ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಕಥೆಗಾರ್ತಿ ದೀಪ್ತಿ ಭದ್ರಾವತಿ
‘ಕೊಂಡಪಲ್ಲಿ ಕೋಟೇಶ್ವರಮ್ಮನ ತಾರುಣ್ಯವೆಲ್ಲವೂ ಪೊಲೀಸರಿಂದ ತಪ್ಪಿಸಿಕೊಳ್ಳುವುದರಲ್ಲಿ ಕಳೆದು ಹೋಗುತ್ತದೆ. ಅಲೆಮಾರಿ ಬದುಕು. ಆದರೂ ಎದೆಯೊಳಗಿನ ಹೋರಾಟದ ಕಿಚ್ಚು ಆರುವುದಿಲ್ಲ. ನಂಬಿದ ತತ್ವಕ್ಕೆ ವಿಮುಖಳಾಗುವುದಿಲ್ಲ. ತಾನು ನಂಬಿದ ಪಕ್ಷ ಒಡೆದು ಹೋಳಾದ ಮೇಲೆಯೂ ಎಂದಾದರೂ ಒಂದಾಗಲಿ ಎಂದು ಬಯಸುವ ಈಕೆ, 38 ವರ್ಷಗಳ ನಂತರ ಗಂಡ ಹಿಂತಿರುಗಿದ ಮೇಲೆಯೂ ಏನೂ ದೂರದೆ ಶುದ್ಧ ಮಾನವೀಯ ಅಂತ:ಕರಣದಿಂದ ಸಹಿಸಿಕೊಳ್ಳುತ್ತಾಳೆ.' ದೀಪ್ತಿ ಭದ್ರಾವತಿ.
ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಕಥೆಗಾರ್ತಿ ದೀಪ್ತಿ ಭದ್ರಾವತಿ ಅವರ ಆಯ್ಕೆಗಳು ಇಲ್ಲಿವೆ.
ಕೃ: ಮಧ್ಯಘಟ್ಟ ಲೇ: ಶಿವಾನಂದ ಕಳವೆ ಪ್ರ: ಸಾಹಿತ್ಯ ಪ್ರಕಾಶನ
ಕೋವಿಡ್ ವಾರಿಯರ್ ಎನ್ನುವ ಜವಬ್ದಾರಿ ಬೆನ್ನೇರಿದ ಕಾರಣ ಈ ವರ್ಷ ಓದಿದ್ದು ತುಸು ಕಡಿಮೆಯೇ. ಆದರೆ ಓದಿದ ಪುಸ್ತಕಗಳು ಒತ್ತಡದ ನಡುವೆಯೂ ಹೊಸ ಉಸಿರು ಹೆಕ್ಕಿ ಕೊಟ್ಟಿವೆ. ಹಾಗೆ ಜೊತೆಯಾದ ಪುಸ್ತಕ ‘ಮಧ್ಯಘಟ್ಟ’. ಕಾದಂಬರಿಯ ಸಿದ್ಧ ಚೌಕಟ್ಟಿಗೆ ಒಳಪಡದೆ ಸರಳ ಸುಲಲಿತ ಓದಿನಿಂದಾಗಿ ಈ ಹೊತ್ತಿಗೆ ಭಿನ್ನವಾಗಿ ನಿಲ್ಲುತ್ತದೆ. ಒಂದು ಕಾಲಮಾನದ ಕತೆಯನ್ನು ವಿಷಯವಸ್ತುವಾಗಿ ಉಳ್ಳ ಈ ಕಾದಂಬರಿ ಆ ಹೊತ್ತಿನ ಬದುಕನ್ನು ಎಳೆಎಳೆಯಾಗಿ ಹರವುತ್ತ ಸಾಗುತ್ತದೆ. ಮೇಲ್ನೋಟಕ್ಕೆ ಇದು ಯಾವುದೋ ಒಂದು ಸಂಸಾರದ ಕತೆ ಎನ್ನಿಸಿದರು.
