Ganesha Chaturthi 2021: ಗಣೇಶ ಮೂರ್ತಿ ತಯಾರಿಕೆ; ಕಲೆ ಮಾಸುತ್ತಿದೆ, ಎಲ್ಲವೂ ಮುಂದಿನ ಪೀಳಿಗೆಯ ಕೈಯ್ಯಲ್ಲಿದೆ ಎಂದ ವಿನಯ್ ಗುಡಿಗಾರ

| Updated By: preethi shettigar

Updated on: Sep 08, 2021 | 9:54 AM

ಗಣೇಶ ಹಬ್ಬದಂದು ಪ್ರತಿ ಮನೆಯಲ್ಲಿ ರಾರಾಜಿಸುವ ಗಣೇಶನ ಮೂರ್ತಿ ನಮ್ಮ ಕೈಚಳಕದಿಂದ ತಯಾರಿಸಿದ್ದು ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದು ವಿನಯ್ ಗುಡಿಗಾರ ಸಂತೋಷಪಟ್ಟರು.

Ganesha Chaturthi 2021: ಗಣೇಶ ಮೂರ್ತಿ ತಯಾರಿಕೆ; ಕಲೆ ಮಾಸುತ್ತಿದೆ, ಎಲ್ಲವೂ ಮುಂದಿನ ಪೀಳಿಗೆಯ ಕೈಯ್ಯಲ್ಲಿದೆ ಎಂದ ವಿನಯ್ ಗುಡಿಗಾರ
ಗಣೇಶ ಮೂರ್ತಿ ತಯಾರಕ ವಿನಯ್​ ಗುಡಿಗಾರ
Follow us on

ಇನ್ನೇನು ಗಣೇಶ ಹಬ್ಬವನ್ನು ಎದುರು ನೋಡುತ್ತಿದ್ದೇವೆ. ಗಣೇಶ ತಯಾರಕರ ಮನೆಯ ತುಂಬ ಗಣಪನ ಮೂರ್ತಿಗಳು. ಕಲಾಕೃತಿಗಳ ಕೈಚಳಕ ತೋರಿಸುವಲ್ಲಿ ನಿಪುಣರು ನಮ್ಮ ಗುಡಿಗಾರರು. ತಲ ತಲಾಂತರಿಂದ ನಡೆಸಿಕೊಂಡು ಬಂದ ಈ ಕಲೆಯನ್ನು ಬಿಡಲು ಮನಸ್ಸು ಬರುವುದಿಲ್ಲ. ಮಹಾರಾಷ್ಟ್ರದಲ್ಲಿದ್ದರೂ ಸಹ ಗಣೇಶ ಹಬ್ಬದ ಒಂದು ತಿಂಗಳ ಮುಂಚಿತವಾಗಿಯೂ ಊರಿಗೆ ಬಂದು ಬಿಡುತ್ತೇನೆ. ಗಣೇಶನ ಮೂರ್ತಿಯನ್ನು ತಯಾರಿಸುವಾಗ ಅದೇನೋ ಮನಸ್ಸಿಗೆ ಖುಷಿ, ನೆಮ್ಮದಿ. ಕಷ್ಟದ ಕಲೆಯಾಗಿದ್ದರೂ ಇಷ್ಟಪಟ್ಟು ಹಲವು ವರ್ಷಗಳಿಂದ ಮೂರ್ತಿ ತಯಾರಿಸುವ ಕೌಶಲ್ಯದಲ್ಲಿ ನಾನು ತೊಡಗಿಕೊಂಡಿದ್ದೇನೆ ಎಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಸೋಂದಾ ಎಂಬ ಊರಿನ ವಿನಯ್ ಸುಬ್ರಹ್ಮಣ್ಯ ಗುಡಿಗಾರ ಟಿವಿ9 ಕನ್ನಡ ಡಿಜಿಟಲ್ ಜತೆ ಮಾತು ಶುರು ಮಾಡಿದರು.

