ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವಂತೆ ಬ್ರಹ್ಮನಿಗೆ ಸರಸ್ವತಿ ಒಬ್ಬಳೇ ಮಡದಿ ಅಂತಾ ಗೊತ್ತು. ಆದ್ರೆ ಬ್ರಹ್ಮನ ಎರಡನೇ ಮಡದಿ ಯಾರು? ಬ್ರಹ್ಮ ಎರಡನೆ ವಿವಾಹವಾದದ್ದು ಏಕೆ? ಅನ್ನೋದರ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ.
ರಾಜಸ್ಥಾನದ ಪುಷ್ಕರ ನಗರದಲ್ಲಿ ಹಿಂದೆ ವಜ್ರನಾಭ ಎಂಬ ರಾಕ್ಷಸ ಅಟ್ಟಹಾಸದಿಂದ ಮರೆಯುತ್ತಿದ್ದ. ವಜ್ರನಾಭ ತನ್ನ ಅಟ್ಟಹಾಸದಿಂದ ದೇವಾದಿ ದೇವತೆಗಳಿಗೂ, ಜನಸಾಮಾನ್ಯರಿಗೂ ಇನ್ನಿಲ್ಲದಂತೆ ಉಪದ್ರವ ನೀಡುತ್ತಿದ್ದ. ವಜ್ರನಾಭನ ಅಟ್ಟಹಾಸದಿಂದ ಬೆಸತ್ತ, ದೇವಾನುದೇವತೆಗಳು, ಜನಸಾಮಾನ್ಯರು ಬ್ರಹ್ಮದೇವನಿಗೆ ರಾಕ್ಷಸನ ಅಟ್ಟಹಾಸದಿಂದ ಪಾರು ಮಾಡುವಂತೆ ಮೊರೆಯಿಡುತ್ತಾರೆ.
ನಾಲ್ಕು ದಿಕ್ಕುಗಳಿಗೂ ದೇವಾದಿ ದೇವತೆಗಳನ್ನು ಕಾವಲು ಕಾಯಲು ನಿಲ್ಲಿಸಿ, ಬ್ರಹ್ಮದೇವ ಯಜ್ಞ ಮಾಡಲು ಆರಂಭಿಸ್ತಾನೆ. ಯಾವ ಉಪಟಳವು ಇಲ್ಲದೆ ಯಜ್ಞ ಸಾಂಗೋಪವಾಗಿ ಸಾಗಿ, ಹವಿಸ್ಸನ್ನು ಕೊಡುವ ಹಂತಕ್ಕೆ ಬರುತ್ತದೆ. ದಾನವನ ಅಟ್ಟಹಾಸವನ್ನು ಅಳಿಸಿ ಹಾಕಲು ಬ್ರಹ್ಮದೇವ ಕೈಗೊಂಡ ಯಜ್ಞಕ್ಕೆ ಹವಿಸ್ಸು ನೀಡುವ ಸಮಯದಲ್ಲಿ ಒಂದು ವಿಘ್ನ ಎದುರಾಯಿತು. ಹಾಗೆ ಎದುರಾದ ವಿಘ್ನನವೇ ಬ್ರಹ್ಮನ ಮಡದಿ ಸರಸ್ವತಿ, ಸಮಯಕ್ಕೆ ಸರಿಯಾಗಿ ಯಜ್ಞಕ್ಕೆ ಬಾರದೇ ಇದ್ದಿದ್ದು.
