ಕೆ ಸತ್ಯನಾರಾಯಣ (K Satyanarayan) ಅವರ “ಜೈಲು ಕಥನ” ಈ ಪುಸ್ತಕದಲ್ಲಿ ಒಟ್ಟು 23 ಕಥನಗಳಿವೆ. ಪ್ರತಿಯೊಂದೂ ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ನಿರೂಪಣೆಯ ಧಾಟಿಯಲ್ಲಿ ಮತ್ತು ಕಥನದ ಉದ್ದೇಶದಲ್ಲಿ ಕೂಡ ಇವು ವಿಭಿನ್ನವಾಗಿ, ಏಕತಾನತೆಯನ್ನು ಹೊಂದಿಲ್ಲದೇ ಇರುವುದು ವಿಶೇಷ. ಈ ಕಥನಗಳು ಎಲ್ಲಿಯೂ ಬೋರ್ ಹೊಡೆಸದೇ ಸರಾಗವಾಗಿ ಓದಿಸಿಕೊಂಡು ಹೋಗುವುದು ಮಾತ್ರವಲ್ಲ ಕೆಲವೊಂದು ಅತ್ಯಂತ ಕೌತುಕದ ಕಥನಗಳಾಗಿಯೂ ಓಡಿಸಿಕೊಂಡು ಹೋಗುತ್ತವೆ. ಆದರೆ ಈ ಎಲ್ಲ ಸಾಹಿತ್ಯಿಕ ಮೆಚ್ಚುಗೆಯನ್ನೂ ಮೀರಿ, ಕೃತಿಕಾರನನ್ನೂ ಮೀರಿ ನಿಲ್ಲುವ ಗುಣ, ಶಕ್ತಿ ಎರಡೂ ಈ ಕೃತಿಗಿರುವುದು ವಿಶೇಷ. ಅದು ಬಹುಶಃ ಈ ಕೃತಿ ಮೌನವಾಗಿ ಆಗ್ರಹಿಸುವ, ನಮಗೆ ನಾವೇ ಕೇಳಿಕೊಳ್ಳಬೇಕಾದ ಮತ್ತು ನಮಗೆ ನಾವೇ ಕೊಟ್ಟುಕೊಳ್ಳಬೇಕಾದ ಕೆಲವು ಪ್ರಶ್ನೆಗಳಿಗಾಗಿ ಎನಿಸುತ್ತದೆ.
ಜೈಲು ಪ್ರಪಂಚದಲ್ಲಿ ಬದುಕು ಹೀಗೆಲ್ಲ ಇದೆಯೋ ಇಲ್ಲವೋ ಎಂಬುದಲ್ಲ. ಈ ರೀತಿಯ ಕತೆಗಳನ್ನು ಸರ್ಕಾರದ ನಿವೃತ್ತ ಹಿರಿಯ ಅಧಿಕಾರಿಯೊಬ್ಬರು ಯಾಕೆ ಬರೆದರು ಎಂಬುದೂ ಅಲ್ಲ.
ಈ ಕತೆಗಳಿಗೆ ನಾವು, ನೀವು ಬದುಕುತ್ತಿರುವ ಸಮಾಜ ಕಾರಣವಾಗಿದೆಯೇ?
ಹಾಗಿದ್ದರೆ, ಯಾಕೆ ನಾವೆಲ್ಲ ಇದನ್ನು ಗಮನಿಸಿಲ್ಲ? ಗಮನಿಸಿದರೂ ಗಮನಿಸದಂತೆ ಜಾಣ ಕುರುಡರಾಗಿದ್ದೇವೆಯೇ? ಇಂತಹ ಪ್ರಶ್ನೆಗಳು ಮೂಡಿದರೆ ಬರವಣಿಗೆ, ಓದು ಎರಡೂ ಗೆದ್ದಂತೆ.”