ನನ್ನ ಅಜ್ಜನ ಕಾಲದಿಂದಲೂ ಗಣಪನ ಮೂರ್ತಿ ತಯಾರಿಸುವ ಕಲೆಯನ್ನು ನಾನು ನೋಡುತ್ತಾ ಬಂದೆ. ಈ ಕಲೆಯನ್ನು ಅಜ್ಜ ಅಪ್ಪನಿಗೆ ಬಳುವಳಿಯಾಗಿ ನೀಡಿದರು. ನಂತರದ ಅವಧಿಯಲ್ಲಿ ನಮ್ಮ ತಂದೆ ನಮಗಾಗಿ ಕಲೆಯನ್ನು ಕಲಿಸಿಕೊಟ್ಟರು. ಚಿಕ್ಕ ವಯಸ್ಸಿನಿಂದಲೂ ಸಹ ಗಣೇಶ ಮೂರ್ತಿ ತಯಾರಿಕೆಯನ್ನು ನೋಡುತ್ತಾ ಬೆಳೆದೆ. ಗಣೇಶ ಹಬ್ಬದಂದು ಪ್ರತಿ ಮನೆಯಲ್ಲಿ ರಾರಾಜಿಸುವ ಗಣೇಶನ ಮೂರ್ತಿ ನಮ್ಮ ಕೈಚಳಕದಿಂದ ತಯಾರಿಸಿದ್ದು ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದು ವಿನಯ್ ಗುಡಿಗಾರ ಸಂತೋಷ ಪಟ್ಟರು.

ಪ್ರತೀ ವರ್ಷ ಗಣಪತಿಯನ್ನು ನಮ್ಮಲ್ಲಿಯೇ ಕೊಳ್ಳುವ ಜನರಿದ್ದಾರೆ
ಪ್ರತಿ ವರ್ಷ ನಮ್ಮಲ್ಲಿಯೇ ಗಣಪತಿ ಮೂರ್ತಿಯನ್ನು ಖರೀದಿಸುವ ಜನರಿದ್ದಾರೆ. ಈ ವರ್ಷ ಸುಮಾರು 88 ಗಣಪತಿಗಳು ಸಿದ್ಧವಾಗಿವೆ. ಕೊರೊನಾ ಬಂದಿರಬಹುದು. ಆಚರಣೆಗಳಿಗೆ ಅವಕಾಶ ಕಡಿಮೆ ಆಗಿರಬಹುದು. ಆದರೆ ಗಣೇಶನ ಮೇಲಿನ ಭಕ್ತಿ ಎಂದೂ ಕಡಿಮೆಯಾಗುವುದಿಲ್ಲ. ಹಳ್ಳಿಗಳ ಮನೆಗಳಲ್ಲಿ ಆಚರಿಸುವ ಹಬ್ಬಕ್ಕೆ ನಮ್ಮ ಗಣಪತಿ ಮೂರ್ತಿಗಳು ಹೋಗುತ್ತವೆ. ಹಾಗಾಗಿ ಪ್ರತೀ ವರ್ಷ ಕೊಳ್ಳುವವರು ಈ ವರ್ಷವೂ ಮೂರ್ತಿಯನ್ನು ಖರೀದಿಸುತ್ತಿದ್ದಾರೆ ಎಂದು ಅಭಿಪ್ರಾಯ ಹಂಚಿಕೊಂಡರು.

ಗಣೇಶನ ಮೂರ್ತಿ

ದಿನ ಸಾಗುತ್ತಿದ್ದಂತೆಯೇ ಬ್ಯಸಿನೆಸ್​ ಆಗಿಬಿಟ್ಟಿತು!
ಮೊದಲೆಲ್ಲಾ ಮೂರ್ತಿ ತಯಾರಿಕರು ಬಹಳ ಶ್ರದ್ಧೆಯಿಂದ ಮೂರ್ತಿ ತಯಾರಿಸುತ್ತಿದ್ದರು. ಕಲೆಯನ್ನು ಆರಾಧಿಸುತ್ತಿದ್ದರು. ಆಗ ಗಣಪನ ಮೂರ್ತಿ ತಯಾರಿಕೆ ಹವ್ಯಾಸವಾಗಿತ್ತು. ಗುಡಿಗಾರರ ಕುಟುಂಬಗಳಲ್ಲಿ ಹತ್ತಾರು ಜನ ಕೂಡಿ ಅಂಗಳದಲ್ಲಿ ಗಣಪನನ್ನು ತಯಾರಿಸಿ ಇಡುವುದು, ತಾ ಮೇಲೋ.. ನೀ ಮೇಲೋ.. ಎಂಬಂತೆ ಚಿಕ್ಕ ಮಕ್ಕಳಲ್ಲಿ ಪೈಪೋಟಿ. ಈ ಸಂಭ್ರಮದಲ್ಲಿ ನೂರಾರು ಗಣಪನ ಮೂರ್ತಿಗಳು ಒಂದು ತಿಂಗಳಿನಲ್ಲಿಯೇ ತಯಾರಾಗಿ ಬಿಡುತ್ತಿದ್ದವು. ಆದರೆ ಈಗೆಲ್ಲಾ ತಯಾರಕರ ಸಂಖ್ಯೆ ಕುಸಿದಿದೆ. ಮಕ್ಕಳೆಲ್ಲಾ ಉದ್ಯೋಗ ಅರಸಿ ಬೇರೆ ಕಡೆ ಹೋಗುತ್ತಿದ್ದಾರೆ. ತಲ ತಲಾಂತರದಿಂದ ನಡೆಸಿಕೊಂಡು ಬರುತ್ತಿದ್ದ ಹವ್ಯಾಸವನ್ನು, ಕಲೆಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಮುಂದಿನ ಪೀಳಿಗೆಯವರಲ್ಲಿದೆ ಎಂದು ಮಾಹಿತಿ ಹಂಚಿಕೊಂಡರು.

ಮೊದಲೆಲ್ಲಾ ಒಂದೊಂದು ಮನೆಯಲ್ಲಿ ಗಣಪತಿ ಮೂರ್ತಿಯನ್ನು 10-15 ದಿನಗಳ ಕಾಲ ಇಟ್ಟು ಪೂಜೆ ಸಲ್ಲಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಎರಡು ದಿನದಿಂದ ಮೂರು ದಿನಗಳು ಮಾತ್ರ ಮನೆಯಲ್ಲಿ ಗಣಪತಿಯನ್ನು ಕೂರಿಸುತ್ತಾರೆ. ಅದರಲ್ಲಿಯೂ ಈ ಕೊರೊನಾ ಮಹಾಮಾರಿಯ ಹಾವಳಿಯಿಂದ ಹಬ್ಬಕ್ಕೆ ಮೆರುಗೇ ಇಲ್ಲದಂತಾಗಿದೆ ಎಂದು ಅಭಿಪ್ರಾಯಪಟ್ಟರು.

