ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಲೇಖಕಿ ಡಾ. ದೀಪಾ ಫಡ್ಕೆ

`ಕಾಡಲ್ಲಿ ಕಂಡಿದ್ದೆಲ್ಲ ಮುಟ್ಟಡ, ನೋಡಿದ್ದೆಲ್ಲ ಕೆದಕಡ. ಮನುಷ್ಯ ಜನ್ಮ ಈ ಭೂಮಿಗೆ ಬಂದಿದ್ದು ನಿಂತು ಕೈ ಮುಗಿದು ಹೋಪಲೆ ಹೊರತೂ ಎಲ್ಲದನ್ನೂ ಎತ್ತಿ ಬಾಚಿ ತಗಂಡು ಗಂಟುಕಟ್ಟಿಕೊಂಡು ಹೋಪಲೆ ಅಲ್ಲ- ವರದಪ್ಪ ಹೆಗಡೆಯ ಬಾಯಲ್ಲಿ ಬರುವ ಈ ಮಾತು ಮಧ್ಯ ಘಟ್ಟ ಕಾದಂಬರಿಯ ಪೂರ್ಣ ಸಾರವನ್ನು ಹೇಳಿದ ಮಾತು’. ಲೇಖಕಿ ದೀಪಾ ಫಡ್ಕೆ ‘ಮಧ್ಯಘಟ್ಟ‘ವನ್ನು ಸಂಕ್ಷೇಪಿಸಿ ಹೇಳಿದ್ದು ಹೀಗೆ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಲೇಖಕಿ ಡಾ. ದೀಪಾ ಫಡ್ಕೆ
ಲೇಖಕಿ ದೀಪಾ ಫಡ್ಕೆ
ಶ್ರೀದೇವಿ ಕಳಸದ | Shridevi Kalasad

|

Dec 30, 2020 | 10:55 AM

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಲೇಖಕರು, ಕವಿಗಳು, ಕಲಾವಿದರು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಲೇಖಕಿ ಡಾ. ದೀಪಾ ಫಡ್ಕೆ ಅವರ ಆಯ್ಕೆಗಳು ಇಲ್ಲಿವೆ.

ಕೃ: ಬಾಡಿಗೆ ಮನೆಗಳ ರಾಜಚರಿತ್ರೆ (ಆತ್ಮಕಥನ) ಲೇ: ಕೆ. ಸತ್ಯನಾರಾಯಣ ಪ್ರ: ಅಭಿನವ 

ಸೂರು, ಮನೆ ಎನ್ನುವ ಅಗತ್ಯವನ್ನು ಮನುಷ್ಯ ಮಳೆ, ಬಿಸಿಲು ಗಾಳಿಗಳಿಂದ ತನ್ನ ಮತ್ತು ತನ್ನವರ ಸುರಕ್ಷತೆಗಾಗಿ ಮಾಡಿಕೊಂಡ ವ್ಯವಸ್ಥೆ. ಕಾಲಕಾಲಕ್ಕೆ ಪಲ್ಲಟಗೊಳ್ಳುತ್ತಾ ಅದು ಮನುಷ್ಯನ ಅಭಿರುಚಿಯ ಅಭಿವ್ಯಕ್ತಿಯೂ ಆಗಿ ಶತಮಾನಗಳೇ ಸಂದವು. ಮನೆಗಳು ಪ್ರತಿಷ್ಠೆಯ ಸಂಕೇತವಾದಂತೆ ಮುಂದೆ ಅವು ಮನುಷ್ಯನಿಗೆ ದುಡಿದು ಕೊಡಲೂ ಆರಂಭಿಸಿದಾಗ ಬಳಸಿದ್ದಕ್ಕಾಗಿ ಕೊಡುವ ಶುಲ್ಕ ಬಾಡಿಗೆಯಾಗಿ, ಬಾಡಿಗೆ ಮನೆಗಳು ನಮ್ಮ ವಲಸೆ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಸತ್ಯ.

`ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ’ ಎನ್ನುವ ಮಾತು ಇದ್ದರೂ ಸುಮ್ಮನೆ ಬಂದ ಜೀವನವನ್ನು ಯಾರೂ ಲಘುವಾಗಿ ಪರಿಗಣಿಸಿಲ್ಲ. ಪರಿಗಣಿಸುತ್ತಿದ್ದರೆ ಇಷ್ಟೊಂದು `ನಮ್ಮನೆ’ಗಳು ಮೇಲೆಳುತ್ತಿರಲಿಲ್ಲ. ಹಿರಿಯ ಕಾದಂಬರಿಕಾರ, ಕತೆಗಾರ ಕೆ. ಸತ್ಯನಾರಾಯಣ ಅವರು ಈ ಬಾರಿ ಓದುಗರ ಮುಂದೆ ಬಂದಿರೋದು ಬಾಡಿಗೆ ಮನೆಗಳ ಕತೆಗಳನ್ನು ಹೇಳಿಕೊಂಡು. ಒಂದು ಮನೆಯಿಂದ ಇನ್ನೊಂದು ಮನೆಗೆ ವಾಸಸ್ಥಳವನ್ನು ಬದಲಾಯಿಸುತ್ತಾ ಬದುಕಿನ ಬಹುಭಾಗವನ್ನು ಕಳೆಯುತ್ತಾ ಹೋಗುವಾಗ ಅವುಗಳೂ ಹೇಗೆ ಬದುಕಿನ ಸಂಸ್ಕೃತಿಯ ಭಾಗವಾಗುತ್ತಾ ಸಾಗುತ್ತವೆ ಎನ್ನುವ ಕೆ. ಸತ್ಯನಾರಾಯಣ ಅವರ ಬದುಕಿನ ಕಥಾನಕವೇ `ಬಾಡಿಗೆ ಮನೆಗಳ ರಾಜಚರಿತ್ರೆ’. ಇದರ ಒಂದೊಂದು ಅಧ್ಯಾಯವೂ ನಮ್ಮದೂ ಆಗಬಹುದು, ನಿಮ್ಮದೂ ಆಗಿರಬಹುದು. ಎಲ್ಲರದೂ ಆಗಿರಬಹುದಾದ ಈ ಬಾಡಿಗೆ ಮನೆಗಳ ಕಥೆ, ಕಾದಂಬರಿಗಿಂತಲೂ, ಕತೆಯ ಹೆಣಿಗೆಗಿಂತಲೂ ಆಪ್ತವಾಗುತ್ತದೆ. ಏಕೆಂದರೆ ಪುಸ್ತಕದ ಒಳ ಹೊಕ್ಕಂತೆ, ಮನೆ ಅವರದ್ದೆಂದುಕೊಂಡು ಬಾಗಿಲನ್ನುತಟ್ಟಿದರೆ, ತೆರೆದಾಗ ಹೊಸ್ತಿಲಲ್ಲಿ ನೀವೂ ಕಾಣಬಹುದು.

ಕೃ: ಮಧ್ಯಘಟ್ಟ (ಕಾದಂಬರಿ) ಲೇ: ಶಿವಾನಂದ ಕಳವೆ ಪ್ರ: ಸಾಹಿತ್ಯ ಭಂಡಾರ

`ಕಾಡಲ್ಲಿ ಕಂಡಿದ್ದೆಲ್ಲ ಮುಟ್ಟಡ, ನೋಡಿದ್ದೆಲ್ಲ ಕೆದಕಡ. ಮನುಷ್ಯ ಜನ್ಮ ಈ ಭೂಮಿಗೆ ಬಂದಿದ್ದು ನಿಂತು ಕೈ ಮುಗಿದು ಹೋಪಲೆ ಹೊರತೂ ಎಲ್ಲದನ್ನೂ ಎತ್ತಿ ಬಾಚಿ ತಗಂಡು ಗಂಟುಕಟ್ಟಿಕೊಂಡು ಹೋಪಲೆ ಅಲ್ಲ- ವರದಪ್ಪ ಹೆಗಡೆಯ ಬಾಯಲ್ಲಿ ಬರುವ ಈ ಮಾತು ಮಧ್ಯ ಘಟ್ಟ ಕಾದಂಬರಿಯ ಪೂರ್ಣ ಸಾರವನ್ನು ಹೇಳಿದ ಮಾತು’. ಸಹಸ್ರಾರು ವರ್ಷಗಳ ನಾಗರಿಕಜೀವನ, ನಮ್ಮಲ್ಲೊಂದು ಉಡಾಫೆಯನ್ನು ತುಂಬುತ್ತಲೇ ಸಾಗಿದೆ; ಅದೇನೆಂದರೆ ಈ ಭೂಮಿ ಇರುವುದೇ ನಮ್ಮ ಸುಖಕ್ಕೋಸ್ಕರ, ನಮ್ಮ ಅಗತ್ಯಗಳಿಗೋಸ್ಕರ ಎಂದು. ಭೂಮಿ ಆಗಾಗ ಮೈ ಕೊಡವಿಕೊಂಡು, ಎಚ್ಚರಿಸುತ್ತಲೇ ಬರುತ್ತಿದ್ದರೂ ಮರುಳು ಮಾನವ ಎಚ್ಚರತಪ್ಪಿ ನಡೆಯುತ್ತಲೇ ಇರುತ್ತಾನೆ. ಶಿವಾನಂದ ಕಳವೆಯವರ ಮಧ್ಯಘಟ್ಟ, ಮನುಷ್ಯನೆಷ್ಟು ಪ್ರಕೃತಿಬದ್ಧನಾಗಿ ನಡೆದುಕೊಳ್ಳಬೇಕು, ಹಾಗೇ ನಡೆದುಕೊಂಡರೆ ಹೇಗೆ ನಿಸರ್ಗಅವನನ್ನೂ ಮಗುವಿನಂತೇ ಕಾಪಿಡುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದ ಕಾದಂಬರಿ.

