ತಿರುಪತಿ:ತಿರುಮಲ ತಿಮ್ಮಪ್ಪನ ದೇಗುಲಕ್ಕೆ ಭಕ್ತರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. 128 ವರ್ಷಗಳ ಬಳಿಕ ಇದೇ ಮೊದಲ ಬಾರಿ ತಿರುಮಲವನ್ನು ಸುದೀರ್ಘ ಅವಧಿ ಮುಚ್ಚಲಾಗಿದೆ. ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕನ ಸನ್ನಿಧಿಗೆ ಪ್ರತೀ ದಿನ ಲಕ್ಷಾಂತರ ಮಂದಿ ಭಕ್ತರು ತಿಮ್ಮಪ್ಪನ ಸನ್ನಿಧಿಗೆ ಬರುತ್ತಿದ್ದರು.
ಮಾರ್ಚ್ 19ರಂದು ತಿಮ್ಮಪ್ಪನ ಸನ್ನಿಧಿಯಲ್ಲಿ ಮೊದಲ ಶಂಕಿತ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಅದೇ ದಿನವೇ ಟಿಟಿಡಿ ಮಂಡಳಿಯು ದೇಗುಲವನ್ನು ಮುಚ್ಚುವಂತಹ ಐತಿಹಾಸಿಕ ನಿರ್ಣಯ ತೆಗೆದುಕೊಂಡಿತ್ತು. ಸದ್ಯ, ತಿಮ್ಮಪ್ಪನ ಸನ್ನಿಧಿಯನ್ನು ತಾತ್ಕಾಲಿಕವಾಗಿ ಮುಚ್ಚಿ 52 ದಿನಗಳೇ ಉರುಳಿವೆ. ಇಂಥಾ ಹೊತ್ತಿನಲ್ಲಿಯೇ ಟಿಟಿಡಿಯಿಂದ ಬೆಚ್ಚಿಬೀಳಿಸೋ ಸಂಗತಿಯೊಂದು ಹೊರಬಿದ್ದಿದೆ.
ಪ್ರತೀ ದಿನ ತಿಮ್ಮಪ್ಪನ ಖಜಾನೆಗೆ 8.5 ಕೋಟಿ ನಷ್ಟ!
ವಿಶ್ವದ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪ. ಯಾಕಂದ್ರೆ ಟಿಟಿಡಿ ಪ್ರತೀ ನಿಮಿಷ 55 ಸಾವಿರ ಆದಾಯ ಗಳಿಸುತ್ತಿತ್ತು. ಆದ್ರೀಗ ಪ್ರತೀ ದಿನವೂ ತಿಮ್ಮಪ್ಪನ ಖಜಾನೆಗೆ 8.5 ಕೋಟಿ ರೂಪಾಯಿ ನಷ್ಟ ಎದುರಾಗುತ್ತಿದೆ. ಗೋವಿಂದನ ದೇಗುಲ ಮುಚ್ಚಿದಾಗಿನಿಂದ ಈ ತನಕ ದೇಗುಲಕ್ಕೆ 450 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಅಂತ ಟಿಟಿಡಿಯೇ ಹೇಳುತ್ತಿದೆ.
ಸಿಬ್ಬಂದಿಗೆ ಸಂಬಳ ಕೊಡೋದಕ್ಕೂ ಟಿಟಿಡಿ ಬಳಿ ದುಡ್ಡಿಲ್ಲ!
ಜಗತ್ತಿನ ಸಿರಿವಂತ ದೇವಾಲಯ ಅನ್ನೋ ಹೆಗ್ಗಳಿಕೆ ಹೊಂದಿರೋ ತಿಮ್ಮಪ್ಪನ ಸನ್ನಿಧಿಯಲ್ಲಿ 16 ಸಾವಿರ ಮಂದಿ ಕೆಲಸ ಮಾಡುತ್ತಾರೆ. ಈ ಸಿಬ್ಬಂದಿಗೆ ಮೇ ತಿಂಗಳ ಸಂಬಳವನ್ನು ನೀಡೋದಕ್ಕೂ ಟಿಟಿಡಿ ಬಳಿ ಹಣವಿಲ್ಲದಂತಹ ದು:ಸ್ಥಿತಿ ನಿರ್ಮಾಣವಾಗಿದೆ. ಇಂಥದ್ದೊಂದು ಸಮಸ್ಯೆಗೆ ಕಾರಣ ಕೊರೊನಾ ವೈರಸ್.
