ಪಂಚಾಂಗದ ಪ್ರಕಾರ ಇಡೀ ವರ್ಷದಲ್ಲಿ 12 ಹುಣ್ಣಿಮೆಗಳನ್ನು ಆಚರಣೆ ಮಾಡಲಾಗುತ್ತದೆ. ಆದರೆ ಚೈತ್ರ ಮಾಸದ ಹುಣ್ಣಿಮೆಯು ವಿಶೇಷ ಮಹತ್ವವನ್ನು ಹೊಂದಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ಬಾರಿ ಚೈತ್ರ ಹುಣ್ಣಿಮೆ ಅಥವಾ ಚೈತ್ರ ಪೂರ್ಣಿಮೆಯನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಎ. 23 ರಂದು ಆಚರಿಸಲಾಗುತ್ತದೆ. ಈ ದಿನ ವಿಷ್ಣು, ಲಕ್ಷ್ಮೀ ದೇವಿ ಮತ್ತು ಚಂದ್ರ ದೇವನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ವ್ರತವನ್ನು ಸರಿಯಾದ ರೀತಿಯಲ್ಲಿ ಆಚರಣೆ ಮಾಡಿದರೆ ದೇವರ ಆಶೀರ್ವಾದ, ಮನಸ್ಸಿಗೆ ಶಾಂತಿ ಮತ್ತು ಸಮೃದ್ಧಿ ಪ್ರಾಪ್ತವಾಗುತ್ತದೆ ಎಂದು ನಂಬಲಾಗಿದೆ.
ಚೈತ್ರ ಹುಣ್ಣಿಮೆಯನ್ನು ಎ. 23 ರಂದು ಮಂಗಳವಾರ ಆಚರಿಸಲಾಗುತ್ತದೆ. ಈ ತಿಥಿ ಮುಂಜಾನೆ 3:26 ಕ್ಕೆ ಪ್ರಾರಂಭವಾಗಿ ಎ. 24 ರಂದು (ಬುಧವಾರ) ಬೆಳಿಗ್ಗೆ 5:19 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಹುಣ್ಣಿಮೆ ವ್ರತವನ್ನು ಮಂಗಳವಾರ ಆಚರಿಸಲಾಗುವುದು. ಹುಣ್ಣಿಮೆಯ ಜೊತೆಗೆ, ಹನುಮಾನ್ ಜಯಂತಿಯನ್ನು ಸಹ ಈ ದಿನ ಆಚರಿಸಲಾಗುತ್ತದೆ. ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮತ್ತು ದಾನ ಮಾಡುವುದು ಶುಭವೆಂದು ಹೇಳಲಾಗುತ್ತದೆ. ಇದರಿಂದ ಎಲ್ಲಾ ಪಾಪಗಳು ದೂರವಾಗಿ ಪುಣ್ಯಫಲ ಸಿಗುತ್ತದೆ. ಚೈತ್ರ ಹುಣ್ಣಿಮೆಯ ದಿನ ಚಂದ್ರೋದಯ ಸಂಜೆ 6:25 ಕ್ಕೆ. ಪೂಜಾ ಸಮಯ ಸಂಜೆ 6:25 ರ ನಂತರವಾಗಿದೆ.
-ಈ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಅಥವಾ ನೀವು ಸ್ನಾನ ಮಾಡುವ ನೀರಿಗೆ ಗಂಗಾ ಜಲ ಹಾಕಿ.
-ಚೈತ್ರ ಹುಣ್ಣಿಮೆಯಂದು, ದೇವರ ಕೋಣೆಯಲ್ಲಿ ಹಳದಿ ಬಟ್ಟೆಯನ್ನು ಇರಿಸಿ ಅದರ ಮೇಲೆ ವಿಷ್ಣು ಮೂರ್ತಿಯನ್ನು ಇಟ್ಟು ಗಂಗಾ ಜಲದಿಂದ, ಬಳಿಕ ಪಂಚಾಮೃತದಿಂದ ಅಭಿಷೇಕ ಮಾಡಿ.
-ಶುಭ ಮುಹೂರ್ತದಲ್ಲಿ ವಿಷ್ಣುವಿನ ಮಂತ್ರಗಳನ್ನು ಪಠಿಸಿ, ಆರತಿ ಮಾಡಿ.
-ತುಳಸಿ ಎಲೆ ಮತ್ತು ವಿಷ್ಣುವಿಗೆ ಪ್ರೀಯವಾದ ಹೆಸರುಬೇಳೆ ಪಾಯಸವನ್ನು ದೇವರಿಗೆ ನೈವೇದ್ಯ ಮಾಡಿ.
-ಸಂಜೆ ಮುಹೂರ್ತದಲ್ಲಿ, ಚಂದ್ರ ದೇವನನ್ನು ಪೂಜೆ ಮಾಡಿ. ಹಸಿ ಹಾಲನ್ನು ಚಂದ್ರನಿಗೆ ಅರ್ಘ್ಯವಾಗಿ ಅರ್ಪಿಸಿ ಬಳಿಕ ನೀವು ಉಪವಾಸ ಮಾಡಿದ್ದರೆ ಅದನ್ನು ಮುಕ್ತಾಯಗೊಳಿಸಿ.
ಇದನ್ನೂ ಓದಿ: ಮಹಾವೀರ ಸ್ವಾಮಿ ಮತ್ತು ಭಗವಾನ್ ಶ್ರೀರಾಮ ಒಂದೇ ಕುಲ? ಇದು ಸತ್ಯವೇ?
-ಚೈತ್ರ ಹುಣ್ಣಿಮೆಯನ್ನು ಸಾಂಪ್ರದಾಯಿಕವಾಗಿ ಭಕ್ತರು ದಿನವಿಡೀ ಉಪವಾಸ ಮಾಡುವ ಮೂಲಕ ಆಚರಿಸುತ್ತಾರೆ.
-ಚೈತ್ರ ಪೂರ್ಣಿಮಾ ಅಥವಾ ಹುಣ್ಣಿಮೆಯಂದು ಉಪವಾಸದ ಸಮಯದಲ್ಲಿ, ಭಕ್ತರು ಧಾನ್ಯಗಳು ಮತ್ತು ತರಕಾರಿಗಳನ್ನು ತಿನ್ನದೆಯೇ ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ. ಕೆಲವರು ಹಾಲು, ಹಣ್ಣನ್ನು ಮಾತ್ರ ಸೇವನೆ ಮಾಡುತ್ತಾರೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