AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ದೇವಸ್ಥಾನಕ್ಕೆ ಒಂದು ತೆಂಗಿನಕಾಯಿ ತೆಗೆದುಕೊಂಡು ಹೋಗಬಾರದು ಏಕೆ?

ದೇವಸ್ಥಾನಕ್ಕೆ ಭೇಟಿ ನೀಡಿದಾಗ ಬರಿಗೈಯಲ್ಲಿ ಹೋಗದೆ ಜೋಡಿ ತೆಂಗಿನಕಾಯಿಗಳನ್ನು ಅರ್ಪಿಸುವುದು ಶ್ರೇಷ್ಠ. ಒಂದು ಕಾಯಿಯನ್ನು ಒಡೆಯಲು ನೀಡಿದರೆ, ಇನ್ನೊಂದನ್ನು ದೇವರಿಗೆ ಮುಟ್ಟಿಸಿ ‘ತೀರ್ಥಕಾಯಿ’ಯಾಗಿ ಮನೆಗೆ ತರಬೇಕು. ಈ ತೀರ್ಥಕಾಯಿಯನ್ನು ಸಿಹಿ ಪದಾರ್ಥಗಳಲ್ಲಿ ಬಳಸಿ ಸೇವಿಸುವುದರಿಂದ ಆರೋಗ್ಯ, ಸಂಪತ್ತು ಮತ್ತು ಮಾನಸಿಕ ನೆಮ್ಮದಿ ದೊರೆಯುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ.

Daily Devotional: ದೇವಸ್ಥಾನಕ್ಕೆ ಒಂದು ತೆಂಗಿನಕಾಯಿ ತೆಗೆದುಕೊಂಡು ಹೋಗಬಾರದು ಏಕೆ?
ತೆಂಗಿನಕಾಯಿ
ಅಕ್ಷತಾ ವರ್ಕಾಡಿ
|

Updated on:Nov 09, 2025 | 3:23 PM

Share

ದೇವಸ್ಥಾನಕ್ಕೆ ಜೋಡಿ ತೆಂಗಿನಕಾಯಿ ಅರ್ಪಿಸುವುದರ ಹಿಂದಿನ ಮಹತ್ವವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, ನಮಗೆ ಕಷ್ಟ ಬಂದಾಗ, ಮಾನಸಿಕ ವ್ಯಥೆ ಕಾಡಿದಾಗ ಅಥವಾ ಜೀವನದ ಜಂಜಾಟಗಳಲ್ಲಿ ಸಿಲುಕಿಕೊಂಡಾಗ, ನಮ್ಮ ಮನಸ್ಸಿನ ಆಸೆ-ಆಕಾಂಕ್ಷೆಗಳು ಮತ್ತು ಅನಿಸಿಕೆಗಳನ್ನು ಹೇಳಿಕೊಳ್ಳಲು ಭಗವಂತನೇ ಆಶ್ರಯ. ಭಗವಂತನು ದೇವಾಲಯಗಳಲ್ಲಿ, ಪ್ರಕೃತಿಯಲ್ಲಿ ಹೀಗೆ ಸರ್ವಾಂತರ್ಯಾಮಿ, ಸರ್ವವ್ಯಾಪಿ ಮತ್ತು ಸರ್ವಶಕ್ತನಾಗಿರುತ್ತಾನೆ. ಆದಾಗ್ಯೂ, ದೇವಸ್ಥಾನಕ್ಕೆ ಭೇಟಿ ನೀಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದು ಸೂಕ್ತ. ಬರಿಗೈಯಲ್ಲಿ ದೇವಸ್ಥಾನಕ್ಕೆ ಹೋಗಬಾರದು ಎಂಬುದು ಒಂದು ಪ್ರಮುಖ ಅಂಶ. ದೇವಸ್ಥಾನದ ಬಳಿ ಪೂಜಾ ಸಾಮಗ್ರಿಗಳನ್ನು ಖರೀದಿಸುವುದರಲ್ಲಿ ತಪ್ಪಿಲ್ಲ, ಆದರೆ ತೆಂಗಿನಕಾಯಿಯ ವಿಚಾರದಲ್ಲಿ ಕೆಲವೊಂದು ವಿಶೇಷ ಪದ್ಧತಿಗಳಿವೆ.