ಅಷ್ಟಕ್ಕೂ 16 ಸಾವಿರ ಸಿಬ್ಬಂದಿಗೆ ಅಂದ್ರೆ ರೆಗ್ಯುಲರ್, ಕಾಂಟ್ರಾಕ್ಟ್, ಔಟ್ ಸೋರ್ಸಿಂಗ್ ಉದ್ಯೋಗಿಗಳಿಗೆ ಪ್ರತೀ ತಿಂಗಳು ನೀಡುವ ಸಂಬಳವೇ ಭರ್ತಿ 125 ಕೋಟಿ ರೂಪಾಯಿಯಷ್ಟಿದೆ. ಆದಾಯ ಇಲ್ಲದ ಕಾರಣ ತನ್ನ ಸಿಬ್ಬಂದಿಗೆ 125 ಕೋಟಿ ರೂಪಾಯಿ ಒದಗಿಸುವುದು ಹೇಗೆ ಅಂತ ಟಿಟಿಡಿ ಬೋರ್ಡ್ ತಲೆ ಕೆಡೆಸಿಕೊಂಡಿದೆ.
ಲಕ್ಷ್ಮೀಪತಿ ತಿಮ್ಮಪ್ಪನ ಖಜಾನೆಯಲ್ಲಿಯೇ ಸಂಪತ್ತಿಲ್ಲವೇ?
ಪ್ರತೀ ನಿಮಿಷ ಲಕ್ಷ ಲಕ್ಷ ದುಡಿಯುತ್ತಿದ್ದ ಟಿಟಿಡಿ ಬಳಿ ಹಣವೇ ಇಲ್ಲವೇ? ಅನ್ನು ಅನುಮಾನ ಕಾಡದೇ ಇರದು. ಅಸಲಿಗೆ ತಿಮ್ಮಪ್ಪನ ಆದಾಯ ಹಲವು ಬ್ಯಾಂಕ್ಗಳಲ್ಲಿ ಠೇವಣಿ ರೂಪದಲ್ಲಿ ಇರಿಸಲಾಗಿದೆ. ಅಷ್ಟಕ್ಕೂ ಎಷ್ಟು ಸಂಪತ್ತು ಬ್ಯಾಂಕ್ಗಳಲ್ಲಿದೆ ಗೊತ್ತಾ?
ಒಂದಲ್ಲ.. ಎರಡಲ್ಲ.. ಭರ್ತಿ 9,000 ಕೆಜಿ ಚಿನ್ನ ಬ್ಯಾಂಕ್ನಲ್ಲಿ ಬಡ್ಡಿಗಾಗಿ ಠೇವಣಿ ಇರಿಸಲಾಗಿದೆ. ತಿಮ್ಮಪ್ಪನ ಈ ಚಿನ್ನಕ್ಕೆ ಪ್ರತೀ ವರ್ಷ ಕನಿಷ್ಠ 100 ಕೆಜಿ ಚಿನ್ನ ಬಡ್ಡಿಯ ರೂಪದಲ್ಲಿ ನೀಡಲಾಗುತ್ತಿದೆ. ಇನ್ನು, ಲಕ್ಷ್ಮೀಪತಿ ಹೆಸರಿನಲ್ಲಿ 14 ಸಾವಿರ ಕೋಟಿ ಹಣವನ್ನು ಸ್ಥಿರ ಠೇವಣಿ ಇರಿಸಲಾಗಿದೆ. ಈ 14 ಸಾವಿರ ಕೋಟಿ ಸ್ಥಿರ ಠೇವಣಿಗೆ ಪ್ರತೀ ವರ್ಷ ಬ್ಯಾಂಕ್ ಬಡ್ಡಿ ನೀಡುವುದು ಕನಿಷ್ಠ 700 ಕೋಟಿ ರೂಪಾಯಿ. ಇಷ್ಟೆಲ್ಲಾ ಹಣವಿದ್ದರೂ ಸಹ ತಿಮ್ಮಪ್ಪನ ಸನ್ನಿಧಿಯ ಸಿಬ್ಬಂದಿಗೆ ಸಂಬಳ ನೀಡೋಕೆ ಆಗುತ್ತಿಲ್ಲ. ಯಾಕಂದ್ರೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಒಂದು ಕಟ್ಟಾಜ್ಞೆ ಹೊರಡಿಸಿದ್ದಾರೆ.
