ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಕಥೆಗಾರ ಶ್ರೀಧರ ಬಳಗಾರ
’ಕೀರ್ತಿನಾಥ ಕುರ್ತಕೋಟಿಯವರ ‘ಕನ್ನಡ ಸಾಹಿತ್ಯ ಸಂಗಾತಿ’ ನನ್ನ ಅನುಗಾಲದ ಮೆಚ್ಚುಗೆಯ ಪುಸ್ತಕ. ಕಾಳಿದಾಸ, ಕುಮಾರವ್ಯಾಸ ಮತ್ತು ಬೇಂದ್ರೆಯವರಾಚೆಗೂ ಅವರ ವಿದ್ವತ್ತು ಚಾಚಿರುವುದಕ್ಕೆ ಇದು ಸಾಕ್ಷಿ. ಕನ್ನಡದ ಪ್ರಾಚೀನ ಸಾಹಿತ್ಯ ಪರಂಪರೆಯನ್ನು ಅರಿಯುವ ಹಸಿವುಳ್ಳ ಹೊಸ ತಲೆಮಾರಿನ ಆಸಕ್ತ ಲೇಖಕರು ಇದನ್ನು ಒಂದು ರೆಫರೆನ್ಸ್ ಪುಸ್ತಕವನ್ನಾಗಿ ಸದಾ ಸನಿಹದಲ್ಲಿರಿಸಿಕೊಳ್ಳಬಹುದು.’ ಎನ್ನುತ್ತಾರೆ ಕಥೆಗಾರ ಶ್ರೀಧರ ಬಳಗಾರ.
ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಲೇಖಕರು, ಕವಿಗಳು, ಕಲಾವಿದರು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಕಥೆಗಾರ, ಕಾದಂಬರಿಕಾರ ಶ್ರೀಧರ ಬಳಗಾರ ಅವರ ಆಯ್ಕೆಗಳು ಇಲ್ಲಿವೆ.
ಕೃ: ಕನ್ನಡ ಸಾಹಿತ್ಯ ಸಂಗಾತಿ ಲೇ: ಕೀರ್ತಿನಾಥ ಕುರ್ತಕೋಟಿ ಪ್ರ: ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್
ಕೀರ್ತಿನಾಥ ಕುರ್ತಕೋಟಿಯವರ ‘ಕನ್ನಡ ಸಾಹಿತ್ಯ ಸಂಗಾತಿ’ ನನ್ನ ಅನುಗಾಲದ ಮೆಚ್ಚುಗೆಯ ಪುಸ್ತಕ. ಕಾಳಿದಾಸ, ಕುಮಾರವ್ಯಾಸ ಮತ್ತು ಬೇಂದ್ರೆಯವರಾಚೆಗೂ ಅವರ ವಿದ್ವತ್ತು ಚಾಚಿರುವುದಕ್ಕೆ ಇದು ಸಾಕ್ಷಿ. ಕನ್ನಡದ ಪ್ರಾಚೀನ ಸಾಹಿತ್ಯ ಪರಂಪರೆಯನ್ನು ಅರಿಯುವ ಹಸಿವುಳ್ಳ ಹೊಸ ತಲೆಮಾರಿನ ಆಸಕ್ತ ಲೇಖಕರು ಇದನ್ನು ಒಂದು ರೆಫರೆನ್ಸ್ ಪುಸ್ತಕವನ್ನಾಗಿ ಸದಾ ಸನಿಹದಲ್ಲಿರಿಸಿಕೊಳ್ಳಬಹುದು. ಸಮಕಾಲೀನ ಭಾರತೀಯ ವಿದ್ವಾಂಸಲ್ಲೊಬ್ಬರಾಗಿರುವ ಅವರ ಪಾಂಡಿತ್ಯ ಮತ್ತು