
“ತ್ವೇನ ವಿನಾ ತೃಣಮಪಿ ನ ಚಲತಿ” ಎಂಬ ಉಕ್ತಿಯಂತೆ, ಭಗವಂತನ ಅನುಗ್ರಹವಿಲ್ಲದೆ ಈ ಜಗತ್ತಿನಲ್ಲಿ ಯಾವುದೂ ಸಂಭವಿಸುವುದಿಲ್ಲ. ಹೀಗಾಗಿ, ಜೀವನದ ಸಂಕಷ್ಟಗಳನ್ನು ಎದುರಿಸಲು, ಅದೃಷ್ಟವನ್ನು ಕಾಪಾಡಿಕೊಳ್ಳಲು ಮತ್ತು ಅಹಂಕಾರವನ್ನು ನಿಗ್ರಹಿಸಲು ಭಗವಂತನಲ್ಲಿ ಪ್ರಾರ್ಥಿಸುವುದು ಮುಖ್ಯ. ನಮ್ಮ ಪ್ರಾರ್ಥನೆಗಳು ಕೇವಲ ಕಷ್ಟಗಳ ಪರಿಹಾರಕ್ಕೆ ಮಾತ್ರ ಸೀಮಿತವಾಗಿರಬಾರದು. ಸದ್ಗುಣಗಳನ್ನು ಉಳಿಸಿಕೊಳ್ಳುವ ಶಕ್ತಿಯನ್ನೂ ಕೋರಬೇಕು.
ನಿತ್ಯ ಪೂಜೆಯನ್ನು ಸಾಮಾನ್ಯವಾಗಿ ಬೆಳಗಿನ ಜಾವ, ಬ್ರಾಹ್ಮೀ ಮುಹೂರ್ತದಲ್ಲಿ ಅಥವಾ ಸಂಧ್ಯಾಕಾಲದಲ್ಲಿ ಮಾಡಲಾಗುತ್ತದೆ. ಆದರೆ, ಅನೇಕರಿಗೆ ಬೆಳಗಿನ ಜಾವದ ಪೂಜೆ ಅಥವಾ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡಲು ಸಮಯದ ಅಭಾವವಿರುತ್ತದೆ, ವಿಶೇಷವಾಗಿ ಕೆಲಸಕ್ಕೆ ಹೋಗುವವರಿಗೆ. ಇಂತಹ ಪರಿಸ್ಥಿತಿಯಲ್ಲಿ, ಸಂಧ್ಯಾಕಾಲದಲ್ಲಿ ಪೂಜೆ ಮಾಡಬಹುದೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಉತ್ತರ ನೀಡಿದ್ದಾರೆ.
ಗುರೂಜಿಯವರು ಹೇಳುವಂತೆ, ಬ್ರಾಹ್ಮೀ ಮುಹೂರ್ತಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಪ್ರಾಮುಖ್ಯತೆ ಗೋದೋಳಿ ಮುಹೂರ್ತಕ್ಕೂ ಇದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಗಳು ದೇವತಾರಾಧನೆಗೆ ಅತ್ಯಂತ ಪ್ರಶಸ್ತವಾದ ಸಮಯಗಳಾಗಿವೆ. ದೇವತಾರಾಧನೆಗೆ ಉತ್ತಮವಾದ ಮನಸ್ಸು, ಒಳ್ಳೆಯ ಸಂಕಲ್ಪ, ದೃಢವಾದ ಭಕ್ತಿ ಮತ್ತು ನಂಬಿಕೆಗಳು ಅತ್ಯಂತ ಮುಖ್ಯ. ನೀವು ಯಾವುದೇ ಸ್ಥಿತಿಯಲ್ಲಿರಲಿ – ಕೆಲಸದಲ್ಲಿದ್ದರೂ, ಪ್ರಯಾಣಿಸುತ್ತಿದ್ದರೂ, ಅಸ್ವಸ್ಥರಾಗಿದ್ದರೂ ಅಥವಾ ಕಷ್ಟದಲ್ಲಿದ್ದರೂ ಸಹ – ಭಗವಂತನ ನಾಮಸ್ಮರಣೆ ಎಂದಿಗೂ ವ್ಯರ್ಥವಾಗುವುದಿಲ್ಲ. ಅದು ಒಂದಲ್ಲ ಒಂದು ದಿನ ನಿಮಗೆ ಬೆಂಬಲವಾಗಿ ನಿಲ್ಲುತ್ತದೆ.
ಭಗವಂತನು ಸರ್ವಾಂತರ್ಯಾಮಿ, ಸರ್ವವ್ಯಾಪಿ ಮತ್ತು ಸರ್ವಶಕ್ತನಾಗಿದ್ದಾನೆ. ನಾವು ಭಗವಂತನಿಗೆ ರೂಪವನ್ನು ನೀಡಿದರೂ, ಅಲಂಕಾರ ಮಾಡಿದರೂ, ನೈವೇದ್ಯ ಅರ್ಪಿಸಿದರೂ, ಭಗವಂತನು ನಮ್ಮ ಆಂತರಿಕ ಭಾವನೆಗಳಿಗೆ ಒಲಿಯುತ್ತಾನೆ. ಬೆಳಗಿನ ಜಾವ ಪೂಜೆ, ಜಪ ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಸಂಧ್ಯಾಕಾಲದಲ್ಲಿಯೂ ಇದನ್ನು ಮಾಡಬಹುದು. ಅನೇಕರು ಸಂಧ್ಯಾಕಾಲದಲ್ಲಿ ಸ್ನಾನ ಮಾಡಿ ಪೂಜೆ ಮಾಡುವುದು ಕಷ್ಟ ಎಂದು ಭಾವಿಸುತ್ತಾರೆ, ವಿಶೇಷವಾಗಿ ಕೆಲಸ ಮುಗಿಸಿ ಮನೆಗೆ ಬಂದಾಗ ಸುಸ್ತಾಗಿರುವಾಗ. ಆದರೆ, ಭಗವಂತನ ಸ್ಮರಣೆ ಮತ್ತು ಮಾನಸಿಕ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯವಿದೆ.
