ಕರ್ನಾಟಕದಲ್ಲಿ ಅತಿ ಎತ್ತರದ ನಂದಿ ವಿಗ್ರಹಗಳು ಎಲ್ಲೆಲ್ಲಿವೆ ಗೊತ್ತಾ?

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 16, 2024 | 10:30 AM

ಎಲ್ಲಿ ಶಿವನಿರುತ್ತಾನೋ ಅಲ್ಲಿ ನಂದಿ ಕೂಡ ಇರುತ್ತಾನೆ. ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ನಾವು ಯಾವುದೇ ಶಿವ ದೇವಾಲಯಕ್ಕೆ ಭೇಟಿ ನೀಡಿದರೂ ಅಲ್ಲಿ ನಂದಿಯನ್ನು ನೋಡಬಹುದು. ಇಂತಹ ನಂದಿ ವಿಗ್ರಹಗಳು ಪ್ರತಿ ಶಿವನ ದೇವಸ್ಥಾನದಲ್ಲಿಯೂ ಇರುತ್ತದೆ. ಆದರೆ ಕೆಲವು ದೇವಸ್ಥಾನಗಳಲ್ಲಿ ಅತಿ ಎತ್ತರದ ನಂದಿ ವಿಗ್ರಹಗಳಿವೆ. ಅದು ಎಲ್ಲಿವೆ ಗೊತ್ತಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ನಾಟಕದಲ್ಲಿ ಅತಿ ಎತ್ತರದ ನಂದಿ ವಿಗ್ರಹಗಳು ಎಲ್ಲೆಲ್ಲಿವೆ ಗೊತ್ತಾ?
Follow us on

ನಂದಿಯು ಈಶ್ವರನ ವಾಹನವಾದ ವೃಷಭ, ಶಿವ ಪ್ರಥಮ ಗಣಗಳ ಮುಖಂಡ. ಈತನನ್ನು ನಂದೀಶ್ವರ, ನಂದಿಕೇಶ್ವರ ಅಥವಾ ನಂದಿದೇವ ಎಂದೂ ಕರೆಯಲಾಗುತ್ತದೆ. ನಂದಿ ಎಂಬ ಸಂಸ್ಕೃತ ಪದವು ಸಂತೋಷ, ಸಂತೋಷ ಮತ್ತು ತೃಪ್ತಿ ಎಂಬ ಅರ್ಥವನ್ನು ನೀಡುತ್ತದೆ. ಈತನ ತಾಯಿ ಕಾಮಧೇನು. ಸಹೋದರಿ ನಂದಿನಿ. ನಂದಿ ದೇವ ಶಿವನ ವಾಸಸ್ಥಾನವಾದ ಕೈಲಾಸದ ರಕ್ಷಕ ದೇವತೆಯೂ ಹೌದು. ಬಹುತೇಕ ಎಲ್ಲಾ ಶಿವ ದೇವಾಲಯಗಳಲ್ಲಿಯೂ ಶಿವನಿಗೆ ಎದುರಾಗಿ ನಂದಿ ಕುಳಿತಿರುತ್ತಾನೆ. ಇನ್ನು ಪುರಾಣಗಳಲ್ಲಿ ರಾವಣನ ಸಾಮ್ರಾಜ್ಯ ನಾಶವಾಗಲು ನಂದಿಯ ಶಾಪವೇ ಕಾರಣ ಎನ್ನಲಾಗುತ್ತದೆ, ಏಕೆಂದರೆ ರಾವಣ ನಂದಿಯನ್ನು ಮಂಗದ ಮೋರೆಯವನು ಎಂದು ಪರಿಹಾಸ್ಯ ಮಾಡಿರುತ್ತಾನೆ. ಅದಕ್ಕೆ ನಂದಿಯು ರಾವಣನಿಗೆ ನಿನ್ನ ರಾಜ್ಯ ಸಂಪತ್ತುಗಳೆಲ್ಲಾ ಕಪಿಗಳಿಂದಲೇ ನಾಶವಾಗಲಿ ಎಂದು ಶಾಪ ನೀಡಿರುತ್ತಾನೆ. ಹಾಗಾಗಿ ಅವನ ಶಾಪ ರಾವಣನ ಸಾಮ್ರಾಜ್ಯ ನಾಶವಾಗಲು ಕಾರಣವಾಗುತ್ತದೆ.