ಪ್ರತಿಭೆ ಈ ಪುಸ್ತಕದುದ್ದಕ್ಕೂ ಲವಲವಿಕೆಯಿಂದ ಹರಿದಿದೆ. ತನ್ನ ಕಾಲದ ಸಮುದಾಯದ ಅಗತ್ಯವನ್ನು ಪೂರೈಸುವದರೊಂದಿಗೆ ಮುಂದಿನ ಪೀಳಿಗೆಯ ಅಪೇಕ್ಷೆಯನ್ನೂ ಮನಗಂಡು ಆಯ್ದ ವಿಷಯಗಳು ಇಲ್ಲಿವೆ. ಐದನೇ ಶತಮಾನದ ಹಲ್ಮಿಡಿ ಶಾಸನದಿಂದ ಆರಂಭಿಸಿ ‘ಕವಿರಾಜಮಾರ್ಗ’ದ ಮೂಲಕ ಜೈನ ಕಾವ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ ಹಾದು ಸರ್ವಜ್ಞ, ಶರೀಫರನ್ನೊಳಗೊಂಡು ಸಂಗ್ಯಾ ಬಾಳ್ಯಾ, ಗೋವಿನ ಕಥೆಯವರೆಗೆ ಅವರ ಮೀಮಾಂಸೆಯ ವಿಸ್ತಾರವಿದೆ. ಕಾವ್ಯ-ಇತಿಹಾಸ, ಪ್ರತಿಮೆ-ಪ್ರತೀಕ, ಕಥನ-ವರ್ಣನೆ, ರಗಳೆ-ಷಟ್ಪದಿ-ಚಂಪೂ ಇಂಥ ಹಲವು ಪರಿಕರಗಳ ವಿವರಗಳು ದೃಷ್ಟಾಂತ ಸಹಿತ ವಿಶ್ಲೇಷಿಸಲ್ಪಟ್ಟಿವೆ. ಸಾಹಿತ್ಯ ಪರಂಪರೆಯನ್ನು ಅಂತರ್ಪಠ್ಯ ಸಂವಾದದ ಸ್ವರೂಪದಲ್ಲಿ ಕಟ್ಟಿಕೊಟ್ಟ ಅವರ ಒಳನೋಟಗಳು ಓದುಗರನ್ನು ಸಂವೇದನಾಶೀಲ ಸೂಕ್ಷ್ಮ ಓದುಗರನ್ನಾಗಿ ಜಾಗೃತಗೊಳಿಸುತ್ತವೆ. ಕನ್ನಡ ಸಾಹಿತ್ಯ ಪರಂಪರೆಯ ನಿರಂತರತೆಯನ್ನೂ ಸಮಗ್ರತೆಯನ್ನೂ ಅಭ್ಯಾಸಿಸಲು ಇದೊಂದು ಆಕರ ಗ್ರಂಥ.
ಕೃ: ಕೆಂಪು ಮುಡಿಯ ಹೆಣ್ಣು (ಕಾದಂಬರಿ) ಮೂಲ : ಓರ್ಹಾನ್ ಪಮುಕ್ ಕನ್ನಡಕ್ಕೆ: ಓ. ಎಲ್. ನಾಗಭೂಷಣಸ್ವಾಮಿ ಪ್ರ: ಅಭಿನವ
ಓ. ಎಲ್. ನಾಗಭೂಷಣ ಸ್ವಾಮಿಯವರು ಭಾಷಾಂತರಿಸಿದ ಒರ್ಹಾನ್ ಪಮುಕ್ ಅವರ ಕಾದಂಬರಿ ಒಂದು ವಿಶಿಷ್ಟ ಕಥನ ಪ್ರಯೋಗವಾಗಿದೆ. ಭೌತಿಕ ಪ್ರಪಂಚಕ್ಕಿಂತ ಕೃತಿಕಾರನ ಅಭಿವ್ಯಕ್ತಿಯಾದ ಕಾದಂಬರಿಯೇ ವಾಸ್ತವವೆಂದು ಬರೆಯುವದರಲ್ಲಿ ತೀರ್ಮಾನಗಳಿಗಿಂತ ತಿಳಿವಳಿಕೆಯೇ ಅದರ ನೇಯ್ಗೆಯಾಗಿದೆ ಎಂಬ ನಂಬಿಕೆಯನ್ನು ನುಡಿ ಮಾಡಿ ಹೇಳಲಾಗಿದೆ. ಬಾವಿಯೊಂದನ್ನು ತೋಡುವ ನಿರೂಪಣೆಯೊಂದಿಗೆ ಆರಂಭವಾಗುವ ಕಾದಂಬರಿಯಲ್ಲಿ ‘ಬಾವಿ’ ಹಲವು ಧ್ವನಿಗಳ ಸಂಕೀರ್ಣ ರೂಪಕವಾಗಿ ಬೆಳೆಯುತ್ತ ನಿರೂಪಕನ ಮನಸೇ ನಿಗೂಢ ಬಾವಿಯಾಗಿ ಅದರಿಂದ ಈಡಿಪಸ್‍ನ ಪೌರಾಣಿಕ ಕಥೆ ಮತ್ತು ಪರ್ಶಿಯಾದ ಚಾರಿತ್ರಿಕ ಐತಿಹ್ಯದ ರುಸ್ತುಂನ ಕತೆ ಜಿನುಗಿ ವರ್ತಮಾನದ ಮಣ್ಣಿಗೆ ಹರಿದು ಇಂಗುತ್ತವೆ. ಪುರಾಣ, ಚರಿತ್ರೆ, ನಗರಗಳಾಗಿ ಬದಲಾಗುತ್ತಿರುವ ಹಳ್ಳಿಗಳು, ದಂಗೆಗಳು, ದು:ಸ್ಥಿತಿಯಲ್ಲಿರುವ ನಾಟಕದ ಕಂಪನಿಗಳು, ಒಬ್ಬಳೇ ತಾಯಿಯೂ ಪ್ರೇಯಸಿಯೂ ಆಗುವ ವಿಕೃತ ಸಂಬಂಧಗಳು. ಹೀಗೆ ಕಾಲ ಕೂಟದ ದುರ್ವಿಪಾಕದ ಮನುಷ್ಯನ ಜಟಿಲ ಬದುಕಿಗೆ ಕೆಂಪು ಮುಡಿಯ ಹೆಣ್ಣು ಪಾತ್ರ ಮಾತ್ರವಾಗಿರದೆ ಸಾಮಾನ್ಯೀಕೃತ ಸ್ಥಿತಿಯಾಗುತ್ತಾಳೆ. ‘ಅಪ್ಪ ಮಗನನ್ನು, ಮಗ ಅಪ್ಪನನ್ನು ಕೊಲ್ಲಬಲ್ಲರು. ಯಾರು ಯಾರನ್ನು ಕೊಂದರೂ ಗೆಲುವು ಗಂಡಸರದ್ದೇ. ಅಳುವುದಷ್ಟೇ ಹೆಂಗಸಿನ ಪಾಲಿನದು’ ಕಥಾನಾಯಕಿಯ ಸ್ವಗತ ಕಾದಂಬರಿಯ ಮೂಲ ಶ್ರುತಿಯಾಗಿದೆ. ಸಾಹಿತಿಯಾಗಬೇಕೆಂಬ ಅಪ್ಪನ ಕನಸನ್ನು ನಿಜವಾಗಿಸಲು ಮುಂದಾದಂತೆ ಕಾಣುವ ಅನ್ವರ, ‘ಪಿತೃ ಮತ್ತು ಪುತ್ರ ಹತ್ಯೆ’ಯ ಚರಿತ್ರೆಯ ಸ್ಮೃತಿಯ ಭೂತದಿಂದ ಬಿಡುಗಡೆ ಪಡೆಯಲು ಜೈಲಿನಲ್ಲಿ ಖೈದಿಯಾಗಿ ಬರೆಯಲಿಚ್ಛಿಸಿರುವ ಸಾಹಿತ್ಯ ಕೃತಿ ಅರ್ಥಪೂರ್ಣವೆನಿಸುತ್ತದೆ.
ಪುರಾಣ ಮತ್ತು ಇತಿಹಾಸವನ್ನು ವರ್ತಮಾನದ ಸಂಕಟ-ಸಂಘರ್ಷಗೊಳಗಿಟ್ಟು ಕಥಾನುಭವವನ್ನಾಗಿ ನೇಯುವ ಕಲಾತ್ಮಕತೆಗೆ ಮತ್ತು ಜೀವನ ದರ್ಶನಕ್ಕೆ ಮಾದರಿಯಾಗಿ ಕನ್ನಡಕ್ಕೆ ಹರಿದು ಬಂದಿರುವ ಈ ಕಾದಂಬರಿಯನ್ನು ಹೊಸ ತಲೆಮಾರಿನ ಲೇಖಕರು ಗಮನಿಸುವುದು ಅಗತ್ಯವೆನಿಸುತ್ತದೆ.
Published On - 5:20 pm, Tue, 29 December 20