ಮದುವೆ (marriage) ಎನ್ನುವುದು ಜೀವನದ ಅತ್ಯಂತ ಮಹತ್ತರ ಘಟ್ಟ. ಅಲ್ಲದೇ ಇಲ್ಲಿ ಯಾವುದೇ ಕಾರಣಕ್ಕೂ ನಮ್ಮ ನಿರ್ಧಾರ ಮತ್ತು ಆಯ್ಕೆ ಅಸಮರ್ಪಕವಾಗದಂತೆ ಬಹು ಕಾಳಜಿಯಿಂದಿರಬೇಕು. ವಧುವೊಬ್ಬಳು ತನ್ನ ಜೀವನದ ಅತ್ಯಂತ ಹೆಚ್ಚಿನ ಕಾಲವನ್ನು ಸಾಗಿಸಬೇಕಾದ ಮನೆಯನ್ನು ಮತ್ತು ಮನವನ್ನು ಹೊಂದುವ ಸಂದರ್ಭವಿದು. ಮದುವೆಯಲ್ಲಿ ಗಾಂಧರ್ವ ಇತ್ಯಾದಿ ಹಲವಾರು ವಿಧಿಗಳು ಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ. ಅದರಲ್ಲಿ ಇಂದು ದೇವ ಅಗ್ನಿ ದ್ವಿಜ ಸಾಕ್ಷಿಯಾಗಿ ಮದುವೆಯಾಗುವ ರೂಢಿ ವರ್ತಮಾನದಲ್ಲಿ ಹೆಚ್ಚಾಗಿದೆ.
ನಮ್ಮಲ್ಲಿ ಮನೆಯ ಹಿರಿಯರು ಹೇಳುವ ಮಾತಿದೆ. ನಾವೆಲ್ಲ ಮದುವೆ ಆಗೋವಾಗ ಹೆಣ್ಣಿನ ಅಥವಾ ಗಂಡಿನ ಮುಖವೇ ನೋಡಿಲ್ಲ. ಧರ್ಮವೂ ಇದಕ್ಕೆ ಒಪ್ಪಲ್ಲವೆಂದು. ಅದರಲ್ಲೂ ಹೆಣ್ಣಿಗೆ ಪತಿಯ ಆಯ್ಕೆಯ ಅಧಿಕಾರವೇ ಇರಲಿಲ್ಲವೆಂಬ ಮಾತೂ ಕೆಲವು ಕಡೆ ಕೇಳುತ್ತೇವೆ.. ಅಲ್ಲವೇ? ಹಾಗಾದರೆ ಹೆಣ್ಣಿಗೆ ತನ್ನ ಪತಿಯ ಆಯ್ಕೆಯ ವಿಚಾರದಲ್ಲಿ ಶಾಸ್ತ್ರಪ್ರಕಾರ ಅಧಿಕಾರವಿಲ್ಲವೇ ಎಂಬ ಪ್ರಶ್ನೆ ಬರುತ್ತದೆ. ಅಧಿಕಾರವಿದೆ ಅಂತಾದರೆ ಅದು ಕನ್ಯಾದಾನ ಹೇಗೆ ಆಗುತ್ತದೆ ಎಂದು ಕೆಲವು ಸಂಪ್ರದಾಯವಾದಿಗಳು ಕೇಳುವುದೂ ಇದೆ. ಅಧಿಕಾರವಿಲ್ಲವೆಂದಾದರೆ ಇದು ಪುರುಷ ಪ್ರಧಾನ ತೀರ್ಮಾನವೇ ಎಂದು ಪ್ರಶ್ನೆ ಉದಯಿಸುತ್ತದೆ. ಇದಕ್ಕೆಲ್ಲಾ ಉತ್ತರ ಇಲ್ಲಿ ನೋಡೋಣ –
ಮೊದಲ ಗೊಂದಲ ಹೆಣ್ಣಿಗೆ ಪತಿಯ ಆಯ್ಕೆಗೆ ಅಧಿಕಾರವಿದೆಯೇ ಎಂದು. ಇದೆ ಎಂಬುದು ಉತ್ತರ. ಈಗ ಹಿರಿಯರು ತಪ್ಪೆನ್ನಬಹುದು ಆದರೆ ಸಾರ್ವಕಾಲಿಕ ಸತ್ಯವಾದ ವಿವಾಹ (ವಿಧಿ) ಪ್ರಯೋಗದಲ್ಲಿ ಕನ್ಯಾಸಮರ್ಪಣೆಯೆಂಬ ಭಾಗವಿದೆ. ವಧುವಿನ ತಾಯಿ ತಂದೆಯರು ಮತ್ತು ವರನ ತಾಯಿ ತಂದೆಯರು ವಧೂ ವರರ ಕೈಹಿಡಿದು ದ್ವಿಜರ, ಹಿರಿಯರ, ಸೂರ್ಯನ ಹಾಗೂ ಭೂಮಿಯನ್ನು ಸಾಕ್ಷಿಯಾಗಿಸಿ ಕನ್ಯೆಯನ್ನು ವರನಿಗೊಪ್ಪಿಸುವ ಸಂದರ್ಭ. ಈ ಸಮಯದಲ್ಲಿ ವಧೂ ವರರಿಗೆ ಒಂದು ಪುರಾಣವನ್ನು ಹೇಳುವ ಸಂದರ್ಭವಿದೆ. ಅದು ಹೀಗಿದೆ – (ಇದಕ್ಕೆ ಶಾಸ್ತ್ರಾಧಾರವಾಕ್ಯಗಳೂ ಇದೆ. ಸಂದರ್ಭಕ್ಕನುಗುಣವಾಗಿ ಅರ್ಥ ಮಾತ್ರ ನೀಡಿರುತ್ತೇನೆ) ಲಕ್ಷ್ಮೀ ದೇವಿಯು ಸಮುದ್ರ ಮಥನ ಕಾಲದಲ್ಲಿ ಸಮುದ್ರದಿಂದ ಹುಟ್ಟಿ ಬರುತ್ತಾಳೆ.
