2024 ಹೊಸ ಭರವಸೆಗಳನ್ನು ಹೊತ್ತು ತರುತ್ತಿದೆ ಮತ್ತು ಹೊಸ ಕನಸುಗಳ ಸಾಕಾರಗಳಿಗೆ ಕ್ಷಣಗಣನೆ ಆರಂಭವಾಗುತ್ತಿದೆ. ಇದೆಲ್ಲದರ ಜೊತೆಗೆ ಸಂತಸ- ಸಡಗರವನ್ನು ಹೆಚ್ಚಿಸಲು ಸಾಲು ಸಾಲು ಹಬ್ಬಗಳು ಬರುತ್ತಿದೆ. ಈ ಶುಭ ದಿನಗಳ ಆಗಮನವನ್ನು ನಿರೀಕ್ಷಿಸುವುದು ಕೂಡ ಒಂದು ಸಂಭ್ರಮವೇ ಸರಿ. ಅದರಲ್ಲಿ ಜನವರಿ ಮೊದಲನೇ ತಿಂಗಳಾಗಿರುವುದರಿಂದ ಎಲ್ಲಾ ಸಂಭ್ರಮ ಇಲ್ಲಿಂದಲೇ ಆರಂಭವಾಗುತ್ತದೆ ಹಾಗಾಗಿ ಜನವರಿಯ್ಲಲಿ ಬರುವ ಹಬ್ಬಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಸಫಲಾ ಏಕಾದಶಿಯನ್ನು ಜನವರಿ 7 ರಂದು ಆಚರಣೆ ಮಾಡಲಾಗುತ್ತದೆ. ಈ ದಿನ ಬೆಳಿಗ್ಗೆ 12:41 ಕ್ಕೆ ಏಕಾದಶಿ ಆರಂಭವಾಗಿ ಜನವರಿ 8ರ ಮಧ್ಯಾಹ್ನ 12:46 ಕ್ಕೆ ಮುಕ್ತಾಯ ಗೊಳ್ಳುತ್ತದೆ. ಈ ದಿನದಂದು ನಾರಾಯಣನನ್ನು ಮನಃಪೂರ್ವಕವಾಗಿ ಪೂಜಿಸುವುದರಿಂದ ಹಾಗೂ ಉಪವಾಸ ಮಾಡುವುದರಿಂದ ಶ್ರೀ ಹರಿಯಿಂದ ಆಶೀರ್ವಾದ ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಸಫಲಾ ಏಕಾದಶಿಯು ಅದರ ಹೆಸರಿನಂತೆಯೇ ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಸಹಕಾರಿ ಎಂದು ಪರಿಗಣಿಸಲಾಗಿದೆ.
ಈ ಅಮಾವಾಸ್ಯೆಯನ್ನು ಮಾರ್ಗಶಿರ ಅಮಾವಾಸ್ಯೆ ಅಥವಾ ಎಳ್ಳ ಅಮಾವಾಸ್ಯೆ ಅಥವಾ ದರ್ಶ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಅಮಾವಾಸ್ಯೆ ದಿನವು ಲಕ್ಷ್ಮೀ ದೇವಿ ಮತ್ತು ಶಿವನ ಆರಾಧನೆಗೆ ಮತ್ತು ಪೂರ್ವಜರ ಶಾಂತಿಗಾಗಿ ಬಹಳ ಫಲಪ್ರದವಾಗಿದೆ. ಜೀವನದಲ್ಲಿ ಸಂಪತ್ತು ಮತ್ತು ಸಂತೋಷ ಬಯಸುವವರು ಮಹಾಲಕ್ಷ್ಮೀಯನ್ನು ಈ ದಿನ ಆರಾಧಿಸಬಹುದು.
ಮಕರ ಸಂಕ್ರಾಂತಿ ಜನವರಿ 15 ರಂದು ಬೆಳಿಗ್ಗೆ 02:54 ಕ್ಕೆ ಈ ದಿನದ ಶುಭ ಸಮಯ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ, ಸೂರ್ಯ ದೇವರು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು 1 ತಿಂಗಳ ಕಾಲ ಮಕರ ರಾಶಿಯಲ್ಲಿ ಇರುತ್ತಾನೆ. ಹಿಂದೂ ಧರ್ಮದಲ್ಲಿ ಸಂಕ್ರಾಂತಿಗೆ ಬಲು ಮಹತ್ವ. ಅದರಲ್ಲೂ ಮಕರ ಸಂಕ್ರಮಣ ಹಾಗೂ ಕರ್ಕಾಟಕ ಸಂಕ್ರಮಣಕ್ಕೆ ಇನ್ನಷ್ಟು ವಿಶೇಷತೆಗಳಿವೆ. ಇವೆರಡು ಆಯನ ಸಂಕ್ರಾಂತಿಗಳು. ಉತ್ತರಾಯಣ ಮತ್ತು ದಕ್ಷಿಣಾಯಣ ಈ ಎರಡು ಸಂಕ್ರಮಣದ ಸಂದರ್ಭದಲ್ಲಿ ಶುರುವಾಗುತ್ತದೆ. ಮಕರ ಸಂಕ್ರಮಣದ ಸಂದರ್ಭದಲ್ಲಿ ಉತ್ತರಾಯಣ ಪುಣ್ಯಕಾಲ ಆರಂಭವಾಗುತ್ತದೆ.