ಈ ಕೃತಿಯ ಕಥನಗಳ ಬಗ್ಗೆ ಸ್ಥೂಲವಾಗಿ ಹೀಗೆ ಹೇಳಬಹುದು:
ಓದಿದ ನಂತರವೂ ಸಂವೇದನೆಯ ನೆಲೆಯಲ್ಲಿ ಬಹುಕಾಲ ನಮ್ಮನ್ನು ಕಾಡುತ್ತಲೇ, ಉತ್ತರವಿಲ್ಲದ ಪ್ರಶ್ನೆಯಾಗಿ ಉಳಿಯುವ ಕಥನಗಳು;
ಯಾವುದೋ ಒಂದು ಅವ್ಯಕ್ತ ಬಗೆಯಲ್ಲಿ ನಮ್ಮ ಅಂತಃಸ್ಸಾಕ್ಷಿಯನ್ನು ಚುಚ್ಚುವ ಮತ್ತು ಆ ಕಾರಣಕ್ಕೆ ಬದುಕಿನ ಕುರಿತೇ ಜಿಜ್ಞಾಸೆ ಹುಟ್ಟಿಸುವಂಥ ಕಥನಗಳು;
ತಮ್ಮ ಅಪರಾಧದ ಬಗ್ಗೆ ಅತ್ಯಂತ ಸ್ಪಷ್ಟ ನಿಲುವು, ಸಮರ್ಥನೆಯುಳ್ಳ, ಒಂದಿಷ್ಟೂ ಗೊಂದಲವಾಗಲಿ ಅಪರಾಧಿ ಪ್ರಜ್ಞೆಯಾಗಲಿ ಇಲ್ಲದ – ಕೆಲವೊಮ್ಮೆ ನಾವು ಒಪ್ಪಬಹುದಾದ ಮತ್ತು ಕೆಲವೊಮ್ಮೆ ಒಪ್ಪಲಾಗದ ಮಂದಿಯ ಕಥನಗಳು;
ಜೈಲಿನ ಒಳಗೇ ಸಕಲ ಸುಖ ಸೌಭಾಗ್ಯ ದಕ್ಕಿಸಿಕೊಂಡವರೂ, ಮಳೆಗೆ ಕೂಡ ನೆರಳಿನಾಶ್ರಯವಿಲ್ಲದವರೂ ಒಟ್ಟೊಟ್ಟಿಗೇ ಇರುವ ವಿಪರ್ಯಾಸಕರ ಸಂಗತಿಯ ಕುರಿತು ತಣ್ಣಗಿನ ದನಿಯಲ್ಲಿ ಹೇಳುವ ಕಥನಗಳು;
ರಂಗಾಯಣ, ಜೈಲು ಕೇರಿ, ತನಿಖೆ-ಶಿಕ್ಷೆ ಕುರಿತ, ನಾವು ಬದುಕುತಿರುವ ವ್ಯವಸ್ಥೆಯ ಕುರಿತೇ ಕೆಲವೊಂದು ಜಿಜ್ಞಾಸೆಗಳಿಗೆ ಎಡೆ ಮಾಡಿಕೊಡುವ ವಿಶಿಷ್ಟ ಕಥನಗಳು;
ಜೈಲು ಕೇರಿಯಂಥ ಕಥನಗಳಂತೂ ನಮ್ಮ ಬಗ್ಗೆ ನಮಗೇ ಮುಜುಗರ, ನಾಚಿಕೆ ಹುಟ್ಟಿಸುವಂಥ ವಿವರಗಳಿಂದ ತುಂಬಿವೆ. ಒಟ್ಟಾರೆಯಾಗಿ ಈ ಕೃತಿ ನಮ್ಮೆದುರು ತೆರೆದಿಡುವುದು ನಮಗೆ ತಿಳಿದಿಲ್ಲದ, ನಮಗೆ ತಿಳಿದಿರಬೇಕು ಎಂದು ಯಾವತ್ತೂ ಅನಿಸದ, ಆದರೆ ತೀರ ನಮಗೇ ಸಂಬಂಧಿಸಿದ ಮತ್ತು ನಮ್ಮ ಬದುಕಿನ ಯಾವ ಒಂದು ಸಣ್ಣ ತಿರುವೂ ಇದನ್ನು ನಮ್ಮದೇ ಆಗಿಸಿಬಿಡಬಹುದಾಗಿದ್ದ ಜಗತ್ತನ್ನು. ಹಾಗಾಗಿಯೇ ಓದುತ್ತ ಓದುತ್ತ ನಮ್ಮೊಳಗೇ ಛಳ್ಳೆನ್ನಿಸುವ ಒಂದು ನಡುಕವನ್ನು ಇದು ಹುಟ್ಟಿಸಿದರೆ ಅಚ್ಚರಿಯೇನಿಲ್ಲ. ಏಕೆಂದರೆ, ಈ ಜಗತ್ತು ನಮ್ಮ ಬದುಕಿನ ಜಸ್ಟ್ ಮಿಸ್ ಅವಕಾಶವಾಗಿರುವ ಸಾಧ್ಯತೆಯೊಂದು ಸದಾ ನಮ್ಮ ನೆರಳಿನಂತೆಯೇ ಇರುವಂಥದ್ದು. ಈ ಕೃತಿ ಅಷ್ಟನ್ನು ತಪ್ಪದೇ ನಮ್ಮ ಪ್ರಜ್ಞೆಗೆ ಮುಟ್ಟಿಸುತ್ತದೆ.
