AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Age Gap in Marriage: ತಮಗಿಂತ ವಯಸ್ಸಿನಲ್ಲಿ ಹಿರಿಯ ಮಹಿಳೆಯನ್ನು ಪುರುಷರು ವಿವಾಹವಾಗಬಾರದೇ?

ಪ್ರಾಚೀನ ಕಾಲದಿಂದಲೂ ವಿವಾಹದಲ್ಲಿ ವಯಸ್ಸಿನ ಅಂತರದ ಬಗ್ಗೆ ಚರ್ಚೆಗಳಿವೆ. ಗಂಡು ತಮ್ಮಿಗಿಂತ ಹಿರಿಯ ವಯಸ್ಸಿನ ಮಹಿಳೆಯರನ್ನು ಮದುವೆಯಾಗುವುದು ಶುಭವೇ, ಅಶುಭವೇ ಎಂಬ ಪ್ರಶ್ನೆಗೆ, ಯಾವುದೇ ಶಾಸ್ತ್ರಗಳಲ್ಲಿ ಇದಕ್ಕೆ ನಿರ್ಬಂಧವಿಲ್ಲ. ವಸಿಷ್ಠ-ಅರುಂಧತಿ, ಅರ್ಜುನ-ಉಲೂಪಿ, ಶ್ರೀಕೃಷ್ಣ-ಸತ್ಯಭಾಮಾ ಸೇರಿದಂತೆ ಪುರಾಣ ಮತ್ತು ಆಧುನಿಕ ಕಾಲದ ಅನೇಕ ಉದಾಹರಣೆಗಳು ಇದಕ್ಕೆ ಪೂರಕವಾಗಿವೆ ಎಂದು ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

Age Gap in Marriage: ತಮಗಿಂತ ವಯಸ್ಸಿನಲ್ಲಿ ಹಿರಿಯ ಮಹಿಳೆಯನ್ನು ಪುರುಷರು ವಿವಾಹವಾಗಬಾರದೇ?
ವಿವಾಹImage Credit source: Pinterest
ಅಕ್ಷತಾ ವರ್ಕಾಡಿ
|

Updated on:May 08, 2026 | 10:25 AM

Share

ವಿವಾಹವೆಂಬುದು ಮನುಷ್ಯನ ಜೀವನದ ಒಂದು ಪ್ರಮುಖ ಘಟ್ಟ. ಇದು ದೈವ ಸಂಕಲ್ಪವೂ ಹೌದು. ವಿವಾಹಗಳಲ್ಲಿ ಪ್ರೇಮ ವಿವಾಹ, ಅರೇಂಜ್ ಮ್ಯಾರೇಜ್​​ ಸಾಮಾನ್ಯವಾಗಿವೆ. ಆದರೆ, ವಯಸ್ಸಿಗೆ ಪ್ರಾಶಸ್ತ್ಯ ನೀಡಬೇಕೇ, ಕೊಡಬಾರದೇ ಎಂಬ ಪ್ರಶ್ನೆ ಸದಾ ಕಾಡುತ್ತದೆ. ಗಂಡು ತಮ್ಮಿಗಿಂತ ವಯಸ್ಸಿನಲ್ಲಿ ಹೆಚ್ಚಿನ ಮಹಿಳೆಯರನ್ನು ಮದುವೆಯಾಗುವುದು ಶುಭವೇ ಅಶುಭವೇ ಎಂಬ ಪ್ರಶ್ನೆ ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಎಲ್ಲ ಗೊಂದಲಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಅನಾದಿ ಕಾಲದಿಂದಲೂ ಗಂಡಿನ ವಯಸ್ಸು ಹೆಚ್ಚಿದ್ದು, ಹೆಣ್ಣಿನ ವಯಸ್ಸು ಕಡಿಮೆಯಿರುವುದು ಸಾಮಾನ್ಯ. ಬಾಲ್ಯ ವಿವಾಹಗಳ ಕಾಲದಿಂದಲೂ ಇದೇ ಪದ್ಧತಿ ಚಾಲ್ತಿಯಲ್ಲಿದೆ. ಕಾಲ ಕಳೆದಂತೆ, “ಪರಿವರ್ತನೆ ಜಗದ ನಿಯಮ” ಎಂಬ ಭಗವದ್ಗೀತೆಯ ಮಾತು ನೆನಪಿಗೆ ಬರುತ್ತದೆ. ಈ ಪರಿವರ್ತನೆಯಿಂದಾಗಿ, ಈಗ ಗಂಡು ತಮ್ಮಿಗಿಂತ ವಯಸ್ಸಿನಲ್ಲಿ ಹೆಚ್ಚಿನ ಮಹಿಳೆಯರನ್ನು ಮದುವೆಯಾಗುವುದು ಸಾಮಾನ್ಯವಾಗಿ ಬಿಟ್ಟಿದೆ.

