IND vs AUS: ಮೊದಲ ಓವರ್​ನಲ್ಲೇ ಮಿಚೆಲ್ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

IND vs AUS: ಮೊದಲ ಓವರ್​ನಲ್ಲೇ ಮಿಚೆಲ್ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಝಾಹಿರ್ ಯೂಸುಫ್
|

Updated on: Jan 04, 2025 | 10:54 AM

India vs Australia: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಪರ ಮೊದಲ ಓವರ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಸಿಡ್ನಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್​ ಅವರ ಒಂದೇ ಓವರ್​ನಲ್ಲಿ 4 ಫೋರ್ ಬಾರಿಸಿ ಟೀಮ್ ಇಂಡಿಯಾದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ ಹೊಸ ದಾಖಲೆ ನಿರ್ಮಿಸಿದ್ದಾರೆ.

ಟೆಸ್ಟ್ ಕ್ರಿಕೆಟ್​ನ ಮೊದಲ ಓವರ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತೀಯ ಬ್ಯಾಟರ್​​ನ ದಾಖಲೆ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಆಸ್ಟ್ರೇಲಿಯಾದ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಬೆಂಡೆತ್ತುವ ಮೂಲಕ ಈ ದಾಖಲೆ ಬರೆದಿರುವುದು ವಿಶೇಷ. ಸಿಡ್ನಿಯ ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 5ನೇ ಪಂದ್ಯದ ದ್ವಿತೀಯ ಇನಿಂಗ್ಸ್​ನ ಮೊದಲ ಓವರ್​ನಲ್ಲೇ ಯಶಸ್ವಿ ಜೈಸ್ವಾಲ್ ಅಬ್ಬರಿಸಿದ್ದಾರೆ.

ಮಿಚೆಲ್ ಸ್ಟಾರ್ಕ್ ಎಸೆದ ಈ ಓವರ್​ನ ಮೊದಲ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಯಾವುದೇ ರನ್ ಕಲೆಹಾಕಲಿಲ್ಲ. ಆದರೆ ಬಳಿಕ ಎಸೆದ ಮೂರು ಎಸೆತಗಳಲ್ಲೂ ಫೋರ್​ ಬಾರಿಸಿ ಅಬ್ಬರಿಸಿದರು. ಇನ್ನು 5ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಕೊನೆಯ ಎಸೆತದಲ್ಲಿ ಮತ್ತೊಂದು ಫೋರ್​ ಬಾರಿಸಿದರು.

ಈ ಮೂಲಕ ಮಿಚೆಲ್ ಸ್ಟಾರ್ಕ್​ ಅವರ ಒಂದೇ ಓವರ್​ನಲ್ಲಿ 16 ರನ್ ಬಾರಿಸಿ ಯಶಸ್ವಿ ಜೈಸ್ವಾಲ್ ಹೊಸ ಇತಿಹಾಸ ನಿರ್ಮಿಸಿದರು. ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಟೀಮ್ ಇಂಡಿಯಾ ಪರ ಮೊದಲ ಓವರ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ 185 ರನ್ ಬಾರಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ತಂಡವು 181 ರನ್​​ಗಳಿಸಿ ಆಲೌಟ್ ಆಗಿದೆ. ಇದೀಗ 4 ರನ್​ಗಳ ಮುನ್ನಡೆಯೊಂದಿಗೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಆರಂಭಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