ಆ ಮೂಲಕ ಇಡೀ ಮಧ್ಯಘಟ್ಟ ಎನ್ನುವ ಕಾಡಿನೊಳಗೆ ಕಟ್ಟಿಕೊಂಡ ಅನೇಕ ಬದುಕುಗಳು ಅನಾವರಣಗೊಳ್ಳುತ್ತ ಹೋಗುತ್ತದೆ. ಹಾಗಾಗಿ ಇದನ್ನು ನೆಲ, ಜಲ, ಮತ್ತು ಬೇರಿನ ಕತೆ ಎನ್ನಬಹುದು. ಅಷ್ಟೇ ಆಗಿರದೆ ಆಗಿನ, ಬಡತನ, ಸ್ತ್ರೀಯರ ಸಾಮಾಜಿಕ ಬದುಕು, ಪರಿಸರ ಪ್ರಜ್ಞೆ ಬದುಕನ್ನು ಬಂದಂತೆ ಎದುರಿಸುತ್ತ ಹೋಗುವ ಕಲೆ. ಮನುಷ್ಯ ಪ್ರಕೃತಿಯೊಂದಿಗೆ ಒಳಗೊಳ್ಳುವ ರೀತಿ ಎಲ್ಲವೂ ಈ ಕಾದಂಬರಿಯಲ್ಲಿ ಸಮ್ಮಿಳಿತವಾಗಿವೆ. ಸ್ಥಳೀಯ ಹವ್ಯಕ ಭಾಷೆ ಓದಿನ ಓಘಕ್ಕೆ ಕೊಂಚವೂ ಧಕ್ಕೆಯಾಗದಂತೆ ಬಳಸಿಕೊಳ್ಳಲಾಗಿದೆ. ಇಲ್ಲಿರುವ ಎಲ್ಲ ಪಾತ್ರಗಳು ತಮ್ಮ ತಮ್ಮ ಪರಿಧಿಯಲ್ಲಿ ಇಡೀ ಒಂದು ಶತಮಾನದ ಅನುಭವವನ್ನು ಮತ್ತು ಅದರ ಹೊರಳುವಿಕೆಯನ್ನು ಕಟ್ಟಿಕೊಡುವಲ್ಲಿ ಶ್ರಮಿಸುತ್ತವೆ.
ಕೃ: ಒಂಟಿ ಸೇತುವೆ (ಆತ್ಮ ಕಥನ) ಲೇ: ಕೊಂಡಪಲ್ಲಿ ಕೋಟೇಶ್ವರಮ್ಮ (ತೆಲುಗು) ಕನ್ನಡಕ್ಕೆ: ಸ. ರಘುನಾಥ ಪ್ರ: ನವಕರ್ನಾಟಕ ಪಬ್ಲಿಕೇಷನ್
ಅತೀ ಕಾಡಿದ ನಿದ್ದೆಗೆಡಿಸಿದ ಪುಸ್ತಕ ಇದು. ಕೊಂಡಪಲ್ಲಿ ಕೋಟೇಶ್ವರಮ್ಮ ಎನ್ನುವ ಹಿರಿಯ ಜೀವದ ಜೀವನಗಾಥೆ. ಅರಿವು ಮೂಡುವೆ ಮೊದಲೆ ಬಾಲ ವಿಧವೆಯ ಪಟ್ಟ ಹೊತ್ತು. ತದನಂತರ ಮರುವಿವಾಹವಾಗಿ ಗಂಡನ ಜೊತೆಗೂಡಿ ಇಡೀ ಬದುಕನ್ನು ಸಮಾಜಕ್ಕೋಸ್ಕರ ಮುಡಿಪಿಟ್ಟ ಸ್ತ್ರೀಯ ಕಥನ. ಆದರೆ ಆಕೆಯ ಹೋರಾಟದ ಬದುಕು ಎಂದೂ ಹಸನಾಗುವುದಿಲ್ಲ. ಅತೀ ನಂಬಿದ ಗಂಡ ಅರ್ಧದಲ್ಲಿಯೇ ಕೈ ಬಿಟ್ಟು ಹೋಗುತ್ತಾನೆ. ಬೆಳೆದು ನಿಂತ ಮಗ ಪೋಲೀಸರ ಗುಂಡಿಗೆ ಬಲಿಯಾಗುತ್ತಾರೆ. ಮಗಳು ಪುಟ್ಟ ಎರಡು ಮಕ್ಕಳ ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅಳಿಯ ಮರಣ ಹೊಂದುತ್ತಾನೆ. ಇಡೀ ಬದುಕು ದುರಂತಮಯ. ತಾರುಣ್ಯವೆಲ್ಲಾ ಪೊಲೀಸರಿಂದ ತಪ್ಪಿಸಿಕೊಳ್ಳುವುದರಲ್ಲಿ ಕಳೆದು ಹೋಗುತ್ತದೆ. ಅಲೆಮಾರಿ ಬದುಕು. ಆದರೂ ಎದೆಯೊಳಗಿನ ಹೋರಾಟದ ಕಿಚ್ಚು ಆರುವುದಿಲ್ಲ. ತಾನು ನಂಬಿದ ತತ್ವಕ್ಕೆ ವಿಮುಖಳಾಗುವುದಿಲ್ಲ. ಹಿಡಿದ ದಾರಿಯ ಬಿಟ್ಟು ನಡೆವುದೇ ಇಲ್ಲ. ತಾನು ನಂಬಿದ ಪಕ್ಷ ಒಡೆದು ಹೋಳಾದ ಮೇಲೆಯೂ ಎಂದಾದರೂ ಒಂದಾಗಲಿ ಎಂದು ಬಯಸುವ ಈಕೆ, 38 ವರ್ಷಗಳ ನಂತರ ಗಂಡ ಹಿಂತಿರುಗಿದ ಮೇಲೆಯೂ ಏನೂ ದೂರದೆ ಶುದ್ಧ ಮಾನವೀಯ ಅಂತ:ಕರಣದಿಂದ ಸಹಿಸಿಕೊಳ್ಳುತ್ತಾಳೆ.
ವೈಯಕ್ತಿಕ ಬದುಕಿಗಾಗಿ ಒಂದೊಂದು ರೂಪಾಯಿಗೂ ಒದ್ದಾಡುವ ಅಷ್ಟಾದರೂ ಯಾರ ಮುಂದೆಯೂ ಕೈ ಒಡ್ಡದೆ ಸ್ವಾಭಿಮಾನಿಯಾಗಿ ಸವೆಯುವ ಈ ಜೀವದ ಕತೆ ಹೇಳಿ ಮುಗಿಯುವಂತದ್ದಲ್ಲ. ನಕ್ಸಲ್ ಚಳುವಳಿ, ರಾಷ್ಟ್ರೀಯ ಚಳವಳಿ, ಕಮ್ಯೂನಿಸ್ಟ್ ಚಳವಳಿ, ಸುಧಾರಣಾ ಚಳವಳಿ. ಹೋರಾಟದ ರೂಪುರೇಷೆ. ಆಗಿನ ರಾಜಕೀಯ ವ್ಯವಸ್ಥೆ ಈ ಎಲ್ಲವೂ ಇಲ್ಲಿದೆ. ಆದರೆ ಯಾವ ಘೋಷಣೆಗಳಿಲ್ಲ. ಬಿಡುಬೀಸಾದ ಹೇಳಿಕೆಗಳಿಲ್ಲ. ಉತ್ಪೇಕ್ಷೆಗಳಿಲ್ಲ. ‘ಈ ಪುಸ್ತಕ ಬರೆದದ್ದು ಕೂಡ ನನ್ನ ಸಲುವಾಗಿ ಅಲ್ಲ’ ಎನ್ನುವ ವಿನಯವಂತಿಕೆ ಮಾತು ಈ ಪುಸ್ತಕಕ್ಕೆ ಮತ್ತಷ್ಟು ಮೆರುಗು ಕೊಟ್ಟಿದೆ. ತಮ್ಮ ನೋವುಗಳನ್ನೇ ಭೂತದಂತೆ ನೋಡುವ ಎಲ್ಲರೂ ಓದಬೇಕಾದ ಪುಸ್ತಕ ಇದು.
Published On - 2:38 pm, Thu, 31 December 20