ಸನಾತನ ಸಂಪ್ರದಾಯದಲ್ಲಿ, ಭಗವಾನ್‌ ಶಿವನ ಮುಂದೆ ನಂದಿಯನ್ನು ಪೂಜಿಸುವ ನಿಯಮವಿದೆ. ಯಾವುದೇ ಒಬ್ಬ ಭಕ್ತನು ತನ್ನ ಇಷ್ಟಾರ್ಥಗಳನ್ನು ನಂದಿಯ ಕಿವಿಯಲ್ಲಿ ಹೇಳಿದರೆ ಅವನ ಇಷ್ಟಾರ್ಥಗಳೆಲ್ಲಾ ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಇದು ಸ್ವತಃ ಶಿವನೇ ನಂದಿಗೆ ನೀಡಿದ ವಾಗ್ದಾನವೂ ಹೌದು. ಶಿವನ ಆಸ್ಥಾನದ ಮುಖ್ಯ ಸದಸ್ಯನೆಂದು ಕರೆಯಲ್ಪಡುವ ನಂದಿಯನ್ನು ಅವನ ದ್ವಾರಪಾಲಕನೆಂದು ಪರಿಗಣಿಸಲಾಗುತ್ತದೆ, ನಂದಿಯ ಅನುಮತಿಯ ನಂತರವೇ ನಿಮ್ಮ ಇಚ್ಛೆಗಳು ಮತ್ತು ಪ್ರಾರ್ಥನೆಗಳು ಮಹಾದೇವನನ್ನು ತಲುಪುತ್ತವೆ. ಎಂಬ ನಂಬಿಕೆಯೂ ಇದೆ. ಎಲ್ಲಿ ಶಿವನಿರುತ್ತಾನೋ ಅಲ್ಲಿ ನಂದಿ ಕೂಡ ಇರುತ್ತಾನೆ. ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ನಾವು ಯಾವುದೇ ಶಿವ ದೇವಾಲಯಕ್ಕೆ ಭೇಟಿ ನೀಡಿದರೂ ಅಲ್ಲಿ ನಂದಿಯನ್ನು ನೋಡಬಹುದು. ಇಂತಹ ನಂದಿ ವಿಗ್ರಹಗಳು ಪ್ರತಿ ಶಿವನ ದೇವಸ್ಥಾನದಲ್ಲಿಯೂ ಇರುತ್ತದೆ. ಆದರೆ ಕೆಲವು ದೇವಸ್ಥಾನಗಳಲ್ಲಿ ಅತೀ ಎತ್ತರದ ನಂದಿ ವಿಗ್ರಹಗಳಿವೆ. ಅದು ಎಲ್ಲಿವೆ ಗೊತ್ತಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

– ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ

ಮೈಸೂರಿನ ಚಾಮುಂಡಿ ಬೆಟ್ದದಲ್ಲಿ ಎಲ್ಲರ ಕಣ್ಮನ ಸೆಳೆಯುವ ನಂದಿ ವಿಗ್ರಹವಿದ್ದು ಸುಮಾರು 16 ಅಡಿ ಎತ್ತರ ಮತ್ತು 24 ಅಡಿ ಉದ್ದವಿದೆ. ಇದನ್ನು ಒಂದೇ ಕಪ್ಪು ಗ್ರಾನೈಟ್ ತುಂಡಿನಿಂದ ಕೆತ್ತಲಾಗಿದೆ. ಚಾಮುಂಡಿ ಬೆಟ್ಟದಲ್ಲಿರುವ ನಂದಿಯ ಏಕಶಿಲಾ ಪ್ರತಿಮೆಯು ಮೈಸೂರು ಅರಮನೆ ಮತ್ತು ಕಾರಂಜಿ ಸರೋವರದ ಜೊತೆಗೆ ಮೈಸೂರಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ವಿಶೇಷ ದಿನಗಳಲ್ಲಿ ಈ ನಂದಿಗೆ ಅಭಿಷೇಕವೂ ನಡೆಯುತ್ತದೆ. ಚಾಮುಂಡಿ ಬೆಟ್ಟದಲ್ಲಿರುವ ಈ ನಂದಿ ಭಾರತದ ಮೂರನೇ ಅತಿದೊಡ್ಡ ನಂದಿಯಾಗಿದೆ.

