
ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಅನುವಾದಕರು, ಕವಿಗಳು, ವಿವಿಧ ಕ್ಷೇತ್ರದ ಲೇಖಕರು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಅನುವಾದಕರಾದ ಪ್ರೊ. ಕೃಷ್ಣಾ ಮನವಳ್ಳಿ ಅವರ ಆಯ್ಕೆಗಳು ಇಲ್ಲಿವೆ.
ಕೃ: When You Hit Me
ಲೇ: Meena Kandasamy
ಪ್ರ: Europa Editions
ಕಂದಸಾಮಿಯವರ ಈ ಕೃತಿಯಲ್ಲಿ, ದೈಹಿಕ ಅತಿಕ್ರಮಣ, ಅತ್ಯಾಚಾರದ ಜೊತೆಗೆ ಒಬ್ಬ ಗಂಡ ತನ್ನ ಹೆಂಡತಿಯ ಬರವಣಿಗೆಯನ್ನು ಹತ್ತಿಕ್ಕಲು ಮಾಡುವ ಎಲ್ಲಾ ಪ್ರಯತ್ನಗಳ ಕ್ರೂರ ಹಾಗೂ ದಾರುಣ ಚಿತ್ರಣವಿದೆ. ಈ ಕಾದಂಬರಿ ಲೇಖಕಿಯ ವೈಯಕ್ತಿಕ ಬದುಕಿನ ಅನುಭವಗಳಿಂದ ಪ್ರೇರಿತವಾಗಿದ್ದು, ಕೌಟುಂಬಿಕ ದೌರ್ಜನ್ಯದ ಭೀಕರ ಹಾಗೂ ವಿವಿಧ ಸ್ಥರಗಳನ್ನು ತೆರೆದಿಡುತ್ತದೆ. ಮನಸ್ಸನ್ನು ಕಲಕುವ ಘಟನೆಗಳು ಓದುಗರನ್ನು ಉದ್ವೇಗಕ್ಕೆ ಒಳಪಡಿಸುತ್ತವೆ. ಇದು ಹರಿತವಾದ ಬರವಣಿಗೆಯೊಂದಿಗೆ ಸಾಗುವುದಲ್ಲದೆ ಓದಿನ ಗಾಢ ಅನುಭವವನ್ನೂ ನೀಡುತ್ತದೆ.
ಕೃ: The Girl Who Couldn’t Love
ಲೇ: Shinie Antony
ಪ್ರ: Speaking Tiger Books
ವಿಭಿನ್ನ ಮಾದರಿಯಲ್ಲಿ ಹೆಣೆದ ಈ ಕಾದಂಬರಿ ಒಂದೇ ಗುಕ್ಕಿಕೆ ಮುಗಿಯುತ್ತದೆ. ಮಧ್ಯಮ ವರ್ಗದ ಕುಟುಂಬದ ಒಳಗುಟ್ಟುಗಳು, ರಹಸ್ಯಗಳು ಹೊರಬೀಳುತ್ತಾ ಹೋದಂತೆ, ಕಾದಂಬರಿಯ ಕೇಂದ್ರಬಿಂದುವಾದ ಶಾಲಾ ಟೀಚರ್ನ ವ್ಯಕ್ತಿತ್ವ ಆಘಾತ ನೀಡುವ ರೀತಿಯಲ್ಲಿ ಬದಲಾಗುತ್ತಾ ಹೋಗುತ್ತದೆ ಈ ಕಥೆಯಲ್ಲಿ. ತನಗಿಂತ ಕಿರಿಯ ಯುವಕನೊಡನೆ ವಿಚಿತ್ರ ಸಂಬಂಧ ಬೆಳೆಸುವ ಈ ಹೆಣ್ಣಿನ ಮಾನಸಿಕ ತುಮುಲಗಳು, ಚಿಕ್ಕಂದಿನಲ್ಲಿ ಅನುಭವಿಸಿದ ನೋವು, ಏಕಾಂಗಿತನಗಳು ಅವಳಲ್ಲಿನ ಸುಪ್ತ ಕ್ರೌರ್ಯವನ್ನು ಹೊರತರುವ ರೀತಿ, ಬೆಚ್ಚಿ ಬೀಳಿಸುವ ಘಟನೆಗಳ ಸರಣಿ… ಇವೆಲ್ಲಾ ಈ ಕಾದಂಬರಿಯ ಅತ್ಯಂತ ವಿಶಿಷ್ಟ ಅಂಶಗಳು.
Published On - 3:12 pm, Wed, 30 December 20