ಈ ಕೃತಿಯ ಉದ್ದಕ್ಕೂ ಮೇಲೆ ಉಲ್ಲೇಖಿಸಿದ ಪ್ರಶ್ನೆ ನಮ್ಮನ್ನು ನಿರಂತರವಾಗಿ ಕುಟುಕುತ್ತಲೇ ಇರುತ್ತದೆ ಎನ್ನುವುದು ಕೂಡ ನಿಜ. ಆದರೆ ಅದಕ್ಕಿಂತ ಹೆಚ್ಚು ತೀವ್ರವಾಗಿ ಕಾಡಬಹುದಾದ ಪ್ರಶ್ನೆಗಳಿವೆ.
ನನ್ನನ್ನು ಮೇಲಿನ ಪ್ರಶ್ನೆಗಳಿಗಿಂತ ಹೆಚ್ಚಾಗಿ ಕಾಡಿದ್ದು, ನನ್ನಲ್ಲೇ ಇರುವ ಸಿಟ್ಟು, ದುಡುಕು, ಸಿಟ್ಟಿನ ಉಪಶಮನಕ್ಕೆ ಆಶ್ರಯಿಸುವ ವಿಧ್ವಂಸಕವಾದ ಕ್ರಿಯೆಗಳು, ಒಂದೇ ಒಂದು ಕ್ಷಣದ ತಪ್ಪು ಇಡೀ ಬದುಕೆಲ್ಲ ಪರಿತಪಿಸಬಹುದಾದ ಪರಿಣಾಮಕ್ಕೆ ಕಾರಣವಾಗಬಹುದಾದ ಸಾಧ್ಯತೆಯನ್ನು ನಾನೇ ಹಾದು ಬಂದ ಘಟನೆಗಳು, ಕ್ಷಣಗಳು. ಇದರ ಜೊತೆಗೇ ತಪ್ಪು ನಡೆದಾಗ ಅದನ್ನು ಒಪ್ಪಿಕೊಂಡರೂ ಸಮರ್ಥನೆಗೆ ಇಳಿಯುವ, ಕಾರಣಗಳನ್ನು ಕೊಡುವ, ನಾನು ಸಂಭಾವಿತನೇ ಆಗುಳಿಯುವುದಕ್ಕೆ ಮಾಡಬಹುದಾದ ಎಲ್ಲ ಪ್ರಯತ್ನಗಳಲ್ಲಿ ತೊಡಗುವ ನನ್ನ ಮನಸ್ಸು. ಇದಕ್ಕೆ ವ್ಯತಿರಿಕ್ತವಾಗಿ ಗಿಲ್ಟ್ ಎನ್ನುವುದು ನನ್ನ ಬಹುದೊಡ್ಡ ತೊಡಕಾಗಿ ಬಿಡುವ, ಅದಿಲ್ಲದೇ ಬದುಕುತ್ತಿರುವ ಯಶಸ್ವೀ ಮಾಡೆಲ್ಲುಗಳೆದುರು ಗಿಲ್ಟ್‌ನಿಂದಾಗಿಯೇ ಫೈಲ್ಯೂರ್ ಅನಿಸಿಕೊಳ್ಳುವ ವಿಪರ್ಯಾಸದ ಕುರಿತು ಇರುವ ಭಯ. ತಪ್ಪು ಮಾಡಿಯೂ ಗಿಲ್ಟ್ ಇಲ್ಲದೇ ಬದುಕಬಹುದಾದ ಮನಸ್ಥಿತಿಯೊಂದನ್ನು ಸಾಧಿಸಿಕೊಳ್ಳುವುದೇ ಬದುಕುವ ದಾರಿ ಎಂದು ತಿಳಿದ ನನ್ನಂಥ ಮಧ್ಯಮವರ್ಗದ ಮನೋಧರ್ಮ. ಸರಿ ಯಾವುದು, ತಪ್ಪು ಯಾವುದು ಮತ್ತು ಅದನ್ನು ನಿರ್ಣಯಿಸುವವರು ಯಾರು ಮುಂತಾದ ಪ್ರಶ್ನೆಗಳು.