ದಟ್ಟಕಾಡಿನ ನಡುವೆ ಇರುವ ಊರು ಮಧ್ಯಘಟ್ಟ. ಮಳೆಗಾಲದಲ್ಲಿ ಅಕ್ಷರಶಃ ದ್ವೀಪವಾಗುವ ಊರಿಗೆ ವಿವಾಹವಾಗಿ ಬಂದು ಬದುಕು ಆರಂಭಿಸಿದ ಕುಂಬಳೆಯ ಶ್ರೀದೇವಿ, ಅವಳಮ್ಮ ಭೂದೇವಿ, ಮಗಳೊಂದಿಗೆ ಬಂದು ಇಲ್ಲಿಯೇ ಇರಬೇಕಾದ ಅಸಹಾಯಕ ಪರಿಸ್ಥಿತಿಗೆ ಬಂದರೂ ಬಂದದ್ದೆಲ್ಲ ಬರಲಿ ಎನ್ನುವಂತೇ ಬದುಕಿದ ಪುಡಿಯಮ್ಮ ಸಾವಿತ್ರಿಯ ಕತೆಯಾಗಿಯೂ ಮಧ್ಯಘಟ್ಟ ಕಂಡರೂ ಓದಿ ಮುಗಿಸುವಾಗ ಇದು ಅಡವಿ ದೇವಿಯ ಕತೆಯಾಗಿಯೇ ಕಾಣಿಸಿತು. ಅಡವಿದೇವಿಯೂ ಹೆಣ್ಣೆಅಲ್ಲವೇ? ಒಂದಕ್ಕೊಂದು ರೂಪಕವಾಗಿ ಹೆಣೆದಿರುವ ಮಧ್ಯಘಟ್ಟ ಈ ಮೂರು ಹೆಂಗಸರ ಕತೆಗಳನ್ನು ಹೂವಿನ ದಂಡೆಯಂತೇ ಹೆಣೆಯುತ್ತಾ ಹೋಗಿ ದಂಡೆಕಟ್ಟಲು ದಾರವಾಗಿ ಬಳಸಿದ್ದು ಅಡವಿ ದೇವಿಯ ಕತೆಯನ್ನೇ ಎಂದು ತಿಳಿಯುತ್ತದೆ.

ಪ್ರಕೃತಿ ನಮಗೆ ಕೈತುಂಬಾ, ಬೊಗಸೆ ತುಂಬಾ ಅಲ್ಲಲ್ಲ ಬದುಕು ತುಂಬಾ ಕೊಟ್ಟಿದೆ, ಕೊಡುತ್ತಲೇ ಇದೆ.ಆದರೆ ಅದರ ಗರ್ಭದೊಳಗಿನ ನಿಗೂಢವನ್ನುಅರಿಯದೇ ಹೋಗುವ ಮಿತಿಯನ್ನೂ ಜೊತೆಯಲ್ಲೇ ಕೊಟ್ಟಿದೆ. ಮಧ್ಯಘಟ್ಟ, ಪ್ರಕೃತಿಯನ್ನು ಪರಿಚಯಿಸಿದ ಕತೆ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಲೇಖಕ ಡಾ. ಪುರುಷೋತ್ತಮ ಬಿಳಿಮಲೆ; ’ಮುಟ್ಟು ಏನಿದರ ಗುಟ್ಟು?‘ ಮತ್ತು ‘ಪದಕುಸಿಯೆ ನೆಲವಿಲ್ಲ‘

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada