ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಅನುವಾದಕ, ಕವಿ ಚಿದಂಬರ ನರೇಂದ್ರ ಅವರ ಆಯ್ಕೆಗಳು ಇಲ್ಲಿವೆ.
ಕೃ: Hsin Hsin Ming – The book of nothing by OSHO
ಲೇ: OSHO
ಪ್ರ: Osho Media International
ಓಶೋ ತಮ್ಮ ಅಧ್ಯಾತ್ಮಿಕ ಚಿಂತನೆಯನ್ನ ಕಾರ್ಯರೂಪಕ್ಕೆ ತರಲು ಬಳಸಿರಬಹುದು ಎನ್ನಲಾಗುವ ವಿಧಾನಗಳ ಬಗ್ಗೆ ಕೆಲವರಿಗಾದರೂ ಅಸಮಾಧಾನ ಇರಬಹುದು ಆದರೆ ಅವರ ಪ್ರಚಂಡ ಓದು, ಅತ್ಯಂತ ಕಠಿಣ ವಿಷಯವನ್ನೂ ಸುಲಭವಾಗಿ ಉದಾಹರಣೆಗಳ ಮೂಲಕ, ಕತೆ ಕವಿತೆಗಳ ಮೂಲಕ ವ್ಯಾಖ್ಯಾನ ಮಾಡುವ ಸರಸ ವಿಧಾನವನ್ನು ಇಷ್ಟಪಡದವರು ಇಲ್ಲವೇ ಇಲ್ಲ. ಅಧ್ಯಾತ್ಮದ ಬಗೆಗಿನ ನನ್ನ ಆಸಕ್ತಿಯನ್ನು ಬಲ್ಲ ಫ್ರೆಂಡ್ ಒಬ್ಬರು, ಓಶೋ ವ್ಯಾಖ್ಯಾನ ಮಾಡಿದ ‘Hsin Hsin Ming – The book of nothing ‘ ಓದಲು ಒತ್ತಾಯ ಮಾಡಿದಾಗ ಹಿಂಜರಿಕೆಯಿಂದಲೇ ಓದಲು ಶುರುಮಾಡಿದ ನಾನು ಇದನ್ನ ಕನ್ನಡದಲ್ಲಿ ಬರೆಯುವುದೇ ಈ ಪುಸ್ತಕವನ್ನ ಓದುವ ಅತ್ಯುತ್ತಮ ಬಗೆ ಎಂದು ತಿರ್ಮಾನಿಸಿ ಅನುವಾದವನ್ನೂ ಜೊತೆಜೊತೆಗೆ ಶುರುಮಾಡಿಬಿಟ್ಟೆ.
ಮೂರನೇ ತಲೆಮಾರಿನ ಝೆನ್ ಸಾಧಕ ಸೊಸಾನ್ ವಚನಗಳ ಮಾದರಿಯಲ್ಲಿ ರಚಿಸಿರುವ ಈ ದೀರ್ಘ ಸೂತ್ರವನ್ನು ರಜನೀಶ್ ತಮ್ಮ ಎಂದಿನ ಸರಸ ಶೈಲಿಯಲ್ಲಿ ಅತ್ಯಂತ ಆಪ್ತವಾಗಿ ವ್ಯಾಖ್ಯಾನ ಮಾಡಿದ್ದಾರೆ. ಝೆನ್ ತಿಳಿವಳಿಕೆಯ ಮೂಲಕ ಬುದ್ಧಿ-ಮನಸ್ಸು, ಪ್ರಜ್ಞೆ, ಅರಿವು, ಶೂನ್ಯ ಭಾವ, ಮಧ್ಯಮ ಮಾರ್ಗ, ಅಧ್ಯಾತ್ಮದ ಹಾದಿ, ಆಲೋಚನೆಗಳು ಸಾಧ್ಯಮಾಡುವ ದ್ವಂದ್ವಗಳು, ಕನಸುಗಳು, ನಮ್ಮ ನಂಬಿಕೆಗಳು, ಅದ್ವೈತ ಮುಂತಾದವನ್ನು ಸೊಸಾನ್ ನ ಸೂತ್ರಗಳ ಆಧಾರದಲ್ಲಿ ಓಶೋ ಅದ್ಭುತವಾಗಿ ವಿವರಿಸುತ್ತಾರೆ. ನನಗಂತೂ ಸೊಸಾನ್-ಓಶೋ ರ ಸೂತ್ರ-ವ್ಯಾಖ್ಯಾನ ಹಲವು ಸಂಶಯಗಳಿಂದ ಪಾರಾಗುವಲ್ಲಿ ಸಹಾಯಮಾಡಿದೆ ಮಾಡುತ್ತಿದೆ. ಅಧ್ಯಾತ್ಮ ಅಂತಿಲ್ಲದಿದ್ದರೂ ಮನುಷ್ಯ ಸ್ವಭಾವದ ದ್ವಂದ್ವಗಳ ಬಗ್ಗೆ ಆಸಕ್ತಿ ಇರುವ ಎಲ್ಲರೂ ಓದಲೇ ಬೇಕಾದ ಕೃತಿ ಇದು.
ಕೃ: Caste Matters
ಲೇ: Sooraj Yengde
ಪ್ರ: Penguin Viking
ಕಳೆದ ವರ್ಷದ ಓದಿನಲ್ಲಿ ನನ್ನನ್ನ ಅತಿ ಹೆಚ್ಚು ಪ್ರಭಾವಿಸಿದ ಪುಸ್ತಕ, ದಲಿತ ಚಿಂತಕ ಸೂರಜ್ ಯೇಂಗ್ಡೆ ಯವರ Caste Matters. ತಮ್ಮ ದಲಿತ ಬದುಕಿನ ಅನುಭವಗಳನ್ನ ಹಾಗೂ ಭಾರತದಲ್ಲಿನ ದಲಿತರ ಸ್ಥಿತಿಗತಿಗಳನ್ನ ತಮ್ಮ ಪ್ರಖರ ಚಿಂತನೆಗಳನ ಮೂಲಕ, ಸಮರ್ಥ ದಾಖಲೆಗಳೊಂದಿಗೆ ಅತ್ಯಂತ ಮಾನವೀಯ ನೆಲೆಯಲ್ಲಿ ನಿರೂಪಿಸಿರುವ ಸೂರಜ್ ಯೇಂಗ್ಡೆ ಹಾವರ್ಡ್ ಕೆನಡಿ ಸ್ಕೂಲ್ ನ ಪೋಸ್ಟ್ ಡಾಕ್ಟರಲ್ ಫೆಲೋ. ಈ ಪುಸ್ತಕದಲ್ಲಿ ಎರಡನೇ ತಲೆಮಾರಿನ ದಲಿತ ಚಿಂತಕ ಸೂರಜ್, ಭಾರತದಲ್ಲಿ ಜಾತಿಯ ಬಗೆಗಿನ ಆಳ ನಂಬಿಕೆಗಳನ್ನ, ಜಾತಿ ಪದ್ಧತಿಯ ಅನೇಕ ಪದರುಗಳನ್ನ ಮತ್ತು ತಾವು ಬಾಲ್ಯದಲ್ಲಿ ದಿನನಿತ್ಯ ದಲಿತ ಬಸ್ತಿಯಲ್ಲಿ ಅನುಭವಿಸಿದ ಅನೇಕ ಅವಮಾನಗಳನ್ನ ಹಾಗು ದಲಿತರು ಈ ಪರಿಸ್ಥಿತಿಗಳನ್ನ ಸಮರ್ಥವಾಗಿ ಎದೆಗುಂದದೆ ಎದುರಿಸಿದ ಉದಾಹರಣೆಗಳನ್ನ ತಮ್ಮ ಪ್ರೇಮಮಯ ತಮಾಷೆಯ ಶೈಲಿಯಲ್ಲಿ ಈ ಪುಸ್ತಕದಲ್ಲಿ ನಿರೂಪಿಸುತ್ತಾರೆ.
ರಾಜಕಾರಣದಲ್ಲಿ, ಅಧಿಕಾರಶಾಹಿಯಲ್ಲಿ, ನ್ಯಾಯಾಂಗದಲ್ಲಿ ದಲಿತರು ಅನುಭವಿಸುವ ಭೇದಭಾವಗಳು, ದಲಿತರಲ್ಲಿಯೇ ಒಳಪಂಗಡಗಳ ನಡುವಿನ ಸಂಘರ್ಷ, ಕಲಿತ ದಲಿತರ ಹಿಂಜರಿಕೆಗಳು ಮತ್ತು ಈ ಎಲ್ಲದರ ಹಿಂದೆ ಕೆಲಸ ಮಾಡುತ್ತಿರುವ ಬ್ರಾಹ್ಮಣ್ಯದ ಸಂಚುಗಳು, ಬ್ರಾಹ್ಮಣ್ಯದ ವಿರುದ್ಧ ಸಿಡಿದು ನಿಂತ ಬ್ರಾಹ್ಮಣರು ಈ ಎಲ್ಲವನ್ನೂ ಸೂರಜ್ ಅತ್ಯಂತ ಪ್ರಾಮಾಣಿಕವಾಗಿ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಭಾರತದಲ್ಲಿನ ಅತ್ಯಂತ ಕ್ರೂರ ಜಾತಿ ಪದ್ಧತಿಯ ಬಗ್ಗೆ ತಮ್ಮ ವಿಚಾರಗಳನ್ನ ಇನ್ನೂ ರೂಪಿಸಿಕೊಳ್ಳುತ್ತಿರುವ ಎಲ್ಲ ಯುವಕ ಯುವತಿಯರು ಓದಲೇ ಬೇಕಾದ ಪುಸ್ತಕ Caste Matters by Sooraj Yengde.
Published On - 4:18 pm, Wed, 30 December 20