Gautam Gambhir: ಗೌತಮ್ ಗಂಭೀರ್‌ಗೆ ಮುಂದಿನ 68 ದಿನಗಳು ನಿರ್ಣಾಯಕ
Gautam Gambhir's Future Uncertain: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡದ ಹೀನಾಯ ಪ್ರದರ್ಶನದ ನಂತರ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಹುದ್ದೆ ಅಪಾಯದಲ್ಲಿದೆ. ತಂಡದ ಕಳಪೆ ಪ್ರದರ್ಶನ ಮತ್ತು ಆಟಗಾರರೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಗಂಭೀರ್ ಅವರ ಮೇಲೆ ಒತ್ತಡ ಹೆಚ್ಚಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪ್ರದರ್ಶನ ಸುಧಾರಣೆಯಾಗದಿದ್ದರೆ ಅವರನ್ನು ಹುದ್ದೆಯಿಂಧ ವಜಾ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಹೊಸ ವರ್ಷದ ಮೊದಲ ದಿನವೇ ಟೀಂ ಇಂಡಿಯಾ ಪಾಳಯದಿಂದ ಸ್ಫೋಟಕ ಸುದ್ದಿಗಳು ಹೊರಬರುತ್ತಿವೆ. ದಿನದ ಆರಂಭದಲ್ಲಿ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ನಡೆದಿದ್ದ ಮಾತುಕತೆಗಳು ಸೋರಿಕೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಆ ಪ್ರಕಾರ ತಂಡದ ಕಳಪೆ ಪ್ರದರ್ಶನಕ್ಕೆ ಅಸಮಾಧಾನಗೊಂಡಿರುವ ಮುಖ್ಯ ಕೋಚ್ ಗೌತಮ್ ಗಂಭೀರ್ ಹಿರಿಯ ಆಟಗಾರರು ಸೇರಿದಂತೆ ಬೇಜವಬ್ದಾರಿ ಆಟ ಆಡುತ್ತಿರುವ ಕೆಲವು ಕಿರಿಯ ಆಟಗಾರರಿಗೂ ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗಿತ್ತು. ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಕಳೆದ ವರ್ಷವಷ್ಟೇ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದ ಗೌತಮ್ ಗಂಭೀರ್ ಅವರ ಹುದ್ದೆಯ ಮೇಲೆ ತೂಗುಗತ್ತಿ ನೇತಾಡುತ್ತಿದೆ ಎಂದು ಹೇಳಲಾಗುತ್ತಿದೆ. ಏನಿದ್ದರೂ ಗಂಭೀರ್ ಮುಂದಿನ 68 ದಿನಗಳಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಶತಾಯಗತಾಯ ಹೋರಾಟ ನಡೆಸಬೇಕು ಎಂದು ಬಿಸಿಸಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 184 ರನ್‌ಗಳ ಹೀನಾಯ ಸೋಲು ಎದುರಿಸಬೇಕಾಯಿತು. ಮೆಲ್ಬೋರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಸೋಲಿನಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನವು ಅತ್ಯಂತ ಕಳವಳಕಾರಿಯಾಗಿತ್ತು. ಇದರಿಂದಾಗಿ ಕೋಚ್ ಗಂಭೀರ್ ಕೂಡ ತೀವ್ರ ಕೋಪಗೊಂಡಿದ್ದರು. ಇದರ ನಂತರ, ಗಂಭೀರ್ ಇಡೀ ತಂಡದ ಮೇಲೆ ಕೋಪವನ್ನು ಹೊರಹಾಕಿದ್ದು, ಆಟಗಾರರು ತನ್ನ ಯೋಜನೆಯ ಪ್ರಕಾರ ಆಡದಿದ್ದರೆ ಅವರನ್ನು ತಂಡದಿಂದ ಹೊರಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ವರದಿ ಹೇಳಿದೆ. ಇದಲ್ಲದೇ ನಾಯಕತ್ವದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳೂ ಡ್ರೆಸ್ಸಿಂಗ್ ರೂಂನಲ್ಲಿ ಕೇಳಿಬಂದಿವೆ.
ಸುಧಾರಿಸದಿದ್ದರೆ ಗಂಭೀರ್ ವಿರುದ್ಧ ಕ್ರಮ
ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಕೋಚ್ ಗಂಭೀರ್‌ಗೆ ಸಂಕಷ್ಟ ಎದುರಾಗಿದೆ. ಸುದ್ದಿ ಸಂಸ್ಥೆ ಪಿಟಿಐ ತನ್ನ ವರದಿಯಲ್ಲಿ ಗಂಭೀರ್‌ಗೆ ಈಗ ಚಾಂಪಿಯನ್ಸ್ ಟ್ರೋಫಿಯವರೆಗೆ ಮಾತ್ರ ಸಮಯವಿದೆ ಎಂದು ಹೇಳಿಕೊಂಡಿದೆ. ಈ ಕುರಿತು ಬಿಸಿಸಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿ ಮಾಡಿರುವ ಪಿಟಿಐ, ಸಿಡ್ನಿ ಟೆಸ್ಟ್ ಪಂದ್ಯವನ್ನು ಹೊರತುಪಡಿಸಿ, ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಆಡಬೇಕಾಗಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನದಲ್ಲಿ ಸುಧಾರಣೆ ಕಂಡುಬರದಿದ್ದರೆ ಗಂಭೀರ್ ಅವರ ಸ್ಥಾನಕ್ಕೆ ಕತ್ತು ಎದುರಾಗಲಿದೆ ಎಂದು ಹೇಳಿದೆ.
ವರದಿಯ ಪ್ರಕಾರ, ಮಂಡಳಿಯ ಅಧ್ಯಕ್ಷ ರೋಜರ್ ಬಿನ್ನಿ ಇದೀಗ ಯಾವುದೇ ನೇರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಜಯ್ ಶಾ ನಿರ್ಗಮನದ ನಂತರ, ಹಂಗಾಮಿ ಕಾರ್ಯದರ್ಶಿ ಮಾತ್ರ ಮಂಡಳಿಯ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಶೀಘ್ರದಲ್ಲೇ ಮಂಡಳಿಗೆ ಖಾಯಂ ಕಾರ್ಯದರ್ಶಿ ಸಿಗಲಿದ್ದು, ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಪ್ರದರ್ಶನ ಸುಧಾರಿಸದಿದ್ದರೆ ಗಂಭೀರ್ ಹುದ್ದೆಗೆ ಕತ್ತರಿ ಬೀಳಬಹುದು. ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 9 ರವರೆಗೆ ನಡೆಯಲಿದೆ. ಅಂದರೆ, ತಂಡದಲ್ಲಿ ಸುಧಾರಣೆ ತರಲು ಗಂಭೀರ್‌ಗೆ ಇನ್ನ ಜನವರಿ 1 ರಿಂದ ಮಾರ್ಚ್ 9 ರವರೆಗೆ ಅಂದರೆ ಕೇವಲ 68 ದಿನಗಳು ಮಾತ್ರ ಬಾಕಿ ಉಳಿದಿವೆ.
ಆಟಗಾರರೊಂದಿಗೆ ಹೊಂದಾಣಿಕೆ ಇಲ್ಲ
ಅಷ್ಟೇ ಅಲ್ಲ, ಗಂಭೀರ್ ಮತ್ತು ತಂಡದ ಬಹುತೇಕ ಆಟಗಾರರಲ್ಲಿ ಒಮ್ಮತವಿಲ್ಲ ಎಂದು ಹೇಳಲಾಗುತ್ತಿದೆ. ಇದರ ಪ್ರಕಾರ, ತಂಡದ ಕೆಲವು ಅನುಭವಿ ಆಟಗಾರರು (ರೋಹಿತ್-ವಿರಾಟ್‌ಗಿಂತ ಜೂನಿಯರ್ ಮತ್ತು ಹರ್ಷಿತ್-ನಿತೀಶ್‌ಗಿಂತ ಹಿರಿಯರು) ಕೋಚ್ ಗಂಭೀರ್‌ನಲ್ಲಿ ವಿಶ್ವಾಸ ಹೊಂದಿಲ್ಲ. ಮಾಜಿ ಕೋಚ್ ರವಿಶಾಸ್ತ್ರಿ ಮತ್ತು ರಾಹುಲ್ ದ್ರಾವಿಡ್ ಅವರ ಅವಧಿಯಲ್ಲಿ ಆಟಗಾರರಿಗೆ ವಿಷಯಗಳ ಬಗ್ಗೆ ಸ್ಪಷ್ಟ ಸಂದೇಶಗಳನ್ನು ನೀಡಿದ ರೀತಿಯಲ್ಲಿ ಗಂಭೀರ್ ಅವರ ಅಧಿಕಾರಾವಧಿಯಲ್ಲಿ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ತಂಡದಲ್ಲಿ ಆಯ್ಕೆ ಅಥವಾ ಆಡುವ ಹನ್ನೊಂದರ ಬಳಗದ ಬಗ್ಗೆ ಆಟಗಾರರೊಂದಿಗೆ ಸ್ಪಷ್ಟವಾಗಿ ಮಾತನಾಡಲು ರೋಹಿತ್‌ಗೆ ಸಾಧ್ಯವಾಗುತ್ತಿಲ್ಲ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಇಷ್ಟೇ ಅಲ್ಲ, ಕೋಚ್ ಗಂಭೀರ್ ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ನಿರಂತರವಾಗಿ ಪ್ರಯೋಗ ಮಾಡುತ್ತಿರುವುದರಿಂದ ತಂಡದ ಅನೇಕ ಆಟಗಾರರಲ್ಲಿ ಅಭದ್ರತೆಯ ಭಾವನೆ ಹೆಚ್ಚಾಗಿದೆ. ಅದರಲ್ಲೂ ಸ್ಟಾರ್ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಅವರನ್ನು ನಾಲ್ಕನೇ ಟೆಸ್ಟ್‌ನಿಂದ ಹಠಾತ್ತನೆ ಕೈಬಿಡುವ ನಿರ್ಧಾರ ತಂಡದಲ್ಲಿ ಅಸಮಾಧಾನ ಸ್ಫೋಟಗೊಳ್ಳುವಂತೆ ಮಾಡಿದೆ ಎಂತಲೂ ಹೇಳಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