ಆಂಧ್ರದ ಪ್ರತೀ ಜಿಲ್ಲೆಗೂ ಒಂದು ಕೋಟಿ ದಾನ ನೀಡಿತ್ತು ಟಿಟಿಡಿ!
ಇದೇ ಏಪ್ರಿಲ್ 15ರಂದು ಟಿಟಿಡಿ ಬೋರ್ಡ್ ಆಂಧ್ರ ಪ್ರದೇಶದ ಎಲ್ಲಾ 13 ಜಿಲ್ಲೆಗಳಿಗೆ ತಲಾ ಒಂಟು ಕೋಟಿ ರೂಪಾಯಿ ನೀಡಿತ್ತು. ಪ್ರತೀ ದಿನ ತಿರುಪತಿಯಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರ ಮಂದಿಗೆ ಊಟದ ಪೊಟ್ಟಣ ನೀಡಲಾಯ್ತು. ಅಂತೆಯೇ ಪ್ರತೀ ಜಿಲ್ಲೆಯಲ್ಲೂ ಜನ ಹಸಿವಿನಿಂದ ಬಳಲಬಾರದು ಅಂತ ಪ್ರತೀ ಜಿಲ್ಲಾಧಿಕಾರಿ ಖಾತೆಗೂ ಕೋಟಿ ರೂಪಾಯಿ ಅನುದಾನ ನೀಡಿತ್ತು. ಹೀಗೆ ಜನಸೇವೆಗಾಗಿ ಹಣ ಹಂಚಿದ ಟಿಟಿಡಿ ಸದ್ಯ, ಬ್ಯಾಂಕ್ನಲ್ಲಿರೋ ಲಕ್ಷ್ಮೀಪತಿಯ ಸಂಪತ್ತನ್ನೇ ತೆಗೆದುಕೊಂಡು ಸಿಬ್ಬಂದಿಗೆ ಸಂಬಳ ನೀಡಲು ಆಗುತ್ತಿಲ್ಲ. ಕಾರಣ ಜಗನ್ ಕಟ್ಟಾಜ್ಞೆ.
ಏನಿದು ಸಿಎಂ ಜಗನ್ ಮೋಹನ್ ರೆಡ್ಡಿ ಹೊರಡಿಸಿರೋ ಕಟ್ಟಾಜ್ಞೆ?
ಠೇವಣಿ ಹಣವನ್ನು ಯಾವ ಕಾರಣಕ್ಕೂ ಮುಟ್ಟಬೇಡಿ. ಅದು ಭಾವನಾತ್ಮಕ ವಿಚಾರ ಅಂತ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೂಚನೆ ನೀಡಿದ್ದಾರೆ. ಯಾಕಂದ್ರೆ ದೇಶಾದ್ಯಂತ ಇರೋ ತಿಮ್ಮಪ್ಪನ ಭಕ್ತರು ಭಕ್ತಿಯಿಂದ ಆಭರಣ, ನಗ ನಾಣ್ಯಗಳನ್ನು ಕಾಣಿಕೆ ರೂಪದಲ್ಲಿ ನೀಡಿರುತ್ತಾರೆ. ಕೇವಲ ಹುಂಡಿ ಹಾಗೂ ಇನ್ನಿತರೆ ಮೂಲದ ಹಣವಷ್ಟೇ ಮೂಲಧನವಾಗಿದೆ.
ತಿಮ್ಮಪ್ಪನ ಠೇವಣಿ ಹಣ ಹಾಗೂ ಚಿನ್ನ ಭಾವನಾತ್ಮಕ ವಿಚಾರ. ಇಂಥಾ ಸಂದಿಗ್ಧ ಪರಿಸ್ಥಿತಿಯಲ್ಲಿ ಆ ಹಣಕ್ಕೆ ಕೈ ಹಾಕಿದ್ರೆ ಬಹುದೊಡ್ಡ ರಾದ್ದಾಂತಕ್ಕೆ ಕಾರಣವಾಗುತ್ತದೆ. ರಾಜಕೀಯವಾಗಿಯೂ ಜಗನ್ ಪಾಲಿಗೆ ಈ ನಡೆ ಬಹುದೊಡ್ಡ ಹೊಡೆತ ನೀಡುತ್ತದೆ.