ಇದನ್ನೂ ಓದಿ: ಅನುಭವ ಕಥನ: ದೇವರ ನಾಡಲ್ಲಿ ಕಣ್ಮನ ಸೆಳೆದ ‘ಕೇರಳೀಯಂ’ ಸೊಬಗು
ಈ ಪ್ರಶ್ನೆಗಳಿಗೆ ಖಚಿತ ಉತ್ತರವೇನಿಲ್ಲ. ಇವು ಸದಾ ಕಾಲ ಕಾಡುತ್ತಲೇ ಇರುವ ಸತ್ತವರ ನೆರಳಿನಂತೆ, ನಮ್ಮೊಂದಿಗೇ ಇರತಕ್ಕ ಪ್ರಶ್ನೆಗಳು ಎನ್ನುವುದು ನಿಜ. ಆದರೆ ಉತ್ತರ ಇರದಿದ್ದರೂ ಕೂಡ ಇಂಥ ಪ್ರಶ್ನೆಗಳ ಜೊತೆ ಆಗಾಗ ಒಡನಾಡುವುದು, ಇವುಗಳಿಗೆ ಮತ್ತೆ ಮತ್ತೆ ಮುಖಾಮುಖಿಯಾಗುವುದು ಮುಖ್ಯ. ಇದು ಕೆ ಸತ್ಯನಾರಾಯಣರ ಕೃತಿಯ ಬಹುಮುಖ್ಯ ಕಾಣ್ಕೆ. ಇದಕ್ಕಾಗಿ ನಾವೆಲ್ಲರೂ ಅವರಿಗೆ ಋಣಿಯಾಗಿರಬೇಕು. ಇಂಥ ಕೃತಿಗಳು ಎಂದಲ್ಲ, ಯಾವುದೇ ಸಾಹಿತ್ಯ ಕೃತಿ ಓದುಗನಿಗೆ ಬಹುಮುಖ್ಯವಾಗಿ ನೀಡಬೇಕಾದುದೇ ಇಂಥ ಒಂದು ಕೈಗನ್ನಡಿಯನ್ನು. ಬದುಕನ್ನು, ತನ್ನನ್ನು, ತನ್ನ ಮನಸ್ಸನ್ನು, ಒಟ್ಟಾರೆಯಾಗಿ ಮನುಷ್ಯ ಜೀವಿಯನ್ನು ಒಂದು ಅಂತರವಿಟ್ಟುಕೊಂಡು ನೋಡಬಲ್ಲ, ನೋಡಿ ಪ್ರಶ್ನಿಸಿಕೊಳ್ಳಬಲ್ಲ ಮತ್ತು ಅದರಿಂದ ಬೆಳೆಯಬಲ್ಲ ಸಾಧ್ಯತೆಯನ್ನು ಒದಗಿಸುವುದು. ಇದಕ್ಕಾಗಿ ಕೆ ಸತ್ಯನಾರಾಯಣ ಅವರಿಗೆ ಅಭಿನಂದನೆಗಳು ಸಲ್ಲುತ್ತವೆ.
ಮತ್ತಷ್ಟು ವಿಶೇಷ ಬರಹಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