ಮನೆಯಲ್ಲಿ ಹಿರಿಯರು ಹೇಳುತ್ತಿರುತ್ತಾರೆ ದೇವರ ನಾಮಸ್ಮರಣೆ ಮಾಡಿ. ಹಾಳು ಹರಟೆ ಮಾತಾಡಿ ಕಾಲಹರಣ ಮಾಡಬೇಡಿ ಎಂದು. ಆದರೆ ನಮಗೆ ಅದರ ಅನಿವಾರ್ಯತೆಯ ಅರಿವು ಆಗುವುದಿಲ್ಲ ಅಥವಾ ಅರಿವು ಮೂಡಿಸುವಲ್ಲಿ ಹಿರಿಯರು ವಿಫಲರಾದರೋ ಎಂಬುದು ಯಕ್ಷಪ್ರಶ್ನೆಯಾಗಿದೆ. ಅದು ಏನೇ ಇರಲಿ. ನಾಮಸ್ಮರಣೆಯಿಂದ ಒಳಿತಾಗುವುದೇ? ಅಥವಾ ಕೇವಲ ಅದು ಗೊಡ್ಡು ಸಂಪ್ರದಾಯವೇ ಎಂದು ತಿಳಿಯೋಣ. ಮರಾ ಮರಾ ಎಂದು ಜಪಿಸಿದ ಬೇಡ ವಾಲ್ಮೀಕಿ ಆದ ಕಥೆಯನ್ನು ಒಮ್ಮೆ ಮೆಲುಕು ಹಾಕಿ. ಬೇಡನೊಬ್ಬ ಕಾಡಲ್ಲಿ ಓಡಾಡುವ ಜನರನ್ನು ಹಿಂಸಿಸಿ ಬದುಕುತ್ತಿದ್ದ. ಒಂದು ದಿನ ಋಷಿಯೊಬ್ಬರನ್ನು ತಡೆದಾಗ ಅವರು ಅವನಿಗೆ ತಾಳ್ಮೆಯಿಂದ ರಾಮ ನಾಮ ಉಪದೇಶ ಮಾಡುತ್ತಾರೆ. ಆದರೆ ಅನಕ್ಷರಸ್ಥನಾದ ಅವನಿಗೆ ರಾಮ ಎಂದು ಉಚ್ಚಾರವಾಗುವ ಬದಲು ಮರಾ ಮರಾ ಎಂದೇ ಬರುತ್ತಿತ್ತು. ಅದನ್ನೇ ಅವನು ಜಪಿಸಿದನು. ಅದೆಷ್ಟು ಕಾಲವೆಂದರೆ ಅವನ ಸುತ್ತ ಒಂದು ಹುತ್ತ ಬೆಳೆಯುವಷ್ಟು ಕಾಲ ಜಪಿಸಿದ. ಹುತ್ತದ ಒಳಗೆ ಅವನಿಗೆ ಜ್ಞಾನದ ಉದಯವಾಗಿ ಅವನು ವಾಲ್ಮೀಕಿ (ವಲ್ಮೀಕ ಅಂದರೆ ಹುತ್ತ. ಅದರಲ್ಲಿ ಜನ್ಮಪಡೆದವ ವಾಲ್ಮೀಕಿ. ಅರ್ಥಾತ್ ಜ್ಞಾನೋದಯವಾದವ ಎಂದು ತಾತ್ಪರ್ಯ) ಯಾಗಿ ರಾಮಾಯಣವನ್ನು ಬರೆದ ಕಥೆ ಎಲ್ಲರಿಗೂ ತಿಳಿದೇ ಇದೆ.
ಇದನ್ನು ಪುರಾಣ ಕಥೆ ಎನ್ನಬಹುದು ಕೆಲವರು. ಅಂತಹ ಯೋಚನೆ ನಿಮ್ಮಲ್ಲಿದ್ದರೆ ಅದಕ್ಕೊಂದು ಚಿಂತನೆ ಪ್ರಚುರ ಪಡಿಸುವೆ ನೋಡಿ. ಒಂದು ಊರಲ್ಲಿ ಒಂದು ಮನೆಯಿತ್ತು. ಅದರಲ್ಲಿ ದಿನಾ ಭಜನೆ ನಾಮಸ್ಮರಣೆ ನಡೆಯುತ್ತಿತ್ತು. ಆ ಮನೆಯಲ್ಲಿ ಒಬ್ಬ ತೀರಾ ನಾಸ್ತಿಕನಿದ್ದ. ಅವನು ಇಂತಹ ಆಚರಣೆಗಳನ್ನು ಒಪ್ಪುತ್ತಿರಲಿಲ್ಲ. ಒಂದು ದಿನ ಆ ಮನೆಗೆ ಒಬ್ಬ ಸಾಧು ಬರುತ್ತಾನೆ. ಅವನು ಈ ವಾತಾವರಣವನ್ನು ನೋಡಿ ಮತ್ತು ಮನೆಯವರ ಒತ್ತಾಯದ ಮೇರೆಗೆ ಆ ನಾಸ್ತಿಕ ಮನೋಭಾವವುಳ್ಳ ವ್ಯಕ್ತಿಗೆ ತಿಳಿ ಹೇಳಲು ಆರಂಭಿಸುತ್ತಾನೆ.