ಹಾಗಾಗಿಯೇ ಜಗನ್ ಅತ್ಯಂತ ಜಾಣ್ಮೆಯಿಂದ ಟಿಟಿಡಿ ಚೇರ್ಮನ್ಗೆ ಸೂಚ್ಯವಾಗಿ ಹೇಳಿದ್ದಾರೆ. ಇಂಥದ್ದೊಂದು ಕಟ್ಟಾಜ್ಞೆಯ ಕಾರಣದಿಂದಾಗಿ ಟಿಟಿಡಿ ಬೋರ್ಡ್ ಬ್ಯಾಂಕ್ನಲ್ಲಿರೋ ತಿಮ್ಮಪ್ಪನ ಹಣವನ್ನು ಬಳಸ್ತಿಲ್ಲ. ಹೀಗಾಗಿ ಟಿಟಿಡಿ ತನ್ನ ಸಿಬ್ಬಂದಿಗೆ ಈ ತಿಂಗಳ ಸಂಬಳ ನೀಡೋಕೆ ಸಾಹಸ ಮಾಡುತ್ತಿದೆ.
ತಿಮ್ಮಪ್ಪನ ಸಿಬ್ಬಂದಿಗೆ ಸಂಬಳ ನೀಡೋಕೆ ಟಿಟಿಡಿ ಮುಂದಿರೋ ಹಾದಿ ಏನು? 125 ಕೋಟಿ ರೂಪಾಯಿ ಸಂಬಳ ಒದಗಿಸೋಕೆ ಟಿಟಿಡಿ ಮಾಡ್ತಿರೋದೇನು ಗೊತ್ತಾ?
ಶ್ರೀಮಂತ ದೇವಾಲಯದ 1300 ಸಿಬ್ಬಂದಿ ವಜಾಗೊಂಡಿದ್ದೇಕೆ?
ತಿಮ್ಮಪ್ಪನ ಸನ್ನಿಧಿಯಲ್ಲಿ ಒಪ್ಪಂದದ ಮೇರೆಗೆ ಪ್ರಾಂಗಣ ಶುಚಿಗೊಳಿಸೋ ಕೆಲಸ ಮಾಡುತ್ತಿದ್ದ 1300 ಸಿಬ್ಬಂದಿಯನ್ನು ಇದೇ ಮೇ 2ರಂದು ಟಿಟಿಡಿ ವಜಾಗೊಳಿಸಿತ್ತು. ಒಪ್ಪಂದ ಮುಗಿದ ಮೇಲೆ ನೀವಿನ್ನು ಬರುವುದು ಬೇಡ ಅಂತ ಹೇಳಿ ಕಳುಹಿಸಿತ್ತು. ಏಪ್ರಿಲ್ ಮೂವತ್ತಕ್ಕೆ 1300 ಕಾರ್ಮಿಕರ ಒಪ್ಪಂದದ ಗಡುವು ಸಹ ಮುಗಿದಿತ್ತು. ಹಾಗಾಗಿಯೇ ಟಿಟಿಡಿ ಇಂಥದ್ದೊಂದು ನಿರ್ಧಾರಕ್ಕೆ ಬಂದಿತ್ತು.
ಅಸಲಿಗೆ ಆದಾಯದ ಕೊರತೆಯಿಂದಾಗಿಯೇ ಇಂಥದ್ದೊಂದು ನಿರ್ಧಾರಕ್ಕೆ ಟಿಟಿಡಿ ಬಂದಿದೆಯಾ ಅನ್ನೋ ಅನುಮಾನವೂ ಸದ್ಯ ಕಾಡುತ್ತಿದೆ. ಶ್ರೀಮಂತ ದೇವಾಲಯದಲ್ಲಿ ಕಾರ್ಮಿಕರನ್ನು ಕೆಲಸದಿಂದ ತೆಗೆದಿದ್ದಾರೆ ಅನ್ನೋ ವಿಚಾರವೂ ಚರ್ಚೆಯ ವಸ್ತುವಾಗಿತ್ತು. ಸದ್ಯ, ಕಾರ್ಮಿಕರಿಗೆ ನೀಡಬೇಕಿರೋ ಮೇ ತಿಂಗಳ ಸಂಬಳಕ್ಕಾಗಿ ಟಿಟಿಡಿ ಎಂಥಾ ಸಾಹಸ ಮಾಡಬೇಕಿದೆ ಗೊತ್ತಾ?
