Vasthu Tips: ಹಳೆಯ ಅಥವಾ ಹರಿದ ಬಟ್ಟೆ ಮನೆ ಒರೆಸಲು ಬಳಸಬಾರದು ಯಾಕೆ ಗೊತ್ತಾ?
ಡಾ. ಬಸವರಾಜ್ ಗುರೂಜಿ ಅವರ ಪ್ರಕಾರ, ಹಳೆಯ ಮತ್ತು ಹರಿದ ಬಟ್ಟೆಗಳನ್ನು ಮನೆ ಒರೆಸಲು ಬಳಸುವುದರಿಂದ ನಕಾರಾತ್ಮಕ ಶಕ್ತಿ ಆಕರ್ಷಿತವಾಗುತ್ತದೆ. ಇದು ಮನೆಯಲ್ಲಿ ಅಶಾಂತಿ, ಕೌಟುಂಬಿಕ ಕಲಹಗಳು, ಆರ್ಥಿಕ ಸಮಸ್ಯೆಗಳು ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಚಂದ್ರ ಮತ್ತು ಶುಕ್ರ ಗ್ರಹಗಳ ಪ್ರಭಾವಕ್ಕೆ ಧಕ್ಕೆ ಉಂಟಾಗಿ, ಸಂತೋಷ ಮತ್ತು ಸಮೃದ್ಧಿ ಕಡಿಮೆಯಾಗುತ್ತದೆ. ಆದ್ದರಿಂದ, ಸ್ವಚ್ಛತೆಗೆ ಹೊಸ ಬಟ್ಟೆಗಳನ್ನು ಬಳಸುವುದು ಸೂಕ್ತ.

ಶುಚಿತ್ವವು ನಮ್ಮ ಬದುಕು, ಕುಟುಂಬ ಮತ್ತು ಮನೆಗೆ ಶ್ರೇಯಸ್ಸು, ಸಮೃದ್ಧಿ ಹಾಗೂ ನೆಮ್ಮದಿ ತರುತ್ತದೆ. ಮನೆಯನ್ನು ಶುಚಿಗೊಳಿಸುವ ಸಂದರ್ಭದಲ್ಲಿ ನಾವು ಬಳಸುವ ವಸ್ತುಗಳ ಬಗ್ಗೆ ಗಮನ ಹರಿಸುವುದು ಮುಖ್ಯ. ಹಿಂದಿನ ಕಾಲದಿಂದಲೂ ಮನೆ ಒರೆಸುವ ವಿಧಾನಗಳಲ್ಲಿ ಬದಲಾವಣೆಗಳಾಗಿವೆ. ಆಧುನಿಕ ಯುಗದಲ್ಲಿ ಮಾಫ್‌ಗಳ ಬಳಕೆ ಸಾಮಾನ್ಯವಾದರೆ, ಕೆಲವರು ಈಗಲೂ ಹಳೆಯ, ಉಪಯೋಗಿಸಿದ, ಹರಿದ ಬಟ್ಟೆಗಳನ್ನು ಮನೆ ಒರೆಸಲು ಬಳಸುತ್ತಾರೆ. ಇದು ಶುಭವೇ ಅಥವಾ ಅಶುಭವೇ ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ನೀಡಿರುವ ಉತ್ತರ ಇಲ್ಲಿದೆ.
ಜ್ಯೋತಿಷ್ಯದ ಪ್ರಕಾರ, ಮನೆಯ ಶುಚಿಗೆ ಚಂದ್ರ, ಶುಕ್ರ ಮತ್ತು ರವಿ ಈ ಮೂರು ಗ್ರಹಗಳು ಕಾರಕತ್ವವಾಗಿವೆ. ಇವುಗಳಲ್ಲಿ ಚಂದ್ರ ಮತ್ತು ಶುಕ್ರ ಗ್ರಹಗಳ ಪಾತ್ರ ಪ್ರಧಾನವಾಗಿದೆ. ಚಂದ್ರನು ಶಾಂತಿ, ತಾಳ್ಮೆ, ಸಹನೆ ಮತ್ತು ಮನಸ್ಸಿನ ತಂಪುತನಕ್ಕೆ ಅಧಿಪತಿ. ಶುಕ್ರನು ಐಷಾರಾಮಿ ಜೀವನ, ಉತ್ತಮ ಉಡುಗೆ-ತೊಡುಗೆ ಮತ್ತು ಆಹಾರದ ಸುಖಕ್ಕೆ ಕಾರಕನಾಗಿದ್ದಾನೆ. ಮನೆಯನ್ನು ಶುದ್ಧವಾಗಿ ಇಡಲು ಈ ಗ್ರಹಗಳ ಪ್ರಭಾವ ಅತ್ಯಗತ್ಯ.