ಯಾವುದೇ ದೇವಸ್ಥಾನಕ್ಕೆ ಹೋದರೂ, ಒಂಟಿ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಬಾರದು. ಅದರಲ್ಲೂ ಮನೆದೇವರು, ಇಷ್ಟದೇವರು, ಕುಲದೇವರಿಗೆ ಪೂಜೆ ಸಲ್ಲಿಸುವಾಗ ಜೋಡಿ ತೆಂಗಿನಕಾಯಿಗಳನ್ನೇ ಅರ್ಪಿಸಬೇಕು. ಮನೆಯಿಂದಲೇ ತೆಂಗಿನಕಾಯಿಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ ಎಂಬ ಪ್ರತೀತಿ ಇದೆ. ವ್ಯಾಪಾರಸ್ಥರ ಅನುಕೂಲಕ್ಕಾಗಿ ಅಲ್ಲೇ ಖರೀದಿಸಬಹುದು, ಆದರೆ ಜೋಡಿ ತೆಂಗಿನಕಾಯಿಗಳನ್ನು ತೆಗೆದುಕೊಂಡು ಹೋಗುವುದರಿಂದ ಪೂರ್ಣ ಫಲ ಸಿಗುತ್ತದೆ.

ವಿಡಿಯೋ ಇಲ್ಲಿದೆ ನೋಡಿ:

ಈ ಎರಡು ತೆಂಗಿನಕಾಯಿಗಳನ್ನು ಏನು ಮಾಡಬೇಕು ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುತ್ತದೆ. ಜೋಡಿ ತೆಂಗಿನಕಾಯಿಗಳನ್ನು ಕೊಂಡೊಯ್ದಾಗ, ಒಂದು ಕಾಯಿಯನ್ನು ಒಡೆಯಲು ನೀಡಬೇಕು. ತೆಂಗಿನಕಾಯಿಯನ್ನು ಒಡೆಯುವುದು ನಮ್ಮ ಅಹಂ, ಕರ್ಮ, ಕೋಪತಾಪಗಳು ಮತ್ತು ತಾಮಸ ಗುಣಗಳನ್ನು ಭಗವಂತನಿಗೆ ಅರ್ಪಿಸುವ ಭಾವನೆಯನ್ನು ಪ್ರತಿನಿಧಿಸುತ್ತದೆ. ಇನ್ನೊಂದು ತೆಂಗಿನಕಾಯಿಯನ್ನು ಅಲ್ಲಿರುವ ಅರ್ಚಕರಿಗೆ ಕೊಟ್ಟು, ದೇವರ ಪಾದಗಳಿಗೆ ಮುಟ್ಟಿಸಿ ಅದನ್ನು ನಮಗೆ ವಾಪಸ್ಸು ಕೊಡಲು ಕೇಳಬೇಕು. ಈ ಕಾಯಿಯನ್ನು ತೀರ್ಥಕಾಯಿ ಎಂದು ಕರೆಯಲಾಗುತ್ತದೆ.