88 ಮೂರ್ತಿಗಳನ್ನೂ ಒಬ್ಬರೇ ತಯಾರಿಸಿದ್ದಾರೆ!
ಕಲೆ ಚಿಕ್ಕ ವಯಸ್ಸಿನಿಂದಲೂ ರೂಢಿಯಲ್ಲಿದ್ದರಿಂದ ಬಹುಬೇಗ ಸಾಗುತ್ತದೆ. ತಾಳ್ಮೆ, ಶ್ರದ್ಧೆ ಜತೆಗೆ ಕೆಲಸ ಮಾಡಿದರೆ ಯಾವ ಕೆಲಸವನ್ನೂ ಸುಲಭದಲ್ಲಿ ಮಾಡಬಹುದು. ನನ್ನ ಮನೆಯಲ್ಲಿ ಗಣಪನ ಮೂರ್ತಿ ತಯಾರಕ ನಾನೊಬ್ಬನೇ. ಮಕ್ಕಳೆಲ್ಲ ಬಣ್ಣ ಬಡಿಯುವುದು, ಚಿತ್ರ ಪಟ ಹೀಗೆ ಗಣೇಶನನ್ನು ಅಲಂಕರಿಸಲು ಸಹಾಯ ಮಾಡುತ್ತಾರೆ.  ಇದೀಗ ಕೆಲಸ ಪ್ರಾರಂಭಿಸಿ 2 ತಿಂಗಳು ಕಳೆಯಿತು. 88 ಗಣಪತಿ ಮೂರ್ತಿ ತಯಾರಾಗಿದೆ. ಹೊರಗಡೆಗೆಲ್ಲಾ 2,000 ರೂಪಾಯಿಯವರೆಗೆ ಗಣಪತಿಯನ್ನು ಮಾರಾಟ ಮಾಡುತ್ತಾರೆ. ನಾವಿಲ್ಲಿ 800-900 ರೂಪಾಯಿಯ ಒಳಗೆ ಗಣಪತಿಯನ್ನು ನೀಡುತ್ತೇವೆ ಎಂದು ಮಾಹಿತಿ ಹಂಚಿಕೊಂಡರು.

ಹೊಸ ಹೊಸ ವಿಧಾನದ ಯೋಚನೆಗಳು ಬಂದರೆ ಹೊಸದಾದ ವಿನ್ಯಾಸದೊಂದಿಗೆ ಗಣಪತಿಯನ್ನು ತಯಾರಿಸುತ್ತೇವೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ವಿವಧ ವಿನ್ಯಾಸದ ಗಣಪತಿಯನ್ನು ಇಷ್ಟಪಡುವುದಿಲ್ಲ. ಪಟ್ಟಣಗಳಲ್ಲಿ ಹೆಚ್ಚಾಗಿ ವಿವಿಧ ಆಕಾರದ ಗಣಪನ ಮೂರ್ತಿಯನ್ನು ತಯಾರಿಸುತ್ತಾರೆ. ಹಳ್ಳಿಗಳಲ್ಲಿ ಸಾಮಾನ್ಯ ಮೂರ್ತಿಯನ್ನೇ ಭಕ್ತರು ಇಷ್ಟಪಡುತ್ತಾರೆ. ಹೊಸ ಹೊಸ ಸ್ಟೈಲ್ ಬಂದ ಹಾಗೆ ಟ್ರೆಂಡ್ ಸೃಷ್ಟಿಯಾಗುತ್ತಿದ್ದಂತೆಯೇ ಜನರನ್ನು ರಂಜಿಸಲು ಗಣಪನ ಮೂರ್ತಿಗಳನ್ನು ತಯಾರಿಸುತ್ತಾ ಬರುತ್ತಿದ್ದಾರೆ. ಇತ್ತೀಚೆಗೆ ನೀವು ಕೇಳಿದಂತೆಯೇ ಬಾಹುಬಲಿ ಗಣಪನ ಹೆಸರು ಹೆಚ್ಚು ಪ್ರಚಾರದಲ್ಲಿತ್ತು. ಹೀಗೆ ಗಣಪನ ತಯಾರಿಕೆಯಲ್ಲಿಯೂ ಹೊಸ ಹೊಸ ಯೋಚನೆಗಳೊಂದಿಗೆ ಖರೀದಿದಾರರು ಬರುತ್ತಾರೆ ಎಂದು ಹೇಳಿದರು.