ಹಳೆಯ, ಕೊಳಕು ಅಥವಾ ಹರಿದ ಬಟ್ಟೆಗಳನ್ನು ಮನೆ ಒರೆಸಲು ಉಪಯೋಗಿಸಿದಾಗ, ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ ಎಂದು ಡಾ. ಬಸವರಾಜ್ ಗುರೂಜಿ ಎಚ್ಚರಿಸುತ್ತಾರೆ. ಇಂತಹ ಬಟ್ಟೆಗಳ ಬಳಕೆಯಿಂದ ಹೊರಗಿನ ಕೆಟ್ಟ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಚಂದ್ರನಿಗೆ ದಕ್ಕೆ ಉಂಟಾದಾಗ ನಮ್ಮ ಭಾವನೆಗಳಿಗೆ ತೊಂದರೆಯಾಗಿ, ಗಂಡ-ಹೆಂಡತಿಯ ಜಗಳ, ಮಕ್ಕಳ ಕಲಹ, ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಶುಕ್ರನ ಪ್ರಭಾವ ಕಡಿಮೆಯಾದಾಗ ಮುಖದ ತೇಜಸ್ಸು ಕುಂದಿ, ವ್ಯಕ್ತಿತ್ವದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.
ಹರಿದ ಬಟ್ಟೆಗಳನ್ನು ಧರಿಸುವುದು ಅಥವಾ ಅವುಗಳಿಂದ ಮನೆ ಒರೆಸುವುದು ಸಹ ಅಶುಭ. ರಾಹು ಗ್ರಹವು ಹರಿದ ಬಟ್ಟೆಗಳಿಗೆ ಕಾರಕನಾಗಿದ್ದು, ಇದರ ಪ್ರಭಾವದಿಂದ ಆಕಸ್ಮಿಕ ಘಟನೆಗಳು, ಕೋಪ, ಮತ್ತು ತಕ್ಷಣದ ಪ್ರತಿಕ್ರಿಯೆಗಳು ಹೆಚ್ಚಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಹರಿದ ಬಟ್ಟೆಗಳನ್ನು ಧರಿಸುವುದು ಫ್ಯಾಷನ್ ಆಗಿದ್ದರೂ, ಇದು ಶುಭವೆಂದು ಪರಿಗಣಿಸಲಾಗುವುದಿಲ್ಲ.
ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!
ಹಳೆಯ ಬಟ್ಟೆಗಳಿಂದ ಮನೆ ಒರೆಸುವುದರಿಂದ ಮನೆಯಲ್ಲಿ ಅಸ್ಥಿರತೆ, ಅಶಾಂತಿ, ಅತಿಯಾದ ನಿದ್ರೆ, ದುಃಖ ಮತ್ತು ಒಂಟಿತನ ಕಾಡಬಹುದು. ಸೂರ್ಯೋದಯ ಮತ್ತು ಸೂರ್ಯಾಸ್ತಮ ಕಾಲದಲ್ಲಿ ಮನೆ ಒರೆಸುವುದರಿಂದ ಸೂರ್ಯನ ಪ್ರಭಾವವೂ ಮನೆಯ ಮೇಲೆ ಇರುತ್ತದೆ. ಸೂರ್ಯನು ಆರೋಗ್ಯದ ಕಾರಕನಾಗಿರುವುದರಿಂದ, ಹಳೆಯ ಬಟ್ಟೆಗಳ ಬಳಕೆಯು ಮನೆಯ ಸದಸ್ಯರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ರಾಜಕೀಯ ವ್ಯಕ್ತಿಗಳು, ವ್ಯಾಪಾರಸ್ಥರು, ಇಂಜಿನಿಯರ್‌ಗಳು ಸೇರಿದಂತೆ ಯಾವುದೇ ವೃತ್ತಿಯಲ್ಲಿರುವವರಿಗೂ ವೃತ್ತಿಜೀವನದಲ್ಲಿ ಸಣ್ಣಪುಟ್ಟ ಕಂಟಕಗಳು ಎದುರಾಗಬಹುದು.
ಆದ್ದರಿಂದ, ಮನೆಯನ್ನು ಶುಚಿಗೊಳಿಸಲು ಹೊಸ ಬಟ್ಟೆಗಳನ್ನು ಅಥವಾ ಸೂಕ್ತವಾದ ಶುಚಿಗೊಳಿಸುವ ಸಾಧನಗಳನ್ನು ಬಳಸುವುದು ಅತ್ಯಂತ ಶುಭ. ಹಳೆಯ ಮತ್ತು ಹರಿದ ಬಟ್ಟೆಗಳನ್ನು ಮನೆ ಸ್ವಚ್ಛತೆಗೆ ಬಳಸುವುದನ್ನು ತ್ಯಜಿಸಿ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ನೆಮ್ಮದಿಯ ವಾತಾವರಣವನ್ನು ಕಾಪಾಡಿಕೊಳ್ಳುವಂತೆ ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





