ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಲೇಖಕರು, ಕವಿಗಳು, ಕಲಾವಿದರು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಲೇಖಕಿ, ಅನುವಾದಕಿ ರೇಣುಕಾ ನಿಡಗುಂದಿ ಅವರ ಆಯ್ಕೆಗಳು ಇಲ್ಲಿವೆ.
ಕೃ: ಕಶಾಲಾ ಉದ್ಯಾಚಿ ಬಾತ್ (ಆತ್ಮಕಥನ)
ಲೇ: ಶಾಂತಾ ಹುಬ್ಳೀಕರ್
ಪ್ರ: ಶ್ರೀವಿದ್ಯಾ ಪ್ರಕಾಶನ
ಮರಾಠಿ ಚಿತ್ರನಟಿ ಗಾಯಕಿಯಾಗಿ ಪ್ರಖ್ಯಾತರಾಗಿದ್ದ ಶಾಂತಾ ಹುಬ್ಳೀಕರ್ ಅವರ ಆತ್ಮಕಥೆ ‘ಕಶಾಲಾ ಉದ್ಯಾಚಿ ಬಾತ್’ ಅಹರ್ನಿಶಿ ಪ್ರಕಾಶನ ಹೊರತಂದ ‘ನಾಳೀನ ಚಿಂತ್ಯಾಕ’ವನ್ನು ಕಡಪಡೆದು ಓದಿದ್ದೆನಾದರೂ ಮೂಲ ಮರಾಠಿಯಲ್ಲಿ ಓದಬೇಕೆಂಬ ಹಂಬಲಕ್ಕೆ ಪುಣೆಯಿಂದ ತರಿಸಿಕೊಂಡು ಓದಿದೆ.
ನಮ್ಮ ಶಿಲುಬೆಯನ್ನು ನಾವೇ ಹೊರಬೇಕು, ನಮ್ಮ ಬದುಕಿಗೆ ನಾವೇ ಸಂಪೂರ್ಣ ಜವಾಬ್ದಾರರು ಎನ್ನುವುದೆಲ್ಲ ನಮ್ಮನಮ್ಮ ಸಮಾಧಾನಕ್ಕಷ್ಟೇ. ಹುಟ್ಟುತ್ತಲೆ ಹತಭಾಗ್ಯರಾಗಿ ತಂದೆತಾಯಿಯ ಪ್ರೀತಿ ವಾತ್ಸಲ್ಯಗಳನ್ನು ಕಾಣದ ಮಕ್ಕಳನ್ನು ಜನರು ‘ಯಾರಿಗಾದರೂ ಕೊಟ್ಟುಬಿಡರಿ ಇವು ತಂದೆತಾಯಿಗಳನ್ನು ತಿಂದ ಮಕ್ಕಳು’ ಎನ್ನುತ್ತಿದ್ದರಂತೆ. ಆ ಮೂರು ಮಕ್ಕಳಲ್ಲಿ ಒಬ್ಬರು ಶಾಂತಾ ಹುಬ್ಳೀಕರ. ಹುಟ್ಟಿದ್ದು ಎಪ್ರಿಲ್ 14, 1914 ಹುಬ್ಬಳಿಯ ಅದರಗುಂಚಿಯಲ್ಲಿ. ಪುಣೆಯ ಉದ್ಯಮಿ ಬಾಪುಸಾಹೇಬ್ ಗಿತೆ ಅವರನ್ನು ಮದುವೆಯಾದ ಶಾಂತಾ ಬದುಕಿನಲ್ಲಿ ಉಂಡಿದ್ದು ಕಹಿಯನ್ನೇ. ಚಿತ್ರರಂಗದ ದಿಗ್ಗಜರಾದ ವಿ. ಶಾಂತಾರಾಮ್ ನಿರ್ದೇಶನದ ‘ಮಾಣೂಸ್‘ ( ಹಿಂದಿಯಲ್ಲಿ ‘ಆದಮಿ’) ಚಿತ್ರದ ಮೂಲಕ ಶಾಂತಾ ವಿಶಿಷ್ಟವಾದ ಛಾಪನ್ನು ಮೂಡಿಸಿದ್ದರು. ಮರಾಠಿ, ಕನ್ನಡ ಮತ್ತು ಹಿಂದಿ ಸೇರಿ ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದ್ದ ಶಾಂತಾ ಮರಾಠಿಯ ಮಾಣೂಸ್ ಚಿತ್ರಕ್ಕಾಗಿ ಚಿರಸ್ಮರಣೀಯರು. ಆ ಚಿತ್ರದ ಜನಪ್ರಿಯ ಗೀತೆ ‘ಕಶ್ಯಾಲಾ ಉದ್ಯಾಚಿ ಬಾತ್’ ಹಿಂದಿ ಪಂಜಾಬಿ ಸೇರಿ ಅನೇಕ ಭಾಷೆಗಳಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದಿದೆ. ಆಕೆ ನಟಿಸಿದ್ದು ಕೆಲವೇ ಕೆಲವು ಚಿತ್ರಗಳು.
