Daily Devotional: ಮಹಿಳೆಯರು ಶವ ಯಾತ್ರೆಯಲ್ಲಿ ಭಾಗವಹಿಸಬಹುದೇ? ವೈಜ್ಞಾನಿಕ ದೃಷ್ಟಿಕೋನ ಇಲ್ಲಿದೆ
ನಿತ್ಯಭಕ್ತಿ ಕಾರ್ಯಕ್ರಮದಲ್ಲಿ, ಶವಯಾತ್ರೆಯಲ್ಲಿ ಮಹಿಳೆಯರು ಭಾಗವಹಿಸುವ ಕುರಿತು ಇಲ್ಲಿ ಚರ್ಚಿಸಲಾಗಿದೆ. ಧರ್ಮಗ್ರಂಥಗಳು ಮತ್ತು ವೈಜ್ಞಾನಿಕ ದೃಷ್ಟಿಕೋನಗಳ ಪ್ರಕಾರ ಮಹಿಳೆಯರು ಭಾಗಿಯಾಗಬಾರದು ಎನ್ನಲಾಗುತ್ತದೆ. ಅವರ ಸೂಕ್ಷ್ಮ ದೇಹ ಮತ್ತು ಅತಿಯಾದ ದುಃಖದಿಂದ ಆರೋಗ್ಯ, ಮಾನಸಿಕ ಸ್ಥಿತಿ ಹಾಗೂ ಪರಿಸರದ ಮೇಲೆ ಪರಿಣಾಮ ಬೀರಬಹುದು ಎಂಬುದು ಇದರ ಹಿಂದಿನ ಕಾರಣ. ಇದಲ್ಲದೇ ಕೆಲವೊಂದು ಕುಟುಂಬದ ಆಚಾರಗಳು ಭಿನ್ನವಾಗಿರುತ್ತದೆ.

ಶವಯಾತ್ರೆಯಲ್ಲಿ ಮಹಿಳೆಯರ ಪಾತ್ರ, ಧಾರ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನಗಳ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, “ಜಾತಸ್ಯ ಮರಣಂ ಧ್ರುವಂ” ಎಂಬಂತೆ, ಈ ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬ ಜೀವಿಯೂ ಮರಣಿಸುವುದು ನಿಶ್ಚಿತ. ಆದಿ ಅಂತ್ಯಗಳು ಎಲ್ಲ ಜೀವಿಗಳಿಗೂ ಅನ್ವಯಿಸುವ ಪ್ರಕೃತಿಯ ನಿಯಮ. ಆದರೆ, ಮರಣಾನಂತರದ ವಿಧಿಗಳಲ್ಲಿ, ವಿಶೇಷವಾಗಿ ಶವಯಾತ್ರೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಬಗ್ಗೆ ಹಲವಾರು ಪ್ರಶ್ನೆಗಳು ಮತ್ತು ಭಿನ್ನಾಭಿಪ್ರಾಯಗಳಿವೆ. ಮಹಿಳೆಯರು ಶವಯಾತ್ರೆಯಲ್ಲಿ ಭಾಗವಹಿಸಬಹುದೇ? ಶವಸಂಸ್ಕಾರದ ಸ್ಥಳದವರೆಗೂ ಬರಬಹುದೇ? ಎಂಬ ಪ್ರಶ್ನೆಗಳಿಗೆ ಧರ್ಮಗ್ರಂಥಗಳು, ಶಾಸ್ತ್ರಗಳು ಮತ್ತು ವೈಜ್ಞಾನಿಕ ದೃಷ್ಟಿಕೋನಗಳ ಆಧಾರದ ಮೇಲೆ ಉತ್ತರಗಳನ್ನು ಕಂಡುಕೊಳ್ಳಬಹುದು.
ಈ ವಿಷಯದಲ್ಲಿ ಪ್ರಮುಖವಾಗಿ ಎರಡು ದೃಷ್ಟಿಕೋನಗಳಿವೆ: ಮೊದಲನೆಯದು ಅವರವರ ಕುಟುಂಬದ ಆಚಾರಗಳು, ಎರಡನೆಯದು ಧರ್ಮಗ್ರಂಥಗಳು, ಶಾಸ್ತ್ರಗಳು ಮತ್ತು ವೈಜ್ಞಾನಿಕ ಚಿಂತನೆಗಳು. ಧರ್ಮಶಾಸ್ತ್ರಗಳ ಪ್ರಕಾರ ಮತ್ತು ವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ, ಮಹಿಳೆಯರು ಶವಯಾತ್ರೆಯಲ್ಲಿ ಭಾಗಿಯಾಗಬಾರದು ಎಂದು ಹೇಳಲಾಗುತ್ತದೆ. ಅವರ ಕುಟುಂಬದ ಪದ್ಧತಿಗಳು ಭಿನ್ನವಾಗಿದ್ದಲ್ಲಿ ಅದು ಆ ಕುಟುಂಬಕ್ಕೆ ಸಂಬಂಧಿಸಿದೆ. ಆದರೆ, ಸಾಮಾನ್ಯ ನಿಯಮಗಳನ್ನು ಪರಿಶೀಲಿಸಿದಾಗ, ಇದಕ್ಕೆ ಕೆಲವು ಪ್ರಬಲ ಕಾರಣಗಳನ್ನು ನೀಡಲಾಗುತ್ತದೆ.