ರಾಜಸ್ಥಾನದ ಪುಷ್ಕರ್ನಲ್ಲಿರುವ ಬ್ರಹ್ಮದೇವನ ದೇವಸ್ಥಾನದ ವಿಶೇಷತೆ:
ಹವಿಸ್ಸು ನೀಡುವ ಸುಮುಹೂರ್ತ ಮೀರುವುದನ್ನ ಅರಿತ ಬ್ರಹ್ಮದೇವ ಯಜ್ಞಕ್ಕೆ ಆಗಮಿಸಿದ ಗೂರ್ಜ ಸಮುದಾಯದ ಗಾಯತ್ರಿ ಎಂಬುವವಳನ್ನು ಮದುವೆಯಾಗಿ, ಇಬ್ಬರೂ ಸತಿ-ಪತಿಗಳಾಗಿ ಆಚರಣೆ ಮುಂದುವರೆಸುತ್ತಾರೆ. ಕೆಲ ಸಮಯದ ನಂತರ ಸರಸ್ವತಿ ದೇವಿಯು ಅಲ್ಲಿ ಬಂದು ತನ್ನ ಪತಿಯ ಪಕ್ಕದಲ್ಲಿ ಇನ್ನೊಬ್ಬಳು ಕುಳಿತಿರುವುದನ್ನು ಸಹಿಸಲಾರದೆ ಕೋಪಗೊಳ್ಳುತ್ತಾಳೆ.
ಸೃಷ್ಟಿಕರ್ತ ಬ್ರಹ್ಮನಿಗ್ಯಾಕಿಲ್ಲ ಪೂಜೆ?
ಕೋಪಗೊಂಡ ಸರಸ್ವತಿಯು ಬ್ರಹ್ಮನನ್ನು ಕುರಿತು ಇನ್ನು ಮುಂದೆ ಜಗತ್ತಿನಲ್ಲಿ ನಿನ್ನನ್ನು ಯಾರೂ ಪೂಜಿಸದಿರಲಿ ಎಂಬ ಶಾಪವನ್ನು ನೀಡುತ್ತಾಳೆ. ಬ್ರಹ್ಮದೇವನಿಗೆ ಅಂದು ಸರಸ್ವತಿ ಶಾಪ ನೀಡಿದ್ದಲ್ಲದೆ, ಯಜ್ಞಕ್ಕೆ ತಡವಾಗಿ ಬರಲು ಕಾರಣರಾದ ಇನ್ನಿಬ್ಬರಿಗೂ ಘೋರವಾದಂತಹ ಶಾಪವನ್ನು ನೀಡ್ತಾಳೆ. ಸರಸ್ವತಿಯಿಂದ ಹಾಗೇ ಶಾಪಗ್ರಸ್ತರಾದವರೆ ಲಕ್ಷ್ಮೀ ಮತ್ತು ಇಂದ್ರ.
ಸರಸ್ವತಿಯ ಈ ಶಾಪ ಕಾರಣದಿಂದಾಗಿಯೇ ಮಹಾಲಕ್ಷ್ಮೀ ವೈಕುಂಠವನ್ನೂ, ವಿಷ್ಣುವನ್ನು ತೊರೆದು ಭೂಲೋಕಕ್ಕೆ ಬರುವಂತಾಗಿದ್ದು. ಸರಸ್ವತಿ ಯಾವಾಗ ಶಾಪ ನೀಡಿದಳೋ ಅಲ್ಲೇ ಇದ್ದ ಗಾಯಿತ್ರಿ ದೇವಿಯು ತಾನು ಕೈಯಲ್ಲಿ ಹಿಡಿದಿದ್ದ ಅಮೃತವನ್ನು ಅಗ್ನಿಗೆ ಅರ್ಪಿಸಿ, ಸರಸ್ವತಿ ನೀಡಿದ ಶಾಪವು ಇಲ್ಲಿ ಫಲಿಸದಂತೆ ಮಾಡಿದಳು. ಆ ಕಾರಣದಿಂದಾಗಿ ಇಲ್ಲಿ ಬ್ರಹ್ಮನಿಗೆ ಪೂಜೆಯು ಲಭಿಸುವಂತಾಯಿತು. ಸರಸ್ವತಿಯ ಶಾಪ ಫಲಿಸದೆ ಸೃಷ್ಟಿಕಾರಕ ಬ್ರಹ್ಮ ಪೂಜೆಗೊಳ್ಳುತ್ತಿರುವ ದೇವಾಲಯ ಇರೋದಾದ್ರೂ ಎಲ್ಲಿ ಅಂದ್ರೆ? ಅದು ರಾಜಸ್ಥಾನದ ಪುಷ್ಕರ್ ಎಂಬಲ್ಲಿ!