ಮಗುವಿನ ಸಮಗ್ರ ಬೆಳವಣಿಗೆಗೆ ಎದೆಹಾಲು (Breastfeeding) ಅತ್ಯಗತ್ಯ. ಸ್ತನ್ಯಪಾನವು ಮಗು ಮತ್ತು ತಾಯಿಯ ಭಾವನೆಗಳನ್ನು ಬೆಸೆಯುವ ಅನುಭವವೂ ಹೌದು. ಮಕ್ಕಳಿಗೆ ಎದೆಹಾಲು ಕೊಡುವುದರ ಅಗತ್ಯವನ್ನು ಸಾರಿ ಹೇಳಲೆಂದು ಪ್ರತಿವರ್ಷ ‘ವಿಶ್ವ ಎದೆಹಾಲು ಸಪ್ತಾಹ’ ಆಚರಿಸಲಾಗುತ್ತದೆ. ಆಗಸ್ಟ್ 1ರಿಂದ ಆರಂಭವಾಗುವ ಈ ಸಪ್ತಾಹವು 7ಕ್ಕೆ ಮುಕ್ತಾಯವಾಗಲಿದೆ. ವಿಶ್ವ ಆರೋಗ್ಯ ಸಂಸ್ಥೆಯ (World Health Organisation – WHO) ಪ್ರಕಾರ ಎದೆಹಾಲು ಕುಡಿಯುವ ಶಿಶುಗಳ ಬುದ್ಧಿವಂತಿಕೆ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ. ಎದೆಹಾಲು ಕುಡಿಯದ ಮಕ್ಕಳಿಗೆ ಹೋಲಿಸಿದರೆ, ಸ್ತನ್ಯಪಾನ ಮಾಡುವ ಮಕ್ಕಳು ಅತಿತೂಕ, ಬೊಜ್ಜು ಮತ್ತು ಡಯಾಬಿಟಿಸ್ಗಳಿಂದ ಬಳಲುವ ಸಾಧ್ಯತೆಯೂ ಕಡಿಮೆ.
ನವಜಾತ ಶಿಶುಗಳಿಗೆ ಎದೆಹಾಲು ಅತ್ಯುತ್ತಮ ಆಹಾರವಷ್ಟೇ ಅಲ್ಲ, ನಿಸರ್ಗವೇ ಕೊಟ್ಟಿರುವ ಔಷಧಿಯೂ ಹೌದು. ಮಕ್ಕಳಲ್ಲಿ ಕಂಡುಬರುವ ಹಲವು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಎದೆಹಾಲು ನೆರವಾಗುತ್ತದೆ.
ಎದೆಹಾಲು ಸಪ್ತಾಹದ ಇತಿಹಾಸ
ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿಯು (United Nations International Children’s Emergency Fund – UNICEF) ಸ್ತನ್ಯಪಾನದ ಬಗ್ಗೆ ಜಾಗೃತಿ ಮೂಡಿಸಲು 1990ರಿಂದ ವಿಶೇಷ ಪ್ರಯತ್ನ ನಡೆಸಲು ನಿರ್ಧರಿಸಿತು. 1991ರಲ್ಲಿ ಸ್ತನ್ಯಪಾನಕ್ಕೆ ಉತ್ತೇಜನ ನೀಡಲೆಂದು ಅಂತರರಾಷ್ಟ್ರೀಯ ಮೈತ್ರಿಕೂಟವನ್ನು ಸ್ಥಾಪಿಸಲಾಯಿತು (World Alliance for Breastfeeding Action – WABA). ಎದೆಹಾಲಿನ ಪ್ರಾಮುಖ್ಯತೆಯನ್ನು ಒತ್ತಿ ಹೇಳುವ ಸಪ್ತಾಹವನ್ನು 1992ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಆರಂಭದಲ್ಲಿ 70 ದೇಶಗಳು ಮಾತ್ರ ಈ ಸಪ್ತಾಹದಲ್ಲಿ ಪಾಲ್ಗೊಳ್ಳುತ್ತಿದ್ದವು. ಇಂದು 170ಕ್ಕೂ ಹೆಚ್ಚು ದೇಶಗಳು ಈ ಸಪ್ತಾಹದ ಭಾಗವಾಗಿವೆ.
