ಜಸ್ಪ್ರೀತ್ ಬುಮ್ರಾ ಖಡಕ್ ಲುಕ್ಗೆ ಸ್ಯಾಮ್ ಕೊನ್ಸ್ಟಾಸ್ ಗಪ್ ಚುಪ್
Jasprit Bumrah vs Sam Konstas ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯವು ಇದೀಗ ಜಸ್ಪ್ರೀತ್ ಬುಮ್ರಾ vs ಸ್ಯಾಮ್ ಕೊನ್ಸ್ಟಾಸ್ ನಡುವಣ ಫೈಟ್ ಆಗಿ ಮಾರ್ಪಟ್ಟಿದೆ. ಇದಕ್ಕೆ ಮುಖ್ಯ ಕಾರಣ ಮೆಲ್ಬೋರ್ನ್ನಲ್ಲಿ ಕಂಡು ಬಂದ ಇಬ್ಬರ ನಡುವಣ ಪೈಪೋಟಿ. ಇದೀಗ ಸಿಡ್ನಿಯಲ್ಲೂ ಇದು ಜಿದ್ದಾಜಿದ್ದು ಮುಂದುವರೆದಿದೆ. ಆದರೆ ಈ ಬಾರಿ ಸ್ಯಾಮ್ ಕೊನ್ಸ್ಟಾಸ್ ಜಸ್ಪ್ರೀತ್ ಬುಮ್ರಾ ಅವರನ್ನು ಕೆಣಕಿದ್ದಾರೆ. ಈ ಕೆಣಕುವಿಕೆಯ ಬೆನ್ನಲ್ಲೇ ವಿಕೆಟ್ ಉರುಳಿಸಿ ಜಸ್ಪ್ರೀತ್ ಬುಮ್ರಾ ತಿರುಗೇಟು ನೀಡಿರುವುದು ವಿಶೇಷ.
ಆಸ್ಟ್ರೇಲಿಯಾ ಆಟಗಾರ ಸ್ಯಾಮ್ ಕೊನ್ಸ್ಟಾಸ್ ಹಾಗೂ ಟೀಮ್ ಇಂಡಿಯಾ ಆಟಗಾರರ ನಡುವಣ ವಾಗ್ಯುದ್ಧ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಮೆಲ್ಬೋರ್ನ್ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ಜೊತೆ ಜಗಳಕ್ಕಿಳಿದಿದ್ದ ಕೊನ್ಸ್ಟಾಸ್ ಈ ಬಾರಿ ಜಸ್ಪ್ರೀತ್ ಬುಮ್ರಾ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಸಿಡ್ನಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ಬಾರಿಸಿದ 40 ರನ್ ಹಾಗೂ ಅಂತಿಮ ಹಂತದಲ್ಲಿ ಜಸ್ಪ್ರೀತ್ ಬುಮ್ರಾ ಕಲೆಹಾಕಿದ 22 ರನ್ಗಳ ನೆರವಿನೊಂದಿಗೆ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 185 ರನ್ಗಳಿಸಿ ಆಲೌಟ್ ಆಯಿತು.
ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು 2 ಓವರ್ಗಳಲ್ಲಿ 8 ರನ್ ಕಲೆಹಾಕಿತ್ತು. ಇನ್ನು ಮೊದಲ ದಿನದಾಟದ ಕೊನೆಯ ಓವರ್ ಎಸೆಯಲು ಜಸ್ಪ್ರೀತ್ ಬುಮ್ರಾ ಸಿದ್ಧರಾದರು. ಮೊದಲ ಎಸೆತದಲ್ಲಿ ಉಸ್ಮಾನ್ ಖ್ವಾಜಾ ಸಿಂಗಲ್ ತೆಗೆದರೆ, 2ನೇ ಎಸೆತದಲ್ಲಿ ಸ್ಯಾಮ್ ಕೊನ್ಸ್ಟಾಸ್ ಒಂದು ರನ್ ಕಲೆಹಾಕಿದರು.
ಇದಾದ ಬಳಿಕ ಮೂರು ಎಸೆತಗಳಲ್ಲಿ ಉಸ್ಮಾನ್ ಖ್ವಾಜಾ ಯಾವುದೇ ರನ್ ಕಲೆಹಾಕಿರಲಿಲ್ಲ. ಇತ್ತ 6ನೇ ಎಸೆತದೊಂದಿಗೆ ಮೊದಲ ದಿನದಾಟ ಮುಗಿಸಲು ಮುಂದಾಗಿದ್ದ ಜಸ್ಪ್ರೀತ್ ಬುಮ್ರಾರನ್ನು ನಾನ್ ಸ್ಟ್ರೈಕ್ನಲ್ಲಿದ್ದ ಸ್ಯಾಮ್ ಕೊನ್ಸ್ಟಾಸ್ ಕೆಣಕಿದರು.
ಬೌಲಿಂಗ್ ಮಾಡಲು ಸಿದ್ಧರಾಗುತ್ತಿದ್ದ ಬುಮ್ರಾ ಅವರನ್ನು ಗುರಿಯಾಗಿಸಿ ಸ್ಯಾಮ್ ಕೊನ್ಸ್ಟಾಸ್ ಅದೇನೊ ಗೊಣಗಿದ್ದರು. ಇದರಿಂದ ಸಿಟ್ಟುಗೊಂಡ ಬುಮ್ರಾ ಕೂಡ ಮಾತಿನ ಚಕಮಕಿಗೆ ಇಳಿದರು. ಇಬ್ಬರ ನಡುವಣ ಕಿತ್ತಾಟ ಜೋರಾಗುತ್ತಿದ್ದಂತೆ ಅಂಪೈರ್ ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಿದರು.
ಆ ಬಳಿಕ ಜಸ್ಪ್ರೀತ್ ಬುಮ್ರಾ ಎಸೆದ ಕೊನೆಯ ಎಸೆತದಲ್ಲಿ ಉಸ್ಮಾನ್ ಖ್ವಾಜಾ ಸ್ಲಿಪ್ನಲ್ಲಿದ್ದ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿದರು. ಅತ್ತ ವಿಕೆಟ್ ಸಿಗುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಇದರ ನಡುವೆ ವಿಕೆಟ್ ಕಬಳಿಸಿದ ಬುಮ್ರಾ ನೇರವಾಗಿ ನೋಡಿದ್ದು ಸ್ಯಾಮ್ ಕೊನ್ಸ್ಟಾಸ್ ಅವರತ್ತ.
ಜಸ್ಪ್ರೀತ್ ಬುಮ್ರಾ ಖಡಕ್ ಲುಕ್ನೊಂದಿಗೆ ನೋಡುತ್ತಿದ್ದರೂ, ಕಂಡೂ ಕಾಣದಂತೆ ಸ್ಯಾಮ್ ಕೊನ್ಸ್ಟಾಸ್ ಡ್ರೆಸ್ಸಿಂಗ್ ರೂಮ್ನತ್ತ ಹೆಜ್ಜೆ ಹಾಕಿದರು. ಇದೀಗ ಬುಮ್ರಾ ಲುಕ್ಗೆ ಗಪ್ ಚುಪ್ ಆಗಿ ತೆರಳಿದ ಸ್ಯಾಮ್ ಕೊನ್ಸ್ಟಾಸ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.