– ಬೆಂಗಳೂರಿನ ನಂದಿ ದೇವಸ್ಥಾನ

ನಂದಿ ದೇವಸ್ಥಾನ ಮತ್ತು ದೊಡ್ಡ ಬಸವನ ಗುಡಿ ಮುಂತಾದ ಇತರ ಹೆಸರುಗಳಿಂದ ಕರೆಯಲ್ಪಡುವ ಈ ದೇವಸ್ಥಾನವು ಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಹೆಸರೇ ಸೂಚಿಸುವಂತೆ ಇದು ಭಗವಾನ್ ಶಿವನ ವಾಹನ ನಂದಿಗೆ ಸಮರ್ಪಿತವಾಗಿದೆ. ಇಲ್ಲಿರುವ ನಂದಿ ವಿಗ್ರಹವು ವಿಶ್ವದ ಅತಿದೊಡ್ಡ ನಂದಿ ವಿಗ್ರಹಗಳಲ್ಲಿ ಒಂದಾಗಿದೆ. ಇದು 15 ಅಡಿ ಎತ್ತರ ಮತ್ತು 21 ಅಡಿ ಉದ್ದವಿದೆ.

– ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ ಮತ್ತು ಶಾಂತಲೇಶ್ವರ ದೇವಸ್ಥಾನದಲ್ಲಿರುವ ನಂದಿ

ಹೊಯ್ಸಳೇಶ್ವರ ದೇವಸ್ಥಾನವು ಹಳೇಬೀಡಿನಲ್ಲಿರುವ ಅತಿ ದೊಡ್ಡ ಹಿಂದೂ ದೇವಾಲಯವಾಗಿದ್ದು,ಅತ್ಯಂತ ಪ್ರಸಿದ್ದಿ ಪಡೆದಿದೆ. ಹೊಯ್ಸಳೇಶ್ವರ ಶಾಂತಲೇಶ್ವರ ದೇವಸ್ಥಾನವು ಹಿಂದೂ ದೇವರಾದ ಶಿವನಿಗೆ ಸಮರ್ಪಿತವಾಗಿದೆ. ಇಲ್ಲಿ ನಾವು 2 ನಂದಿಯನ್ನು ಕಾಣಬಹುದಾಗಿದೆ. ಇದನ್ನು ಸುಂದರವಾದ ಕಲ್ಲಿನಿಂದ ಕೆತ್ತನೆ ಮಾಡಲಾಗಿದ್ದು, ಹೊಯ್ಸಳೇಶ್ವರನ ಮುಂದಿರುವ ನಂದಿಯು 9 ಅಡಿ ಎತ್ತರವಿದ್ದು, ಶಾಂತಲೇಶ್ವರನ ಮುಂದಿರುವ ನಂದಿ 8 ಅಡಿ ಎತ್ತರವಿದೆ. ಇವೆರಡು ನಂದಿಯು ಭಾರತದ ಅತೀ ಎತ್ತರದ 6 ಮತ್ತು 7 ನೇ ನಂದಿಯಾಗಿದೆ.

– ಕೋಟಿಲಿಂಗೇಶ್ವರನ ನಂದಿ ಪ್ರತಿಮೆ

ಕೋಲಾರ ಜಿಲ್ಲೆಯ ಕಮ್ಮಸಂದ್ರ ಗ್ರಾಮದಲ್ಲಿರುವ ಶಿವಲಿಂಗದ ಮುಂಭಾಗದಲ್ಲಿ 35 ಅಡಿ ಎತ್ತರದ ಬೃಹತ್ ನಂದಿ ವಿಗ್ರಹವಿದೆ. ಅದು ಅಲ್ಲದೆ ಇಲ್ಲಿನ ಕೋಟಿಲಿಂಗೇಶ್ವರ ದೇವಸ್ಥಾನವು ವಿಶ್ವದ 108 ಅಡಿ ಅಳತೆಯ ಅತಿದೊಡ್ಡ ಶಿವಲಿಂಗವನ್ನು ಹೊಂದಿರುವ ಹೆಗ್ಗಳಿಕೆ ಪಾತ್ರವಾಗಿದೆ.

ಇದನ್ನು ಓದಿ: ಸತ್ತವರ ಬಾಯಿಗೆ ಗಂಗಾಜಲ ಮತ್ತು ತುಳಸಿ ಎಲೆ ಏಕೆ ಹಾಕುತ್ತಾರೆ?

– ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನದ ನಂದಿ ವಿಗ್ರಹ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಿಂದ ಕೂಗಳತೆಯ ದೂರದಲ್ಲಿರುವ “ಬಳ್ಳಿಗಾವಿ” ಎಂಬ ಗ್ರಾಮದ ಕೆರೆದಂಡೆಯ ಮೇಲಿರುವ ಅದ್ಭುತ ವಾಸ್ತುಶಿಲ್ಪದ ದೇವಾಲಯವೇ “ಶ್ರೀ ಕೇದಾರೇಶ್ವರ ದೇವಾಲಯ”. ತ್ರಿಕೂಟ (ಮೂರು ಗೋಪುರ) ಶೈಲಿಯಲ್ಲಿರುವ ಈ ದೇವಾಲಯದ ಗರ್ಭಗುಡಿಯಲ್ಲಿ ಪೂಜಿಸಲ್ಪಡುವ ದೇವರು ಶ್ರೀ ಕೇದಾರೇಶ್ವರನೇ ಆದರೂ ಈ ದೇವಾಲಯದ ಪ್ರಮುಖ ಆಕರ್ಷಣೆ ಸುಮಾರು ಎಂಟು ಅಡಿ ಎತ್ತರದ ನಂದಿ ವಿಗ್ರಹ. ಇದು ಕರ್ನಾಟಕದ ಅತೀ ಎತ್ತರದ ನಂದಿ ವಿಗ್ರಹಗಳಿರುವ ದೇವಾಲಯಗಳಲ್ಲಿ ಒಂದಾಗಿದೆ.

– ವಿರೂಪಾಕ್ಷ ದೇವಾಲಯ, ಹಂಪಿ

ವಿರೂಪಾಕ್ಷ ದೇವಾಲಯವು ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿದೆ. ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗೊತ್ತುಪಡಿಸಿದ ಹಂಪಿಯ ಸ್ಮಾರಕಗಳ ಗುಂಪಿನ ಭಾಗವಾಗಿದೆ. ಈ ದೇವಾಲಯವು ಶಿವನ ರೂಪವಾದ ವಿರೂಪಾಕ್ಷನಿಗೆ ಸಮರ್ಪಿತವಾಗಿದೆ. ಅದಲ್ಲದೆ ಈ ಮಂದಿರವು ವಿಜಯನಗರ ಸಾಮ್ರಾಜ್ಯದ ಪ್ರೌಡ ದೇವರಾಯ ಎಂದೂ ಕರೆಯಲ್ಪಡುವ ರಾಜ ಎರಡನೇ ದೇವರಾಯನ ಅಡಿಯಲ್ಲಿ ನಾಯಕ ಲಕ್ಕನ್ ದಂಡೇಶನು ನಿರ್ಮಿಸಿದನು ಎಂದು ಹೇಳಲಾಗುತ್ತದೆ. ಇಲ್ಲಿನ ನಂದಿಯು, ಪೂರ್ವಕ್ಕೆ ನೆಲೆಗೊಂಡಿರುವ ವಿರೂಪಾಕ್ಷ ದೇವಾಲಯದ ಶಿವನ ವಿಗ್ರಹಕ್ಕೆ ಮುಖಮಾಡಿ ಕುಳಿತುಕೊಂಡಿದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