ವಾಯುಪುತ್ರ ಆಂಜನೇಯ ಸ್ವಾಮಿಯ ವೈವಾಹಿಕ ಜೀವನ ಮತ್ತು ಆತನ ಸುಪುತ್ರನ ಬಗ್ಗೆ ಇಲ್ಲಿದೆ ಮಾಹಿತಿ
ಇಂದು ಚೈತ್ರ ಹುಣ್ಣಿಮೆ – ಹನುಮಂತ ಜಯಂತಿ. ಶನಿವಾರದಂದು ಹನುಮ ಜಯಂತಿ ಬಂದರೆ ಅದು ಶ್ರೇಷ್ಠವಾಗಿದ್ದು, ಹೆಚ್ಚಿನ ಮಹತ್ವ ಇರುತ್ತದೆ. ವಾಯುಪುತ್ರ ಆಂಜನೇಯ ಸ್ವಾಮಿಯನ್ನು ಕಲಿಯುಗದ ಸಾಕ್ಷಾತ್ ದೇವರು ಎಂದು ಕರೆಯುತ್ತಾರೆ. ಆಂಜನೇಯ ಸ್ವಾಮಿ ಚಿರಂಜೀವಿ ಎಂದು ಪರಿಗಣಿಸಲಾಗಿದ್ದು, ಇಂದಿಗೂ ಈ ಭೂಮಿಯ ಮೇಲೆ ವಾಸವಿದ್ದಾರೆ ಎಂಬ ನಂಬಿಕೆಯಿದೆ. ಹನುಮಂತ ರುದ್ರಾವತಾರಿಯಾಗಿದ್ದು, ಶಾಸ್ತ್ರಗಳ ಪ್ರಕಾರ ಆತ ಪರಮ ಪರಾಕ್ರಮಶಾಲಿ ಎಂದು ಜನಜನಿತರಾಗಿದ್ದಾರೆ. ಇಂತಹ ಪರಾಕ್ರಮಿ ಹನುಮಂತನನ್ನು ಪೂಜಿಸಿದರೆ ಎಂತಹುದೇ ಕಷ್ಟಗಳು ಎದುರಾದರೂ ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ. ಹೀಗಿರುವ ಆಂಜನೇಯ ಸ್ವಾಮಿ ಬಾಲಬ್ರಹ್ಮಚಾರಿ ಎನ್ನಲಾಗುತ್ತದೆ. ಹಾಗಾಗಿ ಮಹಿಳಾ ಭಕ್ತರು ಆಂಜನೇಯ ಸ್ವಾಮಿಯ ವಿಗ್ರಹವನ್ನು ಸ್ಪರ್ಶಿಸುವುದೂ ಇಲ್ಲ. ಇಂತಹ ವಾಯುಪುತ್ರನ ಬಗ್ಗೆ ನಿಮಗೊಂದು ವಿಶೇಷ, ಕುತೂಹಲಕಾರಿ ಸಂಗತಿ ಹೇಳಬೇಕು ಅಂದರೆ ಆಂಜನೇಯನಿಗೆ ಮದುವೆಯಾಗಿತ್ತು. ಮತ್ತು ಆತನಿಗೆ ಒಬ್ಬ ಪುತ್ರ ಸಹ ಇದ್ದಾನೆ! ಶನಿವಾರ ಹನುಮಂತ ಜಯಂತಿ ಸಂದರ್ಭದಲ್ಲಿ ಹನುಂತನ ವೈವಾಹಿಕ ಜೀವನ, ಆತನ ಸುಪುತ್ರನ ಬಗ್ಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳೋಣಾ. ಮೊದಲಿಗೆ, ಆಂಜನೇಯ ಸ್ವಾಮಿಯ ಪುತ್ರನ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಿದೆ. ಆಂಜನೆಯನ ಪುತ್ರನ ಹೆಸರು ಮಕರ ಧ್ವಜ.
- ಜ್ಞಾನ ಪ್ರಾಪ್ತಿಗಾಗಿ ಸೂರ್ಯ ಪುತ್ರಿ ಜೊತೆ ಆಂಜನೇಯ ಸ್ವಾಮಿ ವಿವಾಹ:
ಹೌದು ಸುಜ್ಞಾನ ಪ್ರಾಪ್ತಿಗಾಗಿ ಸುವರ್ಚಲಾ ಎಂಬ ಯುವತಿಯ ಜೊತೆ ಆಂಜನೇಯ ಸ್ವಾಮಿಯ ವಿವಾಹ ನೆರವೇರಿತ್ತು. ಹಿಂದೂ ಧರ್ಮದಲ್ಲಿ ಪವನಸುತ ಹನುಮಂತನನ್ನು ಶ್ರೀ ರಾಮಚಂದ್ರನ ಪರಮ ಭಕ್ತ ಎಂದು ಪೂಜಿಸಲಾಗುತ್ತದೆ. ಆಂಜನೇಯ ಸ್ವಾಮಿ ತನ್ನ ಜೀವನದಲ್ಲಿ ಅಖಂಡ ಬ್ರಹ್ಮಚರ್ಯ ಧರ್ಮವನ್ನು ಚಾಚೂತಪ್ಪದೆ ಅನುಸರಿಸಿದಾತ. ತನ್ನ ಜೀವನದುದ್ದಕ್ಕೂ ಶ್ರೀರಾಮನ ಸೇವೆ ಮಾಡಿಕೊಂಡು ಇದ್ದುಬಿಡುತ್ತಾನೆ. ಆದರೆ ಅದೇ ಸಮಯದಲ್ಲಿ ಕೆಲವು ಪೌರಾಣಿಕ ಗ್ರಂಥಗಳಲ್ಲಿ, ಭಗವಾನ್ ಹನುಮಂತನನ್ನು ವಿವಾಹಿತ ಎಂದೂ ಹೇಳಲಾಗುತ್ತದೆ.
