ಆವೇಶ, ಆಕ್ರೋಶ… ಸ್ಯಾಮ್ ಕೊನ್ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
Virat Kohli vs Sam Konstas: ವಿರಾಟ್ ಕೊಹ್ಲಿ ಹಾಗೂ ಸ್ಯಾಮ್ ಕೊನ್ಸ್ಟಾಸ್ ನಡುವಣ ಜಟಾಪಟಿ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ಮೆಲ್ಬೋರ್ನ್ ಟೆಸ್ಟ್ ಪಂದ್ಯದ ವೇಳೆ ಶುರುವಾದ ಈ ವಾಗ್ಯುದ್ಧ ಇದೀಗ ಸಿಡ್ನಿ ಮೈದಾನದಲ್ಲೂ ಮುಂದುವರೆದಿದೆ. ಈ ಬಾರಿ ಕೊಹ್ಲಿಯು ಯಾವುದೇ ಹದ್ದು ಮೀರಿ ವರ್ತಿಸಿಲ್ಲ ಎಂಬುದು ವಿಶೇಷ. ಅಂದರೆ ಇದಕ್ಕೂ ಮುನ್ನ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಸ್ಯಾಮ್ ಕೊನ್ಸ್ಟಾಸ್ ಅವರನ್ನು ಭುಜದಿಂದ ಗುದ್ದುವ ಮೂಲಕ ಪರಾಕ್ರಮ ಮೆರೆದಿದ್ದರು. ಈ ವರ್ತನೆಗೆ ಐಸಿಸಿ ಕೊಹ್ಲಿಗೆ ಪಂದ್ಯ ಶುಲ್ಕದ ಶೇ.30 ರಷ್ಟು ದಂಡ ವಿಧಿಸಿತ್ತು.
ವಿರಾಟ್ ಕೊಹ್ಲಿ ಹಾಗೂ ಸ್ಯಾಮ್ ಕೊನ್ಸ್ಟಾಸ್ ನಡುವಣ ಜಟಾಪಟಿ ಮುಂದುವರೆದಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5ನೇ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ಆಸೀಸ್ ದಾಂಡಿಗ ಕೊನ್ಸ್ಟಾಸ್ ಅವರನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಬಾರಿ ಸಂಭ್ರಮದೊಂದಿಗೆ ವಿಜೃಂಭಿಸುವ ಮೂಲಕ ಎಂಬುದಷ್ಟೇ ವ್ಯತ್ಯಾಸ. ಈ ಪಂದ್ಯದ ಮೊದಲ ದಿನದಾಟದ ಕೊನೆಯ ಓವರ್ ವೇಳೆ ಜಸ್ಪ್ರೀತ್ ಬುಮ್ರಾ ಹಾಗೂ ಸ್ಯಾಮ್ ಕೊನ್ಸ್ಟಾಸ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಬುಮ್ರಾ ಅಂತಿಮ ಓವರ್ನ ಕೊನೆಯ ಎಸೆತ ಎಸೆಯುವ ಮುಂದಾಗುತ್ತಿದ್ದಂತೆ ನಾನ್ ಸ್ಟ್ರೈಕ್ನಲ್ಲಿದ್ದ ಕೊನ್ಸ್ಟಾಸ್ ಅದೇನೊ ಗೊಣಗಿದ್ದಾರೆ. ಇದಕ್ಕೆ ಪ್ರತಿಯಾಗಿ ಬುಮ್ರಾ ಕೂಡ ವಾಗ್ವಾದಕ್ಕೆ ಇಳಿದಿದ್ದಾರೆ. ತಕ್ಷಣವೇ ಅಂಪೈರ್ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಈ ವಾಗ್ಯುದ್ಧದ ಬೆನ್ನಲ್ಲೇ ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಅವರ ವಿಕೆಟ್ ಉರುಳಿಸಿದ್ದಾರೆ. ಈ ವಿಕೆಟ್ ಸಿಗುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರರು ಕೊನ್ಸ್ಟಾಸ್ ಅವರನ್ನು ಗುರಿಯಾಗಿಸಿ ಸಖತ್ತಾಗೆ ಸಂಭ್ರಮಿಸಿದರು.
ಇದರ ನಡುವೆ ಸ್ಲಿಪ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ವಿರಾಟ್ ಕೊಹ್ಲಿ ಆವೇಶದೊಂದಿಗೆ ಓಡಿ ಬಂದು ಸ್ಯಾಮ್ ಕೊನ್ಸ್ಟಾಸ್ ಮುಂದೆ ಆಕ್ರೋಶದಿಂದ ಸಂಭ್ರಮಿಸಿದ್ದು ವಿಶೇಷವಾಗಿತ್ತು. ಕೊಹ್ಲಿಯ ಈ ಆಕ್ರಮಣಕಾರಿ ಸಂಭ್ರಮದ ಮುಂದೆ ಕೊನ್ಸ್ಟಾಸ್ ಗಪ್ ಚುಪ್ ಆಗಿದ್ದರು.
ಇದೀಗ ಸಿಡ್ನಿ ಮೈದಾನದಲ್ಲಿ ಸಖತ್ತಾಗೆ ಸಂಭ್ರಮಿಸಿದ ವಿರಾಟ್ ಕೊಹ್ಲಿಯ ವಿಡಿಯೋ ವೈರಲ್ ಆಗಿದ್ದು, ಕಿಂಗ್ ಕೊಹ್ಲಿಯ ಸೆಲೆಬ್ರೇಷನ್ಗೆ ಅಭಿಮಾನಿಗಳು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.