ಆಗ ಆ ವ್ಯಕ್ತಿ ಸಾಧುವಿಗೆ ಕೇಳುತ್ತಾನೆ ಅಯ್ಯಾ ನಾಮದ ಅರ್ಥ ಗೊತ್ತಿಲ್ಲ, ಭಜನೆಯ ತಾತ್ಪರ್ಯ ತಿಳಿಯುವುದಿಲ್ಲ ಹಾಗಿರುವಾಗ ಇದರಿಂದ ಏನು ತಾನೇ ಸಿಗಲು ಸಾಧ್ಯ. ಕೇವಲ ಒಂದು ಮನೋರಂಜನೆಯೂ ಸಿಗಲಾರದು ಮತ್ತೇಕೆ ಇದರ ಅನಿವಾರ್ಯತೆ ಎನ್ನುವನು. ಸಾಧು ನಸು ನಕ್ಕು ಹೇಳುತ್ತಾನೆ. ನೀನು ಇನ್ನು ಒಂದು ತಿಂಗಳ ಕಾಲ ನಾನು ಹೇಳುವ ಒಂದು ಕೆಲಸ ಮಾಡು ನಿನಗೆ ಸ್ಪಷ್ಟ ಉತ್ತರ ಸಿಗುತ್ತದೆ ಎಂದ. ಆಯಿತು ಎಂದು ಒಪ್ಪಿ ಕಾರ್ಯವೇನೆಂದು ಕೇಳುತ್ತಾನೆ. ಸಾಧು ತನ್ನ ಬಳಿಯಿದ್ದ ಒಂದು ಪಾತ್ರೆಯನ್ನು ಕೊಡುತ್ತಾನೆ ಅವನಿಗೆ. ಅವನು ಅದನ್ನು ನೋಡಿ ಇದು ಕೊಳಕಾಗಿದೆ ಅಲ್ಲದೇ ಇದು ತೂತಾದಂತೆ ಕಾಣುತ್ತಿದೆ ಇದರಿಂದ ಏನು ಕೆಲಸ ಸಾಧ್ಯ ಎಂದು ಕೇಳಿದಾಗ ಸಾಧು ಹೇಳುವನು ನಿಮ್ಮ ಮನೆಯ ಬಾವಿಯಿಂದ ಪ್ರತೀದಿನ ಈ ಪಾತ್ರೆಯಲ್ಲಿ ಮೂರು ಪಾತ್ರೆ ನೀರನ್ನು ತಂದು ಮನೆಯಲ್ಲಿ ತುಂಬಿಸಿಡು. ಒಂದು ತಿಂಗಳ ನಂತರ ನಾನು ಬರುವೆ ಎಂದು ಹೇಳಿ ಹೋಗುತ್ತಾನೆ.
ಆ ನಾಸ್ತಿಕ ವ್ಯಕ್ತಿ ಷರತ್ತಿನ ಅನ್ವಯ ಪ್ರತೀದಿನ ಆ ಕೊಳಕಾದ ತೂತಿರುವ ಪಾತ್ರೆಯಲ್ಲಿ ಬಾವಿಯಿಂದ ನೀರು ಎತ್ತಿ ಮನೆಗೆ ತರುತ್ತಿದ್ದ. ಹೆಚ್ಚಿನ ಭಾಗ ದಾರಿಯಲ್ಲಿ ಸೋರಿ ಹೋಗುತ್ತಿತ್ತು. ಆದರೂ ಸಾಧುವನ್ನು ಸೋಲಿಸುವೆ ಎಂಬ ಭಾವದೊಂದಿಗೆ ಮನೆಯಲ್ಲಿ ನೀರು ತುಂಬುತ್ತಿದ್ದ. ಇಪ್ಪತೊಂಭತ್ತು ದಿನ ಮುಗಿಯುತು. ಕೊನೆಯ ದಿನ ಸಾಧು ಬರುವ ದಾರಿಯನ್ನೇ ನೋಡುತ್ತಿದ್ದ. ಈ ಸಲ ಈ ಸಾಧುವನ್ನು ಸೋಲಿಸಿದೆ ಎಂಬ ಅಹಂ ಭಾವ ಭರಿತನಾಗಿ ಮನೆಯವರ ಮುಂದೆ ಬೀಗುತ್ತಿದ್ದ ಮತ್ತು ಸಾಧು ಬರುವುದೇ ಇಲ್ಲ ಎಂದು ಅಣಕಿಸುತ್ತನೂ ಇದ್ದ.