- ಸೂರ್ಯ ಪುತ್ರಿ ಸುವರ್ಚಲಾ ಜೊತೆಗೆ ಹನುಮನ ವಿವಾಹ:
ಸೂರ್ಯನ ಮಗಳು ಸುವರ್ಚಲಾ ಮತ್ತು ವಾಯುಪುತ್ರನ ವಿವಾಹ ನೆರವೇರುತ್ತದೆ. ಹನುಮಂತ ಸೂರ್ಯ ದೇವರ ಶಿಷ್ಯ ಸಹ ಆಗಿದ್ದ ಎಂಬ ಉಲ್ಲೇಖವೂ ಇದೆ. ಭಗವಂತ ಸೂರ್ಯ ಹನುಮಂತನಿಗೆ ಒಂಬತ್ತು ಸಿದ್ಧಾಂತದ ಜ್ಞಾನವನ್ನು ನೀಡಲು ಬಯಸಿದ್ದ. ಆಂಜನೇಯ ಸ್ವಾಮಿ ಈ ಒಂಬತ್ತು ವಿಷಯಗಳ ಪೈಕಿ ಐದರಲ್ಲಿ ಪಾರಂಗತನಾದನು. ಆದರೆ ಉಳಿದವು ಆತನಿಗೆ ಸಿದ್ಧಿಸಲಿಲ್ಲ. ಅದನ್ನು ಕಲಿಯಬೇಕೆಂದರೆ ಮದುವೆಯಾಗುವುದು ಕಡ್ಡಾಯವಾಗಿತ್ತು. ಅದಕ್ಕೆ ಪರಿಹಾರೋಪಾಯವೆಬಂತೆ ಸೂರ್ಯ ದೇವನೇ ತನ್ನಮಗಳನ್ನು ಶಾಸ್ತ್ರೋಕ್ತವಾಗಿ ಮದುವೆಯಾಗು ಎಂದು ಸೂಚಿಸುತ್ತಾನೆ. ಈ ಅನಿವಾರ್ಯತೆಯಿಂದಾಗಿ ಸೂರ್ಯ ದೇವ ತನ್ನ ಮಗಳನ್ನು ಹನುಮನೊಂದಿಗೆ ಮದುವೆ ಮಾಡಿಸುತ್ತಾನೆ. ಆದರೆ ಹನುಮಂತ ಸೂರ್ಯ ಪುತ್ರಿಯನ್ನು ಮದುವೆಯಾಗುತ್ತಿದ್ದಂತೆ ವಿವಾಹಿತೆ ಸುವರ್ಚಲಾ ಶಾಶ್ವತವಾಗಿ ತಪಸ್ಸಿನಲ್ಲಿ ಲೀನಳಾದಳು ಎಂಬ ಮಾತಿದೆ.
- ರಾವಣನ ಸಹೋದರಿ ಅನಂಗ ಕುಸುಮಾ ಜೊತೆಯೂ ವಿವಾಹ:
ಆಂಜನೇಯನ ಎರಡನೆಯ ವಿವಾಹದ ಉಲ್ಲೇಖವೂ ಪುರಾಣಗಳಲ್ಲಿದೆ. ರಾವಣ ಮತ್ತು ವರುಣ ದೇವನ ಮಧ್ಯೆ ನಡೆದ ಯುದ್ಧದಲ್ಲಿ ವರುಣ ದೇವನ ಪರವಾಗಿ ಹನುಮಂತನು ರಾವಣನೊಂದಿಗೆ ಹೋರಾಡಿದನು. ಆ ಯುದ್ಧದಲ್ಲಿ ರಾವಣನಿಗೆ ಸೋಲುಂಟಾಯಿತು. ಯುದ್ಧದಲ್ಲಿ ಸೋತ ನಂತರ, ರಾವಣನು ತನ್ನ ಸಹೋದರಿ ಅನಂಗ ಕುಸುಮಾಳನ್ನು ಹನುಮನಿಗೆ ಕೊಟ್ಟು ವಿವಾಹ ಮಾಡಿದನು.
- ವರುಣ ದೇವನ ಪುತ್ರಿ ಸತ್ಯವತಿ ಜೊತೆಗೆ ವಿವಾಹ:
ವರುಣ ದೇವ ಮತ್ತು ರಾವಣನ ನಡುವೆ ಯುದ್ಧ ನಡೆಯುತ್ತಿರುವಾಗ, ವರುಣ ದೇವನ ಪರವಾಗಿ ಹೋರಾಡುತ್ತಿದ್ದ ಹನುಮಂತನು ವರುಣ ದೇವನಿಗೆ ಜಯವನ್ನು ತಂದುಕೊಟ್ಟನು. ಈ ಗೆಲುವಿನಿಂದ ಸಂಪ್ರೀತನಾದ ವರುಣ ದೇವ ತನ್ನ ಮಗಳು ಸತ್ಯವತಿಯನ್ನು ಭಗವಾನ್ ಹನುಮಂತನಿಗೆ ಕೊಟ್ಟು ವಿವಾಹ ಮಾಡಿಸುತ್ತಾನೆ. (ಸಂಗ್ರಹ: ನಿತ್ಯಸತ್ಯ ಸತ್ಸಂಗ)