- Kannada News Photo gallery Cricket photos Shafali Verma becomes first-ever Indian batter to score 800 runs in WPL
WPL ನಲ್ಲಿ ಹೊಸ ಇತಿಹಾಸ ರಚಿಸಿದ ಲೇಡಿ ಸೆಹ್ವಾಗ್
WPL 2025 Shafali Verma: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಲೇಡಿ ಸೆಹ್ವಾಗ್ ಎಂದೇ ಫೇಮಸ್. ಮಾಜಿ ಡ್ಯಾಶಿಂಗ್ ಒಪನರ್ ಸೆಹ್ವಾಗ್ ರೀತಿಯಲ್ಲಿ ಬ್ಯಾಟ್ ಬೀಸುತ್ತಿರುವುದರಿಂದ ಶಫಾಲಿಗೆ ಈ ಹೆಸರು ಲಭಿಸಿದೆ. ಅದಕ್ಕೆ ತಕ್ಕಂತೆ ಶಫಾಲಿ ವರ್ಮಾ ವುಮೆನ್ಸ್ ಪ್ರೀಮಿಯರ್ ಲೀಗ್‌ನ 14ನೇ ಪಂದ್ಯದಲ್ಲಿ ಅಬ್ಬರಿಸಿದ್ದಾರೆ.
Updated on: Mar 02, 2025 | 11:08 AM

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಶಫಾಲಿ ವರ್ಮಾ ಅಬ್ಬರ ಮುಂದುವರೆದಿದೆ. ಶನಿವಾರ (ಮಾ.೧) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದ ಶಫಾಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ಎಲ್ಲಿಸ್ ಪೆರ್ರಿ 47 ಎಸೆತಗಳಲ್ಲಿ 60 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಆರ್ಸಿಬಿ ತಂಡವು 20 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತು.

148 ರನ್ ಗಳ ಗುರಿಯೊಂದಿಗೆ ಇನಿಂಗ್ಸ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಶಫಾಲಿ ವರ್ಮಾ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್‌ನಿಂದಲೇ ಆರ್ಸಿಬಿ ಬೌಲರ್‌ಗಳ ಬೆಂಡೆತ್ತಿದ ಶಫಾಲಿ ಸಿಕ್ಸ್-ಫೋರ್ ಗಳ ಸುರಿಮಳೆಗೈದರು.

ಪರಿಣಾಮ ಶಫಾಲಿ ವರ್ಮಾ ಬ್ಯಾಟ್ ನಿಂದ 43 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 8 ಫೋರ್ ಒಳಗೊಂಡಂತೆ 80 ರನ್ ಮೂಡಿಬಂತು. ಅತ್ತ ಜೆಸ್ ಜೊನ್ಸೆನ್ 61 ರನ್ ಗಳ ಕೊಡುಗೆ ನೀಡಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು 15.3 ಓವರುಗಳಲ್ಲಿ 151 ರನ್ ಬಾರಿಸಿ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಇನ್ನು ಈ ಪಂದ್ಯದಲ್ಲಿ ಬಾರಿಸಿದ 80 ರನ್ ಗಳೊಂದಿಗೆ ಶಫಾಲಿ ವರ್ಮಾ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ 800 ರನ್ ಪೂರೈಸಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಶಫಾಲಿ ತಮ್ಮದಾಗಿಸಿಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಪರ ಈವರೆಗೆ 25 ಇನಿಂಗ್ಸ್ ಆಡಿರುವ ಶಫಾಲಿ ವರ್ಮಾ 6 ಅರ್ಧಶತಕಗಳೊಂದಿಗೆ ಒಟ್ಟು 821 ರನ್ ಕಲೆಹಾಕಿದ್ದಾರೆ. ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ 800+ ರನ್ ಕಲೆಹಾಕಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಎಲ್ಲಿಸ್ ಪೆರ್ರಿ (895) ಹಾಗೂ ಮೆಗ್ ಲ್ಯಾನಿಂಗ್ (847) ಮಾತ್ರ ಈ ಸಾಧನೆ ಮಾಡಿದ್ದರು. ಇದೀಗ ಈ ರನ್ ಸರದಾರಿಣಿಯರ ಪಟ್ಟಿಗೆ ಶಫಾಲಿ ವರ್ಮಾ ಕೂಡ ಎಂಟ್ರಿ ಕೊಟ್ಟಿದ್ದಾರೆ.



