ಆಗ ಅಲ್ಲಿರುವ ರಾಕ್ಷಸರಿಂದ ಆರಂಭಿಸಿ ಪ್ರತಿಯೊಬ್ಬರೂ ಅವಳ ತೇಜಸ್ಸಿಗೆ ಮಾರು ಹೋಗಿ ಅವಳನ್ನು ವರಿಸುವ ಇಚ್ಛೆಯುಳ್ಳವರಾಗುತ್ತಾರೆ. ಆಗ ಧನ್ವಂತರಿಯ ನೇತ್ರತ್ವದಲ್ಲಿ ಒಂದು ಸ್ವಯಂವರವನ್ನು ಏರ್ಪಡಿಸುತ್ತಾರೆ. ಅಲ್ಲಿ ಇಂದ್ರಾದಿ ದೇವತೆಗಳು, ತ್ರಿಮೂರ್ತಿಗಳು, ರಾಕ್ಷಸ ಶ್ರೇಷ್ಠರು ಭಾಗವಹಿಸುತ್ತಾರೆ. ಈಗ ಧನ್ವಂತರಿಯು ಅಲ್ಲಿ ಸೇರಿರುವ ಪ್ರತೀ ವ್ಯಕ್ತಿಗಳ ಗುಣಾಗುಣಗಳನ್ನು ವರ್ಣಿಸುತ್ತಾ ಹೋಗುತ್ತಾನೆ. ಲಕ್ಷ್ಮೀದೇವಿಯು ವೈಜಯಂತೀ ಎಂಬ ಮಾಲೆಯನ್ನು ಹಿಡಿದು ಧನ್ವಂತರಿಯನ್ನು ಅನುಸರಿಸುತ್ತಾ ಸಾಗುತ್ತಿರುವಾಗ ನಳಿನ ನಯನನಾದ ಶ್ರೀಮನ್ನಾರಯಣನಲ್ಲಿ ಅನುರಕ್ತಳಾಗಿ ಅವನನ್ನು ಲಕ್ಷ್ಮೀಯು ವರಿಸುತ್ತಾಳೆ. ನಾವು ಇಂದು ಆರಾಧಿಸುತ್ತಿರುವ ತಾಯಿ ಲಕ್ಷ್ಮೀಯು ಅಂದು ಸತ್ಯಯುಗದಲ್ಲಿ ತನಗೆ ಅನುರೂಪವಾದ ವರನನ್ನು ಆರಿಸಿರುವಾಗ ಧರ್ಮಶಾಸ್ತ್ರದಲ್ಲಿ ಅದಕ್ಕೆ ವಿರೋಧವಿಲ್ಲ ಎಂದಾಯಿತು.
ಇದನ್ನು ಓದಿ: ದುಷ್ಟನಾದರೂ ರಾವಣನಲ್ಲಿ ಕಂಡ ಒಂದು ಒಳ್ಳೆಯ ಗುಣ, ರಾವಣನಿಗೆ ಯಾರ ಶಾಪ?