ವಿಡಿಯೋ ಇಲ್ಲಿದೆ ನೋಡಿ:
ಮಹಿಳೆಯರು ಪುರುಷರಿಗಿಂತ ಹೆಚ್ಚು ಸೂಕ್ಷ್ಮ ಸ್ವಭಾವದವರು ಮತ್ತು ತೀವ್ರವಾಗಿ ದುಃಖಿಸುವ ಪ್ರವೃತ್ತಿ ಹೊಂದಿರುತ್ತಾರೆ. ಈ ಅತಿಯಾದ ದುಃಖದಿಂದಾಗಿ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಹಾನಿಯಾಗಬಹುದು. ಮರಣದ ದೃಶ್ಯಗಳು ಮತ್ತು ಸನ್ನಿವೇಶಗಳು ಅವರ ಮನಃಪಟಲದಲ್ಲಿ ದೀರ್ಘಕಾಲ ಉಳಿದು, ಮಾನಸಿಕ ಭ್ರಮಣೆ ಅಥವಾ ಆಘಾತಕ್ಕೆ ಕಾರಣವಾಗಬಹುದು. ಇದು ಕೇವಲ ವೈಯಕ್ತಿಕ ಆರೋಗ್ಯಕ್ಕೆ ಮಾತ್ರವಲ್ಲದೆ, ಕುಟುಂಬದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಗುರೂಜಿ ವಿವರಿಸಿದ್ದಾರೆ.
ಇದನ್ನೂ ಓದಿ: ಬಡ್ಡಿ ವ್ಯಾಪಾರ ಮಾಡುವುದು ಶುಭವೇ, ಅಶುಭವೇ? ಧರ್ಮಶಾಸ್ತ್ರಗಳು ಹೇಳುವುದೇನು?
ಇದಲ್ಲದೆ, ಶವಯಾತ್ರೆಯ ಸಂದರ್ಭದಲ್ಲಿ ಮಹಿಳೆಯರ ಆಳವಾದ ನೋವು, ಗೋಳು ಮತ್ತು ಅಳು ಆ ಪ್ರದೇಶಕ್ಕೆ ಶುಭಕರವಲ್ಲ ಎಂಬ ನಂಬಿಕೆಯೂ ಇದೆ. ಈ ರೀತಿಯ ತೀವ್ರವಾದ ನಕಾರಾತ್ಮಕ ಭಾವನೆಗಳು ಪರಿಸರದ ಮೇಲೂ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ. ಅಂತಹ ಭಾವನಾತ್ಮಕ ಸನ್ನಿವೇಶಗಳು ಕೆಲವೊಮ್ಮೆ ಮತಿಭ್ರಮಣೆಗೆ ಕಾರಣವಾಗಿ, ಕುಟುಂಬಕ್ಕೆ ಮತ್ತಷ್ಟು ಹಾನಿಯನ್ನುಂಟು ಮಾಡಬಹುದು. ಇದು ಪ್ರತಿಯೊಬ್ಬ ಮಹಿಳೆಗೂ ಅನ್ವಯಿಸುತ್ತದೆ ಎಂದು ಹೇಳಲಾಗುತ್ತದೆ.
ಕೆಲವು ಸಂದರ್ಭಗಳಲ್ಲಿ, ಗಂಡ ತೀರಿಕೊಂಡಾಗ ಹೆಂಡತಿ ಅಲ್ಲಿಯವರೆಗೂ ಹೋಗುವುದು ನಮ್ಮ ಪದ್ಧತಿ ಎಂದು ಹೇಳಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಆಚಾರಗಳು ಭಿನ್ನವಾಗಿರಬಹುದು. ಆದರೆ, ಶವಯಾತ್ರೆಯಲ್ಲಿ ಪತ್ನಿಯು ಭಾಗವಹಿಸಲು ಅವಕಾಶವಿದ್ದರೂ, ಶವವನ್ನು ಒಂದು ನಿರ್ದಿಷ್ಟ ದೂರ ಸಾಗಿಸಿದ ನಂತರ, ಪತ್ನಿಯನ್ನು ಒಂದಷ್ಟು ದೂರ ಹಿಂದೆ ಬಿಟ್ಟು ಯಾತ್ರೆಯನ್ನು ಮುಂದುವರಿಸಬೇಕು ಎಂಬ ನಿಯಮಗಳನ್ನು ಕೆಲವೆಡೆ ಪಾಲಿಸಲಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