ನಮ್ಮ ಸಂಸ್ಕೃತಿ, ಜ್ಯೋತಿಷ್ಯ ಶಾಸ್ತ್ರ ಅಥವಾ ಹಿರಿಯರ ಹೇಳಿಕೆಗಳನ್ನು ನೋಡಿದಾಗ, ಗೃಹಿಣಿ ಗಂಡನಿಗಿಂತ ವಯಸ್ಸಿನಲ್ಲಿ ಚಿಕ್ಕವಳಾಗಿದ್ದಾಗ, ಗಂಡನ ಜವಾಬ್ದಾರಿಗಳು ಸ್ಪಷ್ಟವಾಗಿರುತ್ತವೆ. ಅವನು ಸಂಪಾದನೆ ಮಾಡಬೇಕು, ಕುಟುಂಬವನ್ನು ನಿರ್ವಹಿಸಬೇಕು, ಒಳ್ಳೆಯ ಸಂತಾನವನ್ನು ಪೋಷಿಸಿ, ಸತ್ಪ್ರಜೆಗಳನ್ನಾಗಿ ರೂಪಿಸಬೇಕು, ಮತ್ತು ಸಮಾಜಕ್ಕೂ ತನ್ನ ಸೇವೆ ಸಲ್ಲಿಸಬೇಕು. ಕೇವಲ ಸ್ವಾವಲಂಬಿಯಾಗಿ, ಸ್ವಾರ್ಥಿಯಾಗಿ ಬದುಕುವುದಕ್ಕಿಂತ ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ಮನೋಭಾವ ಹೊಂದಿರುತ್ತಾನೆ.

ಈ ಮಧ್ಯೆ, ಹೆಣ್ಣು ತನ್ನಿಗಿಂತ ಹೆಚ್ಚಿನ ವಯಸ್ಸಿನ ಪುರುಷನನ್ನು ಮದುವೆಯಾಗಬಹುದೇ ಎಂಬ ಮಾತಿಗೆ ಅನೇಕರು ತಕ್ಷಣ ಬೇಡ ಎಂದು ತಲೆ ಅಲ್ಲಾಡಿಸುತ್ತಾರೆ. ಆದರೆ, ಕಾಲ ಬದಲಾಗಿದೆ. ಯಾವುದೇ ಶಾಸ್ತ್ರಗಳಲ್ಲಿ ಗಂಡಿಗಿಂತ ಹೆಣ್ಣು ವಯಸ್ಸಿನಲ್ಲಿ ಜಾಸ್ತಿಯಿದ್ದರೆ ಮದುವೆಯಾಗಬಾರದು ಎಂದು ಸ್ಪಷ್ಟವಾಗಿ ಹೇಳಿಲ್ಲ. ಹಿಂದಿನ ಕಾಲದಲ್ಲಿ ಹೆಣ್ಣು ಮನೆಗೆ ಸೀಮಿತವಾಗಿದ್ದಳು. ಆದರೆ, ಈಗ ಗಂಡು-ಹೆಣ್ಣು ಇಬ್ಬರೂ ಕೂಡ ಎಲ್ಲಾ ವಿಚಾರಗಳಲ್ಲಿ ಸರಿಸಮಾನರಾಗಿ ಜೀವನ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಪುರಾಣಗಳನ್ನು ಗಮನಿಸಿದಾಗ, ವಸಿಷ್ಠ ಋಷಿ ಮತ್ತು ಅರುಂಧತಿ ಅವರ ವಿವಾಹದಲ್ಲಿ ಅರುಂಧತಿ ವಯಸ್ಸಿನಲ್ಲಿ ದೊಡ್ಡವರಾಗಿದ್ದರು. ನವಗ್ರಹಗಳಲ್ಲಿ ಚಂದ್ರ ಮತ್ತು ತಾರೆ ಅವರ ಸಂಬಂಧದಲ್ಲಿ ತಾರೆ ಚಂದ್ರನಿಗಿಂತ ಹಿರಿಯರಾಗಿದ್ದರು. ಅರ್ಜುನನು ಉಲೂಪಿ ಎಂಬ ಸ್ತ್ರೀಯನ್ನು ಮದುವೆಯಾದಾಗ, ಆಕೆ ಅರ್ಜುನನಿಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದರು ಎಂದು ಪುರಾಣಗಳು ಹೇಳುತ್ತವೆ. ಹಾಗೆಯೇ, ಶ್ರೀಕೃಷ್ಣರಿಗಿಂತ ಸತ್ಯಭಾಮಾ ವಯಸ್ಸಿನಲ್ಲಿ ಸ್ವಲ್ಪ ದೊಡ್ಡವರಾಗಿದ್ದರು ಎಂದೂ ಉಲ್ಲೇಖವಿದೆ. ಇವೆಲ್ಲವೂ ಕೂಡ ದೈವ ಸಂಕಲ್ಪಕ್ಕೆ ಉದಾಹರಣೆಗಳು.

ಇಂದಿನ ಕಾಲಘಟ್ಟದಲ್ಲಿಯೂ ಅನೇಕ ಉದಾಹರಣೆಗಳನ್ನು ನಾವು ಕಾಣಬಹುದು. ಭಾರತ ರತ್ನ ಸಚಿನ್ ತೆಂಡೂಲ್ಕರ್, ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ತಮ್ಮಿಗಿಂತ ವಯಸ್ಸಾದ ಸಂಗಾತಿಗಳನ್ನು ಮದುವೆಯಾಗಿದ್ದಾರೆ. ನಟಿ ಜಯಂತಿ ಅವರು ನಂಜುಂಡ ಸ್ವಾಮಿ ಅವರನ್ನು ಮದುವೆಯಾದಾಗ, ನಂಜುಂಡ ಸ್ವಾಮಿ ಜಯಂತಿ ಅವರಿಗಿಂತ ಚಿಕ್ಕವರಾಗಿದ್ದರು. ಇದೇ ರೀತಿ, ಸೈಫ್ ಅಲಿ ಖಾನ್ ಅವರಂತಹ ಅನೇಕ ಸೆಲೆಬ್ರಿಟಿಗಳನ್ನು ನೋಡಬಹುದು. ಅವರ ಜೀವನ ಶೈಲಿಯನ್ನು ಗಮನಿಸಿದಾಗ, ಈ ರೀತಿಯ ವಿವಾಹಗಳು ಕುಟುಂಬಕ್ಕೆ ಒಳ್ಳೆಯದೇ ಎಂಬುದನ್ನು ಅನುಭವದಿಂದ ತಿಳಿಯಬಹುದು.

ಶಾಸ್ತ್ರೀಯವಾಗಿ ನೋಡಿದಾಗ, ಗಂಡನಿಗಿಂತ ಹೆಣ್ಣು ವಯಸ್ಸಿನಲ್ಲಿ ಹೆಚ್ಚಿದ್ದರೆ, ಆ ಕುಟುಂಬದಲ್ಲಿ ಶ್ರೇಯಸ್ಸು, ಪ್ರಗತಿ ಮತ್ತು ಅಭಿವೃದ್ಧಿ ಇರುತ್ತದೆ. ಹಿರಿಯ ವಯಸ್ಸಿನ ಹೆಣ್ಣಿನ ಆಲೋಚನೆಗಳು ಮತ್ತು ಅನುಭವಗಳು ಗಂಡನಿಗೆ ತುಂಬಾ ಪೂರಕವಾಗಿರುತ್ತವೆ. ಇದು ಕುಟುಂಬದ ವೃದ್ಧಿಗೂ ಕಾರಣವಾಗುತ್ತದೆ. ಹಾಗಂತ, ವಯಸ್ಸಿನಲ್ಲಿ ಜಾಸ್ತಿ ಆದವರನ್ನೇ ಮದುವೆಯಾಗಬೇಕು ಎಂದಿಲ್ಲ. ಆದರೆ, ಇದು ದೈವ ಸಂಕಲ್ಪವಾಗಿದ್ದರೆ, ಅದಕ್ಕೇನು ತೊಂದರೆ ಇಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:09 am, Fri, 8 May 26

Follow Us