ಅಷ್ಟೊಂದು ಹೆಸರು, ಕೀರ್ತಿ, ಹಣ, ಗೌರವವನ್ನು ಸಂಪಾದಿಸಿದ್ದ ಶಾಂತಾ ಅನಾಥರಂತೆ ವಸಯಿಯ ಶ್ರದ್ಧಾನಂದ ಆಶ್ರಮದಲ್ಲಿ ವಾಸಿಸಬೇಕಾಗಿದ್ದು ದುರಂತ. ಒಮ್ಮೆ ಆಕೆ ಆಶ್ರಮದ ಜನರೊಂದಿಗೆ ತಾವು ನಟಿಸಿದ್ದ ‘ಮಾಣೂಸ್’ ಚಿತ್ರ ಕ್ಯಾಸೆಟ್ಟನ್ನು ನೋಡುತ್ತಿರುತ್ತಾರೆ. ಶಾಂತಾ ಹುಬ್ಳೀಕರ್ ಅಭಿನಯವನ್ನು ಮೆಚ್ಚಿಕೊಂಡ ಹೆಣ್ಣುಮಕ್ಕಳು ಆಕೆ ಯಾಕೆ ಮತ್ತೆ ಅಭಿನಯಿಸಲಿಲ್ಲ? ಇತ್ಯಾದಿಯಾಗಿ ಚರ್ಚಿಸುತ್ತಾರೆ ಆದರೆ ಅಲ್ಲೇ ಕುಳಿತಿದ್ದ ಶಾಂತಾರನ್ನು ಗುರುತಿಸುವುದಿಲ್ಲ. ಜಗತ್ತೇ ಅವರನ್ನು ಮರೆತಿರುತ್ತದೆ. ಜನ ಆಕೆ ಸತ್ತಿರಬಹುದು ಎಂದುಕೊಂಡಿರುತ್ತಾರೆ. ಬದುಕಿದ್ದಾಗಲೇ ಸತ್ತಂತಿರುವುದಿದೆಯಲ್ಲ ಅದು ಎದೆಯೊಡೆಯುವಂಥದ್ದು.