ಇದನ್ನೂ ಓದಿ: 2024 ರಲ್ಲಿ, ಈ ನಾಲ್ಕು ರಾಶಿಯವರ ಭವಿಷ್ಯ ಬದಲಾಗಲಿದೆ, ಇದು ಆರ್ಥಿಕ ಲಾಭದ ಸಂಕೇತ
ಈ ಬಾರಿ ಜನವರಿ 21 ರಂದು ಪುತ್ರದಾ ಏಕಾದಶಿಯನ್ನು ಆಚರಣೆ ಮಾಡಲಾಗುತ್ತದೆ. ಈ ಪುತ್ರದ ಏಕಾದಶಿ ವ್ರತವನ್ನು ಪವಿತ್ರಾ ಏಕಾದಶಿ ಅಥವಾ ಪವಿತ್ರ ಏಕಾದಶಿ ಎಂದೂ ಕರೆಯಲಾಗುತ್ತದೆ. ಈ ಏಕಾದಶಿ ವ್ರತವನ್ನು ಆಚರಿಸುವುದರಿಂದ ನಾವು ಲಕ್ಷ್ಮೀ ನಾರಾಯಣರ ಕೃಪೆಯನ್ನು ಹಾಗೂ ಸಂತಾನ ಭಾಗ್ಯ ಇಲ್ಲದವರು ಉತ್ತಮ ಸಂತಾನ ಭಾಗ್ಯವನ್ನು ಪಡೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಇನ್ನು ಭಗವಾನ್ ಶ್ರೀ ವಿಷ್ಣುವು ಈ ಉಪವಾಸವನ್ನು ಸಂಪೂರ್ಣ ನಿಯಮಗಳು ಮತ್ತು ನಿಬಂಧನೆಗಳೊಂದಿಗೆ ಆಚರಿಸುವವರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಮತ್ತು ವ್ರತಧಾರಿಯು ಸಕಲ ಸುಖಗಳನ್ನು ಅನುಭವಿಸಿ ವೈಕುಂಠವನ್ನು ಪಡೆಯುತ್ತಾನೆ ಎಂಬ ನಂಬಿಕೆ ಇದೆ.
ಪುಷ್ಯ ಮಾಸದ ಶುಕ್ಲಪಕ್ಷ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಅಷ್ಟಮಿಯಿಂದ ಹುಣ್ಣಿಮೆಯವರೆಗೂ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತದೆ. ಬನದ ಹುಣ್ಣಿಮೆಯಂದು ರಾಜ್ಯದ ಎಲ್ಲಾ ಬನಶಂಕರಿ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತದೆ. ಈ ದಿನ ನೀವು ತಾಯಿಯನ್ನು ನೆನೆದು ಉಪವಾಸ ಮಾಡಿ, ಪೂಜೆ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ.
ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಪ್ರತಿ ತಿಂಗಳ ಕೃಷ್ಣ ಪಕ್ಷದ ನಾಲ್ಕನೇ ದಿನವನ್ನು ಸಂಕಷ್ಟ ಚತುರ್ಥಿಯನ್ನಾಗಿ ಆಚರಿಸಲಾಗುತ್ತದೆ. ಇದನ್ನು ಸಂಕಟಹರ ಚತುರ್ಥಿ, ಸಂಕಷ್ಟಹರ ಚತುರ್ಥಿ ಎಂದೂ ಕರೆಯಲಾಗುತ್ತದೆ. ಇದು ಗಣೇಶನಿಗೆ ಸಮರ್ಪಿತವಾದ ದಿನವಾಗಿದೆ. ಸಂಕಷ್ಟ ಚತುರ್ಥಿ ಮಂಗಳವಾರ ಬಂದರೆ ಅದನ್ನು ಅತಿ ಶ್ರೇಷ್ಠ ಮತ್ತು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ದಿನ ಗಣೇಶನ್ನು ಪೂಜೆ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ. ಗಣೇಶನ ದೇವಳದಲ್ಲಿ ಈ ದಿನ ಗಣಹೋಮ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 8:50 pm, Mon, 25 December 23