ಸ್ತನ್ಯಪಾನ ಸಪ್ತಾಹದ ಪ್ರಾಮುಖ್ಯತೆ
ಮಗುವಿಗೆ ಎದೆಹಾಲು ಕೊಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು ಸ್ತನ್ಯಪಾನ ಸಪ್ತಾಹದ ಮುಖ್ಯ ಉದ್ದೇಶ. ವಿಶ್ವಸಂಸ್ಥೆಯ ಪ್ರಕಾರ ವಿಶ್ವದಲ್ಲಿ ಮೂರನೇ ಎರಡರಷ್ಟು ಮಕ್ಕಳಿಗೆ ಎದೆಹಾಲು ಸಿಗುತ್ತಿಲ್ಲ. ಹೀಗಾಗಿ ಎದೆಹಾಲಿನ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ತುರ್ತಾಗಿ ಆಗಬೇಕಾದ ಕೆಲಸವಾಗಿದೆ.
ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪ್ರತಿಕಾಯಗಳು ಎದೆಹಾಲಿನಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇರುತ್ತವೆ. ಹೀಗಾಗಿ ಮಗುವಿಗೆ ಕನಿಷ್ಠ 6 ತಿಂಗಳು ತುಂಬುವವರೆಗಾದರೂ ಎದೆಹಾಲನ್ನು ಕುಡಿಸಬೇಕು. ಎದೆಹಾಲು ಕುಡಿಯುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವೈರಸ್ ಮತ್ತು ಇತರ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು, ಹಲವು ರೀತಿಯ ಸೋಂಕು ಮತ್ತು ಅಲರ್ಜಿಯಿಂದ ಮಗುವನ್ನು ಕಾಪಾಡಲು ಇದು ನೆರವಾಗುತ್ತದೆ.
ಎದೆಹಾಲು ಕುಡಿಯುವ ಶಿಶುಗಳಲ್ಲಿ ಉಸಿರಾಟದ ತೊಂದರೆ, ಕಿವಿಯ ಸೋಂಕು, ವಾಂತಿ-ಬೇಧಿಯಂಥ ಸಮಸ್ಯೆಗಳು ಕಡಿಮೆ. ಎದೆಹಾಲಿನ ಬದಲು ಇತರ ಆಹಾರ ಸೇವಿಸುವ ಮಕ್ಕಳಲ್ಲಿ ಇಂತ ಸಮಸ್ಯೆ ಹೆಚ್ಚು. ಎದೆಹಾಲು ಕೊಡುವುದು ತಾಯಿಯ ಆರೋಗ್ಯಕ್ಕೂ ಒಳ್ಳೆಯದು. ಏಕೆಂದರೆ ಇದರಿಂದ ತಾಯಿಗೆ ಸ್ತನ ಮತ್ತು ಅಂಡಾಶಯ ಕ್ಯಾನ್ಸರ್ನ ಅಪಾಯ ಕಡಿಮೆಯಾಗುತ್ತದೆ.
It’s World Breastfeeding Week!
Breastfeeding gives babies the best and only nutrition they need in their first six months of life, helping to prevent illnesses and boosting their brain development.#EarlyMomentsMatter @EUinNepal pic.twitter.com/64VndsxE7Y
— UNICEF Nepal (@unicef_nepal) August 1, 2022
ವಿಶ್ವ ಸ್ತನ್ಯಪಾನ ಸಪ್ತಾಹ 2022ರ ಆಶಯ
ವಿಶ್ವ ಸ್ತನ್ಯಪಾನ ಸಪ್ತಾಹ 2022ರ ಮುಖ್ಯ ಆಶಯ ‘ಎದೆಹಾಲು ಕೊಡುವುದು ಹೆಚ್ಚಾಗಲಿ, ಜಾಗೃತಿ ಮೂಡಿಸಿ ಮತ್ತು ಬೆಂಬಲಿಸಿ’ (Step Up for Breastfeeding: Educate and Support) ಎಂಬುದಾಗಿದೆ.
Published On - 8:30 am, Mon, 1 August 22