ವಿನಯ್​ ಗುಡಿಗಾರ ತಯಾರಿಸಿದ ಗಣೇಶನ ಮೂರ್ತಿ

ಕಲಿಕೆ ಹವ್ಯಾಸವಾಗಬೇಕು, ಕಲೆಯು ಮನಸ್ಸಿಗೆ ಖುಷಿ ನೀಡುವುದರ ಜತೆಗೆ ಕಲೆಗಾರನಿಗೆ ತಾಳ್ಮೆ ಬೇಕು
ಗಣಪನ ತಯಾರಿಕೆ ಅಷ್ಟು ಸುಲಭವಲ್ಲ. ನೋಡಲು ಜನರನ್ನು ಆಕರ್ಷಿಸಬೇಕು. ಗಣಪನ ಕಣ್ಣು, ಕಿವಿ, ಹೊಟ್ಟೆ ಜತೆಗೆ ಹಚ್ಚುವ ಬಣ್ಣ ಆಕರ್ಷಕವಾಗಿದ್ದಾಗ ಗಣಪ ಸುಂದರವಾಗಿ ಕಾಣಿಸುತ್ತಾನೆ. ಮೂರ್ತಿ ತಯಾರಿಕ ಅಷ್ಟು ಶ್ರದ್ಧೆಯಿಂದ ಕೆಲಸ ನಿರ್ವಹಿಸಿದಾಗ ಮಾತ್ರ ಸುಂದರ ಗಣಪನ ಮೂರ್ತಿ ತಯಾರಾಗಲು ಸಾಧ್ಯ. ಕೇವಲ ಒಂದೋ ಎರಡೋ ಗಣಪನ ಮೂರ್ತಿ ಅಲ್ಲ, ಒಂದೊಂದು ಕಡೆ ಸಾವಿರಾರು ಗಣಪನ ಮೂರ್ತಿಗಳು ತಯಾರಾಗುತ್ತವೆ ಅಂದಾಗ ಕಲೆಗಾರನಿಗೆ ತಾಳ್ಮೆ ಬೇಕೇ ಬೇಕು ಎಂದು ವಿನಯ್​ ಗುಡಿಗಾರ ಹೇಳಿದರು.

ಕಲೆಯನ್ನು ಮುನ್ನಡೆಸಿಕೊಂಡು ಹೋಗುವುದು ಮುಂದಿನ ಪೀಳಿಗೆಯ ಕೈಯಲ್ಲಿದೆ!
ಯಾವುದೇ ಬೇರೆ ಉದ್ಯೋಗದಲ್ಲಿ ತೊಡಗಿದ್ದರೂ ಸಹ ಗಣೇಶ ಮೂರ್ತಿ ತಯಾರಿಕೆಯನ್ನು ಹವ್ಯಾಸವಾಗಿಟ್ಟುಕೊಳ್ಳಬೇಕು. ಇದರಲ್ಲೊಂದು ನೆಮ್ಮದಿ, ಖುಷಿಯಿದೆ. ಇತ್ತೀಚಿನ ಪರಿಸ್ಥಿತಿ ಗಮನಿಸಿದರೆ ಕೊರೊನಾ ಮಹಾಮಾರಿಯಿಂದ ಅದೆಷ್ಟೋ ಜನರು ಉದ್ಯೋಗ ಕಳೆದುಕೊಂಡರು. ಆದರೆ ಈ ಉದ್ಯೋಗ ನಮ್ಮ ಕೈ ಬಿಟ್ಟಿಲ್ಲ. ಏಕೆಂದರೆ ಗಣೇಶನನ್ನು ಪೂಜೆ ಮಾಡುವವರ ಸಂಖ್ಯೆಯಲ್ಲಿ ಎಂದಿಗೂ ಇಳಿಕೆ ಆಗುವುದಿಲ್ಲ. ದೊಡ್ಡ ದೊಡ್ಡ ಗಣೇಶ ಮೂರ್ತಿ ತಯಾರಿಕರು ಹಾಗೂ ಗಣೇಶ ಮೂರ್ತಿ ತಯಾರಿಕೆಯನ್ನೇ ನಂಬಿಕೊಂಡವರಿಗೆ ಕೊರೊನಾ ದಿನಗಳು ಸಮಸ್ಯೆಯಾಗಿರಬಹುದು. ಏಕೆಂದರೆ ಅವರೆಲ್ಲ ಸಾರ್ವಜನಿಕ ಸ್ಥಳಗಳಿಗೆ ನೀಡುವ ಗಣೇಶನನ್ನು ತಯಾರಿಸುತ್ತಾರೆ. ಗಣೇಶ ಹಬ್ಬದ ಆಚರಣೆಗೆ ಕಡಿವಾಣ ಬಿದ್ದರೆ ಅವರಿಗೆ ನಷ್ಟವಾಗುವುದು ಸಹಜ. ಆದರೆ ಹಳ್ಳಿಗಳಲ್ಲಿ ಮನೆ ಮನೆಗಳಲ್ಲಿ ಆಚರಿಸುವ ಹಬ್ಬಕ್ಕೆ ಗಣೇಶನನ್ನು ಖರೀದಿಸುತ್ತಾರೆ. ಗಣೇಶನನ್ನು ಪೂಜಿಸುವವರ ಸಂಖ್ಯೆಯಲ್ಲಿ ಎಂದಿಗೂ ಇಳಿಕೆ ಕಾಣುವುದಿಲ್ಲ ಎಂದು ಹೇಳಿದರು.

