ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ಆರಂಭಿಸುವುದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ: ಕುಮಾರಸ್ವಾಮಿ
ಬಲ್ಡೋಟಾ ಕಾರ್ಖಾನೆ ಆರಂಭಕ್ಕೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಕೊಪ್ಪಳದ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ಆರಂಭಿಸುವುದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ. ಬಲ್ಡೋಟಾ ಕಾರ್ಖಾನೆ ರಾಜ್ಯ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಕೊಪ್ಪಳ, ಮಾರ್ಚ್ 02: ಬಲ್ಡೋಟಾ ಕಾರ್ಖಾನೆ ಆರಂಭಕ್ಕೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಕೊಪ್ಪಳದ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಒಂದು ದಿನ ಕೊಪ್ಪಳ ನಗರ ಬಂದ್ಗೆ ಕರೆ ನೀಡಲಾಗಿತ್ತು. ರವಿವಾರ (ಮಾರ್ಚ್ 02) ಕೊಪ್ಪಳ ನಗರಕ್ಕೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಭೇಟಿ ನೀಡಿದರು. ಈ ವೇಳೆ, ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸದಂತೆ ಸ್ಥಳೀಯರು ಹೆಚ್ಡಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, “ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ. ಬಲ್ಡೋಟಾ ಕಾರ್ಖಾನೆ ರಾಜ್ಯ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ. ಕೇಂದ್ರ ಸರ್ಕಾರದ ಮುಂದೆ ಈ ಪ್ರಸ್ತಾವನೆ ಬಂದಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್ಡಿಕೆ ಹೇಳಿದರು.
“ನಾನು ರಾಜ್ಯ ಸರ್ಕಾರಕ್ಕೆ ಜನರಿಗೆ ತೊಂದರೆಯಾಗುವ ಯೋಜನೆ ಬೇಡ ಎಂದು ಹೇಳಿದ್ದೇನೆ. ಗವಿಮಠದ ಶ್ರೀಗಳ ನೇತೃತ್ವದಲ್ಲಿ ಪಕ್ಷಬೇಧ ಮರೆತು ಬಂದ್ ಮಾಡಿದ್ದಾರೆ. ಈ ವಿಷಯದಲ್ಲಿ ಜನರ ಜೊತೆ ಸರ್ಕಾರ ಕೂತು ಚರ್ಚೆ ಮಾಡಬೇಕು” ಎಂದು ಹೇಳಿದರು.