ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಕಥೆಗಾರ ಎಸ್. ಗಂಗಾಧರಯ್ಯ
’ಈ ವರ್ಷ ಓದಿದ ಹಲವು ಪುಸ್ತಕಗಳಲ್ಲಿ ಸುಮಾರು ಪುಸ್ತಕಗಳನ್ನು ಈ ಪಟ್ಟಿಗೆ ಸೇರಿಸಬಹುದು. ಆದರೂ ಈ ಎರಡು ಪುಸ್ತಕಗಳ ಬಗ್ಗೆಯೇ ಯಾಕೆ ಇಲ್ಲಿ ಬರೆದಿದ್ದೇನೆ?‘ ಕಥೆಗಾರ ಎಸ್. ಗಂಗಾಧರಯ್ಯ,
ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಲೇಖಕರು, ಕವಿಗಳು, ಕಲಾವಿದರು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಕಥೆಗಾರ, ಅನುವಾದಕ ಎಸ್. ಗಂಗಾಧರಯ್ಯ ಅವರ ಆಯ್ಕೆಗಳು ಇಲ್ಲಿವೆ.
ನಾನು ಈ ವರ್ಷ ಓದಿದ ಹಲವು ಪುಸ್ತಕಗಳಲ್ಲಿ ಸುಮಾರು ಪುಸ್ತಕಗಳನ್ನು ಈ ಪಟ್ಟಿಗೆ ಸೇರಿಸಬಹುದು. ಆದರೂ ಕೆಳಕಂಡ ಎರಡು ಪುಸ್ತಕಗಳನ್ನಿಲ್ಲಿ ಸೂಚಿಸುತ್ತಿದ್ದೇನೆ.
ಇದಕ್ಕೆ ಕಾರಣ:
1.ಇವು ಆಯಾ ಪ್ರಕಾರಗಳಲ್ಲಿ ಇವರಿಬ್ಬರುಗಳ ಮೊದಲ ಸಂಕಲನಗಳು.
2.ಹಾಗಂತ ಯಾವ ರಿಯಾಯ್ತಿಯನ್ನು ಬೇಡದಿರುವುಗಳು.
3. ಸದರಿ ಪ್ರಕಾರಗಳಲ್ಲಿ ಇವರಿಬ್ಬರಿಗೂ ದಕ್ಕಿರುವ ಅಭಿವ್ಯಕ್ತಿ ಹಾಗೂ ಮಾನವೀಯ ಮೌಲ್ಯಗಳ ಬಗೆಗಿನ ಕಾಳಜಿ.
5. ಪಳಗಿದ ಕೈಗಳಷ್ಟೇ ಮಾಗಿದಕ ಲಾತ್ಮಕತೆ.
6. ಭಾಷೆಯ ಲವಲವಿಕೆ.
7. ಅಭಿವ್ಯಕ್ತಿಗಳಲ್ಲಿನ ಪ್ರಾಮಾಣಿಕತೆ.
ಕೃ: ಹಿಂಡೆಕುಳ್ಳು (ಕಥಾ ಸಂಕಲನ) ಲೇ: ಅಮರೇಶ ಗಿಣಿವಾರ ಪ್ರ: ಸಂಗಾತ
ಇದು ಅಮರೇಶ ಗಿಣಿವಾರರ ಮೊದಲ ಕಥಾ ಸಂಕಲನ. ಇಲ್ಲಿ ವ್ಯಂಗ್ಯ, ವಿಷಾದ, ಹೆಪ್ಪುಗಟ್ಟಿದ ನೋವು, ಹತಾಶೆ, ಹಸಿವು, ಬಡತನ, ಕಾಮ ಮುಂತಾವುಗಳನ್ನು ಕಥೆಗಾರ ನಿಭಾಯಿಸಿರುವ ಹಾಗೂ ಉಪದೇಶದ ಬದಲಿಗೆ ನಿಜ ಚಿತ್ರಣವನ್ನುಕೊಟ್ಟು ತೀರ್ಮಾನವನ್ನು ಓದುಗನ ಮರ್ಜಿಗೆ ಬಿಡುವಂಥ ತಾಳ್ಮೆ ಈ ಕಥೆಗಾರನಿಂದ ಬರೆಸಿಕೊಳ್ಳಬಹುದಾದ ಸರಕು ಬಹಳಷ್ಟಿದೆ ಅಂತೆಯೇ ಅದನ್ನು ನಿಭಾಯಿಸಬಲ್ಲ ಕಸುವಿದೆ ಅನ್ನುದನ್ನು ಸಾಬೀತುಪಡಿಸುತ್ತದೆ. ಇಲ್ಲಿ ಅನಾವರಣಗೊಳ್ಳುವ ಹಳ್ಳಿಯ ಬದುಕು ಮಾಸದ ಚಿತ್ರದಂತೆ ಮನದೊಳಗೆ ನೆಲಸುತ್ತದೆ.
ಕೃ: ಬಾನ ಸಮುದ್ರಕೆ ಗಾಳನೋಟ (ಕವನ ಸಂಕಲನ) ಲೇ: ಪ್ರವೀಣ ಪ್ರ: ಸಲೀಲ ಪ್ರಕಾಶನ
ಮೊದಲ ಕವಿತೆಯನ್ನು ಬರೆದ ಇಪ್ಪತ್ತೆಂಟು ವರ್ಷಗಳ ತರುವಾಯ ಪ್ರಕಟವಾದ ಪ್ರವೀಣರ ಮೊದಲ ಕವನ ಸಂಕಲನವಿದು! ಇದುಕವಿಯ ಸಂಯಮಕ್ಕೆ ಸಾಕ್ಷಿ. ಅದೇ ರೀತಿ, ಲೋಕದೃಷ್ಟಿ, ಸ್ವಮರುಕದಲ್ಲಿ ಮುಳುಗದ ಅನುಭವ, ತರ್ಕದೊಳಗೆ ಕವಿತೆಯನ್ನು ಬಂದಿಸಲಿಚ್ಛಿಸದ ಕವಿಯ ಗುಣದೊಂದಿಗೆದುಃಖ ಹಾಗೂ ಹತಾಶೆಗಳನ್ನು ಹಳಹಳಿಕೆ ಮಾಡದಿರುವ ಕಲಾತ್ಮಕತೆ ಮತ್ತು ತಾಜಾ ರೂಪಕಗಳೊಂದಿಗೆ ಇಲ್ಲಿನ ಕವಿತೆಗಳು ನಿಜ ಕವಿತೆಗಳಾಗಿವೆ.
Published On - 12:08 pm, Wed, 30 December 20