ಜನ ಸೇರದಿದ್ದರೂ ಸಂಪ್ರದಾಯವಾಗಿ ಆಚರಣೆಯಲ್ಲಿದ್ದು, ಮನೆಯಲ್ಲಿ ಮೂರ್ತಿಯನ್ನು ಇರಿಸಿ ಪೂಜೆ ಸಲ್ಲಿಸುವ ಪದ್ಧತಿ ಹೋಗಿಲ್ಲ. ಹಾಗಾಗಿ ಮುಂದಿನ ಪೀಳಿಗೆಗೆ ಹೇಳುವ ಸಲಹೆಯೆಂದರೆ, ಇದನ್ನು ಹವ್ಯಾಸವಾಗಿ ನಡೆಸಿಕೊಂಡು ಹೋಗಿ. ನನ್ನ ಅಜ್ಜನ ಕಾಲದಲ್ಲಿದ್ದ ಗಣೇಶ ತಯಾರಕರ ಸಂಖ್ಯೆ ಇದೀಗ ಇಳಿ ಮುಖವಾಗಿದೆ. ಇನ್ನು ಮುಂದಿನ ಪರಿಸ್ಥಿತಿ ಊಹೆಗೂ ನಿಲುಕದ್ದು. ಹಾಗಾಗಿ ಬೇರೆ ಉದ್ಯೋಗವನ್ನು ಅರಸಿ ಹೋಗಿದ್ದರೂ ಸಹ ಗಣೇಶ ಮೂರ್ತಿ ತಯಾರಿಕೆಯನ್ನು ಹವ್ಯಾಸವಾಗಿ ಬೆಳೆಸಿಕೊಂಡು ಹೋಗುವುದು ಮುಂದಿನ ಯುವ ಪೀಳಿಗೆಯ ಕೈಯಲ್ಲಿದೆ ಎಂದು ವಿನಯ್​ ಗುಡಿಗಾರ ಸಲಹೆ ನೀಡಿದರು.

ಇದನ್ನೂ ಓದಿ:

Ganesha Chaturthi 2021: ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ; ಮಾರ್ಗಸೂಚಿ ಪ್ರಕಟ

Ganesha Chaturthi 2021: ಬೆಂಗಳೂರಿನ ಕೆಲವು ಪ್ರಸಿದ್ಧ ಗಣಪತಿ ದೇವಸ್ಥಾನಗಳು

Published On - 9:47 am, Wed, 8 September 21