ಭಗವದ್ಗೀತೆಯ ಶ್ಲೋಕ, “ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತಾ ಪ್ರಯಚ್ಛತಿ, ತದಹಂ ಭಕ್ತ ಪಹೃತಂ ಅಶ್ನಾಮಿ ಪ್ರಯತಾತ್ಮನಃ” ಹೇಳುವಂತೆ, ಭಕ್ತಿಯಿಂದ ಅರ್ಪಿಸುವ ಒಂದು ಎಲೆ, ಹೂವು, ಹಣ್ಣು ಅಥವಾ ನೀರಾದರೂ ಭಗವಂತನಿಗೆ ಪ್ರಿಯವಾಗುತ್ತದೆ. ದೃಢವಾದ ಭಕ್ತಿ ಮತ್ತು ಶುದ್ಧ ಮನಸ್ಸಿನ ಭಾವನೆಯಿಂದ ಭಗವಂತನನ್ನು ಸುಲಭವಾಗಿ ಒಲಿಸಿಕೊಳ್ಳಬಹುದು.
ಇದನ್ನೂ ಓದಿ: ಮಹಿಳೆಯರು ಶವ ಯಾತ್ರೆಯಲ್ಲಿ ಭಾಗವಹಿಸಬಹುದೇ? ವೈಜ್ಞಾನಿಕ ದೃಷ್ಟಿಕೋನ ಇಲ್ಲಿದೆ
ಸಂಧ್ಯಾಕಾಲದಲ್ಲಿ ಪೂಜೆ ಮಾಡುವಾಗ, ಬಿಸಿ ನೀರಿನ ಸ್ನಾನ ಅನಿವಾರ್ಯವಲ್ಲ. ತಣ್ಣೀರಿನ ಪ್ರೋಕ್ಷಣೆ ಮಾಡಿಕೊಳ್ಳಬಹುದು ಅಥವಾ ಸಾಧ್ಯವಾದರೆ ಸ್ನಾನ ಮಾಡಬಹುದು. ಯಾವುದೇ ದ್ರವ್ಯಗಳು ಅನಿವಾರ್ಯವಲ್ಲ. ಕೇವಲ ಧ್ಯಾನ, ದೀಪಾರತಿ, ಪ್ರಾರ್ಥನೆ, ನೈವೇದ್ಯ – ಇವುಗಳೆಲ್ಲವೂ ಲಭ್ಯವಿದ್ದರೆ ಬಳಸಬಹುದು, ಇಲ್ಲದಿದ್ದರೆ ಕೇವಲ ಧ್ಯಾನ ಸಾಕು. ಸ್ವಲ್ಪ ಸಮಯ ಶಾಂತವಾಗಿ ಕುಳಿತು, ಒಳ್ಳೆಯ ಮನಸ್ಸಿನಿಂದ ಧ್ಯಾನ ಮಾಡುವುದು, ಪಾರಾಯಣ ಮಾಡುವುದು, ಭಗವಂತನ ನಾಮಸ್ಮರಣೆ ಮಾಡುವುದು ಅಥವಾ ಅಷ್ಟೋತ್ತರಗಳನ್ನು ಹೇಳಿಕೊಳ್ಳುವುದು ಈ ಸಮಯದಲ್ಲಿ ಅತ್ಯಂತ ಪ್ರಶಸ್ತ. ಒಂದು ಆರತಿಯನ್ನು ಮಾಡಬಹುದು ಅಥವಾ ನೈವೇದ್ಯವಿದ್ದರೆ ಅರ್ಪಿಸಬಹುದು. ಇಲ್ಲದಿದ್ದರೆ, ಕೇವಲ ಆರತಿ, ಧ್ಯಾನ, ಜಪ, ಪಾರಾಯಣ ಸಂಧ್ಯಾಕಾಲದಲ್ಲಿ ಸಾಕು.
ಬೆಳಗಿನ ಜಾವದಲ್ಲಿ ಪೂಜಿಸಲು ಸಾಧ್ಯವಾಗದವರು, ಕೆಲಸ ಮುಗಿಸಿ ಬಂದ ನಂತರ ಹತ್ತು ನಿಮಿಷ ಪ್ರಶಾಂತವಾಗಿ ಕುಳಿತು ಎಲ್ಲಾ ಗೊಂದಲಗಳನ್ನು ದೂರವಿಟ್ಟು (ಮೊಬೈಲ್ ಫೋನ್ ಅನ್ನು ದೂರವಿಡುವುದು ಅತ್ಯಂತ ಮುಖ್ಯ), ಭಗವಂತನ ಚಿಂತನೆ ಮಾಡಬಹುದು. ಸನಾತನ ಧರ್ಮವು ನಿತ್ಯ ನೂತನವಾಗಿದೆ. ಹೀಗಾಗಿ, ಯಾವುದೇ ಸಮಯದಲ್ಲಿಯೂ ಭಕ್ತಿಪೂರ್ವಕ ಪೂಜೆಗೆ ಅವಕಾಶವಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