AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ವಾಪಸ್ ಕೊಡಿಸಿ: ನ್ಯಾಯಾಲಯದ ಮೊರೆ ಹೋದ ದರ್ಶನ್

Darshan Thoogudeepa: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಿಯಮಿತ ಜಾಮೀನು ಪಡೆದಿರುವ ನಟ ದರ್ಶನ್ ತೂಗುದೀಪ ಇದೀಗ ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ದರ್ಶನ್​ ಇಂದ 37 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಆ ಹಣವನ್ನು ಮರಳಿ ಕೊಡಿಸುವಂತೆ ದರ್ಶನ್ ಅರ್ಜಿ ಹಾಕಿದ್ದಾರೆ.

ಹಣ ವಾಪಸ್ ಕೊಡಿಸಿ: ನ್ಯಾಯಾಲಯದ ಮೊರೆ ಹೋದ ದರ್ಶನ್
Darshan Thoogudeepa
ಮಂಜುನಾಥ ಸಿ.
|

Updated on:Jan 20, 2025 | 10:39 AM

Share

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹೋರಾಡಿ ಮೊದಲಿಗೆ ಮಧ್ಯಂತರ ಜಾಮೀನು ಆ ನಂತರ ನಿಯಮಿತ ಜಾಮೀನು ಪಡೆದಿರುವ ನಟ ದರ್ಶನ್, ಇದೀಗ ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ವೇಳೆ ದರ್ಶನ್ ಅವರನ್ನು ಬಂಧಿಸಿದ್ದ ಪೊಲೀಸರು ದರ್ಶನ್​​ ಇಂದ ದೊಡ್ಡ ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದರು. ಆ ಹಣವನ್ನು ಮರಳಿ ಕೊಡಿಸುವಂತೆ ನಟ ದರ್ಶನ್ ಇದೀಗ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನದ ಬಳಿಕ ಅವರಿಂದ ಬರೋಬ್ಬರಿ 37 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಹಣವನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಬಳಸಲಾಗಿತ್ತು ಎಂದು ಪೊಲೀಸರು ಆರೋಪ ಮಾಡಿದ್ದರು. ರೇಣುಕಾ ಸ್ವಾಮಿ ಕೊಲೆಯನ್ನು ತಾವು ಮಾಡಿದ್ದಾಗಿ ಒಪ್ಪಿಕೊಳ್ಳಲು ಹೊರಗಡೆಯಿಂದ ಕರೆಸಲಾಗಿದ್ದ ಮೂವರಿಗೆ ಅದಾಗಲೇ ಒಂದಿಷ್ಟು ಹಣವನ್ನು ಸಹ ನೀಡಲಾಗಿತ್ತು. ಹಣ ವಶಪಡಿಸಿಕೊಂಡಿದ್ದ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

ಆದರೆ ನ್ಯಾಯಾಲಯದಲ್ಲಿ ದರ್ಶನ್ ಪರ ವಕೀಲರು, ವಶಪಡಿಸಿಕೊಂಡ ಹಣ, ಸಾಲವಾಗಿ ನೀಡಲಾಗಿದ್ದ ಹಣ ಅದು ಎಂದು ವಾದಿಸಿದ್ದರು. ಮೋಹನ್​ ರಾಜ್ ಎಂಬುವರಿಗೆ ಸಾಲದ ರೂಪದಲ್ಲಿ ನಟ ದರ್ಶನ್ ಹಣ ನೀಡಿದ್ದರು. ಆ ಹಣವನ್ನು ಮೋಹನ್ ರಾಜ್, ದರ್ಶನ್​ಗೆ ಮರಳಿದ್ದರು. ಆ ಹಣವನ್ನು ದರ್ಶನ್ ತಮ್ಮ ನಿವಾಸದಲ್ಲಿ ಇರಿಸಿಕೊಂಡಿದ್ದರು. ಆ ಹಣ ಕೊಲೆ ಮುಚ್ಚಿಹಾಕಲು ಬಳಸಲೆಂದು ಇರಿಸಿಕೊಂಡಿದ್ದ ಹಣ ಅಲ್ಲ ಎಂದು ವಾದ ಮಾಡಿದ್ದರು.

ಇದನ್ನೂ ಓದಿ:ದರ್ಶನ್ ಮತ್ತು ಗ್ಯಾಂಗ್​ಗೆ ಮತ್ತೆ ಜೈಲು ಸೇರುವ ಭಯ; ಜ.24ಕ್ಕೆ ಸುಪ್ರೀಂನಲ್ಲಿ ಅರ್ಜಿ ವಿಚಾರಣೆ

ಇದೀಗ 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ದರ್ಶನ್, ತಮ್ಮ ಹಣವನ್ನು ಮರಳಿ ಕೊಡಿಸುವಂತೆ ಮನವಿ ಮಾಡಿದ್ದಾರೆ. ನ್ಯಾಯಾಲಯವು ಆದಾಯ ತೆರಿಗೆ ಇಲಾಖೆಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. ಒಂದೊಮ್ಮೆ ಪೊಲೀಸರು ಅಥವಾ ಆದಾಯ ತೆರಿಗೆ ಇಲಾಖೆ ಆಕ್ಷೇಪಣೆ ಸಲ್ಲಿಸಿದಲ್ಲಿ ಮತ್ತೊಂದು ಸುತ್ತು ವಾದ, ವಿಚಾರಣೆಗಳು ನಡೆದ ಬಳಿಕ ಆ ಹಣ ದರ್ಶನ್​ಗೆ ಸೇರಲಿದೆಯೇ ಅಥವಾ ಪೊಲೀಸರ ಬಳಿ ಸಾಕ್ಷಿಯಾಗಿಯೇ ಉಳಿದುಕೊಳ್ಳಲಿದೆಯೇ ತಿಳಿಯಲಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್​ಗೆ ಕಳೆದ ತಿಂಗಳು ನಿಯಮಿತ ಜಾಮೀನು ದೊರೆತಿದೆ. ದರ್ಶನ್​ಗೆ ಮಾತ್ರವೇ ಅಲ್ಲದೆ ಪ್ರಕರಣದ ಎಲ್ಲ ಆರೋಪಿಗಳಿಗೂ ಜಾಮೀನು ದೊರೆತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:35 am, Mon, 20 January 25