ಮಹಾದೇವ ಚಂದ್ರನನ್ನು ತನ್ನ ತಲೆಯ ಮೇಲೆ ಧಾರಣೆ ಮಾಡಿರುವುದರ ಹಿಂದೆ ಒಂದು ರೋಚಕ ರಹಸ್ಯವಿದೆ. ಸಾಮಾನ್ಯವಾಗಿ ಶಿವನ ತಲೆಯ ಮೇಲೆ ಅರ್ಧ ಚಂದ್ರಾಕೃತಿ ಕಂಡು ಬರುತ್ತದೆ. ಶಿವನ ಫೋಟೋಗಳು, ದೃಶ್ಯಗಳಲ್ಲೆಲ್ಲಾ ಭಗವಂತನ ಶಿರದ ಮೇಲೆ ಚಂದ್ರದೇವ ನೆಲೆಸಿರ್ತಾನೆ. ಅಷ್ಟಕ್ಕೂ, ಶಿವನ ತಲೆಯ ಮೇಲೆ ಚಂದ್ರ ನೆಲೆಸಿರೋದೇಕೆ? ಶಿವ ಚಂದ್ರದೇವನಿಗೆ ತಲೆಯ ಮೇಲೆ ಸ್ಥಾನ ನೀಡಿರೋದೇಕೆ?. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ದಕ್ಷ ಪ್ರಜಾಪತಿ ತನ್ನ ಪುತ್ರಿ ರೇವತಿಗೆ ಅಳಿಯ ಚಂದ್ರದೇವ ಪತ್ನಿಸ್ಥಾನ ನೀಡುತ್ತಿಲ್ಲ ಅಂತಾ ಕೋಪಗೊಂಡು ಚಂದ್ರನಿಗೆ ಮೃತ್ಯುದಂಡದ ಶಾಪ ನೀಡ್ತಾನೆ. ಈ ಶಾಪದಿಂದ ನವಗ್ರಹಗಳಲ್ಲಿ ಒಬ್ಬನಾದ ಚಂದ್ರದೇವ ಕುಸಿದು ಬೀಳ್ತಾನೆ. ಇದ್ರಿಂದ ಇಡೀ ಸೃಷ್ಟಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತೆ. ಭೀಕರ ಪ್ರಳಯ ಉಂಟಾಗುತ್ತೆ. ಭಯಂಕರ ಜ್ವಾಲಾಮುಖಿ ಅಪ್ಪಳಿಸುತ್ತೆ, ಸಿಡಿಲಿನ ಆರ್ಭಟ ಜೋರಾಗುತ್ತೆ. ಸಕಲ ಲೋಕಗಳಲ್ಲೂ ನಡುಕ ಉಂಟಾಗುತ್ತೆ. ತ್ರಿಮೂರ್ತಿಗಳೆಲ್ಲಾ ಬೆಚ್ಚಿಬೀಳ್ತಾರೆ.
ಸೃಷ್ಟಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾದ ನಂತರ ನಾರದ ಮಹರ್ಷಿಗಳು ಮಹಾದೇವನ ಬಳಿ ಬಂದು ಪ್ರಜಾಪತಿ ದಕ್ಷ ಚಂದ್ರನಿಗೆ ಕೊಟ್ಟ ಶಾಪ ಹಾಗೂ ಅದರ ಪರಿಣಾಮದ ಬಗ್ಗೆ ತಿಳಿಸ್ತಾರೆ. ನಾರದ ಮಹರ್ಷಿಗಳ ಮಾತನ್ನು ಕೇಳಿದ ಮಹಾದೇವ ಕುಪಿತಗೊಳ್ತಾನೆ. ನಂತರ ಪರಮೇಶ್ವರ ಅತ್ಯಂತ ದೈತ್ಯಾಕಾರವಾಗಿ ಬೆಳೆದು ಬ್ರಹ್ಮಾಂಡಕ್ಕೂ ವ್ಯಾಪಿಸ್ತಾನೆ. ದೈತ್ಯಾಕಾರವಾಗಿ ಬೆಳೆದ ಮಹಾದೇವ ಸೃಷ್ಟಿಯನ್ನು ರಕ್ಷಿಸಲು ದಕ್ಷನ ಸಂಹಾರ ಅನಿವಾರ್ಯ ಅಂತಾ ಯೋಚಿಸ್ತಾನೆ. ಅಷ್ಟರಲ್ಲೇ ನಾರದ ಮಹರ್ಷಿಗಳು, ಬ್ರಹ್ಮ ಹಾಗೂ ಮಹಾವಿಷ್ಣು ಬಂದು ಮಹಾದೇವನ ಕೋಪವನ್ನು ಶಾಂತಗೊಳಿಸಲು ನಿರ್ಧರಿಸ್ತಾರೆ. ನಂತರ ಬ್ರಹ್ಮ ಹಾಗೂ ವಿಷ್ಣು ಜೊತೆಯಾಗಿ ಸತಿದೇವಿಯಿಂದ ಶಿವನಿಗೆ ಪೂಜೆ ಸಲ್ಲಿಸಿ, ಶಿವನನ್ನು ಶಾಂತಗೊಳಿಸ್ತಾರೆ.
