AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು

ಮೈಸೂರು: ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು

ದಿಲೀಪ್​, ಚೌಡಹಳ್ಳಿ
| Updated By: Ganapathi Sharma|

Updated on:Jan 20, 2025 | 1:42 PM

Share

ಕರ್ನಾಟಕದಲ್ಲಿ ದರೋಡೆ, ಶೂಟೌಟ್ ಪ್ರಕರಣಗಳು ಜನಸಾಮಾನ್ಯರನ್ನು ಬೆಚ್ಚಿಬೀಳಿಸಿರುವ ಬೆನ್ನಲ್ಲೇ ಮೈಸೂರಿನ ಹಾರೋಹಳ್ಳಿ ಗ್ರಾಮದ ಬಳಿ ದರೋಡೆ ನಡೆದಿದೆ. ನಾಲ್ವರು ಮುಸುಕುಧಾರಿಗಳು ಉದ್ಯಮಿಯೊಬ್ಬರ ಮೇಲೆ ಹಲ್ಲೆ ಮಾಡಿ ಕಾರು ಸಮೇತ ಹಣದೊಂದಿಗೆ ಪರಾರಿಯಾಗಿದ್ದಾರೆ. ಘಟನೆಯ ದೃಶ್ಯ ಮೊಬೈಲ್​ ಫೋನ್​ನಲ್ಲಿ ಸೆರೆಯಾಗಿದೆ. ಘಟನೆಯ ವಿವರ ಹಾಗೂ ವಿಡಿಯೋ ಇಲ್ಲಿದೆ.

ಮೈಸೂರು, ಜನವರಿ 20: ಬೀದರ್​​ನಲ್ಲಿ ಎಟಿಎಂಗೆ ಹಣ ತುಂಬಿಸುವವರ ಮೇಲೆ ಶೂಟೌಟ್, ಮಂಗಳೂರಿನ ಉಳ್ಳಾಲ ಕೋಟೆಕಾರು ಬ್ಯಾಂಕ್​ನಲ್ಲಿ ದರೋಡೆ ಬೆನ್ನಲ್ಲೇ ಮೈಸೂರಿನಲ್ಲಿಯೂ ಬೆಚ್ಚಿಬೀಳಿಸುವಂಥ ಕೃತ್ಯ ನಡೆದಿದೆ. ಹಗಲು ಹೊತ್ತಿನಲ್ಲೇ ಕಾರು ಅಡ್ಡಗಟ್ಟಿ ದರೋಡೆ ಮಾಡಿದ ದುಷ್ಕರ್ಮಿಗಳು ಕಾರು ಸಮೇತ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ.

ಕೇರಳ ಮೂಲದ ಉದ್ಯಮಿ ಸೂಫಿ ಎಂಬವರಿಗೆ ಸೇರಿದ ಇನ್ನೋವಾ ಕಾರು, ಹಣ ಎಗರಿಸಿಕೊಂಡು ಖದೀಮರು ಪರಾರಿಯಾಗಿದ್ದಾರೆ. ಎರಡು ಕಾರುಗಳಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿಗಳು ಉದ್ಯಮಿ ಸೂಫಿ ಅವರ ಕಾರು ಕಿತ್ತುಕೊಂಡ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಮೈಸೂರಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಡಿವೈಎಸ್‌ಪಿ ರಘು ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಉದ್ಯಮಿ ಸೂಫಿಯಿಂದ ಜಯಪುರ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.

ಪೊಲೀಸರ ಮುಂದೆ ವ್ಯತಿರಿಕ್ತ ಹೇಳಿಕೆ ದಾಖಲಿಸಿದ ಉದ್ಯಮಿ

ಸದ್ಯ ಹಣ ಕಳೆದುಕೊಂಡ ಉದ್ಯಮಿ ಸೂಫಿ ಮತ್ತು ಅಸ್ರಫ್ ಪೊಲೀಸರ ಮುಂದೆ ವ್ಯತಿರಿಕ್ತ ಹೇಳಿಕೆ ನೀಡದ್ದಾರೆ. ಒಬ್ಬರು ಜಮೀನು ಖರೀದಿಗೆ ಮೈಸೂರಿಗೆ ಬಂದಿದ್ದೆವು ಎಂದರೆ, ಮತ್ತೊಬ್ಬರು ಚಾಕೋಲೆಟ್ ವ್ಯಾಪಾರಕ್ಕೆ ಬಂದಿದ್ದಾಗಿ ಹೇಳಿದ್ದಾರೆ. ಒಮ್ಮೊಮ್ಮೆ ಒಂದೊಂದು ಮಾಹಿತಿ ನೀಡುತ್ತಿರುವ ಇಬ್ಬರು ಹೇಳಿಕೆ ಅನುಮಾನ ಮೂಡಿಸಿದೆ. ಎರಡು ಕಾರಿನಲ್ಲಿ ಬಂದ ಅಪರಿಚತರು, ಕಾರು ಅಡ್ಡಗಟ್ಟಿ ಕಣ್ಣಿಗೆ ಸ್ಪ್ರೇ ಮಾಡಿ ಕಾರು ಕಿತ್ತುಕೊಂಡು ಪರಾರಿಯಾದರು ಎಂದು ಉದ್ಯಮಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಮೈಸೂರು ಜಿಲ್ಲೆಯ ಗಡಿಯಲ್ಲಿ ಹೈ ಅಲರ್ಟ್, ನಾಕಾಬಂಧಿ

ಅದೇನೇ ಇದ್ದರೂ ಸತ್ಯ ಸತ್ಯಾತೆ ತಿಳಿಯಲು ಮೈಸೂರು ಪೊಲೀಸರು ಅಖಾಡಕ್ಕಿಳಿದಿದ್ದಾರೆ. ಆರೋಪಿಗಳ ಬೇಟೆಗೆ ಬಲೆ ಬೀಸಿದ್ದಾರೆ. ಗಡಿ ಭಾಗದಲ್ಲಿ ಹೈ ಅಲರ್ಟ್ ಮಾಡಲಾಗಿದ್ದು, ಎಲ್ಲಾ ಕಡೆ ನಾಕಾಬಂಧಿ ಹಾಕಿದ್ದಾರೆ. ಆರೋಪಿಗಳು ರಾಜ್ಯ ಬಿಟ್ಟು ಹೋಗುವ ಮುನ್ನವೇ ಸೆರೆ ಹಿಡಿಯಲೂ ಕಾರ್ಯಾಚರಣೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ಮಂಗಳೂರು ಕೋಟೆಕಾರು ಬ್ಯಾಂಕ್​ ಕಳ್ಳತನ: ದರೋಡೆಕೋರರ ಚಲನವಲನ ಪತ್ತೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 20, 2025 11:40 AM