ಹಾಗಾದರೆ ಯಾಕೆ ಕೆಲವು ದಶಕಗಳ ಹಿಂದೆ ಕನ್ಯೆಯರಿಗೆ ವರ ಆಯ್ಕೆಯಲ್ಲಿ ವಿರೋಧವಿತ್ತು ಎಂದರೆ. ಕನ್ಯಾದಾನವೆಂಬ ಪದದ ಆಧಾರದ ಮೇಲೆ. ದಾನವೆಂಬುದನ್ನು ದಾನ ಮಾಡುವ ವ್ಯಕ್ತಿ/ವಸ್ತುವನ್ನು ಕೇಳಿ ಕೊಡುವ ರೂಢಿ ಕಡಿಮೆ ಇದ್ದ ಕಾರಣ ಮತ್ತು ಅದೊಂದು ಕಾಲದಲ್ಲಿ ಬಾಲ್ಯವಿವಾಹದ ಛಾಪು ಅಧಿಕವಾಗಿತ್ತು. ಈ ಕಾರಣಗಳಿಂದ ವಯಸ್ಸು ಬೆಳೆಯದ ಕನ್ಯೆಗೆ ಆಯ್ಕೆ ಕಷ್ಟವೆಂಬ ಭಾವವೂ ಕಾರಣವಿದ್ದರಬಹುದು. ಅಲ್ಲದೇ ಹಿರಿಯರು ಬಹಳಷ್ಟು ಪರಿಶೋಧಿಸಿ ಕೊಡುತ್ತಾರೆ ಎಂಬ ಭಾವವೂ ಇದ್ದಿರಬಹುದು. ತಾನು ವರಿಸುವ ವರ ತನಗೆ ಯೋಗ್ಯನೋ ಎಂಬ ಆಯ್ಕೆಗೆ ಶಾಸ್ತ್ರ ಎಂದೂ ವಿರೋಧ ನುಡಿಯಲಿಲ್ಲ. ನೀಡುವ ದಾನವನ್ನು ಯಾವುದೇ ಮೋಹಕ್ಕೆ ಒಳಗಾಗದೇ ಯೋಗ್ಯ ವ್ಯಕ್ತಿಗೆ ನೀಡಬೇಕು ಎಂಬುದು ಧರ್ಮಶಾಸ್ತ್ರದ ಮಾತು. ಹಾಗಿರುವಾಗ ಶ್ರೇಷ್ಠವಾದ ಕನ್ಯಾದಾನವನ್ನು ಯೋಗ್ಯನಿಗೇ ನೀಡಬೇಕು. ಆಯ್ಕೆ ಹೇಗಿರಬೇಕೆಂದು ಶಾಸ್ತ್ರ ಈ ರೀತಿಯಾಗಿ ಹೇಳಿದೆ.
ಕುಲಂ ಚ ಶೀಲಂ ಚ ವಪುವರ್ಯಶ್ಚ ವಿತ್ತಂ ಚ ವಿದ್ಯಾಂ ಚ ಸನಾತನಂ ಚ |
ಏತಾನ್ ಗುಣಾನ್ ಸಪ್ತ ಪರೀಕ್ಷ್ಯ ದೇಯಾ ಕನ್ಯಾ ಬುಧೈಃ ಶೇಷಂ ಅಚಿಂತನೀಯಮ್ ||
ತಮಗೊಪ್ಪುವ ಕುಲವನ್ನು, ಉತ್ತಮ ನಡತೆಯನ್ನು, ತಮಗೊಪ್ಪುವ ಸೌಂದರ್ಯವನ್ನು, ವಯಸ್ಸನ್ನು, ಸಂಪತ್ತು, ವಿದ್ಯೆ, ಮನೆತನವನ್ನು ಈ ರೀತಿಯಾಗಿ ಏಳು ಗುಣಗಳನ್ನು ಪರೀಕ್ಷಿಸಿ ಕನ್ಯೆಯ ಕಡೆಯ ಹಿರಿಯರು ವರನನ್ನು ಆಯ್ಕೆ ಮಾಡಬೇಕು ಎಂದು. ಆದ್ದರಿಂದ ಮನೆ ಬೆಳಗುವ ವಧುವಿಗೆ ತನಗೆ ತನ್ನ ಮನೆಗೊಪ್ಪುವ ಯೋಗ್ಯ ವರನನ್ನು ಆಯ್ಕೆ ಮಾಡಲು ಶಾಸ್ತ್ರದಲ್ಲಿ ನಿಷೇಧವಿಲ್ಲ. ಆದರೆ ಆಯ್ಕೆ ಎನ್ನುವುದು ಸ್ವೇಚ್ಛಾಚಾರ ಆಗಬಾರದು ಅಷ್ಟೇ. ಹಿರಿಯರಿಗೂ ನಮ್ಮ ಬಗ್ಗೆ ಕಾಳಜಿ ಇರುತ್ತದೆ ಅಲ್ಲವೇ ?
ಡಾ.ಕೇಶವಕಿರಣ ಬಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
kkmanasvi@gamail.com
ಅಧ್ಯಾತ್ಮ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