ಅಮರನಾಥ ಯಾತ್ರೆಗೆ (Amarnath Yatra) ಹೋಗಲು ಭಕ್ತರು ವರ್ಷಪೂರ್ತಿ ಕಾಯುತ್ತಾರೆ. ಇಲ್ಲಿಗೆ ಪ್ರಯಾಣ ಮಾಡುವುದು ಬಹಳ ಕಷ್ಟ. ಕೆಲವೊಮ್ಮೆ ಶೀತ ಮತ್ತು ಮಳೆಗಾಲದ ಹವಾಮಾನವು ಶಿವ ಭಕ್ತರನ್ನು ಪ್ರತಿ ಹಂತದಲ್ಲೂ ಪರೀಕ್ಷಿಸುತ್ತದೆ. ಆದರೆ ಈ ಎಲ್ಲಾ ಸವಾಲುಗಳ ಹೊರತಾಗಿಯೂ, ಭಕ್ತರು ಅಮರನಾಥನ ದರ್ಶನವನ್ನು ಭಕ್ತಿ ಮತ್ತು ಉತ್ಸಾಹದಿಂದ ಮಾಡುತ್ತಾರೆ. ಶಿವ ಭಕ್ತರು “ಬಾಬಾ ಬರ್ಫಾನಿ”ಯನ್ನು ನೋಡಲು ಅಮರನಾಥ ಯಾತ್ರೆಗೆ ಹೋಗುತ್ತಾರೆ. ಸಮುದ್ರ ಮಟ್ಟದಿಂದ 3800 ಮೀಟರ್ ಎತ್ತರದಲ್ಲಿರುವ ಅಮರನಾಥ ಗುಹೆಯಲ್ಲಿ, ಶಿವಲಿಂಗವು ಮಂಜುಗಡ್ಡೆ ರೂಪದಲ್ಲಿದ್ದು ಅದಕ್ಕಾಗಿಯೇ ಶಿವನನ್ನು ಇಲ್ಲಿ “ಬಾಬಾ ಬರ್ಫಾನಿ” ಎಂದು ಕರೆಯಲಾಗುತ್ತದೆ. ಹಾಗಾದರೆ ಈ ವರ್ಷ ಯಾತ್ರೆ ಯಾವಾಗ ಪ್ರಾರಂಭವಾಗಲಿದೆ? ನೋಂದಣಿ ಯಾವಾಗ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.
ಈ ವರ್ಷದ ಅಮರನಾಥ ಯಾತ್ರೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು ಈ ವರ್ಷ ಅಮರನಾಥ ಯಾತ್ರೆ ಜೂ. 29 ರಿಂದ ಪ್ರಾರಂಭವಾಗಿ ಆಗಸ್ಟ್ 19 ರಂದು ಕೊನೆಗೊಳ್ಳಲಿದೆ. ಆದರೆ ಈ ವರ್ಷ ಎರಡು ತಿಂಗಳುಗಳ ಬದಲಾಗಿ ಕೇವಲ 45 ದಿನಗಳು ಮಾತ್ರ ಯಾತ್ರೆಗೆ ಅವಕಾಶ ನೀಡಲಾಗಿದ್ದು ಭಕ್ತರಿಗೆ ಬೇಸರ ತಂದಿದೆ. ದೇಶದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಿರುವುದರಿಂದ ಪ್ರಯಾಣದ ಸಮಯವನ್ನು ಒಂದೂವರೆ ತಿಂಗಳಿಗೆ ಇಳಿಸಲಾಗಿದೆ. ಅಮರನಾಥ ಯಾತ್ರೆಗೆ ನೋಂದಣಿ ಏಪ್ರಿಲ್ 15 ರಿಂದ ಪ್ರಾರಂಭವಾಗಲಿದೆ.
