ಶುಭ ಶುಕ್ರವಾರ 2022: ಇಂದು (ಏ.15) ಶುಭ ಶುಕ್ರವಾರ (Good Friday). ಶುಭ ಶುಕ್ರವಾರವು ಕ್ರಿಶ್ಚಿಯನ್ನರಿಗೆ ವರ್ಷದ ಪವಿತ್ರ ಸಮಯಗಳಲ್ಲಿ ಒಂದು. ಈಸ್ಟರ್ಗೂ ಮುನ್ನ ಗುಡ್ ಫ್ರೈಡೆಯನ್ನು ಆಚರಿಸಲಾಗುತ್ತದೆ. ಏಪ್ರಿಲ್ 17ರ ಭಾನುವಾರ ಈಸ್ಟರ್ ಇದ್ದು, ಅದಕ್ಕೂ ಮುನ್ನ ಶುಕ್ರವಾರದಂದು ಗುಡ್ ಫ್ರೈಡೆ ಆಚರಿಸಲಾಗುತ್ತದೆ. ಗುಡ್ ಫ್ರೈಡೆಯಂದು ಏಸುಕ್ರಿಸ್ತರು ಶಿಲುಬೆಗೇರಿದ ದಿನ. ತ್ಯಾಗ ಮತ್ತು ನೋವನ್ನು ಸಂಕೇತಿಸುವ ಇದು, ಕ್ರಿಶ್ಚಿಯನ್ನರಿಗೆ ಪವಿತ್ರ ದಿನವಾಗಿದೆ. ಈಸ್ಟರ್ನಂದು ಕ್ರಿಸ್ತನು ಮರುಜನ್ಮ ಪಡೆದ ದಿನ ಎನ್ನಲಾಗುತ್ತದೆ. ಹಾಗಾಗಿ ಕ್ರಿಸ್ತ ಶಿಲುಬೆಗೇರಿದ ಗುಡ್ ಫ್ರೈಡೆಗೆ ಮಹತ್ವವಿದೆ.
ಗುಡ್ ಫ್ರೈಡೆ ಇತಿಹಾಸ:
ಹೊಸ ಒಡಂಬಡಿಕೆಯ ಪ್ರಕಾರ, ರೋಮನ್ನರು ಯೇಸುವನ್ನು ಶಿಲುಬೆಗೇರಿಸಿದ ದಿನವನ್ನು ಗುಡ್ ಫ್ರೈಡೇ ಎನ್ನಲಾಗುತ್ತದೆ. ಯಹೂದಿ ಧಾರ್ಮಿಕ ಮುಖಂಡರು ದೇವರ ಮಗನೆಂದು ಹೇಳಿಕೊಳ್ಳುವುದಕ್ಕಾಗಿ ಯೇಸುವಿಗೆ ದೇವದೂಷಣೆಯನ್ನು ಮಾಡಿದರು. ಜೊತೆಗೆ ಅವರನ್ನು ರೋಮನ್ನರ ಬಳಿಗೆ ಕರೆತಂದರು. ರೋಮನ್ ನಾಯಕನಾದ ಪೊಂಟಿಯಸ್ ಪಿಲಾತನು ಯೇಸುವನ್ನು ಶಿಲುಬೆಗೇರಿಸಲು ಶಿಕ್ಷೆ ವಿಧಿಸಿದನು. ಏಸುವಿಗೆ ಶಿಲುಬೆಗೇರಿಸಿ ಮರಣದಂಡನೆ ವಿಧಿಸಲಾಯಿತು ಮತ್ತು ಮುಳ್ಳಿನ ಕಿರೀಟವನ್ನು ಧರಿಸಿ ಬೆಟ್ಟದ ಮೇಲೆ ಶಿಲುಬೆಯನ್ನು ಸಾಗಿಸಲು ಬಲವಂತಪಡಿಸಲಾಯಿತು. ಶಿಲುಬೆಗೇರಿಸುವಿಕೆಯು ಆ ಸಮಯದಲ್ಲಿ ಮರಣದಂಡನೆಯ ಅತ್ಯಂತ ಕ್ರೂರ ರೂಪವಾಗಿತ್ತು. ಸೈನಿಕರು ಯೇಸುವನ್ನು ಶಿಲುಬೆಗೆ ಹೊಡೆದ ನಂತರ ಸಾಯಲು ಬಿಟ್ಟರು.
ಶುಭ ಶುಕ್ರವಾರದ ಮಹತ್ವ:
ಏಸು ಮತ್ತು ಅವರ ಅನುಯಾಯಿಗಳು ಸಾಯುವ ಹಿಂದಿನ ರಾತ್ರಿ ಕೊನೆಯ ಭೋಜನಕ್ಕೆ ಹಾಜರಾಗಿದ್ದರು. ನಂತರ ಗೆತ್ಸೆಮನ್ ಗಾರ್ಡನ್‌ಗೆ ಪ್ರಯಾಣಿಸಿದರು. ಯೇಸುಕ್ರಿಸ್ತನ ಮರಣವು ನೋವಿನ ಅನುಭವವಾಗಿದ್ದರೂ ಕೂಡ ಕ್ರಿಶ್ಚಿಯನ್ನರು ಅದನ್ನು ಗೌರವಿಸುತ್ತಾರೆ. ಇದಕ್ಕೆ ಕಾರಣ, ಅವರು ತಮ್ಮ ಪಾಪಗಳಿಗಾಗಿ ಸತ್ತು, ಅಂತಿಮ ತ್ಯಾಗವನ್ನು ಮಾಡಿದರು ಎಂದು ಅವರು ನಂಬುತ್ತಾರೆ.
ಕ್ರೈಸ್ತರು ಶುಭ ಶುಕ್ರವಾರವನ್ನು ಹೇಗೆ ಆಚರಿಸುತ್ತಾರೆ?
ಅನೇಕ ಕ್ರೈಸ್ತರು ಶುಭ ಶುಕ್ರವಾರದಂದು ಚರ್ಚ್ಗೆ ತೆರಳಿ ವಿಶೇಷ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಮನೆಯಲ್ಲಿ ಬೈಬಲ್ನ ಪದ್ಯಗಳನ್ನು ಓದಿ ಯೇಸುಕ್ರಿಸ್ತನ ತ್ಯಾಗವನ್ನು ಸ್ಮರಿಸುತ್ತಾರೆ. ಕ್ರಿಸ್ತನ ಕೊನೆಯ ಕ್ಷಣಗಳ ಸ್ಮರಣಾರ್ಥವಾಗಿ ಅನೇಕರು ಮೆರವಣಿಗೆಗಳಲ್ಲಿ ಅಥವಾ ಬಯಲು ನಾಟಕಗಳಲ್ಲಿ ಭಾಗವಹಿಸುತ್ತಾರೆ.
ಇದನ್ನೂ ಓದಿ: ಪವಾಡ ಪ್ರಸಿದ್ಧ ಎರಿತಾತ ಮಠದಲ್ಲಿ ಭಕ್ತರ ಕಾಣಿಕೆ ರಿಜಿಸ್ಟರ್ ಸಮೇತ ಕ್ಯಾಶಿಯರ್ ನಾಪತ್ತೆ; ತನಿಖೆಗೆ ಆದೇಶಿಸಿದ ದತ್ತಿ ಇಲಾಖೆ