ಈ ತೀರ್ಥಕಾಯಿಯನ್ನು ನೆಲಕ್ಕೆ ತಾಗಿಸದೆ ಭದ್ರವಾಗಿ ಬ್ಯಾಗ್ ಅಥವಾ ಪರ್ಸ್‌ನಲ್ಲಿಟ್ಟುಕೊಂಡು ಮನೆಗೆ ತರಬೇಕು. ಸಾಧ್ಯವಾದರೆ, ಅದನ್ನು ಮನೆಯ ಮುಂಬಾಗಿಲಿಗೆ ಕಟ್ಟಬಹುದು ಅಥವಾ ಬೀರುವಿನಲ್ಲಿ ಅರಿಶಿನ-ಕುಂಕುಮ ಹಚ್ಚಿ ಇಡಬಹುದು. ಈ ಕಾಯಿಯನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಸಾಕಷ್ಟು ಪೂರ್ಣಫಲಗಳು ದೊರೆಯುತ್ತವೆ. ಈ ತೀರ್ಥಕಾಯಿಯಿಂದ ಸಿಹಿ ಪದಾರ್ಥಗಳನ್ನು ಮಾಡಿ ಮನೆಯವರೆಲ್ಲರೂ ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು, ಸಾಲಬಾಧೆಗಳು, ಮತ್ತು ಇತರೆ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಆದರೆ, ಈ ಕಾಯಿಯನ್ನು ಚಟ್ನಿ ಮಾಡಲು ಅಥವಾ ಮಾಂಸಾಹಾರ ಪದಾರ್ಥಗಳಿಗೆ ಬಳಸಬಾರದು.

ಇದನ್ನೂ ಓದಿ: ಬಡ್ಡಿ ವ್ಯಾಪಾರ ಮಾಡುವುದು ಶುಭವೇ, ಅಶುಭವೇ? ಧರ್ಮಶಾಸ್ತ್ರಗಳು ಹೇಳುವುದೇನು?

ಯಾರಾದರೂ ಮಾಟ-ಮಂತ್ರ ಮಾಡಿಸಿದ್ದರೆ, ನಕಾರಾತ್ಮಕ ಶಕ್ತಿಗಳಿದ್ದರೆ ಅಥವಾ ಕೆಟ್ಟದ್ದು ಕಾಡುತ್ತಿದ್ದರೆ, ಈ ತೀರ್ಥಕಾಯಿ ಅದನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಮತ್ತು ಗಂಡ-ಹೆಂಡತಿಯರಲ್ಲಿನ ಭಿನ್ನಾಭಿಪ್ರಾಯಗಳು ಕೂಡ ಇದರಿಂದ ದೂರವಾಗುತ್ತವೆ. ವಿಶೇಷವಾಗಿ ಶಕ್ತಿ ದೇವಸ್ಥಾನಗಳಿಗೆ, ದೇವಿಯ ದೇವಸ್ಥಾನಗಳಿಗೆ ಭೇಟಿ ನೀಡುವಾಗ ಕಡ್ಡಾಯವಾಗಿ ಎರಡು ತೆಂಗಿನಕಾಯಿಗಳನ್ನು ತೆಗೆದುಕೊಂಡು ಹೋಗಿ, ಅರ್ಚಕರಿಗೆ ನೀಡಿ ದೇವರ ಪಾದಗಳಿಗೆ ಮುಟ್ಟಿಸಿ ತಂದುಕೊಳ್ಳಿ.

ಒಡೆದ ತೆಂಗಿನಕಾಯಿಯ ಅರ್ಧ ಭಾಗವನ್ನು ಅರ್ಚಕರಿಗೆ ಅಲ್ಲೇ ನೀಡುವುದು ಶಾಸ್ತ್ರಸಮ್ಮತವಲ್ಲ, ಅದನ್ನು ವಾಪಸು ತಂದುಕೊಳ್ಳಬೇಕು. ಹಾಗೆಯೇ, ಒಡೆದ ತೆಂಗಿನಕಾಯಿಯನ್ನು ಭಿಕ್ಷುಕರಿಗೆ ನೀಡಬಾರದು. ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು ಕುಳಿತು, ಆ ತೆಂಗಿನಕಾಯಿಯ ಪ್ರಸಾದವನ್ನು ಸೇವಿಸುವುದು ತುಂಬಾನೇ ಶುಭಕರ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Sun, 9 November 25