ಈ ಪವಿತ್ರ ಗುಹೆಗೆ ಭಕ್ತಿಯಿಂದ ಭೇಟಿ ಮಾಡಿದಲ್ಲಿ ಭಕ್ತರು ಮೋಕ್ಷವನ್ನು ಪಡೆಯುತ್ತಾರೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಜೊತೆಗೆ ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುವುದರಿಂದ 23 ತೀರ್ಥಯಾತ್ರೆಗಳಿಗೆ ಹೋಗಿ ಬಂದಂತಹ ಪುಣ್ಯ ಪ್ರಾಪ್ತಿಯಾಗುತ್ತದೆ. ಪುರಾಣಗಳಲಿ ಹೇಳಿರುವ ಪ್ರಕಾರ ಇಲ್ಲಿ ಅಮರನಾಥದ ದರ್ಶನ ಪಡೆಯುವುದು ಕಾಶಿಯಲ್ಲಿ ದೇವರ ದರ್ಶನ, ಪೂಜೆ ಮಾಡಿಸಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚು ಯೋಗ್ಯ, ಭಾಗ್ಯವನ್ನು ನೀಡುತ್ತದೆ. ಅಲ್ಲದೆ ಪ್ರಯಾಗಕ್ಕಿಂತ ನೂರು ಪಟ್ಟು, ತೀರ್ಥಕ್ಕಿಂತ ಸಾವಿರ ಪಟ್ಟು ಹೆಚ್ಚು ಪುಣ್ಯ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಈ ಪವಿತ್ರ ಅಮರನಾಥ ಗುಹೆಯಲ್ಲಿ ಹಿಮದಲ್ಲಿ ನಿರ್ಮಾಣವಾಗಿರುವ ಶಿವಲಿಂಗವನ್ನು ಪೂಜಿಸಲಾಗುತ್ತದೆ. ಅಲ್ಲದೆ ಇಲ್ಲಿ ಬಾಬಾ ಅಮರನಾಥನನ್ನು ಪೂಜಿಸುವ ಮೂಲಕ, ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಇದಲ್ಲದೆ ಆತನ ಆಶೀರ್ವಾದದಿಂದ ಎಲ್ಲಾ ರೀತಿಯ ನೋವು ಮತ್ತು ಸಂಕಟಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: 54 ವರ್ಷದ ಹಿಂದೆಯೇ 2024ರಲ್ಲಿ ಸಂಭವಿಸುವ ಸೂರ್ಯಗ್ರಹಣದ ಬಗ್ಗೆ ಇತ್ತು ಮಾಹಿತಿ, ಈ ಗ್ರಹಣದ ಪರಿಣಾಮ ಹೇಗಿರಲಿದೆ?
ಬಾಬಾ ಅಮರನಾಥ ಗುಹೆಯು ಸಮುದ್ರ ಮಟ್ಟದಿಂದ ಸುಮಾರು 3800 ಮೀ. ಎತ್ತರದಲ್ಲಿದೆ. ಗುಹೆಯಲ್ಲಿರುವ ಶಿವಲಿಂಗದ ವಿಶೇಷ ಲಕ್ಷಣವೆಂದರೆ ಅದು ತನ್ನದೇ ಆದ ಆಕಾರವನ್ನು ಪಡೆದುಕೊಳ್ಳುತ್ತದೆ. ಅಂದರೆ ಈ ಶಿವಲಿಂಗದ ಆಕಾರವು ಹವಾಮಾನ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಎಂದು ನಂಬಲಾಗಿದೆ. ಪ್ರತಿ ವರ್ಷ ಚಳಿಗಾಲದಲ್ಲಿ, ಇಲ್ಲಿರುವ ಶಿವಲಿಂಗವು ರೂಪುಗೊಳ್ಳುತ್ತದೆ ಮತ್ತು ಈ ಶಿವಲಿಂಗವನ್ನು ನೋಡಲು ದೇಶ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ಅಮರನಾಥ ಯಾತ್ರೆಗೆ ಬರುತ್ತಾರೆ. ಪ್ರಯಾಣಕ್ಕೆ ಮುಂಚಿತವಾಗಿ ಇಲ್ಲಿ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