ಆ ಸಮಯಕ್ಕೆ ಸರಿಯಾಗಿ ಸಾಧು ಬರುತ್ತಾನೆ. ಬಂದವನೇ ತಾನು ನೀಡಿದ ಪಾತ್ರೆಯನ್ನು ನೋಡಿ ನಸುನಕ್ಕು ಅವನಿಗೆ ಹೇಳುತ್ತಾನೆ ಒಮ್ಮೆ ನೀನು ಬಾವಿಯ ತನಕ ಹೋಗಿ ದಾರಿಯನ್ನು ಪರೀಕ್ಷಿಸಿ ಬಾ ಎಂದು. ಅವನು ಹೋಗಿ ಬರುತ್ತಾನೆ. ಬಂದಾಕ್ಷಣ ಸಾಧು ಕೇಳುತ್ತಾನೆ ನಾನು ಈ ಪಾತ್ರೆ ಕೊಡುವಾಗ ಹೇಗಿತ್ತು ಇದು ಎಂದು. ತಕ್ಷಣ ಉತ್ತರ ಬರುತ್ತದೆ ಕೊಳಕಾಗಿತ್ತು ಮತ್ತು ಬಳಸಲು ಯೋಗ್ಯವಲ್ಲದ ಸ್ಥಿತಿಯಲ್ಲಿತ್ತು ಎಂದು. ಸಾಧು ಪುನಃ ಕೇಳುತ್ತಾನೆ ಈಗ ಹೇಗಿದೆ ಎಂದು. ಉತ್ತರ ಸ್ವಚ್ಛವಾಗಿದೆ ಎಂದು ಬರುತ್ತದೆ.
ಆಮೇಲೆ ಮತ್ತೆ ಸಾಧುವಿನ ಪ್ರಶ್ನೆ ಮೊದಲು ದಾರಿ ಹೇಗಿತ್ತು? ಈಗ ತಿಂಗಳ ನಂತರ ದಾರಿ ಹೇಗಿದೆ ಎಂದು. ಆಗ ಆ ವ್ಯಕ್ತಿಯ ಉತ್ತರ ಮೊದಲು ಒಣಗಿದ ಮುಳ್ಳು ಕಲ್ಲುಗಳಿಂದ ಕೂಡಿದ ದಾರಿಯಾಗಿತ್ತು. ಈಗ ಹಚ್ಚ ಹಸುರಾದ ಹುಲ್ಲು ಬೆಳೆದ ಸುಂದರ ಮನೋಜ್ಞವಾದ ದಾರಿಯಾಗಿದೆ ಎಂದ.
ಇದನ್ನೂ ಓದಿ:Guruvayur: ಗುರುವಾಯೂರು ಈ ಹೆಸರಿನ ಮಹತ್ವವೇನು? ಈ ಕ್ಷೇತ್ರದ ಮಹಿಮೆಯೇನು?
ಈಗ ಸಾಧು ಹೇಳುವನು… ಈ ಪಾತ್ರೆ ಅಂದರೆ ನಿನ್ನ ಬುದ್ಧಿ ಎಂದು ಭಾವಿಸು. ನೀನು ಹೇಳಿದಂತೆ ಅದರಲ್ಲಿ ಏನೂ ನಿಲ್ಲದಿದ್ದರೂ ನಿರಂತರ ನೀರಿನ ಸಂಪರ್ಕದಿಂದ ಶುದ್ಧವಾದ ಪಾತ್ರೆಯಂತೆ ನಿನ್ನ ಬುದ್ಧಿಯೂ ಉತ್ತಮವಾಗುವುದು. ಅದೇ ರೀತಿ ನೀನು ನೀರು ತಂದ ದಾರಿಯಿದೆಯಲ್ಲಾ ಅದು ನಿನ್ನ ಜೀವನ. ಸತ್ಕಾರ್ಯವಿಲ್ಲದ ಜೀವನ ಮನೋಜ್ಞವಾಗಲು ಸಾಧ್ಯವಿಲ್ಲ. ನಾಮಸ್ಮರಣೆಯಂತಹ ಸತ್ಕಾರ್ಯದಿಂದ ನೀರು ಬಿದ್ದು ಹಸಿರಾದ ದಾರಿಯಂತೆ ಜೀವನವೂ ನಲಿವಿನಿಂದ ಕೂಡುವುದು ಎಂದನಂತೆ. ಆಗ ಆ ವ್ಯಕ್ತಿಗೆ ನಾಮಸ್ಮರಣೆಯ ಮಹತ್ವ ತಿಳಿಯುತ್ತದೆ. ಅಂತೆಯೇ ನಾವೂ ಸಹ ಹಿರಿಯರ ಮಾತಿಗೆ ಬೆಲೆಕೊಟ್ಟು ನಾಮಸ್ಮರಣೆಯಂತಹ ಸತ್ಕಾರ್ಯ ಮಾಡಿದರೆ ನಮ್ಮ ಜೀವನವೂ ಹಸನಾಗುವುದು.
ಲೇಖನ: ಡಾ.ಗೌರಿ ಕೇಶವಕಿರಣ ಬಿ
ಧಾರ್ಮಿಕಚಿಂತಕರು