ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಭಾರತದ ಪ್ರಸಿದ್ಧ ರಾಮ ಮಂದಿರಗಳು ಎಲ್ಲಿವೆ ಗೊತ್ತಾ?
ಭಗವಾನ್ ರಾಮನ ಬಗ್ಗೆ ತಿಳಿಯದವರಿಲ್ಲ. ಆಧ್ಯಾತ್ಮಿಕತೆ ಮತ್ತು ಶಾಂತಿಯ ನಾಡು ಎಂದು ಕರೆಯಲ್ಪಡುವ ನಮ್ಮ ಭಾರತವು ಬೆರಗುಗಣ್ಣಿನಿಂದ ನೋಡಬಹುದಾದ ಶ್ರೀ ರಾಮ ದೇವಾಲಯಗಳ ನೆಲೆಯಾಗಿದೆ. ಬೇರೆ ಬೇರೆ ರೂಪದ ಭಗವಾನ್ ರಾಮನ ಪ್ರತಿಮೆಯನ್ನು ನಾವಿಲ್ಲಿ ನೋಡಬಹುದಾಗಿದೆ. ಇದು ನಮಗೆಲ್ಲಾ ದೃಶ್ಯ ರಸದೌತಣ ಮಾತ್ರವಲ್ಲದೆ, ನಮ್ಮ ಪರಂಪರೆಯನ್ನು ಜಗತ್ತಿಗೆ ಸಾರುತ್ತದೆ.
ಭಾರತದ ಅಪಾರ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯು, ರಾಮಾಯಣದಷ್ಟು ಭವ್ಯವಾದ ಮಹಾಕಾವ್ಯಗಳಿಂದ ಕೂಡಿದೆ. ಹಾಗಾಗಿ ಭಗವಾನ್ ರಾಮನ ಬಗ್ಗೆ ತಿಳಿಯದವರಿಲ್ಲ. ಆಧ್ಯಾತ್ಮಿಕತೆ ಮತ್ತು ಶಾಂತಿಯ ನಾಡು ಎಂದು ಕರೆಯಲ್ಪಡುವ ನಮ್ಮ ದೇಶವು, ಬೆರಗುಗಣ್ಣಿನಿಂದ ನೋಡಬಹುದಾದ ಶ್ರೀ ರಾಮ ದೇವಾಲಯಗಳ (Shri Ram Temples) ನೆಲೆಯಾಗಿದೆ. ಬೇರೆ ಬೇರೆ ರೂಪದ ಭಗವಾನ್ ರಾಮನ ಪ್ರತಿಮೆಯನ್ನು ನಾವಿಲ್ಲಿ ನೋಡಬಹುದಾಗಿದೆ. ಇದು ನಮಗೆಲ್ಲಾ ದೃಶ್ಯ ರಸದೌತಣ ಮಾತ್ರವಲ್ಲದೆ ನಮ್ಮ ಪರಂಪರೆಯನ್ನು ಜಗತ್ತಿಗೆ ಸಾರುತ್ತದೆ.
ಅಯೋಧ್ಯೆಯು ಭಗವಾನ್ ರಾಮನ ಜನ್ಮ ಸ್ಥಳ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಅವನನ್ನು ನಾವು ಪುರುಷೋತ್ತಮ ಎಂದು ಕರೆಯುತ್ತೇವೆ. ಅಂದರೆ ಪುರುಷರಲ್ಲಿ ಅತ್ಯುತ್ತಮ ಅಥವಾ ಸರ್ವೋಚ್ಚ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡವನು ಎನ್ನುವ ಅರ್ಥ ಬರುತ್ತದೆ. ಸ್ವಾಮಿ ವಿವೇಕಾನಂದರ ಪ್ರಕಾರ, ಶ್ರೀ ರಾಮನು “ಆದರ್ಶ ಮಗ, ಆದರ್ಶ ಪತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆದರ್ಶ ರಾಜನ ಸಾಕಾರರೂಪ”. ಭಗವಾನ್ ರಾಮನು ತ್ರೇತಾಯುಗದಲ್ಲಿ ಜನಿಸಿದ್ದರಿಂದ ಆತನನ್ನು ಮಾನವ ರೂಪದಲ್ಲಿ ಪೂಜಿಸಲ್ಪಡುವ ಅತ್ಯಂತ ಹಳೆಯ ದೇವರು ಎಂದು ಪುರಾಣಗಳು ಹೇಳುತ್ತವೆ. ಭಾರತದಾದ್ಯಂತ ಭಗವಾನ್ ರಾಮನಿಗೆ ಸಮರ್ಪಿತವಾದ ವಿವಿಧ ದೇವಾಲಯಗಳಿದ್ದು ಅವುಗಳನ್ನು ಈ ಕೆಳಗಿನಂತಿವೆ.
ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆ ರಾಮ ಮಂದಿರ
ಅಯೋಧ್ಯೆಯು ಭಗವಾನ್ ರಾಮನ ಜನ್ಮಸ್ಥಳವಾಗಿದ್ದು ಇದು ಸರಯೂ ನದಿಯ ದಡದಲ್ಲಿದೆ. ಇಲ್ಲಿನ ಮುಖ್ಯ ದೇವರು ರಾಮ ಲಲ್ಲಾ, ಅಂದರೆ ಶಿಶು ರೂಪದಲ್ಲಿರುವ ಭಗವಾನ್ ರಾಮ. ಈ ಸ್ಥಳದಲ್ಲಿ ಈಗ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗಿದ್ದು ಜ. 22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಹಿಂದೂಗಳಿಗೆ ಸಪ್ತಪುರಿ ಏಳು ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಇದು ಒಂದಾಗಿದೆ.
ಕರ್ನಾಟಕದ ಕೋದಂಡ ರಾಮ ದೇವಾಲಯ
ಈ ದೇವಾಲಯವು ಹಂಪಿಯ ತುಂಗಭದ್ರ ನದಿಯ ಬಳಿ ಇದೆ. ಇದು ಹಿಂದೆ ಭಗವಾನ್ ಪರಶುರಾಮ ಮತ್ತು 9 ಸಿದ್ಧ ಪುರುಷರ ವಾಸಸ್ಥಳವಾಗಿತ್ತು ಎಂದು ನಂಬಲಾಗಿದೆ. ಇಲ್ಲಿಯ ವಾಸ್ತುಶಿಲ್ಪ ಶೈಲಿಯು ವಿಜಯನಗರ ಮತ್ತು ಹೊಯ್ಸಳ ಶೈಲಿಗಳ ಮಿಶ್ರಣವಾಗಿದೆ. ಸೀತಾಮಾತೆ, ರಾಮನ ಸಹೋದರ ಲಕ್ಷ್ಮಣ ಮತ್ತು ಅವನ ಕಟ್ಟಾ ಭಕ್ತ ಹನುಮಂತನೊಂದಿಗೆ ರಾಮನನ್ನು ಇಲ್ಲಿ ಪೂಜಿಸಲಾಗುತ್ತದೆ. ಯುನೆಸ್ಕೋ ಈ ಸುಂದರವಾದ ದೇವಾಲಯವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ.
ತಮಿಳುನಾಡಿನ ರಾಮಸ್ವಾಮಿ ದೇವಾಲಯ
ಈ ಸುಂದರವಾದ ದೇವಾಲಯವು 16 ನೇ ಶತಮಾನದಿಂದ ತನ್ನ ಕೆತ್ತನೆಗಳ ಮೂಲಕ ಗಮನ ಸೆಳೆಯುತ್ತದೆ. ಇಲ್ಲಿನ ಭವ್ಯವಾದ 64 ಕಂಬಗಳ ಸಭಾಂಗಣಕ್ಕೆ ಇದು ಹೆಸರುವಾಸಿಯಾಗಿದೆ. ಇದು ಸಂಕೀರ್ಣವಾಗಿ ಕೆತ್ತಲಾದ ಗೋಪುರ ಮತ್ತು ದ್ರಾವಿಡ ವಾಸ್ತುಶಿಲ್ಪದ ವೈಭವವನ್ನು ಪ್ರತಿಬಿಂಬಿಸುತ್ತದೆ. ಭಗವಾನ್ ರಾಮನನ್ನು ಅವನ ಮೂವರು ಸಹೋದರರಾದ ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಭಕ್ತ ಹನುಮಂತನನ್ನು ಇಲ್ಲಿ ಪೂಜಿಸಲಾಗುತ್ತದೆ.
ಇದನ್ನೂ ಓದಿ: ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಆಗಲಿದೆ ಮೈಸೂರಿನ ಅರುಣ್ ಯೋಗಿರಾಜ್ ನಿರ್ಮಿಸಿದ ರಾಮಲಲ್ಲಾ ವಿಗ್ರಹ
ಧರ್ಮಸ್ಥಳದ ಶ್ರೀ ರಾಮಕ್ಷೇತ್ರ
ದಕ್ಷಿಣದ ಅಯೋಧ್ಯೆ ಎಂದೇ ಪ್ರಸಿದ್ಧವಾದ ಧರ್ಮಸ್ಥಳ ಗ್ರಾಮದ ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಸೀತಾ- ರಾಮ ಪರಿವಾರ ದೇವರುಗಳನ್ನು ಅಮೃತ ಶಿಲೆಯಲ್ಲಿ ಕೆತ್ತಲಾಗಿದೆ. ಈ ಪುಣ್ಯ ಭೂಮಿಗೆ ಪ್ರಭು ಶ್ರೀ ರಾಮಚಂದ್ರ ದೇವರು ಸೀತಾನ್ವೇಷಣೆಯ ಸಂದರ್ಭದಲ್ಲಿ ಬಂದು, ಒಂದು ದಿವಸ ತಂಗಿ, ಋಷಿ ಮುನಿಗಳೊಂದಿಗಿದ್ದು ತನ್ನ ಅನುಷ್ಠಾನವನ್ನು ಮಾಡಿದ್ದರು ಎಂಬುದು ಇಲ್ಲಿಯ ಇತಿಹಾಸ. ಆ ಕಾರಣದಿಂದಲೇ ನಮ್ಮ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಕ್ಕೆ ದಕ್ಷಿಣದ ಅಯೋಧ್ಯೆ ಎಂಬ ಹೆಸರು ಬಂದಿತು ಎನ್ನಲಾಗುತ್ತದೆ.
ತೆಲಂಗಾಣದ ಸೀತಾರಾಮಚಂದ್ರ ಸ್ವಾಮಿ ದೇವಾಲಯ
ಈ ದೇವಾಲಯವು ಗೋದಾವರಿ ನದಿಯ ದಡದಲ್ಲಿ ನಿರ್ಮಿಸಲಾಗಿದೆ. ಭಗವಾನ್ ರಾಮನು ನದಿಯನ್ನು ದಾಟಿದ ಸ್ಥಳದಲ್ಲಿಯೇ ಈ ದೇವಾಲಯವನ್ನು ನಿರ್ಮಿಸಲಾಗಿದೆ ಮತ್ತು ಇದು ಹಿಂದೂಗಳಿಗೆ ಬಹಳ ಮುಖ್ಯವಾದ ಯಾತ್ರಾ ಸ್ಥಳವಾಗಿದೆ. ವಿಷ್ಣುವಿನ ಭಕ್ತನಾದ ಭದ್ರನ ಮುಂದೆ ರಾಮನು ಕಾಣಿಸಿಕೊಂಡದ್ದು ಇಲ್ಲಿಯೇ ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿರುವ ಭಗವಾನ್ ರಾಮನ ವಿಗ್ರಹವು ನಾಲ್ಕು ತೋಳುಗಳನ್ನು ಹೊಂದಿದೆ.
ಮಹಾರಾಷ್ಟ್ರದ ಶ್ರೀ ಕಲಾರಾಮ್ ಮಂದಿರ
ನಾಸಿಕ್ ನ ಪಂಚವಟಿ ಪ್ರದೇಶದಲ್ಲಿ ಈ ದೇವಾಲಯವಿದೆ. ದಂತಕಥೆಯ ಪ್ರಕಾರ, ಭಗವಾನ್ ರಾಮನು ತನ್ನ ವನವಾಸದ ಸ್ವಲ್ಪ ಸಮಯವನ್ನು ಈ ಪ್ರದೇಶದಲ್ಲಿಯೇ ಕಳೆದನು ಎಂಬ ಇತಿಹಾಸವಿದೆ. 1788 ರಲ್ಲಿ ನಿರ್ಮಿಸಲಾದ ಈ ದೈವಿಕ ದೇವಾಲಯವು ಕಪ್ಪು ಬಣ್ಣದ ಭಗವಾನ್ ರಾಮನ ಪ್ರತಿಮೆಯನ್ನು ಹೊಂದಿದೆ, ಇದು ಅದರ ಹೆಸರಿನ ಹಿಂದಿನ ಕಾರಣವಾಗಿದೆ. ಈ ದೇವಾಲಯವನ್ನು ಸರ್ದಾರ್ ರಂಗರಾವ್ ಔಧಿಕರ್ ನಿರ್ಮಿಸಿದರು ಎಂದು ನಂಬಲಾಗಿದೆ.
ಮಧ್ಯಪ್ರದೇಶದ ರಾಮರಾಜ ಮಂದಿರ
ರಾಮ ರಾಜ ದೇವಾಲಯವು ಮಧ್ಯಪ್ರದೇಶದ ಒರ್ಚಾದಲ್ಲಿದೆ. ಭಾರತದಲ್ಲಿ ರಾಮನನ್ನು ರಾಜನಾಗಿ ಪೂಜಿಸುವ ಏಕೈಕ ದೇವಾಲಯ ಇದಾಗಿದೆ. ಇದು ಮಂದಿರವಲ್ಲ ಅರಮನೆ, ಅದರಲ್ಲಿಯೇ ರಾಮನನ್ನು ಪೂಜಿಸಲಾಗುತ್ತದೆ. ಪ್ರತಿದಿನ ಭಗವಾನ್ ರಾಮನಿಗೆ ಸಶಸ್ತ್ರ ನಮಸ್ಕಾರ ಮಾಡಲಾಗುತ್ತದೆ. ರಾಜ ರಾಮನೊಂದಿಗೆ, ಸೀತೆ, ಸಹೋದರ ಲಕ್ಷ್ಮಣ, ಮಹಾರಾಜ್ ಸುಗ್ರೀವನನ್ನು ಕೂಡ ಇಲ್ಲಿ ಪೂಜಿಸಲಾಗುತ್ತದೆ. ಬಲ ಭಾಗದಲ್ಲಿರುವ ದರ್ಬಾರ್ ನಲ್ಲಿ ದುರ್ಗಾ ಮಾತೆಯೂ ಇದ್ದಾಳೆ. ಸೀತಾ ಮಾತೆಯ ಕಾಲಿನ ಬಳಿ ಹನುಮಾನ್ ಮತ್ತು ಜಾಂಬವಂತರು ಪ್ರಾರ್ಥಿಸುತ್ತಿದ್ದಾರೆ. ಈ ದೇವಾಲಯದ ವಿಶೇಷತೆಯೆಂದರೆ ಭಗವಾನ್ ರಾಮನು ತನ್ನ ಬಲಗೈಯಲ್ಲಿ ಖಡ್ಗ ಮತ್ತು ಇನ್ನೊಂದು ಕೈಯಲ್ಲಿ ಗುರಾಣಿಯನ್ನು ಹಿಡಿದು ಪದ್ಮಾಸನದಲ್ಲಿ ಕುಳಿತಿದ್ದಾನೆ.
ಕೇರಳದ ಶ್ರೀ ರಾಮ ಮಂದಿರ
ಭಗವಾನ್ ರಾಮನನ್ನು ಇಲ್ಲಿ ತ್ರಿಪ್ರಯರಪ್ಪನ್ ಎಂದು ಪೂಜಿಸಲಾಗುತ್ತದೆ. ಈ ದೇವಾಲಯದಲ್ಲಿರುವ ರಾಮನ ಪ್ರತಿಮೆಯು ನಾಲ್ಕು ತೋಳುಗಳನ್ನು ಹೊಂದಿದ್ದು ಈ ವಿಗ್ರಹವನ್ನು ಸಮುದ್ರದಿಂದ ತಂದಿದ್ದು ಎಂದು ಹೇಳಲಾಗುತ್ತದೆ. ಇದನ್ನು ವಕ್ಕಯಿಲ್ ಕೈಮಲ್ ಎಂಬ ಸ್ಥಳೀಯ ಆಡಳಿತಗಾರ ನಿರ್ಮಿಸಿದನು ಎಂದು ಹೇಳಲಾಗುತ್ತದೆ. ಈ ದೇವಾಲಯ ಹಚ್ಚ ಹಸಿರಿನ ನಡುವೆ ನೆಲೆಗೊಂಡಿದ್ದರಿಂದ ಶಾಂತಿಯುತ ವಾತಾವರಣವನ್ನು ಕಲ್ಪಿಸುತ್ತದೆ.
ಒಡಿಶಾದ ಶ್ರೀ ರಾಮ ಮಂದಿರ
‘ಭಾರತದ ದೇವಾಲಯಗಳ ನಗರ’ ಎಂದೇ ಪ್ರಸಿದ್ಧಿಯಾಗಿರುವ ಭುವನೇಶ್ವರದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಇದು ಒಂದಾಗಿದೆ. ಇಲ್ಲಿ ನಿಮಗೆ ಭಗವಾನ್ ರಾಮ, ಅವನ ಪತ್ನಿ ಸೀತಾ ದೇವಿ ಮತ್ತು ಅವನ ಸಹೋದರ ಲಕ್ಷ್ಮಣನ ವಿಗ್ರಹ ಕಾಣಲು ಸಿಗುತ್ತದೆ. ಈ ದೇವಾಲಯವು ಆಧುನಿಕ ರಚನೆಯಾಗಿದ್ದರೂ ಕೂಡ ಕೆಲವು ಪ್ರಾಚೀನ ದೇವಾಲಯಗಳ ವಾಸ್ತು ಶಿಲ್ಪದ ಕೆತ್ತನೆಗಳನ್ನು ಎರವಲು ಪಡೆದಿರುವುದರಿಂದ ಪುರಾತನ ದೇವಾಲಯಗಳಂತೆಯೇ ಗೋಚರವಾಗುತ್ತದೆ.
ಪಂಜಾಬಿನ ರಾಮತೀರ್ಥ ಮಂದಿರ
ಲಂಕಾದಿಂದ ಹಿಂದಿರುಗಿದ ನಂತರ ಭಗವಾನ್ ರಾಮನಿಂದ ಬೇರ್ಪಟ್ಟ ಸೀತಾಮಾತೆಯು ಈ ಸ್ಥಳದಲ್ಲಿಯೇ ಆಶ್ರಯ ಪಡೆಡಿದ್ದರು ಎಂದು ಹೇಳಲಾಗುತ್ತದೆ. ಜೊತೆಗೆ ಇದು ಭಗವಾನ್ ರಾಮನ ಪುತ್ರರಾದ ಲವ ಮತ್ತು ಕುಶರ ಜನ್ಮಸ್ಥಳವೂ ಹೌದು, ಹಾಗೂ ಮಹರ್ಷಿ ವಾಲ್ಮೀಕಿಯ ಆಶ್ರಮವು ಆಗಿತ್ತು ಎಂಬ ನಂಬಿಕೆ ಇದೆ. ಈ ಸ್ಥಳವು ಎಲ್ಲಾ ಬದಿಗಳಿಂದಲೂ ನೀರಿನಿಂದ ಆವೃತವಾಗಿದೆ. ಅದು ಅಲ್ಲದೆ ಈ ದೇವಾಲಯವು ಮಹರ್ಷಿ ವಾಲ್ಮೀಕಿಯು ರಾಮಾಯಣ ಮಹಾಕಾವ್ಯವನ್ನು ಬರೆದ ಸ್ಥಳವೆಂದು ಹೇಳಲಾಗುತ್ತದೆ.
ಜಮ್ಮುವಿನ ರಘುನಾಥ ಮಂದಿರ
ಜಮ್ಮು ಮತ್ತು ಕಾಶ್ಮೀರದ ಮೊದಲ ಡೋಗ್ರಾ ರಾಜ ಮಹಾರಾಜ ಗುಲಾಬ್ ಸಿಂಗ್ 1835 ರಲ್ಲಿ ಈ ದೇವಾಲಯದ ನಿರ್ಮಾಣ ಮಾಡಿದರು ಎನ್ನಲಾಗುತ್ತದೆ. ಭಗವಾನ್ ರಾಮನನ್ನು ಇಲ್ಲಿ ಮುಖ್ಯ ದೇವರಾಗಿ ಪೂಜಿಸಿದರೆ, ದೇವಾಲಯದ ಸಂಕೀರ್ಣದಲ್ಲಿ ಇತರ ದೇವರುಗಳು ಮತ್ತು ದೇವತೆಗಳ ಗೌರವಾರ್ಥವಾಗಿ ದೇವಾಲಯಗಳನ್ನು ನಿರ್ಮಿಸಲಾಗಿದೆ. ಒಟ್ಟಾರೆಯಾಗಿ, ಆವರಣದಲ್ಲಿ ಏಳು ವಿಭಿನ್ನ ದೇವಾಲಯಗಳಿವೆ, ಅವುಗಳನ್ನು ಸುಂದರವಾದ ವರ್ಣಚಿತ್ರಗಳು ಮತ್ತು ಕೆತ್ತನೆ ಮಾಡಲಾಗಿದೆ.
ಶ್ರೀ ರಾಮನಾಥ ಸ್ವಾಮಿ ದೇವಾಲಯ ರಾಮೇಶ್ವರಂ
ರಾಮ ಸೇತುವೆ ನಿರ್ಮಾಣ ನಡೆದ ರಾಮೇಶ್ವರಂ ನಗರವು ಹಿಂದೂ ಧರ್ಮದವರಿಗೆ ಪುಣ್ಯ ಸ್ಥಳವಾಗಿದೆ. ಭಾರತೀಯ ಪರ್ಯಾಯ ದ್ವೀಪದ ತುದಿಯಲ್ಲಿರುವ ಈ ದೇವಾಲಯವನ್ನು 12 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಲಂಕೆಗೆ ಹೊರಡುವ ಮೊದಲು ಭಗವಾನ್ ರಾಮನು ಪೂಜಿಸಿದ ಶಿವಲಿಂಗವನ್ನು ಈ ದೇವಾಲಯದಲ್ಲಿ ಇಂದಿಗೂ ಪೂಜಿಸಲಾಗುತ್ತದೆ.
ದಂಡರಾಮಸ್ವಾಮಿ ದೇವಸ್ಥಾನ, ರಾಮೇಶ್ವರಂ
ರಾಮೇಶ್ವರಂನಿಂದ 13 ಕಿ.ಮೀ ದೂರದಲ್ಲಿರುವ ಈ ಭವ್ಯವಾದ ದೇವಾಲಯವು ಎಲ್ಲಾ ಬದಿಗಳಲ್ಲಿಯೂ ಸಮುದ್ರದಿಂದ ಆವೃತವಾಗಿದೆ. ರಾವಣನ ಸಹೋದರ ವಿಭೀಷಣನು ಲಂಕೆಯನ್ನು ತೊರೆದ ನಂತರ ಭಗವಾನ್ ರಾಮನನ್ನು ಭೇಟಿಯಾದ ಸ್ಥಳದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ, ಭಗವಾನ್ ರಾಮ, ಮಾತಾ ಸೀತಾ ಮತ್ತು ಲಕ್ಷ್ಮಣರ ವಿಗ್ರಹಗಳಲ್ಲದೆ, ಈ ದೇವಾಲಯದಲ್ಲಿ ವಿಭೀಷಣನ ವಿಗ್ರಹವೂ ಇದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