ ಸ್ಟ್ಯಾಂಡ್​ನಲ್ಲಿ ಬಸ್ಸಿಗಾಗಿ ಕಾದು ಕುಳಿತಿದ್ದೆ. ಅವನೂ ಅದೇ ಬಸ್ ನಿಲ್ದಾಣಕ್ಕೆ ಬಂದು ಕುಳಿತ. ಸರಿ, ಒಂದು ಫೋಟೋ ತೆಗೆಯೋಣ ಎಂದು ಕಷ್ಟಪಟ್ಟು ಫೋಟೋ ತೆಗೆಯುವಾಗ ಆತ ನೋಡಿಬಿಟ್ಟ. ನಾನು ಸೆಲ್ಫಿ ತೆಗೆಯುವಂತೆ ನಟಿಸಿ ಸುಮ್ಮನಾಗಿ ಬಿಟ್ಟೆ. ಒಮ್ಮೆ ಮಳೆ ಬರುವ ಸಂದರ್ಭದಲ್ಲಿ ನಾನು ಬಸ್ಸಿನ ಕಿಟಕಿಯಿಂದ ಇನ್ನೊಂದು ಬಸ್​ನಲ್ಲಿ ಕುಳಿತಿದ್ದ ಅವನ ಮುಖ ನೋಡಿದ್ದು ಈಗಲೂ ಬೆಚ್ಚಗಿನ ಭಾವನೆ ನೀಡುತ್ತದೆ. ಅದೇ ಬಸ್ ನಿಲ್ದಾಣದಲ್ಲಿ ದಿನವೂ ಆತನ ಮುಖ ದರ್ಶನದ ಭಾಗ್ಯ ದೊರೆಯುತ್ತಿತ್ತು.ಕಾಲೇಜಿನ ಕೊನೆಯ ದಿನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೊದಲ ಬಾರಿ ಸೀರೆ ಉಟ್ಟು ಬಂದಿದ್ದೆ. ಯಾರು ನೋಡುತ್ತಾರೋ ಇಲ್ಲವೋ.. ಅವನ ಕಣ್ಣಿಗೆ ಬೀಳಲೆಂದು ಹುಡುಕಿ ಹುಡುಕಿ ಸಾಕಾಯ್ತು. ಕೊನೆಗೆ ಒಂದು ಗೋಡೆಗೊರಗಿ ಮೊಬೈಲ್ ನೋಡುತ್ತ ಕೂತಿರುವುದು ಅವನೇ, ಎಂದು ತಿಳಿದ ಮೇಲೆ, ಗಟ್ಟಿ ಮನಸ್ಸು ಮಾಡಿ ಸೀರೆಯಲ್ಲಿ ಒಂದೊಂದೆ ಹೆಜ್ಜೆ ಇಡುತ್ತ ಹೋಗಿ ನಿಂತೆ. ಇನ್ನೇನು ಕರೆಯಬೇಕು, ವಿಲ್ಲನ್​ನಂತೆ ನನ್ನ ಗೆಳತಿ ಬಂದಳು. ‘ಬಸ್​ಗೆ ಟೈಮಾಯ್ತು ಬಾ’ ಎಂದು ಕರೆದುಕೊಂಡು ಹೋದಳು. ಕಲ್ಪನೆಯಲ್ಲಿ ಕೂಡ ಎಣಿಸಿರಲಿಲ್ಲ ಅದೇ ಅವನ ಕೊನೆಯ ಭೇಟಿ ಎಂದು..

ಲಾಕ್​ಡೌನ್ ನಂತರ ಕಾಣಲೇ ಇಲ್ಲ
ನಂತರ ಲಾಕ್​ಡೌನ್ ಘೋಷಣೆಯಾಯಿತು. ಅವನನ್ನು ಒಮ್ಮೆಯಾದರೂ ಮಾತನಾಡಿಸಿ, ಅವನ ದನಿ ಕೇಳಬೇಕೆಂಬ ಆಸೆ ಮಣ್ಣಲ್ಲಿ ಮಣ್ಣಾಯಿತು. ಅವನಿಗೆ ನನ್ನನ್ನು ನೋಡಿದ ನೆನಪಿದೆಯೋ ಇಲ್ಲವೋ ತಿಳಿಯದು. ಆತನ ಮೇಲಿರುವುದು ಪ್ರೀತಿಯೋ, ಮೋಹವೋ ನನಗಂತೂ ಗೊತ್ತಿಲ್ಲ. ಆತ ನನ್ನ ಜೀವನದ ಒಂದು ಸುಂದರ ಅಧ್ಯಾಯ. ಎಲ್ಲರಿಗೂ ಜೀವನದಲ್ಲಿ ಜಾಗ ನೀಡಲಾಗದು, ಆದರೆ ಮನಸ್ಸಿನಲ್ಲಿ ಜಾಗ ನೀಡಬಹುದು. ಹಾಗೇ ನಿನ್ನ ನೆನಪು ಸದಾ ಎದೆಯಾಳದಲ್ಲಿ ಶಿಲ್ಪವಾಗಿದೆ. ಎಲ್ಲಾದರೂ ಗಂಧ ನೋಡುವಾಗ, ಗಂಧವನ್ನು ಹಣೆಗೆ ಇಡುವಾಗ ನಿನ್ನದೇ ನೆನಪು. ಮತ್ತೆ ನಿನ್ನನ್ನು ಮಾತನಾಡಿಸುವುದು ಬೇಡ. ಅಂತಹ ಸಂದರ್ಭ ಬಂದರೂ ನಾನು ಮೌನಿಯಾಗುವೆ, ನೀನು ನನ್ನ ಕನಸಿನ ಹೀರೋ ಆಗೇ ಇದ್ದುಬಿಡು..

ವೇದಶ್ರಿ ಜಿ ಎಮ್
ಎಂಸಿಜೆ ವಿಭಾಗ
ಎಸ್​ಡಿಎಂ ಕಾಲೇಜು, ಉಜಿರೆ

ಇದನ್ನೂ ಓದಿ: Valentine’s Day 2021 | ಪ್ರೇಮಿಗಳ ದಿನ 2021; ಝೆರಾಕ್ಸ್ ಮಾಡಿಸಲು ಹೋದಾಗ ಕಂಡ ಹುಡುಗನ ಮೇಲೆ ಲವ್ ಆಯಿತು..!