IND vs AUS: 181 ರನ್ಗೆ ಆಸ್ಟ್ರೇಲಿಯಾ ಆಲೌಟ್: 6 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ
Australia vs India, 5th Test: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ, ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿದೆ. ಇನ್ನು ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಹಾಗೆಯೇ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿದ್ದು, ಇದೀಗ ಐದನೇ ಮ್ಯಾಚ್ನಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ಸಮಬಲದಲ್ಲಿ ಕೊನೆಗೊಳಿಸುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯಗೊಂಡಿದೆ. ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು 181 ರನ್ಗಳಿಗೆ ಆಲೌಟ್ ಆದರೆ, ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು.
ಪ್ರಥಮ ಇನಿಂಗ್ಸ್ನಲ್ಲಿ ರಿಷಭ್ ಪಂತ್ ಅವರ 40 ರನ್ಗಳ ಹಾಗೂ ಜಸ್ಪ್ರೀತ್ ಬುಮ್ರಾ ಅವರ 22 ರನ್ಗಳ ಕೊಡುಗೆಯೊಂದಿಗೆ ಭಾರತ ತಂಡವು 185 ರನ್ಗಳಿಸಿ ಆಲೌಟ್ ಆಗಿತ್ತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ ಬ್ಯಾಟರ್ಗಳ ಟೀಮ್ ಇಂಡಿಯಾ ಬೌಲರ್ಗಳ ಕರಾರುವಾಕ್ ದಾಳಿ ಮುಂದೆ ರನ್ಗಳಿಸಲು ಪರದಾಡಿದರು. ಪರಿಣಾಮ ಆಸೀಸ್ ಪಡೆ ತವರು ಮೈದಾನದಲ್ಲಿ ಕೇವಲ 181 ರನ್ಗಳಿಗೆ ಆಲೌಟ್ ಆಯಿತು.
ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 3 ವಿಕೆಟ್ ಪಡೆದರೆ, ನಿತೀಶ್ ಕುಮಾರ್ ರೆಡ್ಡಿ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
ದ್ವಿತೀಯ ಇನಿಂಗ್ಸ್:
ಮೊದಲ ಇನಿಂಗ್ಸ್ನಲ್ಲಿ 4 ರನ್ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 13 ರನ್ಗಳಿಸಿ ಔಟಾದರೆ, ಇದರ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್ (22) ಕೂಡ ವಿಕೆಟ್ ಒಪ್ಪಿಸಿದರು.
ಇನ್ನು ಶುಭ್ಮನ್ ಗಿಲ್ (13) ಹಾಗೂ ವಿರಾಟ್ ಕೊಹ್ಲಿ (6) ಬಂದ ವೇಗದಲ್ಲೇ ಹಿಂತಿರುಗಿದರು. ಪರಿಣಾಮ ಟೀಮ್ ಇಂಡಿಯಾ 78 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು.
ರಿಷಭ್ ಪಂತ್ ಅಬ್ಬರ:
ಈ ಹಂತದಲ್ಲಿ ಕಣಕ್ಕಿಳಿದ ರಿಷಭ್ ಪಂತ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆಸ್ಟ್ರೇಲಿಯಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಪಂತ್ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 33 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 61 ರನ್ ಸಿಡಿಸಿದರು.
ಆದರೆ ಪಂತ್ ಔಟಾದ ಬೆನ್ನಲ್ಲೇ ನಿತೀಶ್ ಕುಮಾರ್ ರೆಡ್ಡಿ (4) ಸುಲಭ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಜೊತೆಗೂಡಿದ ರವೀಂದ್ರ ಜಡೇಜಾ (8) ಹಾಗೂ ವಾಷಿಂಗ್ಟನ್ ಸುಂದರ್ (6) 2ನೇ ದಿನದಾಟದ ಅಂತ್ಯದವರೆಗೆ ಬ್ಯಾಟಿಂಗ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.
ಅದರಂತೆ ಟೀಮ್ ಇಂಡಿಯಾ ದ್ವಿತೀಯ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 141 ರನ್ ಕಲೆಹಾಕಿದೆ. ಈ ಮೂಲಕ ದ್ವಿತೀಯ ಇನಿಂಗ್ಸ್ನಲ್ಲಿ ಒಟ್ಟು 145 ರನ್ಗಳ ಮುನ್ನಡೆಯನ್ನು ಪಡೆದುಕೊಂಡಿದೆ.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಸ್ಯಾಮ್ ಕೊನ್ಸ್ಟಾಸ್ , ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ , ಟ್ರಾವಿಸ್ ಹೆಡ್ , ಬ್ಯೂ ವೆಬ್ಸ್ಟರ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ನಾಥನ್ ಲಿಯಾನ್ , ಸ್ಕಾಟ್ ಬೋಲ್ಯಾಂಡ್.
ಇದನ್ನೂ ಓದಿ: IND vs AUS: ಮೈದಾನ ತೊರೆದ ಜಸ್ಪ್ರೀತ್ ಬುಮ್ರಾ: ವಿರಾಟ್ ಕೊಹ್ಲಿ ಕ್ಯಾಪ್ಟನ್
ಭಾರತ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ಶುಭ್ಮನ್ ಗಿಲ್ , ವಿರಾಟ್ ಕೊಹ್ಲಿ , ರಿಷಬ್ ಪಂತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ನಿತೀಶ್ ಕುಮಾರ್ ರೆಡ್ಡಿ , ವಾಷಿಂಗ್ಟನ್ ಸುಂದರ್ , ಜಸ್ಪ್ರೀತ್ ಬುಮ್ರಾ (ನಾಯಕ) , ಪ್ರಸಿದ್ಧ್ ಕೃಷ್ಣ , ಮೊಹಮ್ಮದ್ ಸಿರಾಜ್.