ಇತ್ತ ಅಸಲಿ ಚಂದ್ರನ ದೇಹದಲ್ಲಿನ ತೇಜಸ್ಸು ಕ್ಷಣ ಕ್ಷಣಕ್ಕೂ ಕ್ಷೀಣಿಸ್ತಿದ್ರೆ, ಅತ್ತ ದಕ್ಷ ಪ್ರಜಾಪತಿ ಮಹಾವಿಷ್ಣುವಿನ ಸಲಹೆ ಮೇರೆಗೆ ಮತ್ತೊಂದು ಹೊಸ ಚಂದ್ರಗ್ರಹ ನಿರ್ಮಾಣದ ಕಾರ್ಯದಲ್ಲಿ ತೊಡಗ್ತಾನೆ. ದಕ್ಷನಿಂದ ನಿರ್ಮಿತವಾಗೋ ಹೊಸ ಚಂದ್ರನಿಗೆ ಕೇವಲ ಪ್ರಾಣವಾಯುವಷ್ಟೇ ಆವಾಹನೆ ಆಗಬೇಕಾಗಿರುತ್ತೆ. ದಕ್ಷನಿಂದ ಹೊಸ ಚಂದ್ರಗ್ರಹ ನಿರ್ಮಾಣವಾಗ್ತಿದ್ದಂತೆ ಅಸಲಿ ಚಂದ್ರನ ದೇಹದಲ್ಲಿನ ಪ್ರಾಣವಾಯು ಸಂಪೂರ್ಣವಾಗಿ ನಶಿಸಲು ಆರಂಭವಾಗುತ್ತೆ. ಇದನ್ನು ಕಂಡು ಚಂದ್ರನ ಪರಿವಾರದವರು ಅತೀವ ದುಃಖ ಪಡ್ತಾರೆ.
ಅಸಲಿ ಚಂದ್ರನ ದೇಹವಿರೋ ಸ್ಥಳಕ್ಕೆ ಸತಿದೇವಿ ಮತ್ತು ನಾರದ ಮುನಿಗಳು ಬಂದು ಶ್ರದ್ಧಾಭಕ್ತಿಯಿಂದ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ ಶಿವನನ್ನು ಆರಾಧಿಸ್ತಾರೆ. ಮಹಾಮೃತ್ಯುಂಜಯ ಮಂತ್ರದ ಪಠಣೆ ಮಾಡ್ತಿದ್ದಂತೆ ಸಾಕ್ಷಾತ್ ಪರಮೇಶ್ವರನೇ ಪ್ರತ್ಯಕ್ಷನಾಗ್ತಾನೆ. ಮಹಾದೇವ ಚಂದ್ರನ ದೇಹದ ಬಳಿ ಬಂದು ಆತನಿಗೆ ಪ್ರಾಣವನ್ನು ನೀಡ್ತಾನೆ. ಇದ್ರಿಂದ ಚಂದ್ರನ ದೇಹದಲ್ಲಿ ಪ್ರಾಣವಾಯು ಬಂದು ಆತ ಎಚ್ಚರಗೊಂಡು ಮಹಾದೇವನಿಗೆ ನಮಸ್ಕರಿಸ್ತಾನೆ. ಇತ್ತ ದಕ್ಷನಿಂದ ನಿರ್ಮಾಣವಾಗ್ತಿದ್ದ ಹೊಸ ಚಂದ್ರಗ್ರಹ ಕುಸಿದು ಬೀಳುತ್ತೆ. ನಂತರ ಪರಮೇಶ್ವರ ಚಂದ್ರನಿಗೆ ಒಂದು ಅಚ್ಚರಿಕರ ಸಂಗತಿಯನ್ನು ತಿಳಿಸ್ತಾನೆ. ಅದೇನಂದ್ರೆ ದಕ್ಷನ ಶಾಪದಿಂದ ಚಂದ್ರನಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ದಕ್ಷನ ಶಾಪದ ಪ್ರಕಾರ ಚಂದ್ರ ಯಥಾಪ್ರಕಾರ ಕರಗುತ್ತಾ ಹೋಗ್ತಾನೆ ಅಂತಾ ಶಿವ ಚಂದ್ರನಿಗೆ ಹೇಳ್ತಾನೆ.
ಅಂದಿನಿಂದ ಮಹಾದೇವ ಚಂದ್ರದೇವನನ್ನು ತನ್ನ ಶಿರದ ಮೇಲೆ ಧಾರಣೆ ಮಾಡ್ತಾನೆ. ದಕ್ಷ ಪ್ರಜಾಪತಿಯ ಶಾಪದ ಕಾರಣಕ್ಕಾಗಿಯೇ ಚಂದ್ರನು ಪ್ರತಿ 15 ದಿನಗಳ ಕಾಲ ಆಕಾರದಲ್ಲಿ ಚಿಕ್ಕದಾಗಿ ಕರಗುತ್ತಾ ಹೋಗ್ತಾನೆ. ನಂತರ ಮಹಾದೇವನ ಅಭಯದ ಕಾರಣದಿಂದಾಗಿ ಮತ್ತೆ 15 ದಿನಗಳ ಕಾಲ ಆಕಾರದಲ್ಲಿ ವೃದ್ಧಿಸುತ್ತಾ ವಾಸ್ತವ ಆಕಾರಕ್ಕೆ ಬರ್ತಾನೆ. ಇದನ್ನೇ ಅಮಾವಾಸ್ಯೆ, ಹುಣ್ಣಿಮೆ ಅಂತಾ ಚಂದ್ರನ ಆಕಾರದ ಮೂಲಕ ನಾವು ತಿಳಿಯುತ್ತೇವೆ. ಹೀಗೆ ಚಂದ್ರ ಶಿವನ ಶಿರದಲ್ಲಿ ನೆಲೆಗೊಳ್ಳೋದಲ್ಲದೇ, ದಕ್ಷನ ಶಾಪದಿಂದಲೂ ವಿಮುಕ್ತನಾಗ್ತಾನೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
Published On - 8:29 am, Wed, 30 September 20