ಟಿಟಿಡಿ ಮುಂದಿರೋ ದಾರಿ ಏನು?
ಖುದ್ದು ಟಿಟಿಡಿ ಚೇರ್ಮನ್ ಮೇ ತಿಂಗಳ ಸಂಬಳ ನೀಡೋದಕ್ಕೆ ಸಂಪನ್ಮೂಲ ಕ್ರೂಡಿಕರಿಸೋ ಕೆಲಸ ಮಾಡುತ್ತಿದ್ದಾರೆ. ತಿಮ್ಮಪ್ಪನ ಠೇವಣಿ ಹಣವನ್ನೂ ಮುಟ್ಟದೇ, ಆದಾಯವೂ ಇಲ್ಲದೇ ಮೇ ತಿಂಗಳ ಸಂಬಳವನ್ನು ಟಿಟಿಡಿ ಸಿಬ್ಬಂದಿಗೆ ನೀಡೋದು ಹೇಗೆ ಅನ್ನೋದೇ ಬಹುದೊಡ್ಡ ಸವಾಲಾಗಿದೆ. ಯಾಕಂದ್ರೆ ಸಿಬ್ಬಂದಿಗೆ ಟಿಟಿಡಿ ನೀಡಬೇಕಿರೋದು ಭರ್ತಿ 125 ಕೋಟಿ ರೂಪಾಯಿ.
ತಿಮ್ಮಪ್ಪನ ಬಡ್ಡಿ ಹಣವನ್ನು ಬಳಸುವ ಸಾಧ್ಯತೆ ಇದೆಯೇ?
ಹೌದು, ಠೇವಣಿ ಹಣವನ್ನು ಮುಟ್ಟಬೇಡಿ ಅಂತ ಸಿಎಂ ಜಗನ್ ಕಟ್ಟಾಜ್ಞೆ ಹೊರಡಿಸಿದ್ದಾರೆ. ಆದ್ರೆ, ಬಡ್ಡಿ ಹಣವನ್ನು ಬಳಸಬೇಡಿ ಅಂತೇನೂ ಹೇಳಿಲ್ಲ. ಹಾಗೆ ನೋಡಿದ್ರೆ ಪ್ರತೀ ವರ್ಷ ರೂ 800 ಕೋಟಿಗೂ ಅಧಿಕ ಮೊತ್ತ ಬಡ್ಡಿ ರೂಪದಲ್ಲಿ ಸಿಗುತ್ತದೆ. ಇದೇ ಹಣವನ್ನು ಬಳಸಿಕೊಂಡು ಸಿಬ್ಬಂದಿ ಸಂಬಳ ತೀರಿಸಲೂ ಬಹುದು.
ಇಲ್ಲದಿದ್ರೆ ಮತ್ತೆ ದೇಗುಲದ ಬಾಗಿಲು ತೆರೆದು ಭಕ್ತರ ಮೂಲಕ ಆದಾಯ ಸಂಗ್ರಹಿಸೋ ಕೆಲಸವನ್ನು ಟಿಟಿಡಿ ಮಾಡಬೇಕಿದೆ. ಇದೇ ಕಾರಣಕ್ಕೆ ತಿಮ್ಮಪ್ಪನ ಸನ್ನಿಧಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಭಕ್ತರಿಗೆ ದರ್ಶನ ಭಾಗ್ಯ ನೀಡುವ ಲೆಕ್ಕಾಚಾರವನ್ನು ಟಿಟಿಡಿ ಹಾಕುತ್ತಿದೆ ಎನ್ನಲಾಗುತ್ತಿದೆ.
ಕುಬೇರನ ಸಾಲವನ್ನೂ ತೀರಿಸದ ತಿಮ್ಮಪ್ಪನಿಗೆ ಕೊರೊನಾ ಕೂಡ ಕಾಟ ನೀಡುತ್ತಿದೆ. ಶ್ರೀಮಂತ ದೇವಾಲಯದ ಸಿಬ್ಬಂದಿಗೆ ಸಂಬಳ ನೀಡೋಕೆ ಆಗುತ್ತಿಲ್ಲ ಅನ್ನೋದು ನಿಜಕ್ಕೂ ಅಚ್ಚರಿ ಅನಿಸುತ್ತದೆ.