ಮುಂದೆ ಲೋಕಸತ್ತಾ’ ಮರಾಠಿ ದೈನಿಕದಲ್ಲಿ ಸಂಪಾದಕ ಶ್ರೀಮಾಧವ ಗಡಕರಿ ಶಾಂತಾ ಹುಬ್ಳೀಕರ್ ಬಗ್ಗೆ ಲೇಖನಗಳನ್ನು ಬರೆದ ನಂತರ ಜಗತ್ತಿಗೆ ಆಕೆ ಜೀವಂತವಾಗಿರುವ ಸಂಗತಿ ಗೊತ್ತಾಗುತ್ತದೆ. ಆಕೆಯೇ ನಿರೂಪಿಸಿ ಬರೆಸಿದ ‘ಕಶಾಲಾ ಉದ್ಯಾಚಿ ಬಾತ್’ ಓದು ನಮ್ಮನ್ನು ವಿಷಾದದ ಮಡುವಿಗೆ ನೂಕುತ್ತದೆ. ಯಾರಿಗೂ ಬೇಡವಾದ ಮಕ್ಕಳಾಗಿ ಅಜ್ಜಿ, ಸಾಕುತಾಯಿ-ತಂದೆಯರ ಸಣ್ಣತನ, ಜಿಪುಣತನ, ಬಡತನ, ಬರಗಾಲ, ರೋಗ ರುಜಿನಗಳಲ್ಲಿ ಬಾಲ್ಯ ಕಳೆದರೆ, ಕಟ್ಟಿಕೊಂಡ ಉದ್ಯಮಪತಿಯೆಂಬ ಗಂಡನೂ ದುಗ್ಗಾಣಿಯನ್ನು ಬಿಡದೇ ಆಕೆ ಕಷ್ಟಪಟ್ಟು ಗಳಿಸಿದ್ದನ್ನು ಸುಳ್ಳು ಕಪಟದಿಂದ ದೋಚುತ್ತಾನೆ. ಹುಟ್ಟಿದ ಮಗನೂ ಅಪ್ಪನಿಗಿಂತ ದುಷ್ಟ, ತಾಯಿಯನ್ನು ನೋಡಿಕೊಳ್ಳುವುದಿಲ್ಲ.
ಅಷ್ಟೊಂದು ಖ್ಯಾತಿ, ಹಣ, ಬಂಗಲೆ ಎಲ್ಲವನ್ನೂ ಕೈಯ್ಯಾರೆ ಕಟ್ಟಿದ್ದ ಶಾಂತಾರಿಗೆ ಯಾವುದನ್ನೂ ಅವಳ ಬದುಕಿನಲ್ಲಿದ್ದ ಪುರುಷರು ಉಳಿಯಗೊಡುವುದಿಲ್ಲ. ಎಲ್ಲವನ್ನೂ ಕಳಕೊಂಡು ಉಣ್ಣಲು-ಉಡಲೂ ಇರದಂತೆ ಅಜ್ಞಾತವಾಗಿ ವೃದ್ಧಾಶ್ರಮದಲ್ಲಿ ಬದುಕಿದ್ದ ಶಾಂತಾರಿಗೆ ಬದುಕು ಅತ್ಯಂತ ಕ್ರೂರವಾಗಿ ನಡೆಸಿಕೊಂಡಾಗಲೂ ಆಕೆ ಕೊನೆತನಕ ಸೋಲುವುದಿಲ್ಲ. ಪ್ರತಿಕ್ಷಣವೂ ಒಂದು ಹೋರಾಟ, ಒಂದು ಯುದ್ಧದಂತೆ ಬದುಕುವ ನೂರಾರು ಹತಭಾಗ್ಯರಿಗೆ ಸ್ಪೂರ್ತಿಯಾಗಿ ಶಾಂತಾ ಹುಬ್ಳೀಕರ್ ಸದಾ ನೆನಪಲ್ಲಿರುತ್ತಾರೆ.
ಕೃ: ಸಿಂಗಾರೆವ್ವ ಮತ್ತು ಅರಮನೆ (ಕಾದಂಬರಿ)
ಲೇ: ಡಾ. ಚಂದ್ರಶೇಖರ ಕಂಬಾರ
ಪ್ರ: ಅಂಕಿತ ಪುಸ್ತಕ
ಸಿಂಗಾರೆವ್ವ ಹುಟ್ಟಿದ್ದೇ ಕಷ್ಟವನ್ನು ಉಣ್ಣಲು. ಪುರುಷಪ್ರಧಾನ ಸಮಾಜದಲ್ಲಿ ಗಂಡು ಇರುವುದೇ ಹೆಣ್ಣನ್ನು ಆಳಲು, ಅನುಭೋಗಿಸಲು ಎಂಬ ಸಿದ್ಧಮಾದರಿಗಳನ್ನೆಲ್ಲ ಮುರಿದು ಸಿಡಿದೇಳುವ ಸಿಂಗಾರೆವ್ವನ ಬಗ್ಗೆ ಮೆಚ್ಚುಗೆ ಮೂಡುತ್ತದೆ. ಪ್ರೀತಿ ಹುಟ್ಟುತ್ತದೆ.
ಗ್ರಾಮೀಣ ದೇಸಗತಿಯ ಮನೆತನದಲ್ಲಿ ನಡೆಯುವ ಘಟನೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ರಚಿಸಿದ ಈ ಕೃತಿಯಲ್ಲಿ ಕಂಬಾರರು ಬಳಸಿದ ಉತ್ತರ ಕರ್ನಾಟಕದ ಸೊಗಡಿನ ಭಾಷೆ, ಕಥನ ಶೈಲಿ ಕುತೂಹಲ ಕೆರಳಿಸುತ್ತದೆ. ಕಾದಂಬರಿ ಉದ್ದಕ್ಕೂ ಕಾಣುವ ಪುರುಷಾಹಂಕಾರದ ನೀಚತನಗಳು, ಸ್ವಾರ್ಥ, ಸಣ್ಣತನ, ದೈವಗಳು, ಆಚರಣೆಗಳು ಜನಪದರ ಲೋಕವನ್ನು ಅನಾವರಣಗೊಳಿಸುತ್ತವೆ. ನಾಟಕದ ಹುಚ್ಚಿನ ದೇಸಾಯಿ, ಆಸ್ತಿಗಾಗಿ ಸತ್ತ ಹೆಣಕ್ಕೂ ಮಗಳ ಮದುವೆ ಮಾಡಲು ಹೇಸದ ಗೌಡ, ಗೌಡನ ದರ್ಪ ಕ್ರೌರ್ಯದ ಎದುರು ಬಾಯಿಸತ್ತ ಗೌಡಶಾನಿಯರು. ಅದಕ್ಕೆ ಬಲಿಯಾದ ಸಿಂಗಾರೆವ್ವನ ಬಗ್ಗೆ ಓದುಗರಿಗೆ ಮೊದಲಿನಿಂದಲೇ ಆಕೆಯ ಬಗ್ಗೆ ಮೃದು ಭಾವನೆಯುಂಟಾಗುತ್ತದೆ. ಆಕೆಯ ಒಳ್ಳೆಯತನಕ್ಕೆ ಯಾವ ಬೆಲೆಯೂ ಇಲ್ಲವೆಂದು ಅನಿಸಿದಾಗ ಆಕೆಯ ಬಗ್ಗೆ ಕನಿಕರ ಹುಟ್ಟುತ್ತದೆ. ಆಕೆಯ ಬಗ್ಗೆ ಇನಿಸೂ ಕನಿಕರಿಸದ, ಅಂತಃಕರಣ ಕರಗದ ದೇಸಾಯಿಯನ್ನು, ಈ ಅರಮನೆಯನ್ನು ಬಿಟ್ಟು ಆಕೆ ಹೋಗುವುದಾದರೂ ಎಲ್ಲಿಗೆ?
ಸಿಂಗಾರೆವ್ವನ ಔದಾರ್ಯವನ್ನು, ದೊಡ್ದಗುಣವನ್ನು, ಕೊಂಡಾಡುತ್ತಿದ್ದ ಊರವರು ನಂಜಿಯ ಬಸಿರನ್ನು ಸಿಂಗಾರೆವ್ವ ಸ್ಪರ್ಷಿಸಿದ್ದಕ್ಕೆ ಆಕೆಗೆ ಗರ್ಭಪಾತವಾಯಿತೆಂದೂ ಆಕೆ ಬಂಜೆಯೆಂದು ಹೀಯಾಳಿಸಲೂ, ಶಪಿಸಲೂ ಹಿಂದೆಮುಂದೆ ನೋಡುವುದಿಲ್ಲ. ತಂದೆಯಾದ ಗೌಡ ಕೂಡ ತನಗೆ ಗಂಡುಮಗ ಹುಟ್ಟಿದ ಸಂತೋಷದ ಸುದ್ದಿಯನ್ನು ಹೇಳುವುದರೊಂದಿಗೆ ಮಗಳಿಗೆ ಹುಟ್ಟಿದ ತಮ್ಮನನ್ನು ದತ್ತು ತೆಗೆದುಕೊಳ್ಳು ಎಂದು ಪುಸಲಾಯಿಸಿ ಮನವೊಲಿಸಲು ನೋಡುತ್ತಾನೆ, ಹೀಗಾದರೆ ಮಗಳ ಆಸ್ತಿಯೂ ತನಗೇ ಬರುತ್ತದೆ ಎಂಬ ಯೋಚನೆ. ಸಿಂಗಾರೆವ್ವನನ್ನು ರೋಗಿಷ್ಟನಂತಿದ್ದ ದೇಸಾಯಿಗೆ ಲಗ್ನ ಮಾಡಿಕೊಡುವುದರ ಉದ್ದೇಶವೂ ಆತ ಬೇಗನೇ ಸಾಯುತ್ತಾನೆ ದೇಸಗತಿಯ ಆಸ್ತಿಯೂ ತನಗೇ ಆಗುತ್ತದೆಂದು ಅಂದುಕೊಂಡಿದ್ದನೋ ಏನೋ ಅದರೆ ದೇಸಾಯಿ ಸಾಯುವುದಿಲ್ಲ.
ನಾಟಕದ ಖಯಾಲಿ, ಹೆಣ್ಣಿನ ಖಯಾಲಿನ ದೇಸಾಯಿಗೆ ಸಿಂಗಾರೆವ್ವ ಪ್ರೀತಿಗಾಗಿ ಹಂಬಲಿಸುವ ಹೆಣ್ಣಾಗಿ ಕಾಣುವುದಿಲ್ಲ. ಆತ ನಾಟಕದ ಚಿಮಣಾಳಲ್ಲಿ ಹುಡುಕುವ ಎಲ್ಲವನ್ನೂ ಬಾಚಿಕೊಡಬಲ್ಲ ಹೆಣ್ಣಾಗಿ ಕಾಣುವುದಿಲ್ಲ. ಸಿಂಗಾರೆವ್ವ ದೊರೆಸಾನಿಯಾಗಿ ಈ ಅರಮನೆಯ ಆಸ್ತಿ, ಅರಮನೆಯ ಪ್ರತಿಷ್ಠೆ, ಘನತೆಯ ಜವಾಬ್ದಾರಿಯನ್ನು ಹೊತ್ತ ದೊರೆಸಾನಿ. ದೈಹಿಕವಾದ ಬಯಕೆಗಳು, ಕಾಮವೆಂಬುದು ಗಂಡಸಿಗೇ ಮೀಸಲು. ಸ್ತ್ರೀಸಹಜ ತಾಯ್ತನವನ್ನೂ ಆಕೆ ಬಯಸುವುದು ಸ್ವತಂತ್ರವಾಗಿಯಲ್ಲ, ಗಂಡಿನ ಅಣತಿಯಂತೆ, ಹೆಣ್ಣಿನದು ಏನಿದ್ದರೂ ಅಡುಗೆ ಮಾಡಿ ನೀಡುವುದು, ಆರೈಕೆ ಮಾಡುವುದು ಅಷ್ಟೇ. ಹೊಲೆಯ ಮರ್ಯಾನ ಪಾತ್ರ ಗಮನಸೆಳೆಯುತ್ತದೆ. ಬಾಲ್ಯದಿಂದಲೂ ಜೊತೆಯಾಗಿದ್ದ, ಮರ್ಯ್ಯಾನಿಗೆ ಶಿನಿಂಗಿ, ಸಿಂಗಾರೆವ್ವ ತಮ್ಮ ತಾಟಿನಿಂದ ರೊಟ್ಟಿ ಕದ್ದು ಉಣಿಸಿದ ಸಮವಯಸ್ಕರು. ಸಿಂಗಾರೆವ್ವನ ಮೇಲೆ ಮರ್ಯಾನಿಗೆ ಪ್ರೀತಿಯಂಥದ್ದು ಏನೋ ಇದೆ ಎಂದು ಓದಗರಿಗೆ ಮೊದಲೇ ಗೊತ್ತಾಗುತ್ತದೆ, ಅದು ಸಿಂಗಾರೆವ್ವನಿಗೆ ಗೊತ್ತಿತ್ತೋ ಇಲ್ಲವೋ ಎನ್ನುವಂತಿರುತ್ತಾಳೆ. ಗೊತ್ತಿದ್ದರೂ ಆಕೆಗೂ ಜಾತಿ ಅಂತಸ್ತುಗಳ ಅರಿವು ಬಾಯಿಕಟ್ಟಿರಬಹುದು. ಆದರೆ ಕೊನೆಯಲ್ಲಿ ಆಕೆ ಮರ್ಯಾನನ್ನು ಸ್ವೀಕರಿಸುತ್ತಾಳೆ. ತಾನು ಬಂಜೆಯಾಗಿ ಸಾಯುವುದಿಲ್ಲ, ಸಾಯಬಾರದು ಎಂಬ ಬಯಕೆ ಅವಳ ಹೆಣ್ತನವನ್ನು ಸಾಯಗೊಡುವುದಿಲ್ಲ.
ಗೌಡ ಅವಳಿಗೆ ತಮ್ಮನನ್ನು ದತ್ತು ತೆಗೆದುಕೊಳ್ಳಲು ಹೇಳಿದಾಗ ಮತ್ತು ದೇಸಾಯಿ ಅವಳನ್ನು ಹಾದರಗಿತ್ತಿ ಎಂದು ಜರಿದಾಗ ಸಿಂಗಾರೆವ್ವನ ಕೋಪ ಕೆರಳಿ ಧಗಧಗ ಉರಿಯುವ ಕೊಳ್ಳಿಯಂತೆ ಹೇಳುವ ಮಾತುಗಳು ಮನಕಲಕುತ್ತವೆ. ‘ಸಿಂಗಾರೆವ್ವ ಮತ್ತು ಅರಮನೆ’ ಮಲೆಯಾಳಂ ಭಾಷೆಗೆ ಅನುವಾದವಾದಾಗ ಬಹಳ ಚರ್ಚೆಯಾಗಿತ್ತಂತೆ. ಸಿಂಗಾರೆವ್ವ ಬಹುದೊಡ್ದ ಫೆಮಿನಿಸ್ಟ್ ಅಲ್ಲವೇ? ಎನ್ನುವ ಅಪ್ಪುಕುಟ್ಟನ್ ಮಾತು ನಮ್ಮೊಳಗೂ ಧ್ವನಿಸುತ್ತದೆ. ಸಿಂಗಾರೆವ್ವ ನಮ್ಮ ಅಂತಃಕರಣವನ್ನು ಮೀಟಿ ನೆಲೆಯೂರಿನಿಲ್ಲುತ್ತಾಳೆ. ಪುರುಷ ಕೇಂದ್ರಿತ ಸಾಮಾಜಿಕ ಕಟ್ಟಳೆಯನ್ನು ತಿರಸ್ಕರಿಸಿದ ಸಿಂಗಾರೆವ್ವ ಗಂಡಸ್ತನದ ಬುಡಕ್ಕೆ ಕೊಡಲಿಯೇಟು ಕೊಟ್ಟರೂ ಅರಮನೆ ಶಾಲೆಯಾಗುವುದರ ಮೂಲಕ ಆಕೆ ಸತ್ತು ಬದುಕುತ್ತಾಳೆ.
Published On - 12:47 pm, Wed, 30 December 20