IND vs AUS: ಟೆಸ್ಟ್ ಸ್ಪೆಷಲಿಸ್ಟ್ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
Australia vs India, 5th Test: ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಂಡಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣ ಟೆಸ್ಟ್ ಸ್ಪೆಷಲಿಸ್ಟ್ ಸ್ಟೀವ್ ಸ್ಮಿತ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಕೂಡ ಕನ್ನಡಿಗನ ನೆರವಿನೊಂದಿಗೆ ಎಂಬುದು ವಿಶೇಷ. ಅಂದರೆ ಕನ್ನಡಿಗನ ಬೌಲಿಂಗ್ನಲ್ಲಿ ಕನ್ನಡಿಗನೇ ಕ್ಯಾಚ್ ಹಿಡಿದಿದ್ದಾರೆ.
ಸಿಡ್ನಿ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸ್ಟೀವ್ ಸ್ಮಿತ್ ವಿಕೆಟ್ ಕಬಳಿಸಿ ಟೀಮ್ ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿಕೆಟ್ ಖಾತೆ ತೆರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 185 ರನ್ಗಳಿಸಿ ಆಲೌಟ್ ಆಗಿದೆ.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದ್ದರು. ಮೊದಲ ದಿನದಾಟದ ಅಂತ್ಯದಲ್ಲಿ ಉಸ್ಮಾನ್ ಖ್ವಾಜಾ (2) ವಿಕೆಟ್ ಪಡೆದಿದ್ದ ಬುಮ್ರಾ, ದ್ವಿತೀಯ ದಿನದಾಟದ ಆರಂಭದಲ್ಲೇ ಮಾರ್ನಸ್ ಲಾಬುಶೇನ್ (2) ಅವರನ್ನು ಔಟ್ ಮಾಡಿದರು.
ಇದಾದ ಬಳಿಕ ಮೊಹಮ್ಮದ್ ಸಿರಾಜ್ ಬೆಂಕಿ ಬೌಲಿಂಗ್ ಮೂಲಕ ಸ್ಯಾಮ್ ಕೊನ್ಸ್ಟಾಸ್ (23) ಹಾಗೂ ಟ್ರಾವಿಸ್ ಹೆಡ್ (4) ಗೆ ಪೆವಿಲಿಯನ್ ಹಾದಿ ತೋರಿಸಿದರು. ಇದಾಗ್ಯೂ ಒಂದೆಡೆ ಸ್ಟೀವ್ ಸ್ಮಿತ್ ಕ್ರೀಸ್ ಕಚ್ಚಿ ನಿಲ್ಲುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವ ಕಾಯಕಕ್ಕೆ ಕೈ ಹಾಕಿದರು.
ಆದರೆ ಭೋಜನಾ ವಿರಾಮಕ್ಕೂ ಮುನ್ನ ಕರಾರುವಾಕ್ ದಾಳಿಯೊಂದಿಗೆ ಸ್ಟೀವ್ ಸ್ಮಿತ್ (33) ವಿಕೆಟ್ ಪಡೆಯುವಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಯಶಸ್ವಿಯಾದರು. ಪ್ರಸಿದ್ಧ ಎಸೆದ 28ನೇ ಓವರ್ನ ಮೊದಲ ಎಸೆತವನ್ನು ಗುರುತಿಸುವಲ್ಲಿ ಎಡವಿದ ಸ್ಮಿತ್ ಸ್ಲಿಪ್ನಲ್ಲಿದ್ದ ಕನ್ನಡಿಗ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿದರು.
ಈ ವಿಕೆಟ್ನೊಂದಿಗೆ ಪ್ರಸಿದ್ಧ್ ಕೃಷ್ಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ತಮ್ಮ ವಿಕೆಟ್ ಖಾತೆ ತೆರೆದಿದ್ದಾರೆ. ಇನ್ನು ಭೋಜನಾ ವಿರಾಮದ ವೇಳೆಗೆ ಆಸ್ಟ್ರೇಲಿಯಾ ತಂಡವು 5 ವಿಕೆಟ್ ಕಳೆದುಕೊಂಡು 101 ರನ್ ಕಲೆಹಾಕಿದ್ದು, ಕ್ರೀಸ್ನಲ್ಲಿ ಬ್ಯೂ ವೆಬ್ಸ್ಟರ್ ಹಾಗೂ ಅಲೆಕ್ಸ್ ಕ್